ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಇಂದಿಗೆ (ಮೇ 20) ಎರಡು ವರ್ಷಗಳನ್ನು ಪೂರೈಸಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ನಾನಾ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮೆಚ್ಚುಗೆಯನ್ನೂ ಪಡೆದಿದೆ. ಅಂತೆಯೇ, ಮುಡಾ, ವಾಲ್ಮೀಕಿ ನಿಗಮ ಹಗರಣಗಳ ಆರೋಪಗಳನ್ನೂ ಎದುರಿಸಿ, ವಿವಾದಗಳಿಗೂ ಸಿಲುಕಿದೆ.
ಎರಡು ವರ್ಷಗಳ ಹಿಂದೆ, ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತ, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯ ವಿರುದ್ಧ ನಿರಂತರ ವಾಗ್ದಾಳಿ, ಪ್ರಚಾರಗಳನ್ನು ಮಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಸಿತು. ಸಂಘ-ಸಂಸ್ಥೆಗಳ ಬೆಂಬಲ, ಜನಮನ್ನಣೆಯೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿ, ಅಧಿಕಾರಕ್ಕೇರಿತು. ಇದೀಗ, ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ‘ಸಾಧನಾ ಸಮಾವೇಶ’ವನ್ನು ಮಂಗಳವಾರ ನಡೆಸಿದೆ.
ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸುವುದರ ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ (ಎರಡು ಅವಧಿ) 7 ವರ್ಷ ಪೂರ್ಣಗೊಳಿಸಿದ್ದಾರೆ. ಈ ಹಿಂದೆ, 7.7 ವರ್ಷ (2,790 ದಿನಗಳು) ಮುಗಿಸಿದ ಮುಖ್ಯಮಂತ್ರಿಯಾಗಿದ್ದ ಡಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ. ಜೊತೆಗೆ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕಳೆದ ಅವಧಿಗಿಂತ (2013-18) ಈ ಬಾರಿ ಕೊಂಚ ವಿರಾಮದಲ್ಲಿರುವಂತೆ ಕಾಣುತ್ತಿದ್ದಾರೆ.
ಅಂದಹಾಗೆ, ಕಾಂಗ್ರೆಸ್ ಸರ್ಕಾರದ ಅತ್ಯುತ್ತಮ, ಜನಪರ ಯೋಜನೆಗಳಲ್ಲಿ ಐದು ಗ್ಯಾರಂಟಿ ಯೋಜನೆಗಳದ್ದೇ ಅಗ್ರಸ್ಥಾನ. ಈ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರವು ಕಳೆದ ಎರಡು ವರ್ಷಗಳ ಅವಧಿಯಲ್ಲಿ 80,000 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿಕೊಂಡಿದೆ. ಹಾಗಾಗಿಯೇ, ‘ಸಾಧನಾ ಸಮಾವೇಶ’ವನ್ನು ‘ಗ್ಯಾರಂಟಿ ಸಮಾವೇಶ’, ‘ಖಾತರಿ ಸಮಾವೇಶ’ ಎಂದೂ ಕರೆಯಲಾಗುತ್ತಿದೆ.
ಬಡವರು, ಯುವಜನರು ಹಾಗೂ ಮಹಿಳೆಯರಿಗಾಗಿ ಜಾರಿಗೆ ಬಂದ ಗ್ಯಾರಂಟಿ ಯೋಜನೆಗಳು ಪರ-ವಿರೋಧ ಚರ್ಚೆಗಳು, ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಲೇ ಜನರಿಗೆ ದೊರೆಯುತ್ತಿವೆ. ಶಕ್ತಿ ಯೋಜನೆಯನ್ನು ಹೊರತುಪಡಿಸಿ, ಉಳಿದ ನಾಲ್ಕು – ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ – ಯೋಜನೆಗಳು ಆಗಾಗ್ಗೆ ತಾಂತ್ರಿಕ ಸಮಸ್ಯೆಯೂ ಸೇರಿದಂತೆ ನಾನಾ ಸವಾಲುಗಳನ್ನು ಎದುರಿಸಿವೆ. ವಿಳಂಬವನ್ನು ಕಂಡಿವೆ. ಆದಾಗ್ಯೂ, ಮುಂದುವರೆಯುತ್ತಿವೆ. ಫಲಾನುಭವಿಗಳ ನೆರವಿಗೆ ನಿಂತಿವೆ.
ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗಾಗಿ ಭಾರತೀಯ ಆಹಾರ ನಿಗಮದಿಂದ (FCI) ಹೆಚ್ಚುವರಿ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ಕೇಂದ್ರ ಸರ್ಕಾರದ ಅಡಿಯಲ್ಲಿರುವ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಆಹಾರ ಉತ್ಪನ್ನಗಳ ಕೊರತೆಯ ನೆಪವೊಡ್ಡಿ ಅಕ್ಕಿ ಪೂರೈಕೆಗೆ ನಿರಾಕರಿಸಿತು. ರಾಜ್ಯ ಸರ್ಕಾರವು ಅಕ್ಕಿಗಾಗಿ ವಿವಿಧ ರಾಜ್ಯಗಳ ಬಾಗಿಲು ಬಡಿಯಿತು. ಆದರೆ, ಅಧಿಕ ಪ್ರಮಾಣದ ಅಕ್ಕಿ ಪೂರೈಕೆಗೆ ಯಾವುದೇ ರಾಜ್ಯವೂ ಮುಂದೆ ಬರಲಿಲ್ಲ. ಪರಿಣಾಮವಾಗಿ, ರಾಜ್ಯ ಸರ್ಕಾರವು ರಾಜ್ಯದ ಪಡಿತರದಾರರಿಗೆ 10 ಕೆ.ಜಿ ಅಕ್ಕಿಯ ಬದಲು, 5 ಕೆ.ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿ ಅಕ್ಕಿಗೆ ಪರ್ಯಾಯವಾಗಿ ಹಣ ನೀಡಲು ಆರಂಭಿಸಿತು. ಇದೀಗ, ತನ್ನ ಗೋದಾಮಿನಲ್ಲಿ ಅಕ್ಕಿಯನ್ನು ಇಟ್ಟುಕೊಳ್ಳಲಾಗದೆ ಹೆಣಗಾಡುತ್ತಿರುವ ಮೋದಿ ಸರ್ಕಾರ, ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸುವುದಾಗಿ ಹೇಳಿದೆ.
ಆದಾಗ್ಯೂ, ಪ್ರತಿಯೊಬ್ಬ ಪಡಿತರದಾರರಿಗೆ ತಲಾ 5 ಕೆ.ಜಿ ಅಕ್ಕಿ ಸಾಕು, ಉಳಿದ 5 ಕೆ.ಜಿ ಅಕ್ಕಿ ಬದಲಿಗೆ ಕಾಳು, ಸಿರಿಧಾನ್ಯ ಸೇರಿದಂತೆ ಹೆಚ್ಚು ಪೋಷಕಾಂಶವುಳ್ಳ ಆಹಾರ ಉತ್ಪನ್ನಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಯೋಜಿಸಬೇಕು ಎಂದು ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು, ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಕಳ್ಳ ಬಂದ್ರೂ ಕಂದಾಯ ಗ್ರಾಮ ಹಕ್ಕುಪತ್ರ ಅಕ್ರಮಕ್ಕೆ ಅವಕಾಶವಿಲ್ಲ, ಇದು ಗ್ಯಾರಂಟಿ: ಸಚಿವ ಕೃಷ್ಣ ಬೈರೇಗೌಡ
ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು, ದುಡಿಮೆಯಲ್ಲಿ ಒಂದಷ್ಟು ಉಳಿತಾಯ ಮಾಡಲು ಸಹಾಯವಾಗುತ್ತಿದೆ. ಆದಾಗ್ಯೂ, ಮನೆಯ ಯಜಮಾನಿಗೆ ಮಾಸಿಕ 2,000 ರೂ. ಸಹಾಯಧನ ನೀಡುವ ʼಗೃಹಲಕ್ಷ್ಮಿʼ ಯೋಜನೆ ಆಗಾಗ್ಗೆ ವಿಳಂಬ ಎದುರಿಸುತ್ತಿದೆ. ಮೂರು/ನಾಲ್ಕು ತಿಂಗಳ ಕಾಲ ಹಣ ಪಾವತಿ ಆಗದೇ ಇರುವ ದೂರುಗಳು ರಾಜ್ಯಾದ್ಯಂತ ಕೇಳಿಬರುತ್ತಿವೆ. ಈ ಯೋಜನೆಯನ್ನು ಸಮರ್ಪಕವಾಗಿ, ನಿಯಮಿತವಾಗಿ ಮುನ್ನಡೆಸುವ ಅಗತ್ಯವಿದೆ.
