- ಪ್ರತಿಪಕ್ಷಗಳ ನಾಯಕರ ಗಲಾಟೆಗೆ ನಾವು ಸೊಪ್ಪು ಹಾಕಲ್ಲ: ಸಿಎಂ ಸಿದ್ದರಾಮಯ್ಯ
- ರಾಜಕೀಯ ಲಾಭಕ್ಕಾಗಿ ಪುಡಿ ಪಾರ್ಟಿಗಳಿಗೆ ರಾಜ ಮರ್ಯಾದೆ ಕೊಟ್ಟಿದೆ: ಬೊಮ್ಮಾಯಿ
ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ್ದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಗಣ್ಯರಿಗೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ನಿಯೋಜನೆ ಮಾಡಿರುವ ವಿಚಾರ ಬುಧವಾರದ ಬೆಳಗಿನ ಸಮಯದ ಸದನವನ್ನು ನುಂಗಿಹಾಕಿತು.
ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ ವಿವಿಧ ಪಕ್ಷಗಳ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದು ತಪ್ಪು ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗಲಾಟೆ ಆರಂಭಿಸಿದರು.
ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಹೆಚ್ಚಾಗಿ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಸಭಾಧ್ಯಕ್ಷರು ಸದನವನ್ನು ಕೆಲ ಕಾಲ ಮುಂದೂಡಿದರು. ಮತ್ತೆ ನಂತರ ಸದನ ಆರಂಭವಾದರೂ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆಯಲಿಲ್ಲ.
ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, “ರಾಜಕೀಯ ರೊಟ್ಟಿ ಸುಟ್ಟುಕೊಳ್ಳಲು ರಾಜ್ಯದ ಮರ್ಯಾದೆಯನ್ನು ಕಾಂಗ್ರೆಸ್ ಸರ್ಕಾರ ತೆಗೆದಿದೆ. ರಾಜಕೀಯ ಲಾಭಕ್ಕಾಗಿ ಪುಡಿ ಪಾರ್ಟಿಗಳಿಗೆ ರಾಜ ಮರ್ಯಾದೆ ಕೊಟ್ಟಿದೆ” ಎಂದು ವಾಗ್ದಾಳಿ ನಡೆಸಿದರು.
“ಯಾವ್ಯಾವ ಐಎಎಸ್ ಅಧಿಕಾರಿಗಳು ವಿರೋಧ ಪಕ್ಷಗಳ ಸಭೆಗೆ ಹಾಜರಾಗಿದ್ದಾರೆ ಅವರಿಗೆಲ್ಲ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಅವರ ಸಂಬಳ ತಡೆಹಿಡಿಯಬೇಕು. ಐಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯ ಮರೆತು ಈ ಸರ್ಕಾರದಲ್ಲಿ ನಡೆದುಕೊಳ್ಳುತ್ತಿದ್ದಾರೆ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರಿನಲ್ಲಿ ಹುಟ್ಟಿರುವ ‘ಇಂಡಿಯಾ’ದ ದಾರಿ ಸಲೀಸಲ್ಲ
ಆರ್ ಅಶೋಕ್ ಮಾತನಾಡಿ, “ಐಎಎಸ್ ಅಧಿಕಾರಿಗಳನ್ನು ಕಾಂಗ್ರೆಸ್ ಅಡುಗೆಮನೆ ಕೆಲಸಕ್ಕೂ ಬಳಸಿಕೊಳ್ಳುತ್ತದೆ. ಈ ಸರ್ಕಾರವನ್ನು ಕೂಡಲೇ ವಜಾಮಾಡಬೇಕು” ಎಂದು ಸಭಾಧ್ಯಕ್ಷರನ್ನು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, “ಮೊದಲಿನಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ. ಪ್ರತಿಪಕ್ಷಗಳ ನಾಯಕರ ಬೆದರಿಕೆಗೆ ನಾವು ಹೆದರಲ್ಲ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಐಎಎಸ್ ಅಧಿಕಾರಿಗಳನ್ನು ಹೀಗೆ ನೇಮಿಸಲಾಗಿತ್ತು. ನಾವು ಪ್ರಶ್ನೆ ಮಾಡಿದ್ವಾ? ನಮ್ಮ ರಾಜ್ಯದ ಪರಂಪರೆ ಉಳಿಸಿಕೊಳ್ಳಲು ನಾವು ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ” ಎಂದರು.
“ಪ್ರತಿಪಕ್ಷದ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಕೇವಲ ರಾಜಕೀಯಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಕುಮಾರ ಕೃಪಾಕ್ಕೆ ಪೊಲೀಸರನ್ನೇ ಹಾಕಿಕೊಂಡಿದ್ದರು. ಇವರು ಬೇಕು ಅಂತ ಮಾಡುತ್ತಿದ್ದಾರೆ. ಬಜೆಟ್ ಮೇಲೆ ಮಾತನಾಡಲು ಇವರಿಗೆ ಶಕ್ತಿ ಇಲ್ಲ. ಇವರ ಗಲಾಟೆಗೆ ನಾವು ಸೊಪ್ಪು ಹಾಕಲ್ಲ” ಎಂದು ಉತ್ತರಿಸಿದರು.
ಸಭಾಧ್ಯಕ್ಷರು ಎಷ್ಟೇ ವಿನಂತಿಸಿಕೊಂಡರು ಪ್ರತಿಪಕ್ಷಗಳ ನಾಯಕರು ಸದನದ ಬಾವಿ ಬಿಟ್ಟು ಕದಲಲಿಲ್ಲ. ಗಲಾಟೆ ನಡುವೆಯೇ ಸದನವನ್ನು ಸಭಾಧ್ಯಕ್ಷರು ಮುಂದುವರಿಸಿದರು.