ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಿಬಿಐ ದಾಳಿ ಮೂಲಕ ನನ್ನನ್ನು ಬೆದರಿಸಲು ಯತ್ನಿಸುತ್ತಿದೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಚಾರ್ಜ್‌ಶೀಟ್ ಹಾಕಲು ಯತ್ನಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆರೋಪಿಸಿದ್ದಾರೆ.
“ನಾನು ಯಾವ ಟೆಂಟರ್‌ಅನ್ನು ರದ್ದುಗೊಳಿಸಿದ್ದೆನೋ, ಯಾವ ವಿಷಯ ಮತ್ತು ಭ್ರಷ್ಟಚಾರದ ಬಗ್ಗೆ ಪ್ರಧಾನಿಗೆ ಖುದ್ದಾಗಿ ನಾನೇ ತಿಳಿಸಿದ್ದೆನೋ ಅದೇ ಗುತ್ತಿಗೆ ಅಕ್ರಮದಲ್ಲಿ ನನ್ನನ್ನೇ ಸಿಲುಕಿಸಲು ಕೇಂದ್ರ ಸರ್ಕಾರ ಹವಣಿಸುತ್ತಿದೆ” ಎಂದು ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಸತ್ಯಪಾಲ್ ಮಲಿಕ್ ಅವರು 2018ರ ಆಗಸ್ಟ್ 23ರಿಂದ 2019ರ ಅಕ್ಟೋಬರ್ 30ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಆಗ, 2019ರಲ್ಲಿ, ಕಿಶ್ತ್ವಾರ್ ಜಿಲ್ಲೆಯಲ್ಲಿ ಹರಿಯುವ ಚೆನಾಬ್ ನದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಗುತ್ತಿಗೆಯನ್ನು ‘ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ಗೆ (ಸಿವಿಪಿಪಿಪಿಎಲ್) ನೀಡುವಲ್ಲಿ ಮತ್ತು ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ. ಯೋಜನೆಯ ಸಿವಿಲ್ ಕೆಲಸಗಳಿಗಾಗಿ ಖಾಸಗಿ ಕಂಪನಿಗೆ 2,200 ಕೋಟಿ ರೂ.ಗಳ ಒಪ್ಪಂದವನ್ನು ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು.
ಈ ಆರೋಪಗಳ ಕುರಿತು 2020ರಲ್ಲಿ, ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಯೋಜನೆಯನ್ನು ಮರು-ಟೆಂಡರ್ ಮಾಡಲು ಸಿವಿಪಿಪಿಪಿಎಲ್ ಮಂಡಳಿಯು ತೆಗೆದುಕೊಂಡ ನಿರ್ಧಾರವನ್ನು ಕಾರ್ಯಗತಗೊಳಿಸಲಾಗಿಲ್ಲ. ನಿಯಮ ಬಾಹಿರವಾಗಿ ಒಪ್ಪಂದವನ್ನು ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್‌ಗೆ ನೀಡಲಾಗಿದೆ. ಇದರಲ್ಲಿ, ಅಕ್ರಮ ನಡೆದಿದೆ ಎಂದು ಆರೋಪಿಸಿದೆ.
ಅಲ್ಲದೆ, ಸತ್ಯಪಾಲ್ ಮಲಿಕ್ ಅವರು ಯೋಜನೆಗೆ ಸಂಬಂಧಿಸಿದ ಎರಡು ಕಡತಗಳಿಗೆ ಸಹಿ ಹಾಕಲು 300 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದೂ ಸಿಬಿಐ ಆರೋಪಿಸಿತ್ತು.
ಇದೇ ಆರೋಪದ ಮೇಲೆ, 2025ರ ಫೆಬ್ರವರಿ 22ರಂದು ಮಲಿಕ್ ಅವರ ಮನೆ ಮತ್ತು ಇತರ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಇದೀಗ, ಕಳೆದ ತಿಂಗಳು ಮೇ 23ರಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಚರ್ಜ್‌ಶೀಟ್‌ನಲ್ಲಿ ಮಲಿಕ್ ಜೊತೆಗೆ, ಸಿವಿಪಿಪಿಪಿಎಲ್‌ನ ಮಾಜಿ ಅಧ್ಯಕ್ಷ ನವೀನ್ ಮಾರ್ ಚೌಧರಿ, ಎಂ.ಎಸ್. ಬಾಬು, ಎಂ.ಕೆ. ಮಿತ್ತಲ್, ಅರುಣ್ ಕುಮಾರ್ ಮಿಶ್ರಾ ಹಾಗೂ ನಿರ್ಮಾಣ ಸಂಸ್ಥೆ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್‌ನ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದೆ.