ಅಂತೆಯೇ, ಗೃಹಜ್ಯೋತಿ ಯೋಜನೆಯೂ ನಾನಾ ತೊಡಕುಗಳನ್ನು ಎದುರಿಸುತ್ತಿದೆ. ವಿದ್ಯುತ್ ಸಂಪರ್ಕದಾರರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದರೂ, ಎರಡು ಅಥವಾ ಮೂರು ತಿಂಗಳಲ್ಲಿಯೇ ಗೃಹಜ್ಯೋತಿಯ ಯೋಜನೆಯ ಫಲಾನುಭವ ಸ್ಥಗಿತಗೊಂಡು, ಮತ್ತೆ ಹೆಚ್ಚು ವಿದ್ಯುತ್ ಶುಲ್ಕ ವಿಧಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಾದ ತುರ್ತು ಅಗತ್ಯವಿದೆ.
ಇಂತಹ ಸವಾಲುಗಳ ನಡುವೆಯೂ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ. ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದವರಿಗೆ ಉತ್ತರವಾಗಿ ಮುಂದುವರೆದಿವೆ. ರಾಜ್ಯದ ಆರ್ಥಿಕತೆಯೂ ಏರುಗತಿಯಲ್ಲಿದೆ.
ಈಗಲೂ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರವು ಇಂಧನ, ಮೋಟಾರು ವಾಹನ ನೋಂದಣಿ ಮತ್ತು ಮದ್ಯ ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ತೆರಿಗೆಗಳು ಮತ್ತು ಬೆಲೆಗಳನ್ನು ಹೆಚ್ಚಿಸುತ್ತಲೇ ಇದೆ ಎಂದು ವಿರೋಧ ಪಕ್ಷ ಬಿಜೆಪಿ-ಜೆಡಿಎಸ್ ಆರೋಪಿಸುತ್ತಿವೆ. ಆದರೆ, ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ. ರಾಜ್ಯಕ್ಕೆ ಕೇಂದ್ರವು ಸರಿಯಾಗಿ ತೆರಿಗೆ ಪಾಲು ನೀಡುತ್ತಿಲ್ಲ. ಪಾಲನ್ನು ಕಡಿತಗೊಳಿಸುತ್ತಿದೆ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ಕಡಿಮೆ ಮಾಡುತ್ತಿದೆ. ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗದ ಕಾರಣ, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್ ವಾದಿಸುತ್ತಿದೆ.
