ಅಧಿಕಾರಕ್ಕೆ ಏರಲು ಬೆಂಕಿಯುಗುಳುವ ಭಾಷಣ ಮಾಡುವುದು, ಅಧಿಕಾರಕ್ಕೇರಿದ ಮೇಲೆ ಸಭ್ಯರಂತೆ ಪೋಸು ಕೊಡುವುದು. ಜವಾಬ್ದಾರಿ ಮರೆತು ರೀಲ್ಸ್ ಮಾಡುವುದು; ಅವಘಡಗಳಾಗಿ ಸರ್ಕಾರದ ಮಾನ ಹರಾಜು ಆಗುವಾಗ ಅಳಿಸಿಹಾಕಲು ನೋಟಿಸ್ ಕೊಡುವುದು- ಇದು ಬಿಜೆಪಿ ನಾಯಕರ ಬಣ್ಣವಿಲ್ಲದ ಬೀದಿ ನಾಟಕ...
ದೆಹಲಿ ರೈಲ್ವೆ ನಿಲ್ದಾಣದಲ್ಲಿ ಫೆ. 15ರ ತಡರಾತ್ರಿ ಕಾಲ್ತುಳಿತ ಸಂಭವಿಸಿದ್ದು, 18 ಮಂದಿ ದುರ್ಮರಣ ಹೊಂದಿದರು. ಹಲವಾರು ಮಂದಿ ಗಾಯಗೊಂಡರು. 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಕಾಲ್ತುಳಿತಕ್ಕೆ ಬಲಿಯಾದವರಲ್ಲಿ ಹಲವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರೀ ರೈಲ್ವೆ ಅಪಘಾತಗಳು, ಕಾಲ್ತುಳಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳು ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳದೇ ಇರುವುದರ ವಿರುದ್ಧ ಸಾರ್ವಜನಿಕವಾಗಿ ಭಾರೀ ಆಕ್ರೋಶವೂ ವ್ಯಕ್ತವಾಗುತ್ತಿದೆ.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಹೆಚ್ಚು ಟಿಕೆಟ್ ಮಾರಾಟ ಮತ್ತು ಕೊನೆ ಕ್ಷಣದಲ್ಲಿ ರೈಲಿನ ಪ್ಲಾಟ್‌ಫಾರ್ಮ್ ಬದಲಿಸಿದ್ದೇ ಕಾರಣವೆಂದು ಆರೋಪಿಸಲಾಗಿದೆ. ಜನಸಂದಣಿಯನ್ನು ನಿಯಂತ್ರಿಸುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ, ರೈಲ್ವೆ ಮಂತ್ರಿ ಅಸಮರ್ಥರಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಕೇಂದ್ರದ ರೈಲ್ವೆ ಮಂತ್ರಿಗಳು ಮನುಷ್ಯರಾಗಿದ್ದರೆ, ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಮೊದಲು ಮೃತರಾದವರ ಕುಟುಂಬಗಳಿಗೆ ಕ್ಷಮೆ ಕೇಳಬೇಕಿತ್ತು. ಆನಂತರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿತ್ತು.
ಆದರೆ, ಕೇಂದ್ರದ ಎನ್‌ಡಿಎ ಸರ್ಕಾರದ ನಿಲುವು ಮತ್ತು ಧೋರಣೆ ಹೇಗಿದೆ ಎಂದರೆ, ಕಾಲ್ತುಳಿತ ಅವಘಡ ಘಟಿಸಿಯೇ ಇಲ್ಲ ಎಂದು ಸಾಬೀತುಮಾಡಲು ಹೆಣಗಾಡುತ್ತಿದೆ. ಘಟನೆ ಕುರಿತು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಸುದ್ದಿ, ಚಿತ್ರಗಳು, ವಿಶ್ಲೇಷಣೆ ಮತ್ತು ವಿಡಿಯೋಗಳನ್ನು ಅಧಿಕಾರ ಬಳಸಿ ಅಳಿಸಿಹಾಕಲು ನೋಟಿಸ್ ಕೊಡುವ ಉದ್ಧಟತನವನ್ನು ತೋರಿದೆ.
