ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಕುರಿತು ರೈತ, ಕಾರ್ಮಿಕ ಸಂಘಟನೆ ಮುಖಂಡರು, ಮಹಿಳಾ ಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾಹಿತಿಗಳು ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರೆಲ್ಲರ ಅಭಿಪ್ರಾಯದ ಸ್ಥೂಲನೋಟ ಇಲ್ಲಿದೆ.

ಬಯಲುಸೀಮೆಯ ಜನರನ್ನು ಮತ್ತೆ ಕತ್ತಲೆಯಲ್ಲಿಟ್ಟ ಬಜೆಟ್: ಆಂಜನೇಯ ರೆಡ್ಡಿ ಟೀಕೆ
ಬಜೆಟ್‌ನಲ್ಲಿ ಶಾಶ್ವತ ನೀರಾವರಿಯ ಪರಿಕಲ್ಪನೆಯ ಸುಳಿವಿಲ್ಲ. ಅನಾಹುತಕಾರಿ ಕೆಸಿ ವ್ಯಾಲಿ-ಎಚ್ಎನ್ ವ್ಯಾಲಿ ಯೋಜನೆಗಳ ತ್ಯಾಜ್ಯ ನೀರನ್ನು ಕಡ್ಡಾಯವಾಗಿ ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡುವ ಬಗ್ಗೆ ಸ್ಪಷ್ಟತೆಯಿಲ್ಲ. ಬಯಲುಸೀಮೆ ಪ್ರದೇಶದ ಜನರು ಕುಡಿಯುತ್ತಿರುವ ಅಂತರ್ಜಲದಲ್ಲಿ ಅಪಾಯಕಾರಿ ಯುರೇನಿಯಂ ಧಾತು ಪತ್ತೆಯಾಗಿದ್ದು, ಅಲ್ಲಿನ ಕೆರೆ, ಕುಂಟೆ, ರಾಜಕಾಲುವೆಗಳ ಸಮಗ್ರ ಅಭಿವೃದ್ಧಿ ಬಗ್ಗೆ ದೂರದೃಷ್ಠಿ ಇಲ್ಲದ ಬಜೆಟ್ ಇದಾಗಿದೆ. ಗ್ರಾಮೀಣ ಭಾಗದ ಕೆರೆಗಳ ದುರಸ್ತಿಗೆ ಕೇವಲ 200 ಕೋಟಿ ಮಾತ್ರ ಮೀಸಲಿಟ್ಟಿರುವುದು ಯಾವುದಕ್ಕೂ ಸಾಲುವುದಿಲ್ಲ.

ಕೃಷಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ರದ್ದತಿ ಪ್ರಸ್ತಾಪವಿಲ್ಲ: ಕುರುಬೂರು ಶಾಂತಕುಮಾರ್
ಎಪಿಎಂಸಿ ತಿದ್ದುಪಡಿ ಕಾನೂನು ರದ್ದು, ತರಕಾರಿ ಮಾರುಕಟ್ಟೆಗಳಲ್ಲಿ 50 ಶಿಥಿಲೀಕರಣ ಘಟಕ ಆರಂಭ ಹಾಗೂ ಮಂಡ್ಯ ಮೈಶುಗರ್ ಕಾರ್ಖಾನೆ ಉನ್ನತಿಕರಣಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವ, ಕಬ್ಬು ಬೆಳೆಗಾರರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸುವ, ಕೃಷಿ ಉತ್ಪನ್ನಗಳಿಗೆ ವಿಧಿಸಿರುವ ಜಿಎಸ್‌ಟಿ ರದ್ದು ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲದಿರುವುದು ಬೇಸರದ ಸಂಗತಿ.

