ಭಾರತ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗ ಅಗ್ರ ಸ್ಥಾನದಲ್ಲಿದೆ. ಈ ನಿರುದ್ಯೋಗ ಸಮಸ್ಯೆಯನ್ನೇ ದಾಳವಾಗಿಟ್ಟುಕೊಂಡು ಪ್ರಚಾರ ಪಡೆದುಕೊಂಡ ಮೋದಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇನೆಂದು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಮೋದಿ ಸರ್ಕಾರ ಯುವಜನರಿಗೆ ಉದ್ಯೋಗ ಕೊಡುವಲ್ಲಿ ವಿಫಲವಾಗಿದೆ. ಕಳೆದ 45 ವರ್ಷಗಳಲ್ಲಿಯೇ ಅಧಿಕ ನಿರುದ್ಯೋಗ ಪ್ರಮಾಣ ಎದುರಾಗುವುದಕ್ಕೂ ಕಾರಣ ಆಗಿದೆ. ಮೋದಿಯ ಪೊಳ್ಳು ಭರವಸೆ ನಂಬಿ ಅವರ ಪರ ನಿಂತಿದ್ದ ಹಲವಾರು ಯುವಕ ಮತ್ತು ಯುವತಿಯರು ಈಗ ಉದ್ಯೋಗವಿಲ್ಲದೆ, ಬಳಲುವಂತಹ ಪರಿಸ್ಥಿತಿ ಎದುರಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, 2022ರಲ್ಲಿ ದೇಶಾದ್ಯಂತ ಒಟ್ಟು 15,783 ಯುವಜನರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಿಂದ 2022ರ ನಡುವೆ 28,464 ಯುವಜನರು ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.
ನಿರುದ್ಯೋಗ ದರವು 2012ರಲ್ಲಿ (ಮೋದಿ ಅಧಿಕಾರಕ್ಕೆ ಬರುವ ಹಿಂದಿನ ವರ್ಷ) 2.1% ಇತ್ತು. ಈಗ 6.8%ಗೆ ಏರಿಕೆಯಾಗಿರುವ ನಿರುದ್ಯೋಗ ದರವು 2023ರಲ್ಲಿ 8.03%, 2021ರಲ್ಲಿ 5.98%, 2020ರಲ್ಲಿ 8.0% 2019ರಲ್ಲಿ 5.27%, 2018ರಲ್ಲಿ 5.33%, 2017ರಲ್ಲಿ 5.36%, 2016ರಲ್ಲಿ 5.42%, 2015ರಲ್ಲಿ 5.44, 2014ರಲ್ಲಿ 5.44% ಇತ್ತು. ಗಮನಾರ್ಹವಾಗಿ, 2018ರ ನಂತರದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರ, 10 ವರ್ಷದಲ್ಲಿ 1.5 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಮೋದಿ ಅವರು ಆಡಳಿತ ಹಿಡಿದ ಮೇಲೆಯೂ ನಿರುದ್ಯೋಗಿ ಯುವಜನರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ನಿರುದ್ಯೋಗದ ಗುಂಪು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಣೆ ಆಗಿದೆ.
ನಿರುದ್ಯೋಗದ ಸಮಸ್ಯೆ ಕರ್ನಾಟಕದಲ್ಲಿ, ಅದರಲ್ಲಿಯೂ ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಜನರನ್ನು ವಿಪರೀತ ಬಾಧಿಸುತ್ತಿದೆ. ಅಕಾಲಿಕ ಮಳೆಯಿಂದ, ಬಿರು ಬೇಸಿಗೆಯಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ಜನತೆಗೆ ಈ ನಿರುದ್ಯೋಗದ ಸಮಸ್ಯೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಉತ್ತರ ಕರ್ನಾಟಕದ ಸಾಕಷ್ಟು ಜನ ಕೆಲಸ ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. ಈಗಷ್ಟೇ ಉನ್ನತ ಶಿಕ್ಷಣದ ಮುಗಿಸಿದ ಯುವಕ, ಯುವತಿಯರು ಕಾರ್ಪೊರೇಟ್ ಕಂಪನಿಗಳ ಎದುರು ಕೆಲಸಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅರ್ಧಕ್ಕೆ ಶಿಕ್ಷಣ ತೊರೆದವರು ಅಸಂಘಟಿತ ವಲಯದಲ್ಲಿ ಕೆಲಸ ಹುಡುಕುತ್ತಿದ್ದಾರೆ. ಅತ್ತ, ಶಿಕ್ಷಿತರು, ಇತ್ತ ಶಿಕ್ಷಣ ಮುಗಿಸದೇ ಇರುವವರು – ಇಬ್ಬರಿಗೂ ಕೆಲಸ ಸಿಗದೆ, ಬೆಂಗಳೂರಿನ ಬೀದಿ-ಬೀದಿ ಅಲೆಯುವಂತಾಗಿದೆ. ಕೆಲವರು ತಮ್ಮ ಓದಿಗೆ ಸಂಬಂಧವೇ ಇಲ್ಲದ ಕೆಲಸ ಪಡೆದು, ಹೊಟ್ಟೆ ಪಾಡು ಸಾಗಿಸುತ್ತಿದ್ದಾರೆ. ಇನ್ನು ಕೆಲವರು ಮತ್ತೆ ಊರಿನ ದಾರಿ ಹಿಡಿಯುತ್ತಿದ್ದಾರೆ.
