ಯುಕೆ ಚುನಾವಣೆ | ಕೀರ್ ಸ್ಟಾರ್ಮರ್‌ ಆಡಳಿತದಲ್ಲಿ ಬದಲಾಗುವುದೇ ಬ್ರಿಟನ್?

Date:

Advertisements

ಬ್ರಿಟನ್‌ ಸಂಸತ್ತಿನ ಚುನಾವಣೆ ನಡೆದು, ಫಲಿತಾಂಶ ಹೊರಬಿದ್ದಿದೆ. 650 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬರೋಬ್ಬರಿ 412 ಸ್ಥಾನಗಳನ್ನು ಗೆಲ್ಲುವ ಮೂಲಕ ಲೇಬರ್ ಪಕ್ಷವು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವನ್ನು ಮಣಿಸಿದೆ. ಅಧಿಕಾರದಲ್ಲಿದ್ದು, ಕೇವಲ 121 ಸ್ಥಾನಗಳ ಗೆದ್ದಿರುವ ನಿರ್ಗಮಿತ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ತೀವ್ರ ಮುಖಭಂಗ ಅನುಭವಿಸಿದೆ. ಲೇಬರ್ ಪಕ್ಷದ ಕೀರ್ ಸ್ಟಾರ್ಮರ್‌ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಹುದ್ದೆಗೆ ಅವರನ್ನು ರಾಜ ಚಾರ್ಲ್ಸ್‌-3 ಆಹ್ವಾನಿಸಿದ್ದಾರೆ.

ಬ್ರಿಟನ್ ಚುನಾವಣಾ ಇತಿಹಾಸದಲ್ಲಿ ಕಾರ್ಮಿಕ ಪರವಾದ ಹಕ್ಕು, ನೀತಿ-ನಿರೂಪಣೆಗಳೊಂದಿಗೆ ಹೋರಾಟ ನಡೆಸುವ ಮೂಲಕ 1906ರಲ್ಲಿ ರಚನೆಯಾದ ಲೇಬರ್ ಪಕ್ಷವು ಎಡಪಂಥೀಯ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿತ್ತು. ಪಕ್ಷವು 1924ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿತ್ತು. ಇದೀಗ, ಮೊದಲ ಬಾರಿಗೆ ಅಧಿಕಾರಕ್ಕೇರಿದ್ದ 100ನೇ ವರ್ಷದ ಸಂಭ್ರಮದ ನಡುವೆಯೇ ಪಕ್ಷವು ಮತ್ತೆ ಅಧಿಕಾರಕ್ಕೇರಿದೆ. ಆದರೆ, ಶತಮಾನದ ಹಿಂದಿನ ಲೇಬರ್ ಪಕ್ಷಕ್ಕೂ ಈಗಿನ ಲೇಬರ್ ಪಕ್ಷಕ್ಕೂ ಭಾರೀ ಬದಲಾವಣೆಗಳಿವೆ. ಪಕ್ಷವು ತನ್ನ ಸಿದ್ದಾಂತ, ಧೋರಣೆಗಳನ್ನೇ ಬದಲಿಸಿಕೊಂಡಿದೆ. ಬಲಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದೆ. ಅಂತಹ ಚಿಂತನೆಗಳನ್ನು ಪಕ್ಷದೊಳಗೆ ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೀರ್ ಸ್ವಾರ್ಮರ್ ಈಗ ಪ್ರಧಾನಿಯಾಗುತ್ತಿದ್ದಾರೆ.

14 ವರ್ಷಗಳ ನಿರಂತರ ಅಧಿಕಾರ ನಡೆಸಿದ್ದ ಕನ್ಸರ್ವೇಟಿವ್ ಪಕ್ಷವು ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ನೇತೃತ್ವದ ಹೋರಾಟದಲ್ಲಿ ಸೋಲುಂಡಿದೆ. ಬಹುಶಃ ರಿಷಿ ಅವರ ರಾಜಕೀಯವೂ ಇಲ್ಲಿಗೆ ಕೊನೆಗೊಳ್ಳಬಹುದು ಎನ್ನಲಾಗುತ್ತಿದೆ. ಅಲ್ಲದೆ, ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂಬ ಮಾತುಗಳೂ ಇವೆ.

Advertisements

ಅಂದಹಾಗೆ, 2015ರಿಂದ ಬ್ರಿಟನ್‌ ಸಂಸತ್ ಸದಸ್ಯರಾಗಿದ್ದ ರಿಷಿ ಸುನಕ್, ಮೋದಿಯಂತೆಯೇ ಬಲಪಂತೀಯವಾದಿ. ಅವರು, 2020ರಲ್ಲಿ ಬೋರಿಸ್‌ ಜಾನ್ಸನ್‌ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದರು. ಅದೇ ಸಮಯದಲ್ಲಿ ಎದುರಾದ ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಸರ್ಕಾರದಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಜಾನ್ಸನ್‌ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ, ಸುನಕ್ ಪ್ರಧಾನಿಯಾದರು.

ಆ ನಂತರದಲ್ಲಿ, 2023ರಲ್ಲಿ 5 ಆದ್ಯತಾ ಅಂಶಗಳನ್ನು ಪ್ರಕಟಿಸಿದರು. ಹಣದುಬ್ಬರ ಕಡಿಮೆ ಮಾಡುವುದು, ಆರ್ಥಿಕತೆಯನ್ನು ಬೆಳೆಸುವುದು, ಸರ್ಕಾರದ ಸಾಲವನ್ನು ಕಡಿತಗೊಳಿಸುವುದು, ರಾಷ್ಟ್ರೀಯ ಆರೋಗ್ಯ ಸೇವೆಗಳನ್ನು ಸುಧಾರಿಸುವುದು ಹಾಗೂ ವಲಸಿಗರ ಅಕ್ರಮ ಪ್ರವೇಶವನ್ನು ತಡೆಯುವುದು ತಮ್ಮ ಆದ್ಯತೆಗಳೆಂದು ಘೋಷಿಸಿದ್ದರು. ಅಲ್ಲದೆ, ರಷ್ಯಾ-ಉಕ್ರೇನ್ ಯುದ್ದದಲ್ಲಿ ಉಕ್ರೇನ್‌ಗೆ ವಿದೇಶಿ ನೆರವು ಮತ್ತು ಶಸ್ತ್ರಾಸ್ತ್ರ ಪೂರೈಕೆ ಮಾಡಿದರು. ಆದರೆ, ಇಸ್ರೇಲ್-ಹಮಾಸ್ ಯುದ್ಧದ ವೇಳೆ, ಇಸ್ರೇಲ್‌ಗೆ ತಮ್ಮ ಬೆಂಬಲ ನೀಡಿ, ಪ್ಯಾಲೆಸ್ತೀನ್ ಮೇಲಿನ ಇಸ್ರೇಲಿ ದಾಳಿಯನ್ನು ಸಮರ್ಥಿಸಿಕೊಂಡರು. ಬಳಿಕ, ಕದನ ವಿರಾಮಕ್ಕೆ ಕರೆ ಕೊಟ್ಟಿದ್ದರು.

ಇದೆಲ್ಲದರ ನಡುವೆಯೂ, ಅವರ ಆದ್ಯತೆಯ ಘೋಷಣೆಗಳಲ್ಲಿ ಬ್ರಿಟನ್ ಸರ್ಕಾರ ಪ್ರಗತಿ ಸಾಧಿಸಲಿಲ್ಲ. ಮಾತ್ರವಲ್ಲದೆ, ಜನರ ಅಗತ್ಯಗಳನ್ನು ಪೂರೈಸಲಿಲ್ಲ. ಸುನಕ್ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದ ಬ್ರಿಟನ್ ಜನರು, 14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತಕ್ಕೆ ಅಂತ್ಯ ಹಾಡಿದ್ದಾರೆ. ಲೇಬರ್ ಪಕ್ಷಕ್ಕೆ ಅಭೂತಪೂರ್ವ ಸ್ಥಾನಗಳನ್ನು ನೀಡುವ ಮೂಲಕ ಅಧಿಕಾರ ಕೊಟ್ಟಿದ್ದಾರೆ.

ಆದರೆ, ಇಡೀ ಜಗತ್ತು ಗಮನಿಸುತ್ತಿರುವಂತೆ ಲೇಬರ್ ಪಕ್ಷವು ಈಗ ಹೆಸರಿಗಷ್ಟೇ ಕಾರ್ಮಿಕ ಪಕ್ಷವಾಗಿದೆ. 2010ರಲ್ಲಿ ಅಧಿಕಾರ ಕಳೆದುಕೊಳ್ಳುವುದಕ್ಕೂ ಮುನ್ನವೇ ಪಕ್ಷವು ಉದಾರವಾದಿ, ಬಂಡವಾಳಶಾಹಿ ಪರವಾದ ನಿಲುವುಗಳನ್ನು ಮೈಗೂಡಿಸಿಕೊಂಡಿತ್ತು. ಆ ಕಾರಣದಿಂದಲೇ ಬ್ರಿಟನ್ ಜನರು ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿದ್ದರು. ಅದರಲ್ಲೂ, ಕೀರ್ ಸ್ಟಾರ್ಮರ್ ನಾಯಕತ್ವದಲ್ಲಿ ಪಕ್ಷವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