ಅಧಿಕಾರಕ್ಕಾಗಿ ಅಧಿಕಾರ ಮಾಡುವುದಲ್ಲ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಬಜೆಟ್ ಭಾಷಣದಲ್ಲಿ ಶ್ಲಾಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸೋಮವಾರ ಮುಖ್ಯಮಂತ್ರಿಗಳು ಉತ್ತರಿಸಿ, “ರಾಜ್ಯಪಾಲರ ಭಾಷಣದಲ್ಲಿ ಸಾಂಪ್ರದಾಯಿಕವಾಗಿ ಸರ್ಕಾರದ ಸಾಧನೆಗಳನ್ನು ಸದನದ ಮುಂದಿಡುವ ಭಾಷಣವಿರುತ್ತದೆ. ಕೆಲವರು ಟೀಕಿಸಿದ್ದಾರೆ, ಹಲವರು ವಾಸ್ತವಿಕವಾಗಿ ಮಾತನಾಡಿದ್ದಾರೆ, ಕೆಲವರು ಸಮರ್ಥಿಸಿದ್ದಾರೆ, ಕೇಲವರು ವಿರೋಧಿಸಲೆಂದೇ ವಿರೋಧಿಸಿ ಮಾತನಾಡಿದ್ದಾರೆ. ಅವರೆಲ್ಲರ ಸಲಹೆ ಸೂಚನೆಗಳನ್ನು ಸರ್ಕಾರ ಸ್ವಾಗತಿಸಿ, ಸರ್ಕಾರದ ನಿಲುವನ್ನು ಸದನಕ್ಕೆ ತಿಳಿಸಿ ವಂದನಾ ನಿರ್ಣಯವನ್ನು ಅಂಗೀಕಾರ ಮಾಡಿ” ಎಂದು ವಿನಂತಿಸಿದರು.
“ಅಶೋಕ್ ಹಾಗು ಸುನೀಲ್ ಕುಮಾರ್ ಅವರು ಮಾತನಾಡುವಾಗ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಗು ಬಹುತೇಕ ಸದಸ್ಯರ ಪ್ರಕಾರ ಅರ್ಥಹೀನ ಮಾತುಗಳು. ನನಗೂ ಹಿರಿಯ ಸದಸ್ಯರಿಂದ ಇಂಥ ಮಾತುಗಳನ್ನು ನಿರೀಕ್ಷೆ ಇರಲಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕರಿಮಣಿ ಮಾಲೀಕ ಯಾರು ಎನ್ನುವುದು ಕೀಳು ಅಭಿರುಚಿಯ ಪ್ರಯೋಗ. ನಿಮ್ಮ ಪಕ್ಷದಲ್ಲಿ ಭಿನಾಭಿಪ್ರಯಗಳಿಲ್ಲವೇ? ನಿಮ್ಮ ಭಿನ್ನಾಭಿಪ್ರಾಯಗಳು ಯಾವ ಮಟ್ಟಕ್ಕೆ ಹೋಗಿವೆ ಎಂಬ ಚರ್ಚೆ ಬೇಡ. ಅಭಿರುಚಿ ಹೀನ ಎಂದಷ್ಟೇ ಹೇಳಿದ್ದೇನೆ. ನಿಮಗೆ ಸರಿಯಿದ್ದರೆ ಓಕೆ. ಜನ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ” ಎಂದರು.
“ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ. ಆರ್.ಎಸ್.ಎಸ್ ಬೈಠಕ್ ನಲ್ಲಿದ್ದಾರೋ, ಸದನದಲ್ಲಿದ್ದಾರೋ ಗೊತ್ತಿಲ್ಲ. ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ 3300 ಕೋಟಿ, ವಿಶ್ವೇಶ್ವರ ಜಲನಿಗಮ ಸೇರಿ ಕರ್ನಾಟಕ ನೀರಾವರಿಗೆ ಒಟ್ಟು 10 ಸಾವಿರ ಕೋಟಿ ರೂಪಾಯಿ ರಾಜ್ಯದ ನೀರಾವರಿ ನಿಗಮಕ್ಕೆ ಕೊಟ್ಟಿದೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯೋ ಉದ್ದೇಶಪೂರ್ವಕ, ಟೀಕೆಗಾಗಿ ಹೇಳಿದ್ದಾರೋ ಗೊತ್ತಿಲ್ಲ. ವಾಸ್ತವ ಏನೆಂದರೆ 24-1-2025 ರಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸ್ಕೀಂ ಆಫ್ ಸ್ಪೆಶಲ್ ಅಸಿಸ್ಟೆನ್ಸ್ ಕೊಟ್ಟಿದ್ದು, 50 ವರ್ಷಗಳ ಕಾಲ ಬಡ್ಡಿ ರಹಿತವಾಗಿ ವಿಶೇಷ ನೆರವು ನೀಡಿದೆ. ಮುಳವಾಡ ಏತ ನೀರಾವರಿಗೆ 200 ಕೋಟಿ, ಮಹಾಲಕ್ಷ್ಮಿ ಮಲಪ್ರಭಾ ಯೋಜನೆಗೆ 200, ಭ್ರದಾ ಮೇಲ್ದಂಡೆ, 300 ಒಟ್ಟು 1030 ಕೋಟಿ ಕೊಟ್ಟಿದ್ದಾರೆ. ಮಾಹಿತಿ ಕೊರತೆಯಿದ್ದರೆ ಸರಿಯಾಗಿ ಪಡೆದು ಮಾತನಾಡಿ. ಇದು ಸಂಪೂರ್ಣ ಸುಳ್ಳು ಮಾಹಿತಿ” ಎಂದು ಮುಖ್ಯಮಂತ್ರಿಗಳು ಹೇಳಿದರು.