ಇರಾನ್ ಮೇಲೆ ಮುಸ್ಲಿಂ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ದೇಶ ಎಂಬ ಗೂಬೆ ಕೂರಿಸಿ, ಅದರ ಮೇಲೆ ದಾಳಿ ಮಾಡಿ, ಅಭದ್ರತೆ ಸೃಷ್ಟಿಸಿ, ಯುದ್ಧಕ್ಕೆ ಎಳೆಸಿ, ಶಸ್ತ್ರಾಸ್ತ್ರಗಳನ್ನು ಖಾಲಿ ಮಾಡಿಸಿ, ನಾಯಕ ಖಮೇನಿಯನ್ನು ಓಡಿಸಿ, ಕೈವಶ ಮಾಡಿಕೊಳ್ಳಬೇಕು ಎಂಬ ಬಯಕೆ ಅಮೆರಿಕದ್ದು.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ 6ನೇ ದಿನ ದಾಟಿದೆ. ಯುದ್ಧದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದಿಗ್ಧ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪರ ನಿಂತಿದ್ದಾರೆ. ಇರಾನ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.
ಅಷ್ಟೇ ಅಲ್ಲ, ‘ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಎಲ್ಲಿ ಅಡಗಿದ್ದಾರೆ ಎಂದು ನಮಗೆ ನಿಖರವಾಗಿ ತಿಳಿದಿದೆ. ಅವರನ್ನು ನಾವು ಹತ್ಯೆ ಮಾಡುವುದಿಲ್ಲ. ಆದರೆ ಅವರು ನಮ್ಮ ಸಹನೆ ಪರೀಕ್ಷೆ ಮಾಡುವುದು ಬೇಡ, ಬಂದು ಶರಣಾಗಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಎಂದರೆ ಜಗತ್ತಿನ ದೊಡ್ಡಣ್ಣ. ಅದರ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಹೇಳಿದಂತೆ ಕೇಳಬೇಕು ಎಂದು ಧಮ್ಕಿ ಹಾಕಿದ್ದಾರೆ.
ಟ್ರಂಪ್ ಮಾತು ಕೇಳಲು ಇರಾನ್ ನಾಯಕ ಖಮೇನಿ ಏನು ನರೇಂದ್ರ ಮೋದಿಯೇ? ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ 13 ಸಲ ಹೇಳಿದರೂ, ತುಟಿಬಿಚ್ಚದ ಮೋದಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಎಂತಹ ‘ಮರ್ಯಾದೆ’ ಇದೆ ಎನ್ನುವುದು ಖಮೇನಿಗೆ ಗೊತ್ತಿದೆ. ಗೊತ್ತಿರುವುದರಿಂದಲೇ ಖಮೇನಿ, ಟ್ರಂಪ್ ಎಚ್ಚರಿಕೆಗೆ ಹೆದರದೆ ಉತ್ತರಿಸಿದ್ದಾರೆ.
ಇರಾನ್ ಸುಪ್ರೀಂ ನಾಯಕ ಖಮೇನಿ, ಮೊದಲ ಬಾರಿಗೆ ಪ್ರತಿಕ್ರಿಯಿಸಿ, ‘ಇಸ್ರೇಲ್‌ನ ದಾಳಿಯ ವಿರುದ್ಧ ಇರಾನ್ ಕಠಿಣ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಭಯೋತ್ಪಾದಕ ಯಹೂದಿ ಆಡಳಿತಕ್ಕೆ ನಾವು ಬಲವಾದ ಪ್ರತಿಕ್ರಿಯೆ ನೀಡುತ್ತೇವೆ. ಕರುಣೆ ತೋರುವ, ಶರಣಾಗುವ ಮಾತೇ ಇಲ್ಲ. ಇದು ಯುದ್ಧದ ಪ್ರಾರಂಭ’ ಎಂದು ಖಡಕ್ಕಾಗಿಯೇ ಉತ್ತರಿಸಿದ್ದಾರೆ.
