ಹಳಸಿಕೊಂಡ ಟ್ರಂಪ್-ಮಸ್ಕ್ ದೋಸ್ತಿ: ಅಮೆರಿಕ ರಾಜಕಾರಣ ಅತಂತ್ರ

Date:

Advertisements
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್- ಇಬ್ಬರೂ ಅಪ್ಪಟ ವ್ಯಾಪಾರಸ್ಥರು. ಇವರಿಬ್ಬರ ದೋಸ್ತಿ ಈಗ ಹಳಸಿಕೊಂಡಿದೆ. ಸಾರ್ವಜನಿಕ ಹೇಳಿಕೆಗಳ ಮೂಲಕ ಬಯಲಾಗುತ್ತಿದ್ದಾರೆ. 'ನಗ್ನ'ಸತ್ಯಗಳನ್ನು ಬಿಚ್ಚಿಡುತ್ತಿದ್ದಾರೆ. ಅಮೆರಿಕದ ರಾಜಕಾರಣ, ವರ್ಚಸ್ಸು ಕಳೆಗುಂದತೊಡಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್- ಇಬ್ಬರೂ ಅಪ್ಪಟ ವ್ಯಾಪಾರಸ್ಥರು. ಅಸಾಧ್ಯ ಅಹಂಕಾರದ ಮನುಷ್ಯರು. ಅವರು ಒಟ್ಟಿಗೆ ಇರುವುದು ಸಾಧ್ಯವೇ ಇಲ್ಲ ಎನ್ನುವುದು ಅಮೆರಿಕದ ರಾಜಕಾರಣವನ್ನು ಹತ್ತಿರದಿಂದ ಬಲ್ಲವರ ಭವಿಷ್ಯವಾಗಿತ್ತು. ಅದು ಈಗ ನಿಜವಾಗಿದೆ.

ಎಲಾನ್ ಮಸ್ಕ್, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸರ್ಕಾರಿ ದಕ್ಷತೆ ವಿಭಾಗದ ಮುಖ್ಯಸ್ಥರಾಗಿ ತಾವಿನ್ನು ಮುಂದುವರೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ಮೇಲೆ ವಿಶ್ವಾಸ ಇಟ್ಟಿದ್ದಕ್ಕಾಗಿ ಮತ್ತು ವಿಶೇಷ ಸರ್ಕಾರಿ ಉದ್ಯೋಗಿಯಾಗಿ ತಮ್ಮ ಆಡಳಿತದಲ್ಲಿ ಸೇರಿಸಿಕೊಂಡಿದ್ದಕ್ಕಾಗಿ, ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅವರು ರಾಜೀನಾಮೆ ಕೊಟ್ಟರು, ಇವರು ಸ್ವೀಕರಿಸಿದರು ಎಂಬುದಕ್ಕಷ್ಟೇ ಇದು ನಿಲ್ಲುವುದಿಲ್ಲ. ನಿಲ್ಲುವಂಥದ್ದೂ ಅಲ್ಲ. ಏಕೆಂದರೆ, ಅವರಿಬ್ಬರು ಒಂದಾಗಿದ್ದು ಅಮೆರಿಕದ ಅಭಿವೃದ್ಧಿಗಲ್ಲ. ರಾಜಕಾರಣದ ಮೌಲ್ಯ ವೃದ್ಧಿಗೂ ಅಲ್ಲ. ಅಪ್ಪಟ ವ್ಯಾಪಾರಕ್ಕೆ. ಜಾಗತಿಕ ಶ್ರೀಮಂತಿಕೆಗೆ. ಹೀಗಾಗಿ ಈ ದೋಸ್ತಿಯಲ್ಲಿ ಬಿರುಕುಂಟಾಗಿದೆ. ಆ ಬಿರುಕು ಸಾರ್ವಜನಿಕ ಹೇಳಿಕೆಗಳ ಮೂಲಕ ಬಹಿರಂಗವಾಗುತ್ತಿದೆ. ಆ ಹೇಳಿಕೆಗಳು ‘ನಗ್ನಸತ್ಯ’ಗಳನ್ನು ಬಿಚ್ಚಿಡುತ್ತಿವೆ. ಅಮೆರಿಕರನ್ನಷ್ಟೇ ಅಲ್ಲ, ಜಗತ್ತಿನ ಜನರನ್ನು ಬೆಚ್ಚಿ ಬೀಳಿಸುತ್ತಿವೆ.