ತಮ್ಮ ನಿವಾಸಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದ್ದ ಸಂದರ್ಭದಲ್ಲಿ ಮಲಿಕ್ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೂತ್ರ ಸೋಂಕು ಮತ್ತು ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ಆರೋಗ್ಯ ಸುಧಾರಿಸುತ್ತಿದ್ದು, ತಮ್ಮ ಮೇಲಿನ ಆರೋಪಗಳು ಮತ್ತು ಸಿಬಿಐ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿವರಿಸಿದ್ದಾರೆ.
“ಅವರು (ಕೇಂದ್ರ ಸರ್ಕಾರ) ನನ್ನನ್ನು ಸಿಲುಕಿಸಲು ಬಯಸುತ್ತಿರುವ ಅಕ್ರಮ ಟೆಂಡರ್‌ಅನ್ನು ರಾಜ್ಯಪಾಲನಾಗಿದ್ದಾಗ ನಾನೇ ವೈಯಕ್ತಿಕವಾಗಿ ರದ್ದುಗೊಳಿಸಿದ್ದೆ. ಆ ವಿಷಯದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೂ ನಾನೇ ತಿಳಿಸಿದ್ದೆ. ಅವರಿಗೆ ತಿಳಿಸಿದ ನಂತರ, ನಾನೇ ಆ ಟೆಂಡರ್‌ಅನ್ನು ರದ್ದುಗೊಳಿಸಿದೆ. ಆ ಬಳಿಕ, ನನ್ನ ವರ್ಗಾವಣೆಯಾಯಿತು. ನನ್ನ ವರ್ಗಾವಣೆಯ ನಂತರ, ಆ ಟೆಂಡರ್‌ಅನ್ನು ಬೇರೊಬ್ಬರ ಸಹಿಯೊಂದಿಗೆ ಅನುಮೋದಿಸಲಾಗಿದೆ” ಎಂದು ಹೇಳಿದ್ದಾರೆ.
ಸದ್ಯ, ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ. ನಾನು ಬದುಕುಳಿಯುವೆನೋ ಅಥವಾ ಇಲ್ಲವೋ, ನನ್ನ ದೇಶದ ಒಡನಾಡಿಗಳಿಗೆ ಸತ್ಯವನ್ನು ಹೇಳಲು ಬಯಸುತ್ತೇನೆ – ನಾನು ರಾಜ್ಯಪಾಲನಾಗಿದ್ದಾಗ, ನನಗೆ 150 ರೂಪಾಯಿಯಿಂದ 150 ಕೋಟಿ ರೂ.ವರೆಗೆ ಲಂಚ ನೀಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ನಾನು ನನ್ನ ರಾಜಕೀಯ ಮಾರ್ಗದರ್ಶಕ, ದಿವಂಗತ ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಹಾದಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನನ್ನ ಬದ್ಧತೆಯನ್ನು ಎಂದಿಗೂ ಅಲುಗಾಡಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ನನ್ನನ್ನು ಕೆಣಕಲು, ನನ್ನ ಬಾಯಿ ಮುಚ್ಚಿಸಲು ಸರ್ಕಾರ ತನ್ನೆಲ್ಲ ಶಕ್ತಿಯನ್ನು ಬಳಸುತ್ತಿದೆ. ಕೊನೆಯಲ್ಲಿ, ಸರ್ಕಾರ ಮತ್ತು ಅದರ ಸಂಸ್ಥೆಗಳಿಗೆ ನನ್ನ ವಿನಂತಿ ಏನೆಂದರೆ, ದಯವಿಟ್ಟು ನನ್ನ ದೇಶದ ಪ್ರೀತಿಯ ಜನರಿಗೆ ಸತ್ಯವನ್ನು ಹೇಳಿ. ನನ್ನ ವಿರುದ್ಧ ನೀವು ನಡೆಸಿದ ತನಿಖೆಯಲ್ಲಿ ನಿಮಗೆ ಏನು ಸಿಕ್ಕತು, ಯಾವ ವಿಚಾರ ಗೊತ್ತಾಯಿತು ಎಲ್ಲವನ್ನೂ ಜನರಿಗೆ ತಿಳಿಸಿದೆ. ಆದಾಗ್ಯೂ, ಸತ್ಯವೆಂದರೆ, ನನ್ನ 50 ಕ್ಕೂ ಹೆಚ್ಚು ವರ್ಷಗಳ ರಾಜಕೀಯ ಜೀವನದಲ್ಲಿ ಉನ್ನತ ಹುದ್ದೆಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದೇನೆ. ಹೀಗಿದ್ದರೂ, ನಾನು ಇನ್ನೂ ಒಂದೇ ರೂಮ್ ಇರುವ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದೇನೆ. ಸಾಲದ ಹೊರೆಯೂ ಇದೆ. ಇಂದು ನನ್ನ ಬಳಿ ಸಂಪತ್ತು ಇದ್ದಿದ್ದರೆ, ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಮಲಿಕ್ ವಿರುದ್ಧ ಇಷ್ಟೊಂದು ದಾಳಿಗಳು ಯಾಕೆ ನಡೆಯುತ್ತಿವೆ? ಅದೂ ಮಲಿಕ್ ಅವರೇ ರದ್ದುಗೊಳಿಸಿದ್ದ ಮತ್ತು ಪ್ರಧಾನಿಯ ಗಮನಕ್ಕೆ ತಂದಿದ್ದ ಪ್ರಕರಣದಲ್ಲಿ ಅವರನ್ನೇ ಯಾಕೆ ಸಿಲುಕಿಸಲಾಗಿದೆ? ಅವರು ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿರುವ ಸಮಯಲ್ಲಿಯೂ ಸಿಬಿಐ ದಾಳಿ ಮಾಡಿದ್ದಾದರೂ ಯಾಕೆ? ಇದೆಲ್ಲದಕ್ಕೂ ಏಕೈಕ ಕಾರಣ, ಅವರು ಮೋದಿ ಸರ್ಕಾರದ ತಪ್ಪುಗಳನ್ನು ಕಠಿಣವಾಗಿ ಟೀಕಿಸಿರುವುದು.
ಈ ಲೇಖನ ಓದಿದ್ದೀರಾ?: ಲಡಾಖ್‌ನಲ್ಲಿ ಹೊಸ ನೀತಿಗಳ ಜಾರಿ; ಕೇಂದ್ರ ಸರ್ಕಾರ ಇಟ್ಟ ಮಹತ್ವದ ಹೆಜ್ಜೆಗಳೇನು?
ಸತ್ಯಪಾಲ್ ಮಲಿಕ್ ಅವರು 2019ರ ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. “ಪುಲ್ವಾಮ ದಾಳಿಯು ಸರ್ಕಾರದ ನಿರ್ಲಕ್ಷ್ಯ ಮತ್ತು ಸುರಕ್ಷಾ ವೈಫಲ್ಯದ ಫಲಿತಾಂಶವಾಗಿದೆ. ದಾಳಿಗೆ ಬಳಸಲಾದ 300 ಕೆ.ಜಿ RDX ಬಾಂಬ್‌ಅನ್ನು ಹೊತ್ತ ಕಾರು 10–15 ದಿನಗಳ ಕಾಲ ಕಾಶ್ಮೀರದ ರಸ್ತೆಗಳಲ್ಲಿಯೇ ಸಂಚರಿಸುತ್ತಿತ್ತು. ಆದರೆ ಯಾವುದೇ ಗುಪ್ತಚರ ಸಂಸ್ಥೆ ಅಥವಾ ಭದ್ರತಾ ಪಡೆಗಳು ಇದನ್ನು ಪತ್ತೆಹಚ್ಚಲಿಲ್ಲ. ಸಿಆರ್‌ಪಿಎಫ್ ಯೋಧರ ಪ್ರಯಾಣಕ್ಕೆ ವಿಮಾನ ಒದಗಿಸುವಂತೆ ಕೇಂದ್ರ ಗೃಹಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ನಿರಾಕರಿಸಿತು. ಪರಿಣಾಮವಾಗಿ, ಯೋಧರು ಭದ್ರತೆ ಇಲ್ಲದ ರಸ್ತೆಯಲ್ಲಿ ಪ್ರಯಾಣಿಸಬೇಕಾಯಿತು. ಇದರಿಂದ 40 ಯೋಧರು ಜೀವ ಕಳೆದುಕೊಂಡರು” ಎಂದು ಆರೋಪಿಸಿದ್ದರು.