ಇರಾನ್ ನಾಯಕ ಖಮೇನಿಯ ಮಾತುಗಳಿಂದ ಅಕ್ಷರಶಃ ಹುಚ್ಚನಂತಾಗಿರುವ ಟ್ರಂಪ್, ‘ಇರಾನ್ ಶರಣಾಗತಿ ಘೋಷಿಸಿ ಪರಮಾಣು ಒಪ್ಪಂದ ಮಾತುಕತೆಗೆ ಮುಂದಾಗಬೇಕು’ ಎಂದು ಸೂಚನೆ ಕೊಟ್ಟಿದ್ದಾರೆ. ಅಲ್ಲದೇ ಇರಾನಿನ ವಾಯು ಪ್ರದೇಶವು ಸಂಪೂರ್ಣವಾಗಿ ತನ್ನ ಹದ್ದುಬಸ್ತಿನಲ್ಲಿದೆ ಎಂದು ಪರೋಕ್ಷವಾಗಿ ಹೆದರಿಸುವ ಮಾತುಗಳನ್ನೂ ಆಡಿದ್ದಾರೆ.
ಅಂದರೆ, ಅಮೆರಿಕ ರೌಡಿಯಂತೆ ವರ್ತಿಸತೊಡಗಿದೆ. ಇದೇನು ಹೊಸದಲ್ಲ. ಈ ಹಿಂದಿನ ಅಮೆರಿಕ ಅಧ್ಯಕ್ಷರು ನಾಜೂಕಾಗಿ ವರ್ತಿಸುತ್ತಿದ್ದರು, ಟ್ರಂಪ್ ಅಕ್ಷರಶಃ ರಸ್ತೆರೌಡಿಯಂತೆಯೇ ಕೂಗಾಡುತ್ತಿದ್ದಾರೆ. ಅಂದರೆ, ಅವರು ಹೇಳಿದಂತೆ ಕೇಳಬೇಕು. ಕೇಳದಿದ್ದರೆ ಅವರ ಮೇಲೆ ಬೀಳುವುದು, ಮುಗಿಸುವುದು, ಕೈವಶ ಮಾಡಿಕೊಳ್ಳುವುದು, ಕೈಗೊಂಬೆಯಂತಹ ವ್ಯಕ್ತಿಯನ್ನು ಪ್ರತಿಷ್ಠಾಪಿಸಿ, ತಮಗೆ ಬೇಕಾದಂತೆ ಆಡಳಿತ ನಡೆಸುವುದು ಅಮೆರಿಕನ್ನರ ಜನ್ಮಜಾತ ರೋಗ.

ಇದನ್ನು ಓದಿದ್ದೀರಾ?: ಇರಾನ್‌ನೊಂದಿಗೆ ಅಕ್ರಮ ಯುದ್ಧ ಆರಂಭಿಸಿ, ನಿಲ್ಲಿಸಲು ತಿಳಿಯದೆ ಅಮೆರಿಕ ಸಹಾಯ ಕೇಳುತ್ತಿದೆಯೇ ಇಸ್ರೇಲ್?
ಇರಾನ್-ಇಸ್ರೇಲ್ ಸಂಘರ್ಷದಲ್ಲಿಯೂ ಈ ರೋಗವೇ ಕಾಣಿಸಿಕೊಂಡಿರುವುದು. ಮಾತು ಕೇಳುವ ಇಸ್ರೇಲ್ ಮೂಲಕ, ಮಾತು ಕೇಳದ ಇರಾನ್ ಬಗ್ಗುಬಡಿಯುವುದು. ಅದಕ್ಕೆ ಜಿ-7 ದೇಶಗಳ ನಾಯಕರ ಬೆಂಬಲಕ್ಕಿಟ್ಟುಕೊಳ್ಳುವುದು. ಜಾಗತಿಕವಾಗಿ ಮುಸ್ಲಿಂ ಭಯೋತ್ಪಾದಕತೆಯ ವಿರುದ್ಧ ಸಮರದ ಕತೆ ಕಟ್ಟುವುದು. ಇರಾನ್ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ನಂಬಿಸುವುದು. ಆದರೆ ಪಾಕಿಸ್ತಾನ ಅದನ್ನೇ ಅದೆಷ್ಟೋ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದರೂ, ಆ ಕಾರಣಕ್ಕಾಗಿಯೇ ಭಾರತ-ಪಾಕಿಸ್ತಾನ ಯುದ್ಧವಾದರೂ, ಪಾಕಿಸ್ತಾನದ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಬದಲಿಗೆ ಶಾಂತಿ ಮಂತ್ರ ಜಪಿಸಿ, ಭಾರತ-ಪಾಕಿಸ್ತಾನ ಯುದ್ಧವನ್ನು ತಡೆಯುತ್ತಾರೆ.