Advertisements

ಎಲಾನ್ ಮಸ್ಕ್ ಮೊದಲಿಗೆ, ಟ್ರಂಪ್ ಮಂಡಿಸಿದ ಬಜೆಟ್ ಅನ್ನು ತೀವ್ರವಾಗಿ ಟೀಕಿಸಿದರು. ಇದು ಈ ಜೋಡಿ ಬೇರೆಯಾಗಲು ತಕ್ಷಣದ ಕಾರಣವೆಂದು ಅಂದಾಜು ಮಾಡಲಾಗುತ್ತಿದೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಷ್ಟೊಂದು ಅಗಾಧ ಪ್ರಮಾಣದ ಖರ್ಚನ್ನು ನೋಡಿ ನಿಜಕ್ಕೂ ನಿರಾಶೆಯಾಗಿದೆ. ಇದು ಕೊರತೆ ಬಜೆಟ್ ಗಾತ್ರವನ್ನು ಇನ್ನಷ್ಟು ಹೆಚ್ಚಿಸಲಿದೆ. ಅಷ್ಟು ಮಾತ್ರವಲ್ಲದೆ ಸರ್ಕಾರಿ ದಕ್ಷತಾ ಇಲಾಖೆ(DOGE) ಮಾಡುತ್ತಿರುವ ಕೆಲಸವನ್ನು ಕಡೆಗಣಿಸಿದಂತಾಗಿದೆ’ ಎಂದು ಮಸ್ಕ್ ಯುಎಸ್ ಟಿವಿ ವಾಹಿನಿಯ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಹೀಗೆ ಸಾರ್ವಜನಿಕವಾಗಿ ಟೀಕೆ ಮಾಡುವುದು ಟ್ರಂಪ್ ಮತ್ತವರ ಸಲಹೆಗಾರರಿಗೆ ಅರಗಿಸಿಕೊಳ್ಳಲಾರದ ಅಪಥ್ಯವಾಯಿತು. ಹಾಗೆಯೇ ಸರ್ಕಾರದ ವೆಚ್ಚವನ್ನು ತಗ್ಗಿಸುವ ತಮ್ಮ ನಿರ್ಧಾರಗಳಿಗೆ ಇನ್ನು ಮುಂದೆ ಟ್ರಂಪ್ ಬೆಂಬಲವಿರುವುದಿಲ್ಲ ಎಂಬುದು ಮಸ್ಕ್ ಪಾಲಿಗೂ ಸ್ಪಷ್ಟವಾಗಿತ್ತು.

ಇದಕ್ಕೆ ಪ್ರತಿಯಾಗಿ ಎಲಾನ್ ಮಸ್ಕ್, ‘ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು’ ಎಂಬ ಒತ್ತಾಯದ ದಾಳ ಉರುಳಿಸಿದರು. ಟ್ರಂಪ್ ಕೂಡ ತಾವೇನು ಕಡಿಮೆ ಇಲ್ಲ ಎಂಬಂತೆ ಮಸ್ಕ್ ಕಂಪನಿಗಳ ಸರ್ಕಾರಿ ಒಪ್ಪಂದಗಳು ಮತ್ತು ಸಬ್ಸಿಡಿಗಳನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದರು.

ಮಸ್ಕ್ ಟ್ರಂಪ್

ಅಷ್ಟೇ ಅಲ್ಲ, ಮಸ್ಕ್ ಬಜೆಟ್ ಬಗ್ಗೆ ಟೀಕಿಸಿದ್ದನ್ನು ಗುರಿಯಾಗಿಸಿಕೊಂಡು, ‘ನಮ್ಮ ಬಜೆಟ್‌ನಿಂದ ಶತಕೋಟಿ ಡಾಲರ್‌ಗಳನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ ಮಸ್ಕ್ ಅವರ ಸರ್ಕಾರಿ ಸಬ್ಸಿಡಿಗಳು ಮತ್ತು ಒಪ್ಪಂದಗಳನ್ನು ಕೊನೆಗೊಳಿಸುವುದು’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಕುಟುಕಿದರು.

ಅದಕ್ಕೆ ಎಲಾನ್ ಮಸ್ಕ್​ ಕೂಡ ಪ್ರತಿಕ್ರಿಯಿಸಿ, ‘ಟ್ರಂಪ್​ಗೆ ಕೃತಜ್ಞತೆಯೇ ಇಲ್ಲ, ನಾನು ಅಲ್ಲಿ ಇಲ್ಲದಿದ್ದರೆ ಅವರು ಚುನಾವಣೆಯಲ್ಲಿ ಸೋಲುತ್ತಿದ್ದರು’ ಎಂದು ಅಮೆರಿಕ ಚುನಾವಣೆಯ ಹೊಲಸನ್ನು ಹೊರಹಾಕಿದರು. ಟ್ರಂಪ್ ಅವರ ಪ್ರಚಾರಕ್ಕೆ ಮಸ್ಕ್ ಕೊಟ್ಟ ಆರ್ಥಿಕ ಬೆಂಬಲವನ್ನು ಕಡೆಗಣಿಸುವಂತಿಲ್ಲವಾದರೂ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಭರ್ಜರಿ ಗೆಲುವಿಗೆ ಖಂಡಿತವಾಗಿ ಅದಷ್ಟೇ ಕಾರಣವಾಗಿರಲಿಲ್ಲ. ಡೆಮಾಕ್ರಟಿಕ್ ಪಕ್ಷದ ಪ್ರಚಾರದಲ್ಲಿನ ದೌರ್ಬಲ್ಯಗಳು, ಕಮಲಾ ಹ್ಯಾರಿಸ್‌ಗೆ ಸಿಗದ ಸಮಯ ಮತ್ತು ಅವಕಾಶ ಸೇರಿದಂತೆ ಅನೇಕ ಕಾರಣಗಳಿದ್ದವು. ಅದು ಗೊತ್ತಿದ್ದರಿಂದಲೇ, ಗೆದ್ದ ಮೇಲೆ ಪರಸ್ಪರ ಅಪ್ಪಿಕೊಳ್ಳುವ ಮೂಲಕ, ಇಬ್ಬರೂ ಒಂದಾಗಿದ್ದರು.

ಟ್ರಂಪ್ ಅಧ್ಯಕ್ಷರಾದರೆ, ಮಸ್ಕ್ ಅವರಿಗೆ ಸರ್ಕಾರಿ ದಕ್ಷತಾ ಇಲಾಖೆ(DOGE)ಯ ಮುಖ್ಯಸ್ಥನನ್ನಾಗಿಸಲಾಗಿತ್ತು. ಆದರೆ ಸರ್ಕಾರದ ಭಾಗವಾದ ಎಲಾನ್ ಮಸ್ಕ್, ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿಲ್ಲ. ಸರ್ಕಾರಿ ಹುದ್ದೆಗಿರುವ ಘನತೆ-ಗೌರವಗಳನ್ನು ಕಾಪಾಡಲಿಲ್ಲ. ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಚಿಲ್ಲರೆ ವ್ಯಕ್ತಿಯಂತೆ ಬಾಯಿಗೆ ಬಂದಂತೆ ಮಾತನಾಡಿದರು. ಸರ್ಕಾರಕ್ಕೂ ವ್ಯಾಪಾರಕ್ಕೂ ಇರುವ ಗೆರೆಯನ್ನು ಅಳಿಸಿಹಾಕಿದರು.

ಇದನ್ನು ಓದಿದ್ದೀರಾ?: ದೀರ್ಘಾವಧಿಗೆ ರಷ್ಯಾ-ಉಕ್ರೇನ್ ಯುದ್ಧ: ಇದೇ ಟ್ರಂಪ್ ಉದ್ದೇಶ?

ಇದಲ್ಲದೆ, ಮಸ್ಕ್ ಕಾರ್ಯನಿರ್ವಹಣೆಯ ರೀತಿ, ಟ್ರಂಪ್ ಅವರ ಹಿರಿಯ ಸಲಹೆಗಾರರು ಮತ್ತು ಸಂಪುಟದ ಪ್ರಮುಖ ಸದಸ್ಯರಿಗೆ ನುಂಗಲಾರದ ತುತ್ತಾಗಿತ್ತು. ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಟ್ರಂಪ್ ಬಳಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ಕೂಡ ದೂರಿದ್ದರು.

