ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು, ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಅಸ್ತಿತ್ವ ಸಾಧಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ರಾಜ್ಯ ಕಾಂಗ್ರೆಸ್ ರಣ ಕಹಳೆ ಮೊಳಗಿಸಿತು.
ಮಂಗಳೂರು ಹೊರವಲಯದ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಲೋಕಸಭೆ ಚುನಾವಣೆಗೆ ಸನ್ನದ್ಧರಾಗುವಂತೆ ಪಕ್ಷದ ಕಾರ್ಯಕರ್ತರನ್ನು ರಾಷ್ಟ್ರೀಯ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಹುರಿದುಂಬಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕಾಂಗ್ರೆಸ್ ಸಮಾವೇಶದ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಎಷ್ಟು ಮುಖ್ಯ ಎಂಬುದನ್ನು ಸಮಾವೇಶದುದ್ದಕ್ಕೂ ಮನದಟ್ಟು ಮಾಡುವ ಪ್ರಯತ್ನ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ಸದಾ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್‌ಗೆ ಮಂಗಳೂರಿನ ಸಮಾವೇಶ ಅಕ್ಷರಶಃ ಶಕ್ತಿ ತುಂಬುವ ಪ್ರಯತ್ನವಾಗಿ ಕಂಡಿತು. ಅದರಲ್ಲೂ ಕರಾವಳಿ ಭಾಗದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಅಸ್ತಿತ್ವ ಸಾಧಿಸಲೇಬೇಕು ಎಂಬ ವಾಗ್ದಾನವನ್ನು ಪ್ರತಿನಾಯಕರು ತಮ್ಮ ಭಾಷಣದಲ್ಲಿ ಮಾಡಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾಗಿ ಮಾತನಾಡಿದರು.
ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲುತ್ತೇವೆ: ಖರ್ಗೆ
ಕರ್ನಾಟಕದಲ್ಲಿ ನಾವು ಈ ಸಲ 20 ಸ್ಥಾನ ಗೆದ್ದೆ ಗೆಲ್ಲುತ್ತೇವೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೊಣೆ ಇರಬೇಕು. ನಾವು ಎಷ್ಟೇ ವೀರಾವೇಶದಿಂದ ಭಾಷಣ ಮಾಡಿದರೂ ಅದನ್ನು ಜನರ ಬಳಿ ಕೊಂಡೊಯ್ಯುವ ಶಕ್ತಿ ಕಾರ್ಯಕರ್ತರಿಗೆ ಮಾತ್ರ ಇದೆ. ಅವರೇ ನಮ್ಮ ಬುನಾದಿ. ನೀವು ಕೆಲಸ ಮಾಡಲಿಲ್ಲ ಅಂದ್ರೆ ನಮ್ಮದೇನು ಇಲ್ಲ. ನಮ್ಮ ಜಯ ನಿಮ್ಮ ಮೇಲಿದೆ” ಎನ್ನುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.
“ಮಂಗಳೂರಿನಲ್ಲೇ ನಾವು ಈ ಸಮಾವೇಶ ಆಯೋಜಿಸಲು ಕಾರಣ ಇದೆ. ಶಕ್ತಿ ಯೋಜನೆಯನ್ನು ನಾವು ಇಲ್ಲಿಂದಲೇ ಘೋಷಿಸಿದ್ದೆವು. ದಕ್ಷಿಣ ಕನ್ನಡದ ಜನ ಕಾಂಗ್ರೆಸ್ ಅನ್ನು ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಮೋದಿ ಮಾಡಿದ ಮೋಸವನ್ನು ಜನತೆಗೆ ತಿಳಿಸುವ ಪ್ರಯತ್ನ ಕಾರ್ಯಕರ್ತರಿಂದ ಆಗಬೇಕಿದೆ” ಎಂದು ಹೇಳಿದರು.