ಅಲ್ಲದೆ, “ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಭದ್ರತಾ ವೈಫಲ್ಯವನ್ನು ಮರೆಮಾಚಿ, ದಾಳಿಯ ಸಂಪೂರ್ಣ ಹೊಣೆಗಾರಿಕೆಯನ್ನು ಪಾಕಿಸ್ತಾನದ ಮೇಲೆ ಹಾಕುವುದು ಇದರ ಉದ್ದೇಶವಾಗಿತ್ತು” ಎಂದು ಮಲಿಕ್ ಆರೋಪಿಸಿದ್ದರು.
ಮಲಿಕ್ ಅವರು ಮೋದಿ ಸರ್ಕಾರದ ವಿರುದ್ಧ ಈ ಗಂಭೀರ ಆರೋಪಗಳನ್ನು ಮಾಡಿದ್ದಕ್ಕಾಗಿಯೇ ಅವರ ವಿರುದ್ಧ ಭ್ರಷ್ಟಾಚಾರ ಆರೋಪ, ಪ್ರಕರಣ, ದಾಳಿಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಫೆಬ್ರವರಿಯಲ್ಲಿ ತಮ್ಮ ನಿವಾಸದ ಮೇಲೆ ಸಿಬಿಐ ನಡೆಸಿದ್ದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಮಲಿಕ್, “ನಾನು ರೈತನ ಮಗ. ಇಂತಹ ದಾಳಿಗಳಿಗೆ ಹೆದರುವುದಿಲ್ಲ” ಎಂದು ಹೇಳಿದ್ದರು. ಆಗ ಟ್ವೀಟ್ ಮಾಡಿದ್ದ ಅವರು, “ಭ್ರಷ್ಟಾಚಾರ ಎಸಗಿರುವ ಆರೋಪಿಗಳ ವಿರುದ್ಧ ನಾನು ದೂರು ನೀಡಿದ್ದೆ. ಆದರೆ, ಸಿಬಿಐ ಆ ಆರೋಪಿಗಳನ್ನು ಹುಡುಕುವ ಬದಲು ನನ್ನ ಮನೆಯ ಮೇಲೆ ದಾಳಿ ಮಾಡಿದೆ. ನನ್ನ ಮನೆಯಲ್ಲಿ 4-5 ಕುರ್ತಾ ಪೈಜಾಮಾಗಳನ್ನು ಹೊರತುಪಡಿಸಿ ಅವರಿಗೆ ಏನೂ ಸಿಗುವುದಿಲ್ಲ. ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವವರು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ನನ್ನನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ರೈತನ ಮಗ, ನಾನು ಇದೆಲ್ಲಕ್ಕೆ ಹೆದರುವುದಿಲ್ಲ, ತಲೆಬಾಗುವುದಿಲ್ಲ” ಎಂದಿದ್ದರು.
ಒಬ್ಬ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿ, ರಾಜಕಾರಣಿ ವಿರುದ್ಧ ಪುರಾವೆಗಳಿಲ್ಲದೆ ಆರೋಪಗಳನ್ನು ಮಾಡಲಾಗಿದೆ. ದಾಳಿಗಳು ನಡೆಯುತ್ತಿವೆ. ಅನಾರೋಗ್ಯದ ಸಮಯದಲ್ಲೂ ತೊಂದರೆ ನೀಡಲಾಗುತ್ತಿದೆ. ಇದೆಲ್ಲದರ ಹಿಂದಿನ ಹುನ್ನಾರ ಭಾರತದ ಪ್ರಜೆಗಳಾದ ನಮಗೆ ಅರ್ಥವಾಗದೇ ಇರದು.