ಹೊಸದಾಗಿ ಸೃಷ್ಟಿಸಲಾದ DOGEನಲ್ಲಿ ಎಲಾನ್ ಮಸ್ಕ್ ಮಾಡುತ್ತಿರುವ ರಂಪಾಟಗಳು ಅತಿಯಾಗತೊಡಗಿದವು. ಬಜೆಟ್‌ಗೆ ಕತ್ತರಿ ಹಾಕುವುದು ಹಾಗೂ ನೌಕರರನ್ನು ಕಿತ್ತುಹಾಕುವುದು ಟ್ರಂಪ್ ಸಂಪುಟದಲ್ಲಿರುವ ಹಿರಿಯ ರಾಜಕೀಯ ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿರುವ ಅಮೆರಿಕ ಸಂಸ್ಥೆ(USAID)ಗೆ ಸಂಬಂಧಿಸಿದ ಬೆಳವಣಿಗೆಗಳು, ಅಮೆರಿಕದ ವಿದೇಶಾಂಗ ನೀತಿಯ ಮೇಲೆ ಗಂಭೀರ ಪರಿಣಾಮ ಬೀರತೊಡಗಿದವು.

ಸರ್ಕಾರದಲ್ಲಿನ ಸುಧಾರಣೆ ಎಂದರೆ ವ್ಯಾಪಾರ ಮತ್ತು ಉದ್ಯಮದಲ್ಲಿ ಸುಧಾರಣೆ ತಂದಂತೆ ಅಲ್ಲ ಎಂಬುದು 2017ರಿಂದ 2021ರವರಗೆ ಅಧಿಕಾರ ನಡೆಸಿದ ಅಧ್ಯಕ್ಷ ಟ್ರಂಪ್ ಅವರಿಗೆ ಗೊತ್ತಿರಬೇಕಾಗಿತ್ತು. ಅಮೆರಿಕ ಮತ್ತು ಇತರ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಖಾಸಗಿ ಸಂಸ್ಥೆಗಳು ಎಷ್ಟು ಸುಲಭವಾಗಿ ನೇಮಕ ಮಾಡಿಕೊಳ್ಳುತ್ತವೋ ಅಷ್ಟೇ ಬೇಗ ಕಿತ್ತೂ ಹಾಕುತ್ತವೆ. ಆದರೆ ಸರ್ಕಾರ ಅಷ್ಟು ಸುಲಭವಾಗಿ ಆ ಕೆಲಸ ಮಾಡುವುದಿಲ್ಲ, ಮಾಡಲಾಗುವುದೂ ಇಲ್ಲ.

ಉದ್ಯಮದ ಉದ್ದೇಶಗಳಿಗೂ ಸರ್ಕಾರದ ಉದ್ದೇಶಗಳಿಗೂ ಮೂಲಭೂತ ವ್ಯತ್ಯಾಸಗಳಿರುತ್ತವೆ. ಒಂದು ಉದ್ಯಮವನ್ನು ಲಾಭಕ್ಕಾಗಿ ನಡೆಸಲಾಗುತ್ತದೆ. ಆದರೆ ಸರ್ಕಾರ ಹಾಗಲ್ಲ, ಅದರ ಉದ್ದೇಶವೇನಿದ್ದರೂ ಜನರ ಸೇವೆ ಮಾಡುವುದು.

