- ‘ಮಾಜಿ ಶಾಸಕರ ಬೆಂಬಲಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ’
- ‘ಆರೇ ತಿಂಗಳಿಗೆ ಉಪ ಚುನಾವಣೆ ಮಾಡಿಸುವುದಾಗಿ ಮಾಜಿ ಶಾಸಕ ಹೇಳಿದ್ದಾರೆ’
ಮರಳು ಮಾಫಿಯಾಕ್ಕೆ ಕಡಿವಾಣ ಹಾಕುತಿದ್ದೇವೆ ಎಂಬ ಕಾರಣಕ್ಕೆ ನನ್ನ ತಮ್ಮನ ಮಗ 21 ವರ್ಷದ ಹುಡುಗನ ಮೇಲೆ ಹಲ್ಲೆ ನಡೆದಿದೆ. ನನ್ನ ಮೇಲೆ ಲಾರಿ ಹತ್ತಿಸ್ತೀನಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ವಿಧಾನಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.
ಸದನದಲ್ಲಿ ಮಾತನಾಡಿದ ಶಾಸಕಿ ಕರೆಮ್ಮ, “ನನ್ನ ಕ್ಷೇತ್ರದ ಜನ ನನಗೆ ದುಡ್ಡು ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ನಾನು ನನ್ನ ಜನ ಧೈರ್ಯದಿಂದ ಬದುಕಲು ಅವಕಾಶ ಮಾಡಿಕೊಡಿ. ನನ್ನ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ, ಇಸ್ಪೀಟ್ ದಂಧೆ, ಮಟ್ಕಾ ದಂಧೆ, ಮರಳು ಮಾಫಿಯಾ ಜಾಸ್ತಿ ಇದೆ. ನಾನು ಶಾಸಕಿಯಾಗಿ ತಡೆಯೋಕೆ ಎಲ್ಲ ಪ್ರಯತ್ನ ಮಾಡ್ತಿದ್ದೇನೆ.
ಆದರೆ ಮಾಜಿ ಶಾಸಕರ ಬೆಂಬಲಿಗರೇ ಇದರಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.
“ಮರಳು ಮಾಫಿಯಾದವರನ್ನು ಹಿಡಿದು ಕೊಟ್ಟರೆ 300 ರೂ. ದಂಡ ಕಟ್ಟಿ ಕಳಿಸಿಕೊಡುತ್ತಾರೆ. ನಾನು ಶಾಸಕಿ ಎಂಬುದನ್ನು ಅಧಿಕಾರಿಗಳು, ಪೊಲೀಸರು ತಿಳಿದುಕೊಂಡಂತಿಲ್ಲ. ಆ ರೀತಿ ವರ್ತನೆ ಮಾಡುತ್ತಿದ್ದಾರೆ. ಮರಳು ಮಾಫಿಯಾಕ್ಕೆ ಕಡಿವಾಣ ಹಾಕ್ತಿದ್ದೇವೆ ಎಂದು ನನ್ನ ತಮ್ಮನ ಮಗ 21 ವರ್ಷದ ಹುಡುಗನ ಮೇಲೆ ಹಲ್ಲೆ ಆಗಿದೆ. ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂತಹ ಪರಿಸ್ಥಿತಿ ನನ್ನ ಕ್ಷೇತ್ರದಲ್ಲಿ ಇದೆ” ಎಂದು ಶಾಸಕಿ ತಮ್ಮ ಅಳಲು ತೋಡಿಕೊಂಡರು.
“ದೇವದುರ್ಗದಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದೆ. ಅದನ್ನು ಬಂದ್ ಮಾಡಿಸುವ ಪ್ರಯತ್ನ ಮಾಡಿದೆ. ಕೆಲವರು ನನ್ನ ಮೇಲೆ ಲಾರಿ ಹತ್ತಿಸುತ್ತೇನೆ ಎಂದು ಮಾತನಾಡುತ್ತಾರೆ. ಮಾಜಿ ಶಾಸಕರ ಬೆಂಬಲಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮಟ್ಕಾ ದಂಧೆ ಬಂದ್ ಮಾಡಿಸಿದರೂ ಪೊಲೀಸರು ಸಹಕಾರ ನೀಡುತ್ತಿಲ್ಲ. ಶಿಷ್ಟಾಚಾರಕ್ಕೂ ಪೊಲೀಸರು ಶಾಸಕಿ ಎಂದು ನನಗೆ ಗೌರವ ನೀಡುತ್ತಿಲ್ಲ. ಶಿಷ್ಟಾಚಾರವನ್ನೂ ಪೊಲೀಸರು ಪಾಲಿಸುತ್ತಿಲ್ಲ. ಮಾಜಿ ಶಾಸಕರು ಪೊಲೀಸರಿಗೆ ಹೆದರಿಸುತ್ತಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಗಿ-ಭತ್ತದ ತಳಿಗೆ ಜಿ ಮಾದೇಗೌಡರ ಹೆಸರಿಡಿ: ಕೃಷಿ ವಿವಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ
“ಆರೇ ತಿಂಗಳಿಗೆ ಚುನಾವಣೆ ಮಾಡಿಸುತ್ತೇನೆ ಎಂದು ಪೊಲೀಸರಿಗೆ ಮಾಜಿ ಶಾಸಕರು ಹೇಳಿದ್ದಾರೆ. ಇದರಿಂದ ನನಗೆ ಆತಂಕ ಆಗ್ತಾ ಇದೆ. ನನಗೆ ಸೂಕ್ತ ಭದ್ರತೆಯನ್ನು ಸರ್ಕಾರ ಒದಗಿಸಬೇಕು. ಮೊನ್ನೆ ಯಾರೋ ಒಬ್ಬ ಅನಾಮಿಕ ವ್ಯಕ್ತಿ ಬಂದು ನನ್ನ ಸೀಟಿನಲ್ಲಿ ಕೂತಿದ್ದು ಇನ್ನೂ ಏನಾಗತ್ತೋ ಅನ್ನೋ ಆತಂಕ ಮೂಡಿಸುತ್ತಿದೆ. ಸರ್ಕಾರ ನನಗೆ ಭದ್ರತೆ ನೀಡಬೇಕು” ಎಂದು ಮಾಜಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ಗಂಭೀರ ಆರೋಪ ಮಾಡಿದರು.
ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ
ಇದೇ ವೇಳೆ ಶಾಸಕಿಗೆ ಭರವಸೆ ನೀಡಿದ ಸ್ಪೀಕರ್ ಯು ಟಿ ಖಾದರ್, “ನಿಮ್ಮ ಆತಂಕದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಗೃಹ ಸಚಿವರ ಜೊತೆಗೆ ನಾನೂ ಮಾತನಾಡುತ್ತೇನೆ. ಅನಾಮಿಕ ವ್ಯಕ್ತಿ ಬಂದು ಕುಳಿತುಕೊಂಡ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಅವರು ಬಂದಾಗ ನೀವು ಬೇಗ ಬಂದಿರಲಿಲ್ಲ. ಕುರ್ಚಿ ಖಾಲಿ ಇದೆ ಅಂತ ಆತ ಅಲ್ಲಿಯೇ ಕೂತುಕೊಂಡ. ನೀವು ಬೇಗ ಬಂದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ” ಎಂದು ಹೇಳಿದರು.