ಸಮತೋಲನವಾದ ಬಜೆಟ್ : ರೈತ ನಾಯಕ ಜೆ ಎಂ ವೀರಸಂಗಯ್ಯ
ಎಪಿಎಂಸಿ ಕಾಯ್ದೆ ಹಿಂಪಡೆಯುವ ಮತ್ತು ರೈತರಿಗೆ ಬಡ್ಡಿರಹಿತ ಸಾಲವನ್ನು ಐದು ಲಕ್ಷ ರೂ.ದಿಂದ ಏಳು ಲಕ್ಷ ರೂ.ಗೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘ ಸ್ವಾಗತಿಸುತ್ತದೆ. ಒಟ್ಟಾರೆಯಾಗಿ ಇದು ಸಮತೋಲನವಾದ ಬಜೆಟ್. ಆದರೆ, ಜಾನುವಾರು ಸಾಗಾಣಿಕೆ ಮತ್ತು ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಪ್ರಸ್ತಾಪವಿಲ್ಲ. ಒಂದು ತಿಂಗಳಲ್ಲಿ ಆ ಕಾಯ್ದೆ ವಾಪಸ್ಸಾಗದಿದ್ದರೆ ವಯಸ್ಸಾದ ಜಾನುವಾರುಗಳನ್ನೆಲ್ಲ ವಿಧಾನಸೌಧಕ್ಕೆ ಕರೆತಂದು ಪ್ರತಿಭಟನೆ ಮಾಡುತ್ತೇವೆ.

ಮತಕ್ಕಾಗಿ ಮಾಡಿದ ಬೋಗಸ್ ಬಜೆಟ್: ಪೃಥ್ವಿ ರೆಡ್ಡಿ
ರಾಜ್ಯ ಬಜೆಟ್‌ನಲ್ಲಿ ಶೇ.109ರಷ್ಟು ಆದಾಯ ಕೊರತೆ ಹೆಚ್ಚಳವಾಗಿದೆ. ಕರ್ನಾಟಕದ ಜನತೆಗೆ ಕಾಂಗ್ರೆಸ್ ನೀಡಿದ ಭರವಸೆಗಳು ಕೇವಲ ಮತಕ್ಕಾಗಿಯೇ ಹೊರತು ಮತದಾರರಿಗಾಗಿ ಅಲ್ಲ ಎಂಬುದು ಮತ್ತೆ ಬಜೆಟ್‌ನಿಂದ ಮನವರಿಕೆಯಾಗಿದೆ. ಸಾರ್ವಜನಿಕ ಸಾಲವನ್ನು ಸುಮಾರು 19,000 ಕೋಟಿ ರೂ. ಹೆಚ್ಚಿಸುವ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಮತ್ತು ಬಡ್ಡಿಯ ಮರುಪಾವತಿ ಮಾಡುವ ಪ್ರಾಮಾಣಿಕ ತೆರಿಗೆದಾರರ ಮೇಲೆ ಮತ್ತಷ್ಟು ಹೊರೆ ಹಾಕಲಾಗಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬೋಗಸ್ ಎಂಬುದು ಸ್ಪಷ್ಟ.

ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿಯಾಗಬೇಕಿತ್ತು: ಮಾವಳ್ಳಿ ಶಂಕರ್
ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7ಡಿ ರದ್ದುಗೊಳಿಸಲು ಕ್ರಮವಹಿಸುವುದಾಗಿ ರಾಜ್ಯ ಸರ್ಕಾರ ಹೇಳಿರುವುದು ದೀರ್ಘಕಾಲದ ಹೋರಾಟದ ಫಲ. ಇದು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಜಾರಿಯಾಗಬೇಕು. ಎಸ್‌ಸಿಪಿ-ಟಿಎಸ್‌ಪಿ ಜಾರಿಗೆ ಪ್ರತ್ಯೇಕ ತಂಡ ಸ್ಥಾಪಿಸಬೇಕು. ಪರಿಶಿಷ್ಟರ ಭೂಮಿ ಉಳಿಸಲು ಪೂರ್ವಾನ್ವಯ ಆಗುವಂತೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಬೇಕಿತ್ತು. ಇದು ಬಜೆಟ್‌ನಲ್ಲಿ ಕಾಣದಿರುವುದು ಬೇಸರ ತರಿಸಿದೆ.