ಆ ನಿಟ್ಟಿನಲ್ಲಿ ಅಮೆರಿಕ ಮತ್ತು ಅಧ್ಯಕ್ಷ ಟ್ರಂಪ್, ಎಲ್ಲೂ ಯುದ್ಧವಾಗಬಾರದು. ಅದರಲ್ಲೂ ಪರಮಾಣು ಬಾಂಬ್ ಬಳಕೆಯಾದರೆ, ಜಗತ್ತು ನಾಶವಾಗುತ್ತದೆ ಎಂಬ ಕಾರಣವನ್ನು ಮುಂದಿಡುತ್ತಿದ್ದಾರೆ. ಅದಕ್ಕೆ ಒತ್ತುಕೊಟ್ಟು ಮಾತನಾಡಿ ಶಾಂತಿಪ್ರಿಯ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ನಿಜ. ಆದರೆ ಇದಿಷ್ಟೇ ಅಲ್ಲ, ಅಮೆರಿಕದ ಈ ಕೃತ್ಯದ ಹಿಂದೆ ಶಸ್ತ್ರಾಸ್ತ್ರ ಮಾರಾಟವಿದೆ, ಹಿತಾಸಕ್ತಿ ಅಡಗಿದೆ, ದೊಡ್ಡಣ್ಣ ಪಾತ್ರವನ್ನು ಬಿಟ್ಟುಕೊಡದ ಹಠವಿದೆ. ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಅಮೆರಿಕ ಶೇ. 51ರಷ್ಟು ಏಕಸ್ವಾಮ್ಯ ಸಾಧಿಸಿದೆ. ಪ್ರಪಂಚದ ಇತರ ದೇಶಗಳಿಗೆ ಇವತ್ತಿಗೂ ಅಮೆರಿಕವೇ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಬೇರೆಯವರು ಉತ್ಪಾದನೆ ಮಾಡಬಾರದು, ಅದರಲ್ಲೂ ಪರಮಾಣು ಬಾಂಬನ್ನು ತಯಾರಿಸಬಾರದು ಎನ್ನುವುದು ಅಮೆರಿಕದ ಭಂಡ ವಾದ. ಹಾಗಾಗಿಯೇ, ಇರಾನ್ ಪರಮಾಣು ಬಾಂಬ್ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕ ಇನ್ನಿಲ್ಲದ ಕಸರತ್ತಿಗೆ ಕೈಹಾಕಿದೆ. ಖಮೇನಿಗೆ ಹೆದರಿಸುತ್ತಿದೆ. ನಾಶವಾಗುವ ಭಯ ಬಿತ್ತುತ್ತಿದೆ.
ಅಮೆರಿಕದ ಸಿಐಎ ಮುಖ್ಯಸ್ಥೆ ತುಳಸಿ ಗಬಾರ್ಡ್ ಕೆಲವು ದಿನಗಳ ಹಿಂದೆ ಅಮೆರಿಕದ ಸಂಸತ್ತಿನಲ್ಲಿಯೇ ಇರಾನ್ ಪರಮಾಣು ಬಾಂಬ್ ತಯಾರಿಕೆಯತ್ತ ಒಲವು ತೋರುತ್ತಿಲ್ಲ ಎಂದು, ಇರಾನ್ ನಿರ್ಧಾರವನ್ನು ಸೆನೆಟ್‌ಗೆ ತಿಳಿಸಿದ್ದರು. ಆದರೆ ಅಧ್ಯಕ್ಷ ಟ್ರಂಪ್ ತನ್ನ ಕೈ ಕೆಳಗಿನ ಅಧಿಕಾರಿಯ ಅಧಿಕೃತ ಹೇಳಿಕೆಯನ್ನು ಅಲ್ಲಗಳೆದು, ಇರಾನ್ ಪರಮಾಣು ಬಾಂಬ್ ಮಾಡಲು ಮನಸ್ಸು ಮಾಡಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಅದರ ವಿರುದ್ಧ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ.