ಗ್ಯಾರಂಟಿ ಯೋಜನೆಗಳ ಯಶಸ್ಸಿನ ಆಚೆಗೂ ಸರ್ಕಾರವು ನಾನಾ ಸವಾಲು, ಹಿನ್ನಡೆ, ವಿವಾದಗಳನ್ನು ಎದುರಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದಲ್ಲಿ ಸಿದ್ದರಾಮಯ್ಯ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿತ್ತು. ಪಾದಯಾತ್ರೆ ನಡೆಸಿ, ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಜನಾಭಿಪ್ರಾಯ ರೂಪಿಸಿತು. ಈ ನಡುವೆ, ಪಾರ್ವತಿ ಅವರು ತಮ್ಮ ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದರು. ಮುಡಾ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿದ್ದು, ಯಾವುದೇ ಅಪರಾಧ ಕಂಡುಬಂದಿಲ್ಲವೆಂದು ʼಬಿ ರಿಪೋರ್ಟ್ʼ ಸಲ್ಲಿಸಿದೆ.
ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಿ ನಾಗೇಂದ್ರ ಅವರು ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಅವರ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ.
ಈ ಲೇಖನ ಓದಿದ್ದೀರಾ?: ಬಿಬಿಎಂಪಿ ಯುಗಾಂತ್ಯ: ಏನಿದು ಗ್ರೇಟರ್ ಬೆಂಗಳೂರು?
ಇನ್ನು, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದು, 2019ರ ಚುನಾವಣೆಯಿಂಂದ 8 ಸ್ಥಾನಗಳನ್ನು ಹೆಚ್ಚಿಸಿಕೊಂಡರೂ, ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲಾಗಲಿಲ್ಲ. ಆದಾಗ್ಯೂ, ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದು, ಯಶಸ್ಸು ಕಂಡಿತು. ಈ ಗೆಲುವಿಗೆ ಗ್ಯಾರಂಟಿ ಯೋಜನೆಗಳು ಕಾರಣವೆಂದು ಸಿದ್ದರಾಮಯ್ಯ ಹೇಳಿದರು.
ಇದೆಲ್ಲದರ ನಡುವೆ, ಬಿಬಿಎಂಪಿ ಮತ್ತು ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆದಿಲ್ಲ. ಬಿಜೆಪಿಯ ಹಾದಿಯಲ್ಲಿಯೇ ಕಾಂಗ್ರೆಸ್ ಸರ್ಕಾರ ಕೂಡ ವಿಳಂಬ ಧೋರಣೆ ಅನುಸರಿಸುತ್ತಿದೆ. ಒಳಮೀಸಲಾತಿ ಜಾರಿ, ಜಾತಿಗಣತಿ ವಿಚಾರದಲ್ಲೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ.
ಜೊತೆಗೆ, ಮುಖ್ಯಮಂತ್ರಿ ಬದಲಾವಣೆ, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಧಿಕಾರ ಹಂಚಿಕೆ ವಿಚಾರಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತಿವೆ. ಅಲ್ಲದೆ, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಕೂಡ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಓಡುತ್ತಿದ್ದಾರೆ. ಹಲವಾರು ಸಚಿವರು ಬಹಿರಂಗವಾಗಿ ಹೇಳಿಕೆ ಕೊಡುವುದು, ತಮ್ಮವರ ವಿರುದ್ಧವೇ ವಾಗ್ದಾಳಿ ನಡೆಸುವುದು ಕಂಡುಬರುತ್ತಿದೆ. ಇದೆಲ್ಲವೂ ಕಾಂಗ್ರೆಸ್ ಸರ್ಕಾರಕ್ಕೆ ಒಳಪೆಟ್ಟು ಕೊಡುತ್ತಿದೆ.
ಹಾಲಿನ್ ಬೆರೆ ಜಾಸ್ತಿ ಸ್ಟ್ಯಾಂಪ್ ಪೇಪರ್ ಜಾಸ್ತಿ. ಆಸ್ತಿ ತೆರಿಗೆ ಜಾಸ್ತಿ ಬಿಲ್ಲು ಜಾಸ್ತಿ, ವಾಟರ್ ಬಿಲ್ ಜಾಸ್ತಿ ದುರ್ಬಲ ಸರ್ಕಾರ ಕಾಂಗ್ರೆಸ್ ಸರ್ಕಾರ