ಅಭಿವೃದ್ಧಿಯ ಹರಿಕಾರನೆಂಬ ಅಬ್ಬರದ ಪ್ರಚಾರದೊಂದಿಗೆ ಅಬ್ಬರಿಸಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆದು ಹೋಗಿವೆ. ಎರಡು ಅವಧಿಗೆ ದೇಶದ ಜನರು ಮೋದಿ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ, ಅಭಿವೃದ್ಧಿ ಮಾತ್ರ ಕಾಣಸಿಗುತ್ತಿಲ್ಲ. ದೇಶವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. ರೈತರ ಹಣ ದ್ವಿಗುಣ ಮಾಡುತ್ತೇವೆ. ಬೆಲೆ ಏರಿಕೆ ನಿಯಂತ್ರಿಸುತ್ತೇವೆ. ಯುವಜನರಿಗೆ ಉದ್ಯೋಗ ಕೊಡುತ್ತೇವೆ. ಮಹಿಳೆಯರಿಗೆ ರಕ್ಷಣೆ ಕೊಡುತ್ತೇವೆಂಬ ನಾನಾ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ, ತನ್ನ ಭರವಸೆಗಳಲ್ಲಿ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ.
ಹೀಗಾಗಿ, ಜನರು ಮೋದಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಮೋದಿ ಮೇಲಿದ್ದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮೋದಿಯಿಂದ ದೂರ ಸರಿಯುತ್ತಿದ್ದಾರೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಇಲ್ಲ ಎಂಬುದು ಕೇವಲ ಅಭಿಪ್ರಾಯವಲ್ಲ, ಅದು ವಾಸ್ತವ. ಮೋದಿ ಬಗ್ಗೆ ವಿಶ್ವಾಸವಿಲ್ಲ. ನಾವು ಈ ಬಾರಿ ಮೋದಿ/ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಸ್ವತಃ ಜನರೇ ಹೇಳುತ್ತಿದ್ದಾರೆ. ಈ ಬಾರಿ ತಮ್ಮ ಮತ ಕಾಂಗ್ರೆಸ್‌ಗೆ ಎಂದು ಜನರು ಹೇಳುತ್ತಿರುವುದು ಈದಿನ.ಕಾಮ್ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಸದ್ಯಕ್ಕೆ, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳ ಮತದಾನ ಮುಗಿದಿದೆ. ಇನ್ನುಳಿದ 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಜನರು ಮೇ 7ರಂದು ಮತ ಚಲಾಯಿಸಲಿದ್ದಾರೆ. ಈದಿನ.ಕಾಮ್ ಸಮೀಕ್ಷೆಯಲ್ಲಿ ಈ ಭಾಗದ ಜನರು ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಮೋದಿ ಸರ್ಕಾರದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ನಿಯಂತ್ರಣವಾಗಿಲ್ಲ. ನಿರುದ್ಯೋಗ ಕಡಿಮೆಯಾಗಿಲ್ಲ,. ದೇಶ/ರಾಜ್ಯದ ಅಭಿವೃದ್ಧಿಯೂ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉರಿ ಬಿಸಿಲಿನಲ್ಲಿ ಬೇಯುತ್ತಿರುವ ಉತ್ತರ ಕರ್ನಾಟಕದ ಜನರು ಮೋದಿ ಆಡಳಿತದಲ್ಲಿ ತಮ್ಮ ಸಮಸ್ಯೆಗಳಿಗೆ ಯಾವುದೇ ಪರಿಹಾರ ದೊರೆತಿಲ್ಲ ಎನ್ನುತ್ತಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕಿಂತ – ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವೇ ಮೇಲು ಎಂದು ಹೇಳುತ್ತಿದ್ದಾರೆ.
ಸಮೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನ ಜನರು, “ಮೋದಿ ಆಡಳಿತದಲ್ಲಿ ಜನರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ ಮತ್ತು ಬಿಗಡಾಯಿಸಿದೆ. ದುಡಿಮೆ ಕಡಿಮೆಯಾಗಿದೆ – ಖರ್ಚು ಹೆಚ್ಚಾಗಿದೆ. ದಿನನಿತ್ಯದ ಜೀವನ ನಡೆಸುವುದೇ ಸವಾಲಾಗಿದೆ” ಎಂದು ಹೇಳಿದ್ದಾರೆ.
ಮೋದಿ ಆಡಳಿತದಲ್ಲಿ ಉಜ್ವಲ ಯೋಜನೆಯಡಿ ಗ್ಯಾಸ್-ಸಿಲಿಂಡರ್ ನೀಡದರೂ, ಈಗ ಅದನ್ನು ಬಳಸುವುದೇ ಕಷ್ಟವಾಗಿದೆ. ಅಡುಗೆ ಅನಿಲದ ಬೆಲ ಏರಿದ್ದು, ಸಿಲಿಂಡರ್ ರೀ-ಫಿಲ್ ಮಾಡಿಸಲೂ ಆಗುತ್ತಿಲ್ಲವೆಂದು ಜನರು ಹೇಳುತ್ತಿದ್ದಾರೆ.
“ಈ ಹಿಂದೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತದಲ್ಲಿ 40% ಕಮಿಷನ್, ವೈದ್ಯಕೀಯ ಸಲಕರಣೆ ಖರೀದಿ ಹಗರಣ, ಪಿಎಸ್‌ಐ ನೇಮಕಾತಿಯಲ್ಲಿ ಹಗರಣದಂತಹ ಭ್ರಷ್ಟಾಚಾರವನ್ನೇ ಜನರು ಖಂಡಿದ್ದೆವು. ಈಗ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಉಪಯೋಗ ಮಾಡಿಕೊಡುತ್ತಿದೆ. ಬಿಜೆಪಿಗಿಂತ ಕಾಂಗ್ರೆಸ್ ಉತ್ತರ ಆಡಳಿತ ನೀಡುತ್ತಿದೆ” ಎಂದು ಉತ್ತರ ಮತ್ತು ಮಧ್ಯ ಕರ್ನಾಟಕದ ಜನರು ಹೇಳುತ್ತಿದ್ದಾರೆ.
ಮೇ 7ರಂದು ಮತದಾನ ನಡೆಯಲಿರುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಜನರಲ್ಲಿ ಹೆಚ್ಚಿನವರು ತಮ್ಮ ಮತ ಕಾಂಗ್ರೆಸ್‌ಗೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಆ ಮೂಲಕ, ಈ ಭಾಗದ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸೂಚನೆ ನೀಡಿದ್ದಾರೆ.
14 ಕ್ಷೇತ್ರಗಳ ಮತದಾರರಲ್ಲಿ 47.69% ಜನರು ತಮ್ಮ ಮತ ಕಾಂಗ್ರೆಸ್‌ಗೆ ಎಂದು ಹೇಳಿಕೊಂಡಿದ್ದಾರೆ ಇನ್ನು, 42.36% ಜನರು ಬಿಜೆಪಿ-ಜೆಡಿಎಸ್‌ಗೆ ಮತ ನೀಡುವುದಾಗಿ ತಿಳಿಸಿದ್ದಾರೆ. ಅದಾಗ್ಯೂ, 8.28% ಮತದಾರರು ಇನ್ನೂ ಯಾರಿಗೆ ಮತ ಚಲಾಯಿಸಬೇಕೆಂದು ನಿರ್ಧರಿಸಿಲ್ಲವೆಂದು ಹೇಳಿದ್ದಾರೆ. ಜೊತೆಗೆ, 1.06% ಮಂದಿ ತಮ್ಮ ಓಟು ‘ನೋಟಾ’ಗೆ ಎನ್ನುತ್ತಿದ್ದಾರೆ.
ತಾವು ಮತ ಹಾಕುವ ಪಕ್ಷದ ಹೆಸರೇಳಿದವರಲ್ಲಿ ಹೆಚ್ಚಿನವರು, ಅಂದ್ರೆ, 47.69%ಜನರು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿ-ಜೆಡಿಎಸ್‌ಗೂ ಮತ ಎನ್ನುವವರಲ್ಲಿ 42.36% ಇದ್ದಾರೆ. ಜನರ ಅಭಿಪ್ರಾಯದಂತೆ ಮತ ಹಂಚಿಕೆಯಲ್ಲಿ ಕಾಂಗ್ರೆಸ್ 5% ಮುಂದಿದೆ. ಮಾತ್ರವಲ್ಲದೆ, ಇನ್ನೂ ನಿರ್ಧರಿಸಿದ ಮತಗಳ ಪಾಲು 8.28% ಇದ್ದು, ಇವರಲ್ಲಿ ಕನಿಷ್ಠ ಅರ್ಧದಷ್ಟು ಜನರು ಕಾಂಗ್ರೆಸ್‌ಗೆ ಮತ ಹಾಕುವ ಸಾಧ್ಯತೆ ಇವೆ. ಇನ್ನೂ ಅರ್ಧದಷ್ಟು ಜನರು ಬಿಜೆಪಿಗೆ ಮತಹಾಕಬಹುದು.
ಅದಾಗ್ಯೂ, ನಿಧರಿಸಿದ 8.28% ಮತಗಳನ್ನು ಎರಡೂ ಪಕ್ಷಗಳಿಗೆ ಅರ್ಧರ್ಧವೆಂದು ವಿಭಜಿಸಿದರೂ, ಕಾಂಗ್ರೆಸ್ ಪಾಲು ಸರಿಸುಮಾರು 52% ಅಗಲಿದೆ. ಬಿಜೆಪಿ ಪಾಲು 46.2% ಆಗಲಿದೆ. ಎಷ್ಟೇ ಅಳೆದು ತೂಗಿದರೂ ಮತಹಂಚಿಕೆಯಲ್ಲಿ ಕಾಂಗ್ರೆಸ್ ಮುಂದಿದೆ.
ಅಂದಹಾಗೆ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಲಿಂಗಾಯತ ಮತಗಳೇ ಹೆಚ್ಚಾಗಿವೆ. ಅವರೆಲ್ಲರೂ ಈ ಹಿಂದೆ ಬಿಜೆಪಿ ಪರವಾಗಿದ್ದರೂ, ಈಗ ಬಿಜೆಪಿ ವಿರುದ್ಧ ಸಿಟ್ಟಾಗಿದ್ದಾರೆ. ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಬಿಜೆಪಿಯ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಚಾರಕ್ಕಿಳಿದಿದ್ದಾರೆ. ಹಲವೆಡೆ ಕಾಂಗ್ರೆಸ್ ಕೂಡ ಲಿಂಗಾಯತರನ್ನೇ ಕಣಕ್ಕಿಳಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಲಿಂಗಾಯತರು ಬಿಜೆಪಿಯಿಂದ ದೂರ ಸರಿದಿದ್ದು, ಕಾಂಗ್ರೆಸ್ ಪರವಾಗಿದ್ದಾರೆ. ಇದೆಲ್ಲವೂ ಮಧ್ಯ ಮತ್ತು ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ ಎಂಬುದನ್ನು ಸೂಚಿಸುತ್ತವೆ.