ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ, ಕರ್ತವ್ಯನಿರತ ಪೊಲೀಸರಿಗೆ ಧಮ್ಕಿ ಹಾಕಿ, ಗೂಂಡಾ ವರ್ತನೆ ತೋರಿದ್ದ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಪೊಲೀಸರು ಯಾವುದೇ ಕ್ಷಣದಲ್ಲೂ ಬಂಧನ ನಡೆಸುವ ಸಾಧ್ಯತೆ ಇದೆ.
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧನವಾದ ರೌಡಿಶೀಟರ್ ಪರ ಪ್ರತಿಭಟನೆಯ ನೆಪದಲ್ಲಿ ಪೊಲೀಸರಿಗೆ ಬೆದರಿಕೆ ಹಾಕಿದ್ದ ಬಿಜೆಪಿ ಶಾಸಕನಿಗೆ ಈಗ ಬಂಧನ ಭೀತಿ ಎದುರಾಗಿದ್ದು, ಬೆಳ್ತಂಗಡಿ ಪೊಲೀಸರು ಶಾಸಕರ ಮನೆ ಸುತ್ತುವರಿದು ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ ಮೇ 18ರಂದು ಅಕ್ರಮ ಕಲ್ಲು ಕೋರೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನನ್ನು ಬಂಧಿಸಿದ್ದನ್ನು ಖಂಡಿಸಿ ಶಾಸಕ ಹರೀಶ್ ಪೂಂಜಾ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಪ್ರತಿಭಟಿಸಿ ಪೊಲೀಸರಿಗೆ ನಿಂದಿಸಿದ್ದರು.
ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮುಂದುವರಿದ ಭಾಗವಾಗಿ ಮೇ 20ರಂದು ತಾಲೂಕು ಆಡಳಿತದ ಮುಂದೆ ಪ್ರತಿಭಟನೆ ನಡೆಸಿ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಎರಡನೇ ಪ್ರಕರಣ ದಾಖಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೇ 22ರಂದು ಶಾಸಕ ಹರೀಶ್ ಪೂಂಜ ಬಂಧನಕ್ಕೆ ಮುಂದಾಗಿದ್ದು, ಅವರ ಗರ್ಡಾಡಿ ನಿವಾಸದ ಮುಂದೆ ಪೊಲೀಸ್ ತಂಡ ಸಜ್ಜಾಗಿದೆ. ಯಾವುದೇ ಸಮಯದಲ್ಲೂ ಹರೀಶ್ ಪೂಂಜಾ ಬಂಧನದ ಸಾಧ್ಯತೆ ಎದುರಾಗಿದೆ. ಈ ಹಿನ್ನೆಲೆ ಅವರ ಮನೆಗೆ ಸಾರ್ವಜನಿಕರ ಭೇಟಿಗೆ ಪೊಲೀಸರು ನಿರಾಕರಿಸಿದ್ದು, ಮನೆಗೆ ಹೋಗುವ ರಸ್ತೆಗೆ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ.
ಇದನ್ನು ಓದಿದ್ದೀರಾ? ಅಕ್ರಮ ಕಲ್ಲುಕೋರೆ: ಬಿಜೆಪಿ ಮುಖಂಡನ ಬಂಧನ; ಠಾಣೆಗೆ ನುಗ್ಗಿ ಪೊಲೀಸರಿಗೆ ಧಮ್ಕಿ ಹಾಕಿದ ಬಿಜೆಪಿ ಶಾಸಕ!
ಶಾಸಕರು ಮನೆಯಲ್ಲಿ ಇಲ್ಲದ ಕಾರಣ ಶಾಸಕರ ಪರ ವಕೀಲರ ತಂಡ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಬಂಧನ ಭೀತಿ ಎದುರಿಸುತ್ತಿರುವ ಶಾಸಕರು ಮನೆಯಿಂದ ನಾಪತ್ತೆಯಾಗಿದ್ದಾರೆ. ಶಾಸಕರ ಪರ ಹಲವು ಬಿಜೆಪಿ ಕಾರ್ಯಕರ್ತರು ಶಾಸಕರ ಮನೆ ಎದುರು ಜಮಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮ ಕಲ್ಲುಕೋರೆ ನಡೆಸುತ್ತಿದ್ದ ಆರೋಪದಲ್ಲಿ ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದ ನೆಪದಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ @HPoonja ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದಲ್ಲದೆ, ಪೊಲೀಸರಿಗೇ ಧಮ್ಕಿ ಹಾಕಿದ್ದಾರೆ.
‘ಠಾಣೆ ನಿಮ್ಮ ಅಪ್ಪನ ಮನೆ ಆಸ್ತಿಯಾ ಎಂದು ನಿಂದಿಸಿದ್ದಾರೆ. pic.twitter.com/3hVbntiGj1— eedina.com ಈ ದಿನ.ಕಾಮ್ (@eedinanews) May 19, 2024