ಟ್ರಂಪ್ ಹೀಗೆ ಹುಚ್ಚುಚ್ಚಾಗಿ ಆಡಲು ಎರಡು ಕಾರಣಗಳಿವೆ: ಒಂದು, ಅಮೆರಿಕ ಎನ್ನುವುದು ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣನಿದ್ದಂತೆ. ಅವರ ಮಾತನ್ನು ಎಲ್ಲರೂ ಕೇಳಬೇಕು, ಪಾಲಿಸಬೇಕು ಎಂಬ ಅಹಂ ತಲೆತುಂಬಿಕೊಂಡಿದ್ದಾರೆ. ಈ ಅಹಂನಿಂದಲೇ ಉಕ್ರೇನ್‌ನ ನಾಯಕ ಝಲೆನ್ಸ್ಕಿಗೆ ಯುದ್ಧ ನಿಲ್ಲಿಸಿ, ಶಾಂತಿ ಕಾಪಾಡಿ ಎಂದು ಹೇಳಿದರು. ಆದರೆ ಅವರು ಟ್ರಂಪ್ ಮಾತನ್ನು ತಿರಸ್ಕರಿಸಿ ರಷ್ಯಾದೊಂದಿಗಿನ ಕಾದಾಟವನ್ನು ಮುಂದುವರೆಸಿದ್ದಾರೆ.
ಭಾರತ-ಪಾಕಿಸ್ತಾನ ಯುದ್ಧವನ್ನು ತಡೆದು ಶಾಂತಿಧೂತ ಎನಿಸಿಕೊಂಡಿರುವ ಟ್ರಂಪ್‌ಗೆ, ಇರಾನ್-ಇಸ್ರೇಲ್ ಯುದ್ಧವನ್ನೂ ನಿಲ್ಲಿಸಿ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಯಾದ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವಾಸೆ. ಆದರೆ ಟ್ರಂಪ್ ಆಸೆಗೆ ಇರಾನ್ ನಾಯಕ ಖಮೇನಿ ತಣ್ಣೀರು ಎರಚುತ್ತಿದ್ದಾರೆ. ಯುದ್ಧಕ್ಕೆ ಸಿದ್ಧವಾಗಿದ್ದೇನೆ ಎಂದು ಇಸ್ರೇಲ್ ಮೇಲೆ ಪ್ರತಿ ದಾಳಿ ಮಾಡುತ್ತಿದ್ದಾರೆ.
ಅಷ್ಟಕ್ಕೂ ಟ್ರಂಪ್ ಏಕೆ ಇಸ್ರೇಲ್ ಪರವಿದ್ದಾರೆ? ಒಂದು ಟ್ರಂಪ್ ಮಗಳ ಗಂಡ ಇಸ್ರೇಲ್ ಮೂಲದ ಯಹೂದಿ. ಇಷ್ಟೇ ಅಲ್ಲ, ಟ್ರಂಪ್ ಸುತ್ತಮುತ್ತ ಇರುವವರೆಲ್ಲರೂ ಯಹೂದಿಗಳೇ. ಅವರ ಸಲಹೆ-ಸೂಚನೆಗಳನ್ನು ಪಾಲಿಸುತ್ತಿರುವ ಟ್ರಂಪ್, ಅಮೆರಿಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ಗೆ ಇಳಿಸಿ, ಇರಾನ್ ಮೇಲೆ ದಾಳಿಗೆ ಕುಮ್ಮಕ್ಕು ಕೊಟ್ಟಿದ್ದಾರೆ. ಇಲ್ಲದಿದ್ದರೆ ಪುಟ್ಟ ಇಸ್ರೇಲ್ ಇಷ್ಟೆಲ್ಲ ಎಗರಾಡಲು ಎಲ್ಲಿಂದ ಬರುತ್ತದೆ ಧೈರ್ಯ?
ಇದನ್ನು ಓದಿದ್ದೀರಾ?: ಇರಾನ್ ತೈಲ ರಣತಂತ್ರ ಹೆಣೆದರೆ, ಅಮೆರಿಕ ಶಾಂತಿ ಮಂತ್ರ ಜಪಿಸಬೇಕಾದೀತು!