ಕೇಸರಿ ಧ್ವಜ ಹಾರಾಟ ನಿಲ್ಲಬೇಕು
ಉಳುವವನೇ ಭೂಮಿಯ ಒಡೆಯ ಕಾಯ್ದೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ಜನತೆಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್, ಶಿಕ್ಷಣ ಕೊಟ್ಟಿದ್ದು ಕಾಂಗ್ರೆಸ್, ಆಹಾರ ನೀಡಿದ್ದು ಕಾಂಗ್ರೆಸ್. ಆದರೆ ಇದರ ಲಾಭ ಪಡೆದು ಈಗ ಬಿಜೆಪಿಯ ಹಿಂದೆ ಹೋದ್ರೆ ಹೇಗೆ? ಮಂಗಳೂರಿನಲ್ಲಿ ಎಲ್ಲಿ ನೋಡಿದರೂ ಕೇಸರಿ ಧ್ವಜ ಹಾರಾಡುತ್ತಿವೆ. ಇದು ನಿಲ್ಲಬೇಕು. ಕಾಂಗ್ರೆಸ್ ನಿಮ್ಮ ಪೂರ್ವಿಕರಿಗೆ ಕೊಟ್ಟ ಹಿಂದಿನ ಲಾಭ ನೆನಪು ಮಾಡಿಕೊಳ್ಳಿ. ನಮ್ಮನೇ ಮರೆತರೇ ಹೇಗೆ” ಎಂದು ಮತದಾರರನ್ನು ಖರ್ಗೆ ಪ್ರಶ್ನಿಸಿದರು.
ಮೋದಿ ಎಂದಾದರೂ ಮಂಗಳೂರಿನ ಜನರಿಗೆ ಭೂಮಿ ಕೊಟ್ಟಿದ್ದಾರಾ? ಶಿಕ್ಷಣ ಕೊಟ್ಟಿದ್ದಾರಾ? ರೂ. 15 ಲಕ್ಷ ನಿಮಗೆ ಬಂದಿದೆಯಾ? ಬಂದಿದ್ದರೆ ನೀವೇ ಸುಳ್ಳು ಹೇಳುತ್ತಿದ್ದೀರಿ ಅಂತ ಅರ್ಥ. ಇಲ್ಲ ಮೋದಿ ಸುಳ್ಳು ಹೇಳುತ್ತಿರಬೇಕು. ಈವರೆಗೂ ಮೋದಿ ಘೋಷಿಸಿದ ಯಾವುದೇ ಭರವಸೆ ಆತ ಈಡೇರಿಸಿಲ್ಲ. ಅವನೊಬ್ಬ ಸುಳ್ಳುಕೋರ. ಈತನನ್ನು ಹೀಗೆ ಬಿಟ್ಟರೆ ಮುಂದೆ ದೇಶದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ. ಸರ್ವಾಧಿಕಾರಿ ಮೋದಿಗೆ ಜನತೆ ಒಂದಾಗಿ ತಕ್ಕ ಪಾಠ ಕಲಿಸಬೇಕು” ಎಂದು ಕರೆ ನೀಡಿದರು.
ಏನೂ ಕೊಡದೇ ಇರುವ ಮನುಷ್ಯ ಮೋದಿ!
