ಬಿಜೆಪಿ ನಾಯಕರನ್ನು ಪ್ರಶ್ನಿಸುವ, ಕೇಸ್-ಎಫ್ಐಆರ್ ದಾಖಲಿಸುವ ಕಾಲವೂ ಬಂತು!

Date:

Advertisements
ಸಿದ್ದರಾಮಯ್ಯ ಮೇಲಿರುವ ಮುಡಾ ಹಗರಣ ಹೊರಬರುತ್ತಿದ್ದಂತೆ, ಬಿಜೆಪಿಯ ಭ್ರಷ್ಟರ ಕರಾಳಮುಖ ಅನಾವರಣಗೊಳ್ಳುತ್ತಿದೆ. ಕೇಸು ದಾಖಲಾಗುವುದು ವಿರೋಧ ಪಕ್ಷಗಳ ನಾಯಕರ ಮೇಲಲ್ಲ, ಬಿಜೆಪಿ ನಾಯಕರ ಮೇಲೆಯೂ ಕೇಸು, ಎಫ್ಐಆರ್ ದಾಖಲಾಗುತ್ತಿದೆ. ನೀಲಿ ನರಿಯ ಬಣ್ಣ ಕರಗುತ್ತಿದೆ, ಬಯಲಾಗುತ್ತಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಕಪ್ಪು ಹಣವನ್ನು ಹೊರಗೆಳೆಯುವುದಾಗಿ, ಅದನ್ನು ದೇಶದ ಜನತೆಯ ಖಾತೆಗೆ ವರ್ಗಾಯಿಸುವುದಾಗಿ ಭಾರೀ ಪ್ರಚಾರ ಪಡೆದಿತ್ತು. ಕೇವಲ ಹತ್ತು ವರ್ಷಗಳ ಅಂತರದಲ್ಲಿ, ಅದೇ ಕಪ್ಪು ಹಣ ಚುನಾವಣಾ ಬಾಂಡ್‌ಗಳ ರೂಪದಲ್ಲಿ; ಕಾರ್ಪೊರೇಟ್ ಕುಳಗಳು ನೀಡುವ ದೇಣಿಗೆಯ ನೆಪದಲ್ಲಿ ಬಿಜೆಪಿಯ ಖಜಾನೆ ತುಂಬಿದೆ. ಅದೇ ಹಣ ಚುನಾವಣೆಗಳನ್ನು ಗೆಲ್ಲಲು ಬಳಕೆಯಾಗುತ್ತಿದೆ. ಶಾಸಕರನ್ನು ಖರೀದಿಸಲು, ಸರ್ಕಾರಗಳನ್ನು ಉರುಳಿಸಲು ನೆರವಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಭಾರತೀಯ ಜನತಾ ಪಕ್ಷದ ಹಗಲು ದರೋಡೆಯನ್ನು ದೇಶದ ಪ್ರಜೆಗಳು ಪ್ರಶ್ನಿಸಬಾರದೇ?

ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಆದರೆ, 2014ರಲ್ಲಿ ಪ್ರಧಾನಿಯಾದ ಮೋದಿ, ತಮಗೆ ತಾವೇ ಘನ ಗಂಭೀರ ವ್ಯಕ್ತಿತ್ವದ ಮುಖವಾಡ ತೊಟ್ಟಿದ್ದರು. ಮನೆ ಮಠ ಮಕ್ಕಳಿಲ್ಲದ ವ್ಯಕ್ತಿ, ದೇಶಕ್ಕಾಗಿ ಶ್ರಮವಹಿಸಿ ದುಡಿಯುವ ಸೇವಾಕಾಂಕ್ಷಿ, ಶುದ್ಧಹಸ್ತ, ಪ್ರಾಮಾಣಿಕ ಎಂದೆಲ್ಲ ಪೋಸು ಕೊಟ್ಟಿದ್ದರು. ಅದನ್ನೇ ಮಾಧ್ಯಮಗಳ ಮೂಲಕ ದೇಶಾದ್ಯಂತ ಬಿತ್ತಿದ್ದರು. ಐಟಿ ಸೆಲ್ ಮೂಲಕ ಪ್ರಪಂಚಕ್ಕೂ ಹಂಚಿದ್ದರು. ಮೋದಿ ವಿರುದ್ಧ ಮಾತನಾಡುವ, ಟೀಕಿಸುವ, ಅವರ ಆಡಳಿತದ ಹಲ್ಲಂಡೆಗಳನ್ನು ಹೆಕ್ಕಿ ಪ್ರಶ್ನಿಸುವ ವ್ಯಕ್ತಿಗಳನ್ನು ರಾಷ್ಟ್ರದ್ರೋಹಿಗಳು ಎಂದು ಬ್ರ್ಯಾಂಡ್ ಮಾಡುತ್ತಿದ್ದರು.