ಟ್ರಂಪ್ ಒಳಗೊಬ್ಬ ಉದ್ಯಮಿ ಕೆಲಸ ಮಾಡುತ್ತಿದ್ದರೂ, ಅಧ್ಯಕ್ಷ ಟ್ರಂಪ್‌ಗೆ ತಮ್ಮ ನೀತಿಗಳನ್ನು ಜಾರಿಗೆ ತರಲು ಸರ್ಕಾರಿ ವ್ಯವಸ್ಥೆಯನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಇಂತಹ ಸಂಗತಿಯನ್ನು ಮಸ್ಕ್ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ವ್ಯವಸ್ಥೆ ಹೀಗಿರುವಾಗ ಟ್ರಂಪ್ ಅಧಿಕಾರಶಾಹಿಯನ್ನು ದೂರವಿಟ್ಟು ಯಶಸ್ವಿಯಾಗಲು ಸಾಧ್ಯವಿಲ್ಲ. ಅವರು ಅಧಿಕಾರಿಗಳನ್ನು ಜೊತೆಯಲ್ಲಿಟ್ಟುಕೊಂಡೇ ಎಲ್ಲವನ್ನೂ ಸಾಧಿಸುತ್ತಿದ್ದರು. ಮಸ್ಕ್ ಮಾಡುತ್ತಿರುವ ರಂಪಾಟಗಳು ಸರ್ಕಾರಿ ಯಂತ್ರದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಿವೆ, ಟ್ರಂಪ್ ರಾಜಕೀಯ ವರ್ಚಸ್ಸನ್ನು ಕಳೆಗುಂದಿಸುತ್ತಿವೆ ಎನ್ನುವುದು ಅರಿವಿಗೆ ಬಂದಿತ್ತು. ರಾಜೀನಾಮೆ ಎಂದಾಗ, ಮರುಮಾತಾಡದೆ ಒಪ್ಪಿದ್ದೂ ಅಲ್ಲದೆ, ಮಸ್ಕ್ ಕಂಪನಿಗಳ ಸರ್ಕಾರಿ ಸಬ್ಸಿಡಿ ಮತ್ತು ಒಪ್ಪಂದಗಳ ಬಗ್ಗೆ ಮಾತನಾಡಿದರು.

ಇದು ಸಹಜವಾಗಿಯೇ ಎಲಾನ್ ಮಸ್ಕ್ ಅವರನ್ನು ಕೆರಳಿಸಿದೆ. ಅದು ಡೆಮಾಕ್ರಟಿಕ್ ಪಕ್ಷದ ನಾಯಕ, ಮಾಜಿ ಅಧ್ಯಕ್ಷ ಬರಾಕ್ ಒಬಮಾ ಅವರನ್ನು ಮಸ್ಕ್ ಭೇಟಿ ಮತ್ತು ಮಾತುಕತೆಯಲ್ಲಿ ಕಾಣತೊಡಗಿದೆ. ಪರೋಕ್ಷವಾಗಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ತೊರೆಯುವ ಸುಳಿವನ್ನೂ ನೀಡಿದೆ.

ಇಷ್ಟಕ್ಕೇ ಬಿಡದ ಎಲಾನ್ ಮಸ್ಕ್ ಮುಂದುವರೆದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರ್ಮಕ್ಕೆ ತಾಕುವ, ಜೆಫ್ರಿ ಎಪ್‌ಸ್ಟೀನ್ ಫೈಲ್‌ಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೆಸರಿದೆ, ಅದಕ್ಕಾಗಿಯೇ ಅವುಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದರು.

ಇದು ನಿಜಕ್ಕೂ ಗಂಭೀರ ಆರೋಪವೇ. ಇದು ರಾಜಕೀಯ ನೇತಾರರ ವಿರುದ್ಧ ನೈತಿಕ ಪ್ರಶ್ನೆ ಎತ್ತುತ್ತದೆ. ಸಿಐಎ(ಕೇಂದ್ರೀಯ ತನಿಖಾ ಏಜೆನ್ಸಿ) ಮತ್ತು ಮೊಸ್ಸಾಡ್(ಇಸ್ರೇಲ್ ಗುಪ್ತಚರ ಏಜೆನ್ಸಿ) ನಡುವಿನ ಸಂಬಂಧವನ್ನು ಬಹಿರಂಗಗೊಳಿಸುತ್ತದೆ. ಇಸ್ರೇಲ್ ಮತ್ತು ಅಮೆರಿಕಗಳ ಒಳಒಪ್ಪಂದವನ್ನು ಹೊರಹಾಕುತ್ತದೆ. ಒಟ್ಟಿನಲ್ಲಿ ಅಮೆರಿಕದ ಒಡಲ ಕೊಳಕನ್ನು ತೆರೆದು ತೋರಿಸುತ್ತದೆ.