“ಏನೂ ಕೊಡದೇ ಇರುವ ಮನುಷ್ಯ ಅಂದ್ರೆ ಅದು ಮೋದಿ. ಆದ್ರೆ ನಮ್ಮ ಯುವಕರು ಮೋದಿ, ಮೋದಿ ಎಂದು ತಿರುಗಾಡುತ್ತಿದ್ದಾರೆ. ಮೋದಿ ಅಂದ್ರೆ ಹೊಟ್ಟೆ ತುಂಬುತ್ತಾ? ಎಲ್ಲದಕ್ಕೂ ಕಾಂಗ್ರೆಸ್‌ನವರಿಗೆ ಮೋದಿ ಬೈಯುತ್ತಾರೆ. ಕಾಂಗ್ರೆಸ್ ಸೊನ್ನೆ ಎಂದು ಅಣಕಿಸುತ್ತಾರೆ. ಸೊನ್ನೆ ಇದ್ದರೆ ನಮ್ಮ ವಿರುದ್ಧ ಯಾಕೆ ಮಾತನಾಡಬೇಕು? ಅವರಿಗೂ ಗೊತ್ತಿದೆ. ಕಾಂಗ್ರೆಸ್ ಬೇರು ಗಟ್ಟಿಯಿದೆ, ಇದನ್ನು ಹೇಗಾದ್ರೂ ಮಾಡಿ ಅಲುಗಾಡಿಸಬೇಕು ಎಂದು ನೀಚತನದಿಂದ ಮಾತನಾಡುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
ನಮ್ಮ ಐದು ಗ್ಯಾರಂಟಿಗಳಿಂದ ಮೋದಿ ಎಚ್ಚರವಾಗಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಅವರನ್ನು ಐದು ಗ್ಯಾರಂಟಿ ಕೊಟ್ಟು ಜನರ ಮನಸ್ಸು ಗೆದ್ದಿರುವುದು ನೋಡಿ ‘ಮೋದಿ ಗ್ಯಾರಂಟಿ’ ಆರಂಭಿಸಿದ್ದಾರೆ. ನಾವು ಎಂದೂ ಸಿದ್ದರಾಮಯ್ಯ ಗ್ಯಾರಂಟಿ ಎನ್ನಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಎಂದೆವು. ಆದ್ರೆ ಮೋದಿ ಅವರು ಬಿಜೆಪಿ ಗ್ಯಾರಂಟಿ ಎಂದು ಹೇಳುತ್ತಾರಾ? ಇಲ್ಲ, ಹೀಗೆ ಜನರಿಗೆ ಬರೀ ಮರಳು ಮಾಡಿ ಅಧಿಕಾರ ಅನುಭವಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
“ರಾಹುಲ್ ಗಾಂಧಿ ಯಾರಿಗಾಗಿ ಯಾತ್ರೆ ಮಾಡುತ್ತಿದ್ದಾರೆ? ದೇಶವನ್ನು ಒಗ್ಗೂಡಿಸಲು ಹೋರಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಉಳಿವಿಗಾಗಿ ರಾಹುಲ್ ಹೆಜ್ಜೆಹಾಕುತ್ತಿದ್ದಾರೆ. ಇದನ್ನು ಮೋದಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಅಕೌಂಟ್ ಸೀಜ್ ಮಾಡಿದ್ದರು. ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಕೌಂಟ್‌ನ 91 ಕೋಟಿ ರೂ. ಸೀಜ್ ಆಗಿತ್ತು. ಅಂದ್ರೆ ವಿರೋಧ ಪಕ್ಷದವರ ಕೈಯಲ್ಲಿ ದುಡ್ಡು ಇರಲೇಬಾರದು ಎಂದು ಮೋದಿ ಕುತುಂತ್ರ ಹೂಡಿದ್ದಾರೆ. ಚುನಾವಣೆ ಬಾಂಡ್ ಮೂಲಕ ಆರು ಸಾವಿರ ಕೋಟಿ ರೂ. ಬಿಜೆಪಿ ಪಡೆದಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಮಂಗಳೂರಿಗೆ ಅಚ್ಚೇದಿನ್ ಬಂತಾ: ಸಿದ್ದರಾಮಯ್ಯ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಮಾತನಾಡಿ, “ಮಂಗಳೂರಿನ ಜನ ಬುದ್ಧಿವಂತರು. ಯಾರು ಎಷ್ಟು ಸುಳ್ಳು ಹೇಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳು ಜನ. ಮೋದಿ ಎಷ್ಟು ಸುಳ್ಳು ಹೇಳಿದ್ದಾರೆ ಎಂಬುದನ್ನು ಅವರು ಈ ಭಾರಿ ತೀರ್ಮಾನಿಸುತ್ತಾರೆ” ಎಂದು ಹೇಳಿದರು.
