ಸಂಸತ್ತಿನಲ್ಲಿ ದೆಹಲಿಯ ಸುಗ್ರೀವಾಜ್ಞೆಗೆ ವಿರುದ್ಧವಾಗಿ ಕಾಂಗ್ರೆಸ್ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾದ ಎಎಪಿ ಈಗ ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಗುಜರಾತ್ ಎಎಪಿ ಘಟಕ ತಿಳಿಸಿದೆ.
ಎಎಪಿಯ ಗುಜರಾತ್ ಘಟಕದ ಮುಖ್ಯಸ್ಥ ಇಸುದನ್ ಗಧ್ವಿ ಅವರು, ಇಂಡಿಯಾ ಒಕ್ಕೂಟದ ಭಾಗವಾಗಿರುವ ಆಪ್ ಹಾಗೂ ಕಾಂಗ್ರೆಸ್ ಸೀಟು ಹಂಚಿಕೆ ಸೂತ್ರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂದು ಹೇಳಿದ್ದಾರೆ.
ಇನ್ನು ಗಧ್ವಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪಕ್ಷವು ಹೈಕಮಾಂಡ್ ನಿರ್ದೇಶನಗಳನ್ನು ಪಾಲಿಸುತ್ತದೆ ಎಂದು ಹೇಳಿದೆ.
“ಎಎಪಿ ಮತ್ತು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ. ಈ ಚುನಾವಣಾ ಮೈತ್ರಿ ಗುಜರಾತ್‌ನಲ್ಲಿಯೂ ಜಾರಿಗೆ ಬರಲಿದೆ. ಮೈತ್ರಿಯ ಮಾತುಕತೆಗಳು ಪ್ರಾಥಮಿಕ ಹಂತದಲ್ಲಿದ್ದರೂ, ಮುಂಬರುವ ಲೋಕಸಭೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಹೋರಾಡುವುದು ಖಚಿತ. ಸೀಟು ಹಂಚಿಕೆ ಸೂತ್ರದಡಿಯಲ್ಲಿ ಗುಜರಾತ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿ ಎಲ್ಲ 26 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ನಾನು ಗ್ಯಾರಂಟಿ ನೀಡುತ್ತೇನೆ” ಎಂದು ಗಾಧ್ವಿ ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಮಾನವೀಯ ಕ್ರಮಗಳ ಮೇಲ್ವಿಚಾರಣೆಗೆ ಸುಪ್ರೀಂನಿಂದ ಮೂವರು ನಿವೃತ್ತ ಮಹಿಳಾ ನ್ಯಾಯಾಧೀಶರ ಸಮಿತಿ ರಚನೆ
ಹೈಕಮಾಂಡ್ ತೀರ್ಮಾನವೇ ಅಂತಿಮ: ಕಾಂಗ್ರೆಸ್
ರಾಜ್ಯ ಎಎಪಿ ಮುಖ್ಯಸ್ಥರ ಘೋಷಣೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ, ಕೇಂದ್ರ ನಾಯಕತ್ವದ ನಿರ್ದೇಶನಗಳನ್ನು ಪಕ್ಷವು ಅನುಸರಿಸುತ್ತದೆ ಎಂದು ಹೇಳಿದರು.
“ನಾನು ಅವರ ಘೋಷಣೆಯ ಬಗ್ಗೆ ಈಗಷ್ಟೇ ತಿಳಿದುಕೊಂಡಿದ್ದೇನೆ. ಇತರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದಗಳನ್ನು ಕೇಂದ್ರ ನಾಯಕತ್ವವು ಅಂತಿಮಗೊಳಿಸುತ್ತದೆ. ಚುನಾವಣಾ ಪೂರ್ವ ಮೈತ್ರಿಗಳನ್ನು ನಿರ್ಧರಿಸುವುದು ಹೈಕಮಾಂಡ್. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರೀಯ ನಾಯಕರ ನಿರ್ದೇಶನಗಳನ್ನು ಗುಜರಾತ್ ಕಾಂಗ್ರೆಸ್ ಅನುಸರಿಸುತ್ತದೆ ” ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಹೇಳಿದ್ದಾರೆ.
ಕಳೆದ 2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಪರಸ್ಪರ ಸೆಣಸಿದ್ದವು. 182 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದರೆ, ಎಎಪಿಯು ಐದು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.