ಅದಕ್ಕಾಗಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ಮಾಹಿತಿ ಮತ್ತು ಪ್ರಚಾರದ ಕಾರ್ಯನಿರ್ವಾಹಕ ನಿರ್ದೇಶಕರು (ರೈಲ್ವೆ ಮಂಡಳಿ) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರೈಲ್ವೆಗೆ ಸಂಬಂಧಿಸಿದ ವಿಚಾರಗಳನ್ನು ತೆಗೆದುಹಾಕುವಂತೆ ನೇರವಾಗಿ ಸೂಚನೆ ನೀಡಬಹುದಾದ ಅಧಿಕಾರವನ್ನು ನೀಡಿದೆ. ಇದಕ್ಕೂ ಮುಂಚೆ, ಐಟಿ ಸಚಿವಾಲಯದ ಸೆಕ್ಷನ್ 69ಎ ಬ್ಲಾಕ್ ಸಮಿತಿಯ ಮೂಲಕ ಇಂತಹ ಆದೇಶಗಳನ್ನು ನೀಡಲಾಗುತ್ತಿತ್ತು.
ಈಗ, ಐಟಿ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ರೈಲ್ವೆ ಮಂಡಳಿಯೇ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ನೇರವಾಗಿ ಆದೇಶ ನೀಡಬಹುದಾಗಿದೆ. ಅದೇ ಅಧಿಕಾರವನ್ನು ಬಳಸಿಕೊಂಡು ರೈಲ್ವೆ ಸಚಿವಾಲಯವು ‘ಎಕ್ಸ್’ಗೆ ದೆಹಲಿ ರೈಲ್ವೆ ನಿಲ್ದಾಣ ದುರಂತದ ವಿಡಿಯೋಗಳನ್ನು ಅಳಿಸಿಹಾಕುವಂತೆ ಸೂಚನೆ ನೀಡಿದೆ.
ರೈಲ್ವೆ ಸಚಿವಾಲಯವು ನೈತಿಕ ಮಾನದಂಡಗಳು ಮತ್ತು ಪ್ಲಾಟ್‌ಫಾರ್ಮ್ ನೀತಿ ಉಲ್ಲೇಖಿಸಿ ‘ಎಕ್ಸ್ʼಗೆ ಫೆಬ್ರವರಿ 17ರಂದು ನೋಟಿಸ್ ನೀಡಿದೆ. 36 ಗಂಟೆಗಳ ಒಳಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಸಚಿವಾಲಯದ ಸೂಚನೆಗೆ ಒಪ್ಪಿ ಪೋಸ್ಟ್ ಗಳನ್ನು ಅಳಿಸಿಹಾಕದಿದ್ದರೆ, ಪರವಾನಗಿ, ನೋಂದಣಿ ರದ್ದುಗೊಳಿಸುವ ಅಸ್ತ್ರಗಳನ್ನು ಪ್ರಯೋಗಿಸುವ ಸುಳಿವನ್ನೂ ನೀಡಿದೆ.
ಈ ನಿಟ್ಟಿನಲ್ಲಿ ಮೊದಲನೇ ಹೆಜ್ಜೆಯಾಗಿ, ಕೇಂದ್ರದ ರೈಲ್ವೆ ಸಚಿವಾಲಯ ʼಎಕ್ಸ್ʼ(ಟ್ವಿಟರ್)ಗೆ ದೆಹಲಿ ರೈಲ್ವೆ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದ 285 ವಿಡಿಯೋಗಳನ್ನು ಅಳಿಸಿಹಾಕಲು ಸೂಚಿಸಿದೆ. ಅಷ್ಟೇ ಅಲ್ಲ, ʼಇದು ನೈತಿಕ ಮಾನದಂಡಗಳಿಗೆ ವಿರುದ್ಧವಾಗಿರುವುದಷ್ಟೇ ಅಲ್ಲ, ʼಎಕ್ಸ್ʼ(ಟ್ವಿಟರ್)ನ ಕಂಟೆಂಟ್ ಪಾಲಿಸಿಯನ್ನು ಉಲ್ಲಂಘಿಸುತ್ತದೆ. ಜೊತೆಗೆ ಅಂತಹ ವೀಡಿಯೊಗಳನ್ನು ಹಂಚಿಕೊಳ್ಳುವುದು ಅನಗತ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಲೂಬಹುದುʼ ಎಂದೂ ಪರೋಕ್ಷ ಧಮ್ಕಿ ಹಾಕಿದೆ.