ಮತ್ತೊಂದು ಮುಖ್ಯ ಕಾರಣ: ವಾರ್ ಆಫ್ ಆಟ್ರಿಷನ್(war of attrition)- ಅಂದರೆ, ಎದುರಾಳಿಗಳ ಶಸ್ತ್ರಾಸ್ತ್ರಗಳ ಬಳಕೆಯನ್ನು ಹೆಚ್ಚು ಮಾಡುವುದು. ಬತ್ತಳಿಕೆಯನ್ನು ಬರಿದು ಮಾಡುವುದು. ಇದನ್ನು ರಷ್ಯಾ ಕೂಡ ಪಾಲಿಸುತ್ತದೆ, ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಜಾರಿಗೆ ತಂದಿದೆ.
2022ರಲ್ಲಿ ಶುರುವಾದ ಉಕ್ರೇನ್-ರಷ್ಯಾ ಯುದ್ಧ ಇವತ್ತಿಗೂ ನಿಂತಿಲ್ಲ. ಪುಟ್ಟ ಉಕ್ರೇನ್‌ಗೆ ನ್ಯಾಟೋ ದೇಶಗಳು ಅದೆಷ್ಟು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತವೋ ಮಾಡಲಿ ಎನ್ನುವ ನಿಲುವು ರಷ್ಯಾದ್ದು. ಅದಕ್ಕಾಗಿಯೇ ಅದು ಯುದ್ಧವನ್ನು ಚಾಲ್ತಿಯಲ್ಲಿಟ್ಟಿದೆ.
ಅದೇ ರೀತಿ 2023 ಅಕ್ಟೋಬರ್‍ನಲ್ಲಿ ಶುರುವಾದ ಹಮಾಸ್‌ನೊಂದಿಗಿನ ಇಸ್ರೆಲ್ ಸಂಘರ್ಷಕ್ಕೆ ಒಂದೂವರೆ ವರ್ಷವಾಯಿತು. ಯಾವುದೇ ದೇಶ ಒಂದೂವರೆ ವರ್ಷ ಯುದ್ಧ ನಡೆಸುವಷ್ಟು ಶಸ್ತ್ರಾಸ್ತ್ರಗಳನ್ನು ಶೇಖರಿಸಿಟ್ಟಿರುವುದಿಲ್ಲ. ಇಟ್ಟುಕೊಂಡಿದ್ದರೂ ಪ್ರತಿದಾಳಿಗೊಳಗಾಗಿ ಜರ್ಜರಿತಗೊಂಡಿರುತ್ತದೆ. ಆದರೆ ಇಸ್ರೇಲ್ ಶಸ್ತ್ರಾಸ್ತ್ರಗಳ ಉಗ್ರಾಣ ಖಾಲಿಯಾಗುತ್ತಲೇ ಇಲ್ಲ. ಕಾರಣ, ಅಮೆರಿಕ ತಂದು ತುಂಬುತ್ತಲೇ ಇದೆ. ಆ ಧೈರ್ಯದ ಮೇಲೆ ಅದು ಬಹುದೊಡ್ಡ ದೇಶವಾದ ಇರಾನ್ ಮೇಲೆ ಈಗ ಎಗರಿ ಹೋಗಿದೆ.
ವಿಚಿತ್ರವೆಂದರೆ, ಮುಸ್ಲಿಂ ಭಯೋತ್ಪಾದಕತೆಗೆ ಇರಾನ್ ಬೆಂಬಲಿಸುತ್ತಿದೆ. ಹಮಾಸ್ ಉಗ್ರರಿಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಜಗತ್ತಿನೆದುರು ಇಸ್ರೇಲ್ ಕಾರಣ ಕೊಡುತ್ತಿದೆ. ಈ ಕಾರಣವನ್ನೇ ಮುಂದಿಟ್ಟು ಇಸ್ರೇಲ್, ಇರಾನ್ ಮೇಲೆ ದಾಳಿ ಮಾಡುತ್ತಿದೆ. ಅಲ್ಲೂ ಕೂಡ ಅದು ಗುರಿಯಾಗಿಟ್ಟುಕೊಂಡಿರುವುದು ನ್ಯೂಕ್ಲಿಯರ್ ಸೈಟ್‌ಗಳ ಮೇಲೆಯೇ.