ಎಲಾನ್ ಮಸ್ಕ್ ಎಳೆದು ತಂದಿರುವ ಜೆಫ್ರಿ ಎಪ್‌ಸ್ಟೀನ್ ಅಮೆರಿಕದ ಕುಖ್ಯಾತ ಅಪರಾಧಿ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಳ್ಳಸಾಗಣೆ ಆರೋಪಿ. ಅಷ್ಟೇ ಅಲ್ಲ, ಅಪ್ರಾಪ್ತ ಮಕ್ಕಳನ್ನು ಉನ್ನತ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಬಳಿ ಕಳುಹಿಸಿದ್ದ ಗಂಭೀರ ಆರೋಪವೂ ಆತನ ಮೇಲಿದೆ. ಆತ ಖಾಸಗಿ ಕೆರಿಬಿಯನ್ ದ್ವೀಪಗಳಲ್ಲಿ ಹಾಗೂ ನ್ಯೂಯಾರ್ಕ್, ಫ್ಲೋರಿಡಾ, ನ್ಯೂ ಮೆಕ್ಸಿಕೊದಲ್ಲಿರುವ ಭವ್ಯ ಬಂಗಲೆಗಳಂತಹ ಅಡಗುತಾಣಗಳಲ್ಲಿ ‘ದಂಧೆ’ ನಡೆಸುತ್ತಿದ್ದ ಎಂಬ ಮಾಹಿತಿಯೂ ಇದೆ. ಅನೇಕ ಮಹಿಳೆಯರು ಈತನ ವಿರುದ್ಧ ‘ಮೀ ಟೂ’ ಆರೋಪ ಮಾಡಿದ್ದಾರೆ. ಕೇಸು ಕೂಡ ದಾಖಲಿಸಿದ್ದಾರೆ.

ಜೆಫ್ರಿ ಎಪ್‌ಸ್ಟೀನ್‌​​ನ ಅಪರಾಧಗಳ ತನಿಖೆಯ ಸಮಯದಲ್ಲಿ ಅನೇಕ ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿದ್ದವು. ದಾಖಲೆಗಳು, ಕರೆ ದಾಖಲೆಗಳು, ಚಾಟ್‌ಗಳು, ವೀಡಿಯೊಗಳು, ಅವರ ಸಹಚರರು ಮತ್ತು ಕ್ಲೈಂಟ್‌ಗಳ ಹೆಸರುಗಳನ್ನು ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ದಾಖಲಿಸಲಾಗಿದೆ.

ಮಸ್ಕ್ ಟ್ರಂಪ್1

ಎಲಾನ್ ಮಸ್ಕ್‌ ಅವರ ಗಂಭೀರ ಆರೋಪವೇನೆಂದರೆ, ಫೆಬ್ರವರಿ 2025ರಲ್ಲಿ, ಯುಎಸ್ ನ್ಯಾಯ ಇಲಾಖೆಯ ದಾಖಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಪ್ ಐಕಾನ್ ಮೈಕೆಲ್ ಜಾಕ್ಸನ್, ನಟ ಅಲೆಕ್ ಬಾಲ್ಡ್‌ವಿನ್ ಮತ್ತು ಚಲನಚಿತ್ರ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್ ಎಪ್‌ಸ್ಟೀನ್ ಅವರ ಸಂಪರ್ಕ ಪಟ್ಟಿಯಲ್ಲಿದ್ದ ಪ್ರಭಾವಿ ವ್ಯಕ್ತಿಗಳು ಎಂಬುದು ಬಹಿರಂಗಗೊಂಡಿತ್ತು. ಆದರೆ ತನಿಖೆಯಲ್ಲಿ ಸಿಕ್ಕಿರುವ ಮಾಹಿತಿಯನ್ನು ಸಾರ್ವಜನಿಕವಾಗಿ ಎಲ್ಲಿಯೂ ಹಂಚಿಕೊಂಡಿಲ್ಲ. ಈ ಪಟ್ಟಿಯಲ್ಲಿ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಟ್ರಂಪ್ ಮತ್ತು ಮಗಳು ಇವಾಂಕಾ ಟ್ರಂಪ್ ಅವರ ಹೆಸರುಗಳೂ ಸೇರಿವೆ ಎನ್ನುವುದು.

