ಗುಜರಾತ್ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಬಿಜೆಪಿಯೊಳಗೆ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಬಿಜೆಪಿಯ ಮೂವರು ಶಾಸಕರು ಔಪಚಾರಿಕ ಪತ್ರಗಳ ಮೂಲಕ ತಮ್ಮದೇ ಪಕ್ಷ ಆಡಳಿತವಿರುವ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಮುಗಿದ ತಕ್ಷಣ ಸೂರತ್‌ನ ವರಾಚಾ ಕ್ಷೇತ್ರದ ಶಾಸಕ ಕುಮಾರ್ ಕನಾನಿ ಅವರು ಮೊದಲ ಬಾರಿಗೆ ಸರ್ಕಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮೇ 14 ರಂದು ಸೂರತ್ ಜಿಲ್ಲಾಧಿಕಾರಿಗೆ ಪತ್ರ ಬರೆದ ಕನನಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಪಡೆಯುವ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | RTI ಕಾರ್ಯಕರ್ತನ ಹತ್ಯೆ ಪ್ರಕರಣ: ಬಿಜೆಪಿ ಮಾಜಿ ಶಾಸಕ ದಿನು ಸೋಲಂಕಿ ಸಹಿತ 6 ಮಂದಿ ಖುಲಾಸೆ
“10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಹೊರಬಿದ್ದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಸೀಮಿತ ಸಂಖ್ಯೆಯ ಟೋಕನ್‌ಗಳನ್ನು ಮಾತ್ರ ವಿತರಿಸಲಾಗಿದ್ದು, ಹಲವರು ಕಂಗಾಲಾಗಿದ್ದಾರೆ. ಕಚೇರಿ ನಿರ್ವಾಹಕರೊಂದಿಗೆ ಏಜೆಂಟರು ಕೆಲಸ ಮಾಡಿದ್ದಾರೆ. ಹಣವನ್ನು ತೆಗೆದುಕೊಂಡು ಎರಡು ಗಂಟೆಯೊಳಗೆ ಪ್ರಮಾಣಪತ್ರಗಳನ್ನು ವ್ಯವಸ್ಥೆ ಮಾಡಿದ್ದಾರೆ” ಎಂದು ಬಿಜೆಪಿ ಶಾಸಕ ಪತ್ರದಲ್ಲಿ ಬರೆದಿದ್ದಾರೆ.
ಈ ನಡುವೆ ಜುನಾಗಢದ ಬಿಜೆಪಿ ಶಾಸಕ ಸಂಜಯ್ ಕೊರ್ಡಿಯಾ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಜುನಾಗಢ್‌ನ ನರಸಿಂಗ್ ಸರೋವರದ ಪ್ರಗತಿ ಮಂದಗತಿಯಿಂದ ಸಾಗುತ್ತಿರುವುದನ್ನು ಬಿಜೆಪಿ ಶಾಸಕ ಪ್ರಶ್ನಿಸಿದ್ದಾರೆ.
“ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಬರೆದ ಪತ್ರದಲ್ಲಿ, ಜುನಾಗಢದ ನರಸಿಂಗ್ ಸರೋವರದ ಕಾಮಗಾರಿಯು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ ಎಂದು ನಾನು ಉಲ್ಲೇಖಿಸಿದ್ದೇನೆ. ಗಡುವು ಏಪ್ರಿಲ್‌ನಲ್ಲಿ ಆದರೆ ಈವರೆಗೂ ಶೇಕಡ 60ರಷ್ಟೂ ಪೂರ್ಣವಾಗಿಲ್ಲ” ಎಂದು ಸಂಜಯ್ ಕೊರ್ಡಿಯಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | ಅಹಮದಾಬಾದ್‌ನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ
ಜೊತೆಗೆ ಈ ಹಿಂದೆ 2023ರಲ್ಲಿ ಜುನಾಗಡ್ ನದಿ ತೀರದಲ್ಲಿ ನಿರ್ಮಾಣ ಚಟುವಟಿಕೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.
ಇನ್ನು ಗುಜರಾತ್‌ನ ಮಹುಧಾ ವಿಧಾನಸಭಾ ಕ್ಷೇತ್ರದ ಮತ್ತೊಬ್ಬ ಬಿಜೆಪಿ ಶಾಸಕ ಸಂಜಯ್ ಸಿಂಗ್ ಮಹಿದಾ ಅವರು ಪತ್ರ ಬರೆದಿದ್ದಾರೆ. “ತಾಲೂಕು ಅಭಿವೃದ್ಧಿ ಅಧಿಕಾರಿ ಮನಸೋಇಚ್ಛೆ ಖರೀದಿ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಿಗೆ ಮಂಜೂರು ಮಾಡಿರುವ ಆರ್‌ಒ ಪ್ಲಾಂಟ್‌ಗಳು ಮತ್ತು ವಾಟರ್ ಕೂಲರ್‌ಗಳು ಕಳಪೆ ಗುಣಮಟ್ಟದ್ದಾಗಿವೆ” ಎಂದು ಆರೋಪಿಸಿ ಪತ್ರ ಬರೆದಿದ್ದಾರೆ.