ನಾಳೆ ಅಂದರೆ ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಹಿಲ್ಟನ್ ಹೊಟೇಲ್‌ನಲ್ಲಿ ಇಂದು (ಸೋಮವಾರ) ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್, “ನಮ್ಮ ಕಡೆಯಿಂದ ಯಾವುದೇ ಅಡ್ಡ ಮತದಾನ ನಡೆಯುವುದಿಲ್ಲ” ಎಂದು ಗ್ಯಾರಂಟಿ ನೀಡಿದ್ದಾರೆ.
“ಇಂದು ಹೋಟೆಲ್ ನಲ್ಲಿ ನಮ್ಮ ಶಾಸಕರಿಗೆ ರಾಜ್ಯಸಭೆ ಚುನಾವಣೆ ಮತದಾನದ ತರಬೇತಿ ಹಾಗೂ ಅಣಕು ಮತದಾನ ಮಾಡಿಸುತ್ತೇವೆ. ಇಂದು ಅಣಕು ಮತದಾನ ನಡೆಸಿ, ನಾಳೆ ಹೊಟೇಲ್‌ನಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ನಮ್ಮ ಶಾಸಕರು ಮತದಾನ ಮಾಡಲಿದ್ದಾರೆ” ಎಂದು ತಿಳಿಸಿದರು.
ನಾಳೆ ಮತದಾನದ ವೇಳೆ ಅಡ್ಡ ಮತದಾನ ನಡೆಯಲಿದೆಯೇ ಎಂದು ಕೇಳಿದಾಗ, “”ನಮ್ಮ ಕಡೆಯಿಂದ ಯಾವುದೇ ಅಡ್ಡ ಮತದಾನ ನಡೆಯುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಉ ಆರಂಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಎರಡು ನಿಮಿಷ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರಾದ ಎಚ್ ಕೆ ಪಾಟೀಲ್, ಡಾ.ಜಿ. ಪರಮೇಶ್ವರ್, ಕೆ ಜೆ ಜಾರ್ಜ್, ಕೆ ಎಚ್ ಮುನಿಯಪ್ಪ, ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ, ಬೋಸರಾಜ್, ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಅಜಯ್ ಮಾಕನ್, ಶಾಸಕರು, ಎಂಎಲ್‌ಸಿಗಳು, ಸಂಸದರು, ಪದಾಧಿಕಾರಿಗಳು ಇದ್ದರು.
ಕುತೂಹಲಕ್ಕೆಡೆ ಮಾಡಿದ ಕುಪೇಂದ್ರ ರೆಡ್ಡಿ ಸ್ಪರ್ಧೆ
ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್‌ನ ಹಿರಿಯ ಮುಖಂಡ ಅಜಯ್ ಮಾಕನ್, ಡಾ. ಸೈಯ್ಯದ್ ನಾಸೀರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅಭ್ಯರ್ಥಿಗಳಾಗಿದ್ದಾರೆ.
66 ಶಾಸಕರನ್ನು ಹೊಂದಿರುವ ಬಿಜೆಪಿಯು ತನ್ನ ಏಕೈಕ ಅಭ್ಯರ್ಥಿಯಾಗಿ ಬಾಗಲಕೋಟೆ ಮೂಲದ ಸಂಘಪರಿವಾರದ ಕಟ್ಟಾಳು ನಾರಾಯಣ ಬಾಂಡಗೆ ಟಿಕೆಟ್ ನೀಡಿದೆ. ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ, ಒಬ್ಬರು ಗೆಲ್ಲಲು 45 ಮತಗಳು ಬೇಕಾಗುತ್ತವೆ ಆದ್ದರಿಂದ, ಅವರ ಗೆಲುವು ನಿಸ್ಸಂಶಯವಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದೆ. ರಾಜ್ಯಸಭೆಯ ಮಾಜಿ ಸದಸ್ಯ, ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಾಜ್ಯದಿಂದ ರಾಜ್ಯಸಭೆಗೆ ನಡೆಯಲಿರುವ ನಾಲ್ಕು ಸ್ಥಾನಗಳ ಚುನಾವಣೆಗೆ ಕುಪೇಂದ್ರ ರೆಡ್ಡಿ 5ನೇ ಅಭ್ಯರ್ಥಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯಸಭಾ ಚುನಾವಣೆ: ಬಿಜೆಪಿ-ಜೆಡಿಎಸ್ ಅಭ್ಯರ್ಥಿಗೆ 45 ಮತ ಗಳಿಸುವುದೇ ಸವಾಲು
ಬಿಜೆಪಿಯಲ್ಲಿ ಉಳಿಯುವ 19 ಮತಗಳನ್ನು ಕುಪೇಂದ್ರ ರೆಡ್ಡಿ ಅವರಿಗೆ ನೀಡಲಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ರೆಡ್ಡಿಗೆ ಅಗತ್ಯ ಮತಗಳನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕೆಲವು ಅನಿಶ್ಚಿತತೆಗಳು ಎದುರಾಗಿದ್ದು, ಬಿಜೆಪಿಯ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಸೇರಿದಂತೆ ಬಿಜೆಪಿಯೊಳಗಿನ ಕೆಲವು ‘ಅತೃಪ್ತರು’ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅವರು ಬಿಜೆಪಿಯ ಹೈಕಮಾಂಡ್ ಸೂಚನೆಗೆ ಮಣಿಯುತ್ತಾರೆಯೇ ಮತ್ತು ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಜೆಡಿಎಸ್‌ನ ಕೆಲವು ಮತಗಳು ಕಾಂಗ್ರೆಸ್‌ಗೆ ಬೀಳುವ ಸಾಧ್ಯತೆಗಳಿವೆ.