ಕಳೆದ 5 ದಿನಗಳಿಂದ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಇರಾನ್‌ನ ಪರಮಾಣು ಯೋಜನೆಗಳ ವಿವಿಧ ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಅದರಲ್ಲೂ ಅದು ಫೊರ್ಡೊ, ನಂತಾಜ್, ಇಸ್ಫಹಾನ್, ಪರ್ಚಿನ್, ಖೋಂಡಬ್- ಯುರೇನಿಯಂ ಸಂವರ್ಧನ ಘಟಕಗಳ ಮೇಲೆ ದಾಳಿ ಮಾಡಿದೆ. ನಂತಾಜ್ ಸೈಟಿಗೆ ಸ್ವಲ್ಪಮಟ್ಟಿಗಿನ ಹಾನಿಯಾಗಿದ್ದು ಬಿಟ್ಟರೆ, ಯಾವುದಕ್ಕೂ ಏನೂ ಆಗಿಲ್ಲ. ಏಕೆಂದರೆ ಈ ಸೈಟ್‌ಗಳೆಲ್ಲ ಸುಮಾರು 100ರಿಂದ 300 ಅಡಿಯ ಆಳದಲ್ಲಿವೆ. ಅದನ್ನು ನಾಶ ಮಾಡಲು ಇಸ್ರೇಲ್‌ಗೆ ಬರೋಬ್ಬರಿ 14 ಸಾವಿರ ಕೆ.ಜಿ. ಜಿಬಿಯು-57 ಬೃಹತ್ ಆರ್ಡಿನನ್ಸ್ ಪೆನೆಟ್ರೇಟರ್‌ನ ಅಗತ್ಯವಿದೆ. ಈ ಬಾಂಬ್ ಅಮೆರಿಕದ ಬಳಿ ಮಾತ್ರವೇ ಇದೆ.

ಆದರೆ, ಇರಾನ್ ಬಳಿ ಭಾರೀ ಬ್ರಹ್ಮಾಸ್ತ್ರಗಳೆನ್ನುವ ಶಕ್ತಿಯುತವಾದ ನಾಲ್ಕೈದು ಶಸ್ತ್ರಾಸ್ತ್ರಗಳಿವೆ. ಅವುಗಳನ್ನು ಅಮೆರಿಕ ಹೇಗಾದರೂ ಮಾಡಿ ಖಾಲಿ ಮಾಡಿಸಬೇಕೆಂದು ಬಯಸಿದೆ. ಅದಕ್ಕಾಗಿಯೇ ಅದು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದೆ. ಇರಾನ್ ನಾಯಕನಿಗೆ ಶರಣಾಗು ಎಂದು ಬಹಿರಂಗವಾಗಿ ಹೇಳಿ ಅವಮಾನಿಸುತ್ತಿದೆ. ಅದರಿಂದ ಅವರು ಕೆರಳಿ ಕಾದಾಟಕ್ಕಿಳಿದರೆ, ಅಮೆರಿಕ ಅತ್ಯಂತ ಕಡಿಮೆ ಶಸ್ತ್ರಾಸ್ತ್ರಗಳನ್ನು ಬಳಸಿ, ಇರಾನ್ ಬಳಿ ಇರುವ ಬ್ರಹ್ಮಾಸ್ತ್ರ- ಫತಾ ಹೈಪರ್ ಸೋನಿಕ್ ಮಿಸೈಲ್‌ಗಳನ್ನು ಖಾಲಿ ಮಾಡಿಸುವ, ಅವರ ಬತ್ತಳಿಕೆ ಬರಿದಾಗಿಸುವ ಬಯಕೆಯನ್ನು ಹೊಂದಿದೆ.