ಇದರಿಂದ ಕೆಂಡಾಮಂಡಲವಾಗಿರುವ ಟ್ರಂಪ್, ಎಲಾನ್ ಮಸ್ಕ್ ಅವರ ‘ಎಕ್ಸ್’ ಬಿಟ್ಟು ಬಲಪಂಥೀಯ ಮಾಧ್ಯಮಗಳತ್ತ ಹೊರಳಿ, ಆ ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಅಷ್ಟೇ ಅಲ್ಲ, ಮೊದಲು ಮಸ್ಕ್ ಅವರ ವ್ಯವಹಾರಕ್ಕೆ ಅನುಕೂಲವಾಗಲಿ ಎಂದು ಎಲೆಕ್ಟ್ರಿಕ್ ವಾಹನಗಳತ್ತ ಇದ್ದ ನಿಲುವನ್ನು ಕೈಬಿಟ್ಟು, ಹೊಸ ಬಿಲ್‌ನಲ್ಲಿ ಮಸ್ಕ್‌ಗೆ ಉಲ್ಟಾ ಹೊಡೆದಿದ್ದಾರೆ.

ಎಲಾನ್ ಮಸ್ಕ್ ಪ್ರಸಂಗದಿಂದ ಒಂದು ಪಾಠವನ್ನಂತೂ ಕಲಿಯಬೇಕಿದೆ. ಸರ್ಕಾರಿ ಮತ್ತು ಆಡಳಿತಾತ್ಮಕ ಸುಧಾರಣೆ ಕಸರತ್ತುಗಳು ನಿರಂತರ ಪ್ರಕ್ರಿಯೆ. ಅದನ್ನು ಸಾಂಪ್ರದಾಯಿಕ ವಿಧಾನಗಳಿಂದಲೇ ನಿರ್ವಹಿಸಬೇಕಾಗುತ್ತದೆ. ಸರ್ಕಾರಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸುವ ಮತ್ತು ಸಾರ್ವಜನಿಕ ಹಣವನ್ನು ವಿವೇಚನೆಯಿಂದ ಖರ್ಚುಮಾಡುವ ಮುತ್ಸದ್ದಿ ನಾಯಕನನ್ನು ಅದು ಬೇಡುತ್ತದೆ. ಆತನಿಗೆ ರಾಜಕೀಯ ಇಚ್ಛಾಶಕ್ತಿಯೂ ಇರಬೇಕಾಗುತ್ತದೆ. ವ್ಯಾಪಾರ ವ್ಯಾಪಾರವೇ, ಸರ್ಕಾರ ಸರ್ಕಾರವೇ.

ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿ ವಿಲಾಸಿ ವ್ಯಾಪಾರಿ, ರಿಯಲ್ ಎಸ್ಟೇಟ್ ಉದ್ಯಮಿ; ರಾಜಕಾರಣಿಯಲ್ಲ. ರಾಜಕೀಯದ ಗಂಧ ಗಾಳಿಯೂ ಗೊತ್ತಿಲ್ಲ. ಗಳಿಗೆಗೊಂದು ಮಾತನಾಡುವ ಈ ಹುಚ್ಚನನ್ನು ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಆಯ್ಕೆ ಮಾಡಿಕೊಂಡಿದೆ. ಅಮೆರಿಕದ ರಾಜಕಾರಣ ದಿಕ್ಕು ತಪ್ಪುತ್ತಿದೆ. ಅವಮಾನಕ್ಕೊಳಗಾಗಿ ಜಾಗತಿಕವಾಗಿ ವರ್ಚಸ್ಸು ಕಳೆದುಕೊಳ್ಳುತ್ತಿದೆ.

ಇಂತಹ ಹುಚ್ಚನ ಸ್ನೇಹ ಬೆಳೆಸಿರುವ ನಮ್ಮ ಪ್ರಧಾನಿ ಮೋದಿಯವರು, ಎಲಾನ್ ಮಸ್ಕ್‌ನಂತಹ ಅಮಿತ್ ಶಾರನ್ನು ಪಕ್ಕದಲ್ಲಿಟ್ಟುಕೊಂಡಿದ್ದಾರೆ. ಅವರು ರಾಜಕಾರಣದೊಂದಿಗೆ ವ್ಯಾಪಾರ ಬೆರೆಸಿದರೆ, ಇವರು ಧರ್ಮ ಬೆರೆಸಿದ್ದಾರೆ. ಅವರ ದೋಸ್ತಿ ಈಗ ಹಳಸಿಕೊಂಡಿದೆ, ಇವರದು ಯಾವಾಗ ಎನ್ನುವುದನ್ನು ಕಾದು ನೋಡಬೇಕಿದೆ.   

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X