ಅಷ್ಟೇ ಅಲ್ಲ, ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸದೆ, ಅವರ ಆಡಳಿತವನ್ನು ಪ್ರಶ್ನಿಸುವ, ಅವರ ವಿರುದ್ಧ ಟೀಕೆ ಮಾಡುವ ರಾಜಕೀಯ ನಾಯಕರನ್ನು ಬಗ್ಗುಬಡಿಯಲು ಬಿಜೆಪಿ ಮತ್ತು ಮೋದಿ, ಸರ್ಕಾರಿ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ(ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ(ಐಟಿ) ಸಂಸ್ಥೆಗಳನ್ನು ಬಳಸಿಕೊಂಡಿದ್ದರು. ವಿರೋಧಿಗಳ ಮೇಲೆ ದಾಳಿ ಮಾಡಿ, ಅವರನ್ನು ಜೈಲಿಗಟ್ಟಿ ಅವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ಮಸಿ ಬಳಿದಿದ್ದರು. ಅವರ ರಾಜಕೀಯ ವರ್ಚಸ್ಸು ಕಳೆಗುಂದುವಂತೆ, ರಾಜಕಾರಣದಿಂದ ನಿರ್ಗಮಿಸುವಂತೆ ನೋಡಿಕೊಂಡಿದ್ದರು.

Advertisements

ಇವುಗಳ ನಡುವೆಯೇ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಎನ್‌ಜಿಒ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೇರಿದಂತೆ ನಾಲ್ವರು ಚುನಾವಣಾ ಬಾಂಡ್‌ ರದ್ದುಪಡಿಸಲು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದರು. ದೇಶದ ಸರ್ವೋಚ್ಚ ನ್ಯಾಯಾಲಯ 2024ರ ಫೆಬ್ರವರಿ 15ರಂದು ಚುನಾವಣಾ ಬಾಂಡ್ ನಿಷೇಧಿಸಿತು. ಅಲ್ಲದೆ, ಅಸಂವಿಧಾನಿಕ ಕ್ರಮ ಎಂದಿತು. ಅಲ್ಲಿಯವರೆಗೂ ಯಾವ ಪಕ್ಷಕ್ಕೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ವಿವರ ನೀಡುವಂತೆ ಮಾಹಿತಿಯನ್ನೂ ಕೇಳಿತು. ಸುಪ್ರೀಂ ಕೋರ್ಟ್ ಹೀಗೆ ಹೇಳದೇ ಇದ್ದಿದ್ದರೆ, ಈ ಬಿಜೆಪಿಯ ಲೂಟಿಕೋರರು ಇನ್ನೆಷ್ಟು ವರ್ಷಗಳ ಕಾಲ, ದೇಶದ ಜನತೆಗೆ ಮಂಕುಬೂದಿ ಎರಚುತ್ತಿದ್ದರೋ, ಆ ಶ್ರೀರಾಮನೇ ಬಲ್ಲ.

ಹಾಗಾಗಿ ಹೆದರುವ ಕಾಲ, ಹಿಂದಕ್ಕೆ ಸರಿದಿದೆ. ಬಿಜೆಪಿ ನಾಯಕರನ್ನು ಕೂಡ ಪ್ರಶ್ನಿಸುವ, ಅವರ ಮೇಲೆಯೂ ಕೇಸು ದಾಖಲಿಸುವ ಕಾಲ ಈಗ ಚಾಲ್ತಿಗೆ ಬಂದಿದೆ. ಸುಳ್ಳರು, ಲೂಟಿಕೋರರು, ಭ್ರಷ್ಟರು ಬಿಜೆಪಿಯಲ್ಲೂ ಇದ್ದಾರೆ, ಅವರ ಮೇಲೆಯೂ ಕೇಸುಗಳು ದಾಖಲಾಗುತ್ತಿವೆ. ಜೈಲಿಗೆ ಹೋಗಬೇಕಾದ ನಾಯಕರು ಬಿಜೆಪಿಯಲ್ಲೂ ಇದ್ದಾರೆ ಎಂಬುದು ಜನರ ತಿಳಿವಳಿಕೆಗೆ ಬರತೊಡಗಿದೆ.