ಉತ್ತರ ಕರ್ನಾಟಕದ ಹಲವಾರು ಮಂದಿ ಗೋವಾ-ಮುಂಬೈಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಹೋಟೆಲ್‌ಗಳು, ಬಾರ್‌ಗಳು, ಪಬ್‌ಗಳು, ಲಾಡ್ಜ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ, ಅಂತಹ ಕೆಲಸಕ್ಕೆ ಸೇರುತ್ತಿರುವವರಲ್ಲಿ ಹೆಚ್ಚಿನವರು ಪದವೀಧರರು. ಈ ಕೆಲಸಗಳು ಅವಮಾನವೇನೂ ಅಲ್ಲ. ಅದರೆ, ಅವು ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳಲ್ಲ.
ಇನ್ನು, 2 ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದಿದ್ದ ಮೋದಿ ಅವರು ಯುವಜನರಿಗೆ ಕೆಲಸ ಕೊಡಿಸದೇ, ಪಕೋಡಾ ಮಾರಾಟ ಮಾಡಿ, ರಾಮನ ಭಜನೆ ಮಾಡಿ, ದೇವಸ್ಥಾನ ಸ್ವಚ್ಛ ಮಾಡಿ, ಮನೆಯಲ್ಲಿ ದೀಪ ಹಚ್ಚಿ, ತಟ್ಟೆ ಬಾರಿಸಿ ಎಂದು ಹೇಳುತ್ತಿದ್ದಾರೆ.
ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಈ ಭಾಗದ ಮತದಾರರು ತಮ್ಮ ನಿರುದ್ಯೋಗದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡೇ ಮತ ಚಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈ ದಿನ.ಕಾಮ್ ಸಮೀಕ್ಷೆಯಲ್ಲಿಯೂ ಇದೇ ಅಂಶ ಕಂಡುಬಂದಿದೆ.
ಈ ದಿನ.ಕಾಮ್ ಸಮೀಕ್ಷೆಯಲ್ಲಿ ಕಳೆದ 10 ವರ್ಷಗಳಲ್ಲಿ ಈ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆಯಾ ಅಥವಾ ಹೆಚ್ಚಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಜನರು, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದೇ ಹೇಳಿದ್ದಾರೆ. ಅಲ್ಲದೆ, ನಿರುದ್ಯೋಗ ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದೂ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼಈ ದಿನʼ ಸಮೀಕ್ಷೆ | ಬೆಲೆ ಏರಿಕೆಯ ’ಉರಿತಾಪ’ಕ್ಕೆ ಬಿಜೆಪಿಯೇ ಕಾರಣ ಅಂತಾರೆ ಉ.ಕರ್ನಾಟಕದ ಜನ
39.27% ಜನ ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. ಇನ್ನು 19.58% ಮಂದಿ ಇದಕ್ಕೆ ಕಾಂಗ್ರೆಸ್ ಕಾರಣ ಅಂತ ಹೇಳಿದ್ದರೇ, 17.33% ಜನ ಇದಕ್ಕೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ. ಅಂದರೆ, ಬಿಜೆಪಿಯೇ ಕಾರಣ ಎಂದವರ ಸಂಖ್ಯೆ ಬರೋಬ್ಬರಿ 58.6% ಜನರು.
ಉತ್ತರ ಕರ್ನಾಟಕದ ಜನರಲ್ಲಿ 75.1% ಜನರು ನಿರುದ್ಯೋಗ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 12.2% ಜನರು ನಿರುದ್ಯೋಗ ಕಡಿಮೆಯಾಗಿದೆ ಎಂದಿದ್ದಾರೆ. 12.56% ಜನ ಈ ಬಗ್ಗೆ ಏನು ಗೊತ್ತಿಲ್ಲ, ಏನನ್ನೂ ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಯುವ ಜನರಿಗೆ ಉದ್ಯೋಗ ಕೊಡಿಸುವ ಬದಲು ಅವರ ತಲೆಯಲ್ಲಿ ಹಿಂದುತ್ವ, ಕೋಮುವಾದ ಎಂಬ ಭಾವನಾತ್ಮಕ ವಿಚಾರಗಳನ್ನ ತುಂಬುತ್ತಿದ್ದಾರೆ. ಯುವಕರಿಗೆ ಕೆಲಸ ಕೊಡಿಸಲು ವಿಫಲರಾದ ಮೋದಿ ಯುವಕರ ಭುಜಕ್ಕೆ ಕೇಸರಿ ಶಾಲು ಹಾಕಿ, ಶ್ರೀರಾಮನ ಭಜನೇ ಮಾಡಲು ಹೇಳುತ್ತಿದ್ದಾರೆ. ಆದರೆ, ಇನ್ನಾದರೂ ಯುವಜನರು ಎಚ್ಚೆತ್ತುಕೊಳ್ಳಬೇಕಿದೆ.