ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮಾಡಿಕೊಂಡ ಮೈತ್ರಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದ ಯಾದಗಿರಿಯ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಹರಡಿದೆ. ಈ ವದಂತಿಯ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಯಾದಗಿರಿಯಲ್ಲಿ ಇಂದು ತನ್ನ ಕಚೇರಿಯಲ್ಲಿ ಭೇಟಿಯಾಗಿದ್ದ ಮಾಧ್ಯಮಗಳೊಂದಿಗೆ ಮಾತನಾಡಿರುವ ಜೆಡಿಎಸ್ ಶಾಸಕ, “ತಂದೆ ನಾಗನಗೌಡನವರು ನಿಧನರಾದಾಗ ಅಂತ್ಯಕ್ರಿಯೆಯಲ್ಲಿ ಕುಮಾರಸ್ವಾಮಿ ಭಾಗಿಯಾಗಿಲ್ಲ. ಕಾಲಾಯ ತಸ್ಮೈ ನಮಃ” ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ಮುಂದುವರಿಸಿದ್ದಾರೆ.
ಕಳೆದ ಜ.28ರಂದು ಶಾಸಕ ಶರಣಗೌಡ ಕಂದಕೂರು ಅವರ ತಂದೆ, ಮಾಜಿ ಶಾಸಕ ನಾಗನಗೌಡ ಕಂದಕೂರು ಅವರು ನಿಧನರಾಗಿದ್ದರು. ನಾಗನಗೌಡ ಕಂದಕೂರು ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿರಲಿಲ್ಲ.
ಇದೇ ವಿಚಾರವಾಗಿ ಮೌನ ಮುರಿದಿರುವ ಶಾಸಕ ಶರಣಗೌಡ ಕಂದಕೂರು, “ನಮ್ಮ ತಂದೆಯವರು ನಿಧನರಾಗಿ 20 ದಿನಗಳು ಆದಮೇಲೆ ಕುಮಾರಸ್ವಾಮಿ ಅವರು ಪೋನ್ ಮಾಡಿದ್ರು. ಬಂದು ನನ್ನನ್ನು ಭೇಟಿಯಾಗಿ ಬ್ರದರ್ ಅಂತ ತಿಳಿಸಿದ್ದಾರೆ. ಬರ್ತೀನಿ ಸರ್ ಅಂತಾ ಹೇಳಿದ್ದೀನಿ” ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
“ನಮ್ಮ ತಂದೆಯವರ ಅಂತಿಮ ಯಾತ್ರೆಯಲ್ಲಿ ಕುಮಾರಸ್ವಾಮಿ ಅವರು ಯಾಕೆ ಭಾಗವಹಿಸಿಲ್ಲ ಎನ್ನುವುದನ್ನು ನೀವು ಅವರನ್ನೇ ಕೇಳಬೇಕು. ನಮ್ಮ ತಂದೆ ನಾಗನಗೌಡ ಹಾಗೂ ನಮ್ಮ ಇಡೀ ಕುಟುಂಬ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಜೀವನವನ್ನೇ ಸವೆಸಿದ್ದೇವೆ. ಕಾಲಾಯ ತಸ್ಮೈ ನಮಃ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ಇದಕ್ಕೆ ಖಂಡಿತವಾಗಿ ಕಾಲ ಉತ್ತರ ನೀಡುತ್ತದೆ. ಆ ಸಮಯ ಬಂದಾಗ ನಾನು ಉತ್ತರ ಕೊಟ್ಟೇ ಕೊಡುತ್ತೇನೆ” ಎಂದು ಮಾಜಿ ಸಿಎಂಗೆ ಮಾರ್ಮಿಕವಾಗಿ ಟಾಂಗ್ ಕೊಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಆಂಧ್ರ ಪ್ರದೇಶ | ಟಿಡಿಪಿ-ಜನಸೇನಾ ಮೈತ್ರಿ: 24 ಕ್ಷೇತ್ರ ಪವನ್ ಕಲ್ಯಾಣ್‌ಗೆ ಬಿಟ್ಟುಕೊಟ್ಟ ಚಂದ್ರಬಾಬು ನಾಯ್ಡು
ಕಾಂಗ್ರೆಸ್ ಪಕ್ಷ ಸೇರುವ ವಿಚಾರದ ಬಗ್ಗೆ ಕೇಳಿದಾಗ, “ಎಲ್ಲದಕ್ಕೂ ಸಮಯ ಇದೆ. ನಾನು ಎಲ್ಲಿ ಇರ್ತೀನಿ, ಎಲ್ಲಿ ಹೋಗ್ತೀನಿ ಎಂಬುದು ಸದ್ಯ ಪ್ರಸ್ತುತವಲ್ಲ. ಯಾವುದೇ ತೀರ್ಮಾನ ಮಾಡಬೇಕಾದರೂ ನನ್ನನ್ನು ಬೆಳೆಸಿರುವಂತಹ ಕುಟುಂಬ, ಹಿತೈಷಿಗಳ ಅಭಿಪ್ರಾಯ ಪಡೆದೇ ತೀರ್ಮಾನ ಮಾಡುತ್ತೇನೆ” ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಹೇಳಿಕೆ ನೀಡಿದ್ದಾರೆ.