ಇದನ್ನು ಓದಿದ್ದೀರಾ?: ಸಿದ್ದರಾಮಯ್ಯ ಕೇಸಿಗೂ ನಿರ್ಮಲಾ ಸೀತಾರಾಮನ್ ಕೇಸಿಗೂ ಅಜಗಜಾಂತರ !

ಚುನಾವಣಾ ಬಾಂಡ್‌ ಹೆಸರಿನಲ್ಲಿ ಉದ್ಯಮಗಳ ಮೇಲೆ ಒತ್ತಡ ತಂದು ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲಾಗಿದೆ ಎಂಬ ಆರೋಪದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಸಾಮಾಜಿಕ ಹೋರಾಟಗಾರ ಆದರ್ಶ್ ಐಯ್ಯರ್ ಅವರು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಕೇಸಿಗೆ ಸಂಬಂಧಿಸಿದಂತೆ ಹಿರಿಯ ವಕೀಲ ಎಸ್. ಬಾಲನ್ ಅವರ ಮೂಲಕ 2024 ಎಪ್ರಿಲ್ 15ರಂದು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ಅದು ಹಲವು ಹಂತಗಳ ವಿಚಾರಣೆ ನಡೆದು ಈಗ, 25 ಸೆಪ್ಟೆಂಬರ್ 2024ರಂದು ನ್ಯಾಯಾಧೀಶರು ಎಫ್ಐಆರ್‍‌ಗೆ ಸೂಚಿಸಿ ಪಿಸಿಆರ್ ಆದೇಶ ಮಾಡಿದ್ದಾರೆ.

ರಾಜಕೀಯ ಪಕ್ಷಗಳಿಗೆ ಅಕ್ರಮ ಹಣ ಹರಿದು ಬರುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. 70ರ ದಶಕದಲ್ಲಿ ಲಿಕ್ಕರ್ ಲಾಬಿ, ಪಕ್ಷಗಳನ್ನು ಹಿಡಿತದಲ್ಲಿಟ್ಟುಕೊಂಡು ಆಡಳಿತವನ್ನು ನಿಯಂತ್ರಿಸುತ್ತಿತ್ತು. ಆನಂತರ ಶಿಕ್ಷಣ ಲಾಬಿ, ರಿಯಲ್ ಎಸ್ಟೇಟ್ ಲಾಬಿಗಳು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವು. ಈ ಲಾಬಿಗಳು ಸರ್ಕಾರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಒಂದು ಹಂತದವರೆಗೆ ಮಾತ್ರ ಸಾಧ್ಯವಾಗಿತ್ತು. ಹಾಗೆಯೇ, ದೇಣಿಗೆ ಕೊಡುವ ಧಣಿಗಳು ಮತ್ತು ಬೇಡುವ ರಾಜಕೀಯ ಪಕ್ಷಗಳ ನಡುವಿನ ಅನೈತಿಕ ಸಂಬಂಧದಿಂದಾಗಿ, ದಿನದಿಂದ ದಿನಕ್ಕೆ ರಾಜಕಾರಣ ಕೂಡ ಕಳೆಗುಂದತೊಡಗಿತು.

ಇತ್ತೀಚಿನ ದಿನಗಳಲ್ಲಿ ಇದೆಲ್ಲವನ್ನು ಮೀರಿಸುವಂತೆ, ಕಂಡೂ ಕಾಣದಂತಹ ಕಾರ್ಪೊರೇಟ್ ಲಾಬಿ ಚಲಾವಣೆಗೆ ಬಂದಿದೆ. ದೇಶದ ಆರ್ಥಿಕ, ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಈ ಲಾಬಿಗೆ ಕೇಂದ್ರದ ಬಿಜೆಪಿ ಸರ್ಕಾರ ಸುಲಭದ ತುತ್ತಾಗಿದೆ. ದೇಣಿಗೆಯ ರೂಪದಲ್ಲಿ ಪಡೆದು ಕಪ್ಪು ಹಣವನ್ನು ಬಿಳಿ ಮಾಡಿದೆ; ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದೆ.