“ಮಂಗಳೂರಿನ ಮತದಾರರಲ್ಲಿ ಕೈಮುಗಿದು ಬೇಡಿಕೊಳ್ಳುವೆ; ಬಿಜೆಪಿಯವರನ್ನು ನಂಬಬೇಡಿ. ಅವರು ಎಂದಿಗೂ ನುಡಿದಂತೆ ನಡೆಯಲ್ಲ. ಅವರು ಹೇಳಿದಂತೆ ಯಾವುದೇ ಭರವಸೆ ಈಡೇರಿಸಿಲ್ಲ. ಬರೀ ಕೋಮುವಾದ, ಧರ್ಮ ಧರ್ಮದ ನಡುವೆ ಜಗಳ, ಬೆಂಕಿ, ಭಾವನಾತ್ಮಕ ಸಂಗತಿ ಇಟ್ಟುಕೊಂಡೆ ಅಧಿಕಾರ ಅನುಭವಿಸುತ್ತಿದ್ದಾರೆ. 10 ವರ್ಷಗಳಲ್ಲಿ ಯಾವ ಭರವಸೆ ಮೋದಿ ಈಡೇರಿಸಿದ್ದಾರೆ? ಮಂಗಳೂರಿಗೆ ಅಚ್ಚೇದಿನ್ ಬಂತಾ” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
“ಇದನ್ನೆಲ್ಲ ಯೋಚಿಸುವ ಶಕ್ತಿ ಮಂಗಳೂರು ಜನತೆಗೆ ಇದೆ. ನಾವು ನುಡಿದಂತೆ ನಡೆದಿದ್ದರೆ, ಕೊಟ್ಟ ಮಾತು ನಡೆಸಿಕೊಟ್ಟಿದ್ದರೆ ಈ ಸತ್ಯವನ್ನು ಜನರಿಗೆ ತಿಳಿಸಬೇಕು. ಜನರ ಮನಸ್ಸು ಗೆಲ್ಲಬೇಕು” ಎಂದು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ ನೀಡಿದರು.
ಸಾಮಾಜಿಕ ಬದಲಾವಣೆಯ ನೆಲವಿದು: ಡಿ ಕೆ ಶಿವಕುಮಾರ್
ಪ್ರಾಸ್ತಾವಿಕವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, “ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಜನರ ಬಳಿ ಹೋಗಿ, ಹೆಮ್ಮೆಯಿಂದ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಮಂಗಳೂರು ಐತಿಹಾಸಿಕವಾದ ಭೂಮಿ. ಸಾಮಾಜಿಕ ಬದಲಾವಣೆಯ ನೆಲವಿದು. ಮೊದಲ ಗ್ಯಾರಂಟಿ ಈ ಭೂಮಿಯಿಂದಲೇ ಘೋಷಣೆ ಮಾಡಿದ್ದೆವು. ಈಗ ಎಲ್ಲ ಗ್ಯಾರಂಟಿ ಘೋಷಿಸಿ ನಿಮ್ಮ ಬಳಿ ಬಂದಿದ್ದೇವೆ” ಎಂದು ತಿಳಿಸಿದರು.