ಅಷ್ಟೇ ಅಲ್ಲ, ಸಚಿವಾಲಯವು ʼಕಾನೂನುಬಾಹಿರ ಜಾಹೀರಾತುಗಳು, ಅನುಮೋದನೆಗಳು, ಪ್ರಚಾರದ ವಿಷಯಗಳು ಇತ್ಯಾದಿಗಳನ್ನು ಪ್ರಕಟಿಸಿದ URL ಗಳು, ಖಾತೆಗಳು ಇತ್ಯಾದಿಗಳನ್ನು ತೆಗೆದುಹಾಕಲು/ನಿಷ್ಕ್ರಿಯಗೊಳಿಸಲು ಸೂಚನೆಗಳನ್ನು ನೀಡಲು ಅಧಿಕಾರವನ್ನು ಹೊಂದಿದೆʼ ಎಂದು ಹೇಳಿದೆ. ಆದರೆ, ʼಎಕ್ಸ್ʼ ಕಡೆಯಿಂದ ಇನ್ನೂ ಯಾವ ಉತ್ತರ ಬಂದಿಲ್ಲ ಎನ್ನಲಾಗುತ್ತಿದೆ.
ಕಾಲ್ತುಳಿತದ ಅವಘಡವನ್ನು ಖುದ್ದಾಗಿ ಕಂಡವರು, ಸಾವು-ನೋವಿಗೆ ಒಳಗಾದವರು, ಮೃತರ ಕುಟುಂಬದವರು, ಪತ್ರಕರ್ತರು, ಗಣ್ಯರು ಪ್ರಕರಣ ಕುರಿತು ತಮ್ಮ ಅನಿಸಿಕೆಗಳು, ಚಿತ್ರಗಳು, ವಿಡಿಯೋಗಳನ್ನು ʼಎಕ್ಸ್ʼನಲ್ಲಿ ಹಂಚಿಕೊಂಡಿದ್ದರು. ಇಷ್ಟು ದೊಡ್ಡ ಅವಘಡ ದೇಶದ ಶಕ್ತಿಕೇಂದ್ರವಾದ ದೆಹಲಿಯಲಿಯೇ, ಸರ್ಕಾರದ ಮೂಗಿನಡಿಯಲಿಯೇ ನಡೆದಿರುವುದು, ಮೋದಿ ಆಡಳಿತದ ವೈಫಲ್ಯ ಎಂದೂ ಟೀಕಿಸಿದ್ದರು. ಅದರಲ್ಲೂ ರೈಲ್ವೆ ಮಂತ್ರಿ ಅಶ್ವಿನಿ ವೈಭವ್ ಅವರನ್ನು ಬೇಜವಾಬ್ದಾರಿ ಮಂತ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನು ಓದಿದ್ದೀರಾ?: ಅಮೆರಿಕಗೆ ತಿರುಗುಬಾಣವಾದ ಯುಎಸ್‌ಏಡ್ ಎಂಬ ಗುಪ್ತ ಕಾರ್ಯಸೂಚಿ!
ಕೇಂದ್ರ ಸರ್ಕಾರ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು, ಅದರಲ್ಲೂ ರೈಲ್ವೆ ಮಂತ್ರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾದ ಚಿತ್ರಗಳನ್ನು, ವಿಡಿಯೋ ತುಣುಕುಗಳನ್ನು ತೆಗೆದುಹಾಕಲು ಸೂಚಿಸಿರುವುದು ಇದೇ ಮೊದಲೇನೂ ಅಲ್ಲ. ಕಳೆದ ಜನವರಿಯಲ್ಲಿ ʼಯೂ ಟ್ಯೂಬ್ʼ ಮತ್ತು ʼಇನ್ಟಾಗ್ರಾಮ್ʼಗಳಿಗೆ ರೈಲ್ವೆ ಸಚಿವಾಲಯ ಇದೇ ರೀತಿಯ ನೋಟಿಸ್ ನೀಡಿತ್ತು. ಯೂ ಟ್ಯೂಬ್ ನ ವಿಡಿಯೋಗಳು ಮತ್ತು ಇನ್ಟಾಗ್ರಾಮ್ ನ ರೀಲ್ಸ್ ಗಳು ಜನರನ್ನು ಪ್ರಚೋದಿಸುವಂತಿದ್ದು, ತಪ್ಪುದಾರಿಗೆಳೆಯುತ್ತವೆ. ಅವುಗಳಿಂದಾದ ಅವಘಡ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.