ಐಸಿಡಿಎಸ್ ಯೋಜನೆಗೆ ಪೆಟ್ಟು ಕೊಟ್ಟ ಸರ್ಕಾರ : ಸುನಂದಾ
ಕಾಂಗ್ರೆಸ್ ಚುನಾವಣೆಗೂ ಮುನ್ನ ಅಂಗನವಾಡಿ, ಬಿಸಿಯೂಟ ನೌಕರರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. 4000 ಶಿಶುಪಾಲನಾ ಕೇಂದ್ರಗಳನ್ನು ಪಂಚಾಯತ್ ರಾಜ್ ಇಲಾಖೆಯಿಂದ ಸ್ಥಾಪಿಸುವ ನಿರ್ಧಾರ ಐಸಿಡಿಎಸ್ ಯೋಜನೆಗೆ ದೊಡ್ಡ ಪೆಟ್ಟು ಕೊಡಲಿದೆ. ಅಂಗನವಾಡಿ ನೌಕರರಿಗೆ ಮೊಬೈಲ್ ಕೊಡಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದೆ. ಒಟ್ಟಾರೆ, ಅವರ ಗ್ಯಾರಂಟಿಗಳಿಗೆ ಮಾತ್ರ ಮಹತ್ವ ಕೊಟ್ಟ ಬಜೆಟ್ ಇದು.

ಮೇಲ್ನೋಟಕ್ಕೆ ಮಹಿಳಾಪರವಾದ ಬಜೆಟ್: ಸಾಹಿತಿ ರೂಪ ಹಾಸನ
ಈ ಬಜೆಟ್ ಮೇಲ್ನೋಟಕ್ಕೆ ಮಹಿಳಾಪರವಾದಂತೆ ಕಂಡರೂ ಆಳವಾಗಿ ವಿಶ್ಲೇಷಿಸಿದರೆ ಮಹಿಳೆಯರ ಸ್ವಾವಲಂಬನೆ, ರಕ್ಷ ಣೆ ಸ್ವಾಯತ್ತ ಬದುಕು ಅಭಿವೃದ್ದಿಗ ಹೆಚ್ಚಿನ ಗಮನ ನೀಡಿಲ್ಲ. ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ ಶಿಪಾರಸ್ಸುಗಳನ್ನು ಪರಿಗಣಿಸದಿರುವುದು ನಿರಾಶೆಯಾಗಿದೆ. ಮಹಿಳೆಯರ ರಕ್ಷಣೆ ಕುರಿತು ನಮ್ಮ ಬೇಡಿಕೆಗಳು ಹೆಚ್ಚಿದ್ದವು. ಅದರ ಕಡೆಗೆ ಗಮನ ನೀಡದಿರುವುದು ಬೇಸರ ತರಿಸಿದೆ.

1948ರ ಕಾರ್ಖಾನೆ ಕಾಯ್ದೆ ತಿದ್ದುಪಡಿ ಬಗ್ಗೆ ಉಲ್ಲೇಖವಿಲ್ಲ: ಕಾರ್ಮಿಕ ಮುಖಂಡ ಕೆ ಮಹಾಂತೇಶ
ಆರೋಗ್ಯ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಐದು ಗ್ಯಾರಂಟಿಗಳು ಬಹುತೇಕ ಕಾರ್ಮಿಕ ವರ್ಗಕ್ಕೆ ತಲುಪುತ್ತವೆ. ಮಹಿಳೆಯರಿಗೆ ರಾತ್ರಿ ಪಾಳಿ ಮತ್ತು ಕೆಲಸದ ಅವಧಿ ಹೆಚ್ಚಳ ಮಾಡಿ, ಬಿಜೆಪಿ ಸರ್ಕಾರ ತಂದಿದ್ದ 1948ರ ಕಾರ್ಖಾನೆ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕಿತ್ತು. ಇದು ಬಜೆಟ್‌ನಲ್ಲಿ ಉಲ್ಲೇಖ ಆಗದಿರುವುದು ಕಾಂಗ್ರೆಸ್ ಕೂಡ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದಿದೆ ಎಂಬುದನ್ನು ತೋರಿಸುತ್ತದೆ.