ಆದರೆ, ಪ್ರಧಾನಿ ಮೋದಿಯವರು ಭ್ರಷ್ಟರಲ್ಲ, ಅವರಿಗೆ ಹಣದ ಅಗತ್ಯವಿಲ್ಲ, ಅಧಿಕಾರದ ವ್ಯಾಮೋಹವಿಲ್ಲ ಎಂದು ಬಿಜೆಪಿ ಹೇಳುತ್ತಲೇ ಬಂದಿದೆ. ರಾಜಕೀಯ ಪಕ್ಷಗಳಿಗೆ ಅಕ್ರಮವಾಗಿ ಹರಿದು ಬರುವ ದೇಣಿಗೆಗೆ ಕಡಿವಾಣ ಹಾಕಲು, 2018ರಲ್ಲಿ ಕಾನೂನು ಬಾಹಿರವಾಗಿ ಹಣ ವರ್ಗಾಯಿಸುವ ಪ್ರಕ್ರಿಯೆಯನ್ನು ‘ಚುನಾವಣಾ ಬಾಂಡ್’ಗಳನ್ನಾಗಿ ಪರಿವರ್ತಿಸಲಾಗಿದೆ. ಆ ನಂತರ, ಅವರು ಅಂದುಕೊಂಡಂತೆ ಚುನಾವಣಾ ಬಾಂಡ್‌ಗಳಲ್ಲಿ ಶೇ. 70ಕ್ಕಿಂತಲೂ ಅಧಿಕ ದೇಣಿಗೆ, ಸುಮಾರು 8 ಸಾವಿರ ಕೋಟಿಗೂ ಹೆಚ್ಚು ಹಣ ಭಾರತೀಯ ಜನತಾ ಪಕ್ಷಕ್ಕೆ ಹರಿದು ಬಂದಿದೆ.

ಈಗ ಆದರ್ಶ ಅಯ್ಯರ್ ಎತ್ತಿರುವ ಪ್ರಶ್ನೆಯಲ್ಲಿ ಕಾರ್ಪೊರೇಟ್ ಕಂಪನಿಗಳು ಮತ್ತು ಭಾರತೀಯ ಜನತಾ ಪಕ್ಷದ ನಡುವಿನ ನಂಟನ್ನು, ಚುನಾವಣಾ ಬಾಂಡ್‌ ಹೆಸರಿನಲ್ಲಿ ಉದ್ಯಮಗಳ ಮೇಲೆ ಒತ್ತಡ ತಂದು ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿರುವ ಬಗೆಯನ್ನು ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಇಡಿ ಅಧಿಕಾರಿಗಳು ದಾಳಿ ನಡೆಸಿರುವ ಕಾರ್ಪೊರೇಟ್ ಸಂಸ್ಥೆಗಳು, ತದನಂತರ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿರುವ ವಿವರವನ್ನು ದಾಖಲೆಗಳ ಸಮೇತ ನ್ಯಾಯಾಲಯದ ಮುಂದಿಡಲಾಗಿದೆ. ಆ ಕಾರ್ಪೊರೇಟ್ ಸಂಸ್ಥೆಗಳ ಮೇಲೆ ಪ್ರಭಾವ ಬೀರಿರುವ ಹಣಕಾಸು ಸಚಿವೆ ಮತ್ತು ಇತರರ ಮೇಲೆ ಎಫ್ಐಆರ್ ದಾಖಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

ಇದನ್ನು ಓದಿದ್ದೀರಾ?: ಎಫ್‌ಐಆರ್ ಆಗಿರುವ ಬಿಜೆಪಿ ನಾಯಕರೂ ರಾಜೀನಾಮೆ ನೀಡಲಿ: ಪ್ರಿಯಾಂಕ್ ಖರ್ಗೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿನ ಎಫ್‌ಐಆರ್ ಈಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ಸೇರಿದಂತೆ ಹಲವರು, ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸುವ ಕುರಿತು ಚಿಂತನೆ ನಡೆಸಿದೆ.

ಅಂತೂ, ಸಿದ್ದರಾಮಯ್ಯ ಮೇಲಿರುವ ಮುಡಾ ಹಗರಣ ಹೊರಬರುತ್ತಿದ್ದಂತೆ, ಬಿಜೆಪಿಯ ಭ್ರಷ್ಟರ ಕರಾಳಮುಖ ಅನಾವರಣಗೊಳ್ಳುತ್ತಿದೆ. ಕೇಸು ದಾಖಲಾಗುವುದು ವಿರೋಧ ಪಕ್ಷಗಳ ನಾಯಕರ ಮೇಲಲ್ಲ, ಬಿಜೆಪಿ ನಾಯಕರ ಮೇಲೆಯೂ ಕೇಸು, ಎಫ್ಐಆರ್ ದಾಖಲಾಗುತ್ತಿದೆ. ನೀಲಿ ನರಿಯ ಬಣ್ಣ ಕರಗುತ್ತಿದೆ, ಬಯಲಾಗುತ್ತಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X