ಅಸಲಿಗೆ, ಎರಡು ವರ್ಷದ ಹಿಂದಷ್ಟೇ ಬಿಜೆಪಿ ಸೇರಿದ್ದ, ರಾಜಕಾರಣದ ಒಳ-ಹೊರಗನ್ನು ಅರಿಯುತ್ತಿದ್ದ ಅಶ್ವಿನಿ ವೈಷ್ಣವ್ ಅವರಿಗೆ ಮೋದಿಯವರು ಭಾರೀ ತೂಕದ ರೈಲ್ವೆ ಖಾತೆ ಕೊಟ್ಟು, ದೇಶದ ಜನರ ಹುಬ್ಬೇರಿಸಿದ್ದರು.
ಈ ಅಚ್ಚರಿ ಆಯ್ಕೆಯ ಹಿಂದೆ ಅತ್ಯುತ್ತಮ ಶಿಕ್ಷಣ, ಐಎಎಸ್ ಅಧಿಕಾರ, ಕಾರ್ಪೊರೇಟ್ ಜಗತ್ತಿನ ಅನುಭವ, ಸ್ವಂತ ಉದ್ದಿಮೆಯ ಅನುಭವ ಇವೆಲ್ಲವೂ ಅಶ್ವಿನಿ ವೈಷ್ಣವ್ ಅವರಲ್ಲಿದ್ದವು. ಒಮ್ಮೆಯೂ ಸಚಿವರಾಗಿ ಅನುಭವ ಇಲ್ಲದವರಿಗೆ ಪ್ರಧಾನಿ ಮೋದಿಯವರು, ರೈಲ್ವೆ ಖಾತೆಯ ಜೊತೆಗೆ ಸಂವಹನ ಖಾತೆ ಮತ್ತು ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ ಖಾತೆಗಳಂತಹ ಮಹತ್ತರ ಜವಾಬ್ದಾರಿಯನ್ನೂ ನೀಡಿದ್ದರು.

ಆದರೆ, ಅಶ್ವಿನಿ ವೈಭವ್ ಅಧಿಕಾರ ವಹಿಸಿಕೊಂಡ ನಂತರ ದೇಶದ ನಾನಾಭಾಗಗಳಲ್ಲಿ ರೈಲು ಅಪಘಾತಗಳು ದಿನನಿತ್ಯದ ಸುದ್ದಿಯಾಗಿವೆ. ಇಲ್ಲಿಯವರೆಗೆ 329ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೋದಿಯವರ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಅಪಘಾತ ಮತ್ತು ಅವಘಡಗಳ ಬಗ್ಗೆ ಕೇಳಿದರೆ, ಉಡಾಫೆಯ ಉತ್ತರ ನೀಡುತ್ತಾರೆ. ಇಲ್ಲ, ಹರೆಯದ ಹುಡುಗರಂತೆ ರೀಲ್ಸ್ ಮಾಡುತ್ತ ಕಾಲ ಕಳೆಯುತ್ತಾರೆ. ಅದೂ ಇಲ್ಲ ಎಂದರೆ, ಅವಘಡಗಳನ್ನು ಸಮಾಜಕ್ಕೆ ತೋರುವ ಸಾಮಾಜಿಕ ಮಾಧ್ಯಮಗಳಿಗೇ ನೋಟಿಸ್ ನೀಡಿ ದಮ್ಕಿ ಹಾಕುತ್ತಾರೆ!
ಬಿಜೆಪಿಯನ್ನು ಆಯ್ಕೆ ಮಾಡಿಕೊಂಡ ಜನ, ಇತ್ತ ನೆಮ್ಮದಿಯ ಬದುಕನ್ನೂ ಕಳೆದುಕೊಂಡಿದ್ದಾರೆ; ಅತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ. ಈ ʼಭಾಗ್ಯʼಕ್ಕೆ ಬಿಜೆಪಿಯನ್ನು ಮೂರನೇ ಬಾರಿಗೆ ಗೆಲ್ಲಿಸಬೇಕಿತ್ತೇ?
ಅಶ್ವಿನಿ ವೈಭವ್ ಕತೆ ಹೀಗಾದರೆ, ನಿನ್ನೆ ತಾನೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೇಖಾ ಗುಪ್ತಾ ಕತೆ ಇನ್ನೊಂದು ರೀತಿಯದು.
