ದೇಶವು ಬದಲಾವಣೆಯನ್ನು ಬಯಸುತ್ತಿದೆ. ಪ್ರಸ್ತುತ ಮೋದಿ ಸರ್ಕಾರ ಹೇಳುತ್ತಿರುವ ‘ಮೋ ಕಿ ಗ್ಯಾರಂಟಿ’ಯು 2004ರ ‘ಇಂಡಿಯಾ ಶೈನಿಂಗ್’ ಘೋಷಣೆಯಂತೆಯೇ ಇದೆ. ಫಲಿತಾಂಶವು 2004ರಂತೆಯೇ ಆಗಿರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಚರ್ಚಿಸಲು ಮಂಗಳವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅವರು ಮಾತನಾಡಿದರು. “ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಪ್ರತಿಯೊಂದು ವಿಷಯವನ್ನು ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿ ಹಳ್ಳಿ, ಪಟ್ಟಣಗಳ ಪ್ರತಿ ಮನೆಗಳಿಗೆ ತಲುಪಿಸಬೇಕು” ಎಂದರು.
“ನಮ್ಮ ಪ್ರಣಾಳಿಕೆಯು ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತದೆ. ನಮ್ಮ ಭರವಸೆಗಳನ್ನು ದೇಶಾದ್ಯಂತದ ಪ್ರತಿ ಮನೆ ಹಾಗೂ ಜನರಿಗೆ ತಲುಪಿಸಬೇಕು. ಇದು ನಮ್ಮೆಲ್ಲರ ಜವಾಬ್ದಾರಿ” ಎಂದು ಹೇಳಿದರು.
“ಪ್ರಣಾಳಿಕೆಯಲ್ಲಿ ಏನೆಲ್ಲ ಭರವಸೆ ನೀಡಲಾಗುತ್ತದೆಯೇ, ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಆ ಎಲ್ಲ ಭರವಸೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಕಾರಣದಿಂದ 1926ರಿಂದಲೇ ಕಾಂಗ್ರೆಸ್ ಪ್ರಣಾಳಿಕೆಯನ್ನು ‘ವಿಶ್ವಾಸ ಮತ್ತು ಬದ್ಧತೆಯ ದಾಖಲೆ’ ಎಂದು ಪರಿಗಣಿಸಲಾಗಿದೆ” ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಶ್ಲಾಘಿಸಿದ ಖರ್ಗೆ, ಈ ಮೂಲಕ ಜನರ ನಿಜವಾದ ಸಮಸ್ಯೆಯತ್ತ ದೇಶದ ಗಮನವನ್ನು ಸೆಳೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿದೆ ಎಂದು ಹೇಳಿದರು.
“ಭಾರತ್ ಜೋಡೋ ಮತ್ತು ನ್ಯಾಯ್ ಯಾತ್ರೆಗಳು ಕೇವಲ ರಾಜಕೀಯ ಯಾತ್ರೆಗಳಾಗಿರಲಿಲ್ಲ. ಆದರೆ, ನಮ್ಮ ರಾಜಕೀಯ ಇತಿಹಾಸದಲ್ಲಿ ಅತಿದೊಡ್ಡ ಜನಸಂಪರ್ಕ ಆಂದೋಲನವಾಗಿ ಗುರುತಿಸಲ್ಪಡುತ್ತವೆ. ಈ ಎರಡೂ ಯಾತ್ರೆಗಳು ಜನರ ಸಮಸ್ಯೆಯನ್ನು ಅರಿಯುವಲ್ಲಿ ಯಶಸ್ವಿಯಾಗಿವೆ” ಎಂದರು ಹೇಳಿದರು.
ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ ಚಿದಂಬರಂ, ಅಂಬಿಕಾ ಸೋನಿ, ಪ್ರಿಯಾಂಕಾ ಗಾಂಧಿ ವಾದ್ರಾ, ಪಿ ಚಿದಂಬರಂ, ದಿಗ್ವಿಜಯ ಸಿಂಗ್, ಅಜಯ್ ಮಾಕನ್ ಮತ್ತು ಕುಮಾರಿ ಸೆಲ್ಜಾ ಸೇರಿದಂತೆ ಇತರ ಹಿರಿಯ ನಾಯಕರು ಇದ್ದರು.
ಪಕ್ಷವು ಐದು ‘ನ್ಯಾಯ್ ಗ್ಯಾರಂಟಿ’ – ‘ಭಾಗಿದರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ್ ನ್ಯಾಯ’ ಮತ್ತು ‘ಯುವ’ ನ್ಯಾಯ’ ಗ್ಯಾರಂಟಿಗಳ ಮೂಲಕ 25 ಭರವಸೆಗಳನ್ನು ಈಗಾಗಲೇ ಘೋಷಿಸಿದೆ.