“ಮಂಗಳೂರು ಜನ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಎರಡು ಸ್ಥಾನ ನಾವು ಗೆದ್ದಿರಬಹುದು. ಡಿ ವಿ ಸದಾನಂದಗೌಡ ಅವರು ರಾಜೀನಾಮೆ ನೀಡಿದಾಗ ವಿರೋಧ ಪಕ್ಷದಲ್ಲಿದ್ದ ನಾವು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದೆವು. ಈ ಭಾರಿ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಮಂಗಳೂರಿನ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಚಿವರುಗಳಾದ ಕೆ.ಜೆ.ಜಾರ್ಜ್, ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಕೆ.ವೆಂಕಟೇಶ್, ನಾಗೇಂದ್ರ, ಬೈರತಿ ಸುರೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಮೋಟಮ್ಮ, ಆರ್.ವಿ.ದೇಶಪಾಂಡೆ, ಕಿಮ್ಮನೆ ರತ್ನಾಕರ್, ರಮಾನಾಥ ರೈ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಸಂವಹನ ವಿಭಾಗದ ಲಾವಣ್ಯ ಬಲ್ಲಾಳ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿದ್ದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.
ನಿನ್ನೆ (18ನೇ ಫೆ 2024) ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾನವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಡಿಕ್ಷೆಟರ್ ಶಿಫ್ ಆರಂಭವಾಗುತ್ತದೆ. ಮೋದಿ ಹಾಗು ಬಿಜೆಪಿಯಿಂದ ಪ್ರಜಾಪ್ರಭುತ್ವದ ನಾಶವಾಗುತ್ತಿದೆ ಎಂದೆಲ್ಲಾ ಆರೋಪಿಸಿದ್ರು. … ಅದ್ರೆ, ಈ ಹಿಂದೆ ಶ್ರೀಮತಿ ಇಂದಿರಾಗಾಂಧಿ ಅವ್ರು ಚುನಾವಣೆಯಲ್ಲಿ ಅಧಿಕಾರದ ಆಡಳಿತ ಯಂತ್ರ ದುರುಪಯೋಗದ ಹಿನ್ನಲೆಯಲ್ಲಿ ಅವ್ರ ಸಂಸದ ಸ್ಥಾನವನ್ನು ಅಲಹಾಬಾದ್ ಹೈಕೋರ್ಟ್ ಅನೂರ್ಜಿತಗೊಳಿಸಿದಾಗ ಆಕ್ರೋಶಗೊಂಡ ಅವ್ರು ಪಶ್ಚಿಮ ಬಂಗಾಳದ ಕಾಂಗ್ರೆಸ್ ಸಂಸದನ ಸೂಚನೆ ಮೇರೆಗೆ ದೇಶದಲ್ಲಿ 1975ನೇ ಜೂನ್ 25 ರಂದು ಇಂದಿರಾಗಾಂಧಿ ಅವ್ರು ತುರ್ತು ಪರಿಸ್ಥಿತಿ ಜಾರಿಗೆ ತಂದ್ರು ಅದು ಮುಂದೆ 21 ತಿಂಗಳ ವರೆಗೆ ಅಂದ್ರೆ 1977ನೇ ಮಾರ್ಚ್ 21 ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಆ ವೇಳೆ ದೇಶದಲ್ಲಿ ಪ್ರತಿಪಕ್ಷಗಳ ನಾಯಕರು, ಪತ್ರಕರ್ತರು ಸೇರಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದನಿ ಎತ್ತಿದವರನ್ನು ದನಿ ಹತ್ತಿಕ್ಕಲು ಇಂದಿರಾಗಾಂಧಿ ಸರ್ವಾಧಿಕಾರಿಯಂತೆ ಮೆರೆದ್ರು. ಈ ಎಲ್ಲಾ ವಿಚಾರ ಖರ್ಗೆ ಅವ್ರಿಗೆ ಗೊತ್ತಿಲ್ಲದೇ ಇಲ್ಲ. ಅಂದು ಶ್ರೀಮತಿ ಇಂದಿರಾಗಾಂಧಿ ಅವರಿಂದ ನಡೆದಿದ್ದು ಪ್ರಜಾಪ್ರಭುತ್ವದ ನಾಶವಲ್ಲವೇ… ಸರ್ವಾಧಿಕಾರಿ ಧೋರಣೆಯಲ್ಲೇವೇ ಮಿಸ್ಟರ್ ಖರ್ಗೆ ಜೀ…