ರೇಖಾ ಗುಪ್ತಾ ಮೊದಲಿಗೆ ಎಬಿವಿಪಿಯಲ್ಲಿದ್ದವರು. ದೆಹಲಿಯ ಕಾಲೇಜು ದಿನಗಳಿಂದಲೇ ರಾಜಕೀಯ ಆಕಾಂಕ್ಷಿಯಾಗಿದ್ದವರು. ಸಂಘಪರಿವಾರದ ಸಹವಾಸದಿಂದ ಬಿಜೆಪಿಗೆ ಬಂದು, ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯೆಯಾಗಿದ್ದರು. 2022ರಲ್ಲಿ ರೇಖಾ ಗುಪ್ತಾ ಅವರನ್ನು ಬಿಜೆಪಿ ಮೇಯರ್ ಅಭ್ಯರ್ಥಿ ಎಂದು ಕೂಡ ಬಿಂಬಿಸಿತ್ತು.
ಅಲ್ಲಿಂದ ಇಲ್ಲಿಯವರೆಗೆ ರೇಖಾ ಗುಪ್ತಾ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲ, ಹತ್ತಾರು ದ್ವೇಷಭಾಷಣಗಳನ್ನು ಮಾಡಿದ್ದರು. ಜನರನ್ನು ಕೋಮುಗಲಭೆಗೆ ಪ್ರಚೋದಿಸಿದ್ದರು. ಪ್ರತಿಷ್ಠಿತ ಜೆಎನ್‌ಯು ವಿಶ್ವವಿದ್ಯಾಲಯವನ್ನು ಮುಚ್ಚಬೇಕೆಂದು ದೊಡ್ಡ ಗಂಟಲಿನಲ್ಲಿ ಬೊಬ್ಬೆಹಾಕಿದ್ದರು. ದೆಹಲಿ ಮುನಿಸಿಪಾಲಿಟಿಯಲ್ಲಿ ಮೇಜು-ಕುರ್ಚಿಗಳನ್ನು ಪುಡಿಗಟ್ಟಿ ದಾಂಧಲೆ ಮಾಡಿದ್ದರು.
ಇದನ್ನು ಓದಿದ್ದೀರಾ?: ದೆಹಲಿ ಸಿಎಂ ರೇಖಾ ಗುಪ್ತಾ ಸೇರಿ ಐವರು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್
ಈ ಸಮಾಜಘಾತಕ ಕೃತ್ಯಗಳು ಸಂಘಪರಿವಾರ ಮತ್ತು ಬಿಜೆಪಿ ನಾಯಕರನ್ನು ಸಂತುಷ್ಟಗೊಳಿಸುತ್ತವೆಂದು ಭ್ರಮಿಸಿ, ಚಿತ್ರಗಳು, ಭಾಷಣಗಳು, ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಾದ ಯೂ ಟ್ಯೂಬ್, ಇನ್ಟಾಗ್ರಾಮ್, ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಹಂಚಿದ್ದರು. ಈಗ, ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಆ ಎಲ್ಲ ಪೋಸ್ಟ್ ಗಳನ್ನು ಅಳಿಸಿಹಾಕಿದ್ದಾರೆ. ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿದ್ದಾರೆ. ಆ ಮೂಲಕ ಸಚ್ಚಾರಿತ್ರ್ಯವಂತರೂ, ಸಂವಿಧಾನಕ್ಕೆ ಬೆಲೆ ಕೊಡುವವರೂ ಆಗಿ ಪರಿವರ್ತನೆ ಹೊಂದಿದ್ದಾರೆ!

ಅಧಿಕಾರಕ್ಕೆ ಏರಲು ಬೆಂಕಿಯುಗುಳುವ ಭಾಷಣ ಮಾಡುವುದು, ಅಧಿಕಾರಕ್ಕೇರಿದ ಮೇಲೆ ನಾನು ಏನೂ ಮಾಡಿಯೇ ಇಲ್ಲವೆಂಬಂತೆ ಪೋಸು ಕೊಡುವುದು. ಜವಾಬ್ದಾರಿ ಮರೆತು ರೀಲ್ಸ್ ಮಾಡುವುದು, ಅವಘಡಗಳಾಗಿ ಸರ್ಕಾರದ ಮಾನ ಹರಾಜು ಆಗುವಾಗ ಅಳಿಸಿಹಾಕಲು ನೋಟಿಸ್ ಕೊಡುವುದು- ಇದು ಬಿಜೆಪಿ ನಾಯಕರ ಬಣ್ಣವಿಲ್ಲದ ಬೀದಿ ನಾಟಕ.

ಲೇಖಕ, ಪತ್ರಕರ್ತ