ಬೆಂಗಳೂರು ನಗರದಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಬಂಧಿತ ಶಂಕಿತ ಐವರು ಉಗ್ರರನ್ನು ಈಗಲೇ ಟೆರರಿಸ್ಟ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮಾಡಿ ಟೆರರಿಸ್ಟ್ ಸಂಪರ್ಕ ಇದೆಯಾ ಎಂದು ನೋಡಲಾಗುತ್ತಿದೆ. ಕೇಂದ್ರ ಕಾರಾಗೃಹ ಸಂಪರ್ಕ ಇಟ್ಟುಕೊಂಡಿರುವುದು ತಿಳಿದು ಬಂದಿದೆ ಎಂದರು.
ಕೆಲವು ಕೃತ್ಯ ಎಸಗುವ ಬಗ್ಗೆ ಮಾಹಿತಿ ದೊರೆತಿದೆ. ಪೊಲೀಸರ ತನಿಖೆ ಆಗಲಿ, ಬಳಿಕ ಎನ್‌ಇಎ ತನಿಖೆ ಬಗ್ಗೆ ನೋಡೋಣ. ಸದ್ಯ ಬಂಧಿತರಿಂದ ಏಳು ಕಂಟ್ರಿಮೇಡ್ ಪಿಸ್ತೂಲ್, ವಾಕಿಟಾಕಿ, ಆಯುಧ ಸಿಕ್ಕಿವೆ ಎಂದು ಹೇಳಿದರು.
ಕೆಲವರು ಬೇಲ್ ಮೇಲೆ ಬಿಡುಗಡೆಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಕೆಲವರು ಕೊಲೆ, ದರೋಡೆ ಸೇರಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಯಾವ ಸಂಘಟನೆ ಜತೆ ಗುರುತಿಸಿಕೊಂಡಿದ್ದರು ಎಂಬ ಬಗ್ಗೆ ತನಿಖೆಯಿಂದ ತಿಳಿಯಬೇಕಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ವಿಶೇಷ ಸಚಿವ ಸಂಪುಟ ಸಭೆ ಒಪ್ಪಿಗೆ
7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ
ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬುಧವಾರ ಕೋರ್ಟ್ಗೆ ಹಾಜರುಪಡಿಸಿದ್ದು, 15 ದಿನ ವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದರು. ಆದರೆ, ಸರ್ಕಾರಿ ಅಭಿಯೋಜಕರು ಕೋರ್ಟ್ಗೆ ಹಾಜರಾಗದ ಹಿನ್ನೆಲೆ ಸ್ವಲ್ಪ ಸಮಯದ ನಂತರ ಸರ್ಕಾರಿ ಅಭಿಯೋಜಕರ ಜೊತೆ ಹಾಜರುಪಡಿಸಲು ಸಿಸಿಬಿ ಪೊಲೀಸರಿಗೆ ಎನ್ಐಎ ವಿಶೇಷ ನ್ಯಾಯಾಲಯ ಸೂಚಿಸಿತ್ತು.
ಸದ್ಯ ಐವರು ಶಂಕಿತ ಉಗ್ರರನ್ನು 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಶಂಕಿತ ಉಗ್ರರಾದ ಸಯ್ಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್, ಜಾಹಿದ್ ಅವರನ್ನು ಏಳು ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿದೆ.