ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ 15 ದಿನಗಳಲ್ಲಿಯೇ ಶಿವಸೇನೆ (ಯುಬಿಟಿ) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮೋದಿ ಸರ್ಕಾರವನ್ನು ಸೇರಲಿದ್ದಾರೆ ಎಂದು ಅಮರಾವತಿಯ ಸ್ವತಂತ್ರ ಶಾಸಕ ರವಿ ರಾಣಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೋದಿ ಅವರು ಮತ್ತೆ ಪ್ರಧಾನಿಯಾದ 15 ದಿನಗಳ ನಂತರ, ಉದ್ಧವ್ ಠಾಕ್ರೆ ಮೋದಿ ಸರ್ಕಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಯಾಕೆಂದರೆ ಮುಂಬರುವ ಯುಗ ಮೋದಿ ಮತ್ತು ಉದ್ಧವ್ ಠಾಕ್ರೆ ಅವರಿಗೆ ತಿಳಿದಿದೆ” ಎಂದಿದ್ದಾರೆ.
ಇನ್ನು ಜೂನ್ 4ರಂದು ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಒಳಗೊಂಡಿರುವ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರು ರಕ್ತದೊತ್ತಡದ ಔಷಧಗಳು ಮತ್ತು ವೈದ್ಯರನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಎಂದು ರವಿ ರಾಣಾ ಲೇವಡಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಅಂತ್ಯಗೊಳ್ಳುತ್ತಿದೆ ಮೋದಿ-ಶಾ ‘ಬ್ರಾಂಡ್’ ರಾಜಕಾರಣ; ಅದಕ್ಕೆ ಮಹಾರಾಷ್ಟ್ರವೇ ಸಾಕ್ಷಿ
ಅಮರಾವತಿಯ ಹಾಲಿ ಸಂಸದ ರವಿ ರಾಣಾ ಅವರ ಪತ್ನಿ ನವನೀತ್ ರಾಣಾ ಅವರು ಆಡಳಿತಾರೂಢ ಬಿಜೆಪಿ ಟಿಕೆಟ್ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2019ರಲ್ಲಿ, ನವನೀತ್ ರಾಣಾ ಅದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.
ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪತ್ನಿ ನವನೀತ್ ರಾಣಾ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ರಾಣಾ, ಸಮಾಜದ ಎಲ್ಲಾ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿರುವುದರಿಂದ ನವನೀತ್ ಮತ್ತೆ ಸಂಸದರಾಗಲಿದ್ದಾರೆ ಎಂದರು.
ಅಮರಾವತಿಯಲ್ಲಿ ನವನೀತ್ ರಾಣಾ ಅವರು ಕಾಂಗ್ರೆಸ್ ಶಾಸಕ ಬಲ್ವಂತ್ ವಾಂಖೆಡೆ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ದಿನೇಶ್ ಬಬ್ ವಿರುದ್ಧ ಕಣಕ್ಕಿಳಿದಿದ್ದಾರೆ. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿದ್ದಾಗ ಏಪ್ರಿಲ್ 2022ರಲ್ಲಿ ಹನುಮಾನ್ ಚಾಲೀಸಾ ಪಠಣದ ಬಗ್ಗೆ ರಾಣಾ ದಂಪತಿಗಳು ಎಂವಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.