“ಪ್ರಧಾನಿ ನರೇಂದ್ರ ಮೋದಿಯವರ ನೆತ್ತಿಗೆಗೆ ಸುಪ್ರೀಂಕೋರ್ಟ್ ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಕೇಂದ್ರವು ಕರ್ನಾಟಕಕ್ಕೆ 3,454 ರೂಪಾಯಿ ಬರ ಪರಿಹಾರ ಕೊಟ್ಟಿದೆ. ಆದರೆ ಕರ್ನಾಟಕ ಕೇಳಿದ್ದು 18,174 ಕೋಟಿ ರೂಪಾಯಿ” ಎಂದು ಹಿರಿಯ ಸಾಹಿತಿ, ಕನ್ನಡದ ಸಾಕ್ಷಿ ಪ್ರಜ್ಞೆ ದೇವನೂರ ಮಹಾದೇವ ಅವರು ಪ್ರತಿಕ್ರಿಯಿಸಿದ್ದಾರೆ.
ಪರಿಹಾರ ಘೋಷಣೆಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅವರು, “ಇಷ್ಟು ಅಲ್ಪ ಸ್ವಲ್ಪ ಹಣ ಕೊಡುವುದಕ್ಕೂ ಮೊದಲು ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತು ಕರ್ನಾಟಕ ರಾಜ್ಯ ಬಿಜೆಪಿಯವರು ನವರಂಗಿ ಬಣ್ಣಬಣ್ಣದ ಆಟ ಆಡಿದರು; ಕರ್ನಾಟಕದ ಜುಟ್ಟಿಗೆ ಸುಳ್ಳಿನ ಹೂ ಮುಡಿಸಿದರು. ಸುಪ್ರೀಂ ಕೋರ್ಟ್ ಹೇಳಿದ ಮೇಲೆ ಆ ಆದೇಶ ಪಾಲಿಸಲೇಬೇಕಾಯ್ತು. ಅಲ್ಲಿ ಅವರ ಆಟ ನಡೆಯಲಿಲ್ಲ. ಅವರು ಈಗಲೂ ಸುಳ್ಳಿನ ಸುರುಸುರು ಬತ್ತಿ ಹಚ್ಚಬಹುದು. ಆದರೆ ಕರ್ನಾಟಕ ಜನತೆಗೆ ಸತ್ಯ ತಿಳಿದಿದೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದ್ದಾರೆ.
“ಈಗಾಲಾದರೂ ರಾಜ್ಯ ಬಿಜೆಪಿ ನಾಯಕರು ಮೋದಿ ಮುಂದೆ ಕೈ- ಬಾಯಿ ಕಟ್ಟಿಕೊಂಡು ನಿಲ್ಲುವ ಬದಲು ಕನಿಷ್ಠ ಬಾಯಿ ಬಿಡಲಿ. ಇಲ್ಲದಿದ್ದರೆ ಅವರಿಗೆ ಕರ್ನಾಟಕದವರು ಅನ್ನಿಸಿಕೊಳ್ಳುವ ಕನಿಷ್ಠ ಅರ್ಹತೆ ಇರುವುದಿಲ್ಲ, ನೆನಪಿರಲಿ” ಎಂದು ಎಚ್ಚರಿಸಿದ್ದಾರೆ.
ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿರುವ ಬಿಜೆಪಿ
ಬರ ಪರಿಹಾರ ಕೈಪಿಡಿ ನಿಗದಿ ಮಾಡಿರುವ ದಿನಾಂಕಕ್ಕಿಂತ ಮೊದಲೇ ಬರ ಘೋಷಣೆ ಮಾಡಿ, ಪರಿಹಾರಕ್ಕೆ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಚುನಾವಣೆ ಘೋಷಣೆಯಾದ ಬಳಿಕ, “ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ತಡವಾಗಿ ಮನವಿ ಮಾಡಿದೆ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ, ಅದು ನೀಡುವ ಸೂಚನೆಯನ್ನು ಪಾಲಿಸಲಾಗುವುದು” ಎಂದು ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು ಸುಳ್ಳು ಹೇಳಿದರು.
ಇದರ ನಡುವೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮೇಲೆ ಅಲ್ಪಮಟ್ಟಿಗಿನ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ನೀತಿ ಸಂಹಿತೆಯ ನಡುವೆಯೇ ರಾಜ್ಯಕ್ಕೆ ಮೋದಿಯವರು ಪರಿಹಾರ ನೀಡಿದ್ದಾರೆಂದು ರಾಜ್ಯ ಬಿಜೆಪಿ ನಾಯಕರು ಮಾಡಿಕೊಳ್ಳುತ್ತಿರುವ ಪ್ರಚಾರ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