ಇದನ್ನು ಓದಿದ್ದೀರಾ?: ಇಸ್ರೇಲ್ ಮತ್ತು ಅಮೆರಿಕಾದ ದುಷ್ಕೃತ್ಯ: ಜಗತ್ತನ್ನು ಮೂರನೇ ಮಹಾಯುದ್ಧದತ್ತ ದೂಡುವ ಅಪಾಯ
ಈಗಾಗಲೇ ಇಸ್ರೇಲ್-ಹಮಾಸ್ ಯುದ್ಧದಿಂದ ಗಾಜಾ ಪಟ್ಟಿ ಖಾಲಿಯಾಗಿದೆ. ಅದರ ಪುನರ್ ನಿರ್ಮಾಣದ ನೆಪದಲ್ಲಿ ಅಮೆರಿಕ ಅದನ್ನು ವಶಕ್ಕೆ ಪಡೆದು ರಿಯಲ್ ಎಸ್ಟೇಟ್ ದಂಧೆ ನಡೆಸುವ ಇರಾದೆ ಇಟ್ಟುಕೊಂಡಿದೆ. ಅದೇ ರೀತಿ ಮಧ್ಯ ಪ್ರಾಚ್ಯದಲ್ಲಿ ತಮ್ಮ ಹಿಡಿತಕ್ಕೆ ಸಿಗದೆ ಇರುವುದು ಎಂದರೆ ಇರಾನ್ ಮಾತ್ರ. ಅದರ ಬೌಗೋಳಿಕ ಕಾರಣಗಳಿಂದಲೋ ಅಥವಾ ಅತಿಬುದ್ಧಿವಂತಿಕೆಯ ಕಾರಣದಿಂದಲೋ, ಯಾರ ಅಡಿಯಾಳಾಗದೆ ಸ್ವತಂತ್ರವಾಗಿ ಉಳಿದಿದೆ. ಇಡೀ ಪ್ರಪಂಚಕ್ಕೆ ಕಚ್ಚಾ ತೈಲ ಸರಬರಾಜು ಮಾಡುವಲ್ಲಿ ಬಹುಮುಖ್ಯ ಕೊಂಡಿ ಆಗಿದೆ. ಅದರಲ್ಲೂ 1979ರ ಇಸ್ಲಾಮಿಕ್ ಕ್ರಾಂತಿಯಿಂದ, ಕಳೆದ 46 ವರ್ಷಗಳಿಂದ ಆರ್ಥಿಕ ದಿಗ್ಬಂಧನಕ್ಕೊಳಗಾದರೂ, ಮೆಟ್ಟಿ ನಿಂತು ತನ್ನತನವನ್ನು ಕಾಪಾಡಿಕೊಂಡಿದೆ.
ಇದು ಇಸ್ರೇಲ್ ಮತ್ತು ಅಮೆರಿಕದ ಕಣ್ಣು ಕೆಂಪಗಾಗಿಸಿದೆ. ತಮ್ಮದೇ ಆದ ಭೂ ಪ್ರದೇಶವೇ ಇಲ್ಲದ ಯಹೂದಿಗಳು ಪ್ಯಾಲೆಸ್ತೀನ್‌ನ ಒಂದು ಭಾಗದಲ್ಲಿ ಬಂದು ನೆಲೆ ನಿಂತು, ಇಂದು ಇಡೀ ಮಧ್ಯ ಪ್ರಾಚ್ಯ ದೇಶಗಳಾದ ಲೆಬನಾನ್, ಇರಾಕ್, ಈಜಿಪ್ಟ್, ಜೋರ್ಡಾನ್, ಸಿರಿಯಾ, ಟರ್ಕಿಗಳಲ್ಲಿ ಅರಾಜಕತೆ ಸೃಷ್ಟಿಸಿ, ಅಡಿಯಾಳುಗಳನ್ನಾಗಿ ಮಾಡಿಕೊಂಡಿದ್ದಾರೆ. ಪ್ಯಾಲೆಸ್ತೀನ್ ಅನ್ನು ಇಲ್ಲದಂತೆಯೇ ಮಾಡಿದ್ದಾರೆ. ಉಳಿದಿರುವುದು ಇರಾನ್ ಮಾತ್ರ.
ಹಾಗಾಗಿ ಇರಾನ್ ಮೇಲೆ ಮುಸ್ಲಿಂ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ದೇಶ ಎಂಬ ಗೂಬೆ ಕೂರಿಸಿ, ಅದರ ಮೇಲೆ ದಾಳಿ ಮಾಡಿ, ಅಭದ್ರತೆ ಸೃಷ್ಟಿಸಿ, ಯುದ್ಧಕ್ಕೆ ಎಳೆಸಿ, ಶಸ್ತ್ರಾಸ್ತ್ರಗಳನ್ನು ಖಾಲಿ ಮಾಡಿಸಿ, ನಾಯಕ ಖಮೇನಿಯನ್ನು ಓಡಿಸಿ, ಕೈವಶ ಮಾಡಿಕೊಳ್ಳಬೇಕು ಎಂಬ ಬಯಕೆ ಅಮೆರಿಕದ್ದು.
ಇದಕ್ಕಾಗಿಯೇ ಅಮೆರಿಕ ಎಂಬ ಬೇಟೆ ನಾಯಿಯ ಇಷ್ಟೆಲ್ಲ ಆಟ.