ಸಿಲಿಕಾನ್ ಸಿಟಿಯಲ್ಲಿ ಸೋಮವಾರ ಹಲವೆಡೆ ಧಾರಾಕಾರ ಮಳೆ ಆಗಿದೆ. ಕಾರ್ಪೊರೇಷನ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್ಬಾಗ್, ಬಸವನಗುಡಿ, ಕಬ್ಬನ್ಪಾರ್ಕ್, ವಿ.ವಿ.ಪುರಂ, ಬನಶಂಕರಿ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ.
ಕರಾವಳಿಯಲ್ಲಿ ಟ್ರಫ್ ಉಂಟಾಗಿರುವ ಹಿನ್ನಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಐದು ದಿನಗಳ ಮಳೆ ಇರಲಿದೆ ಎಂದು ಹವಮಾನ ಇಲಾಖೆಯಿಂದ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದಿನಿಂದ ಮತ್ತು ಜುಲೈ 11 ರವರೆಗೂ ಮಳೆ ಇರಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿಗೆ ಜುಲೈ 10ರ ವರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಬೀದರ್, ಕಲ್ಬುರ್ಗಿ , ಯಾದಗಿರಿ ಜಿಲ್ಲೆಗೆ ಇಂದು ಯೆಲ್ಲೋ ಅಲರ್ಟ್ ನೀಡಿದ್ದು ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.
ಉಡುಪಿ: ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, 08.07.2024ರ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ 09.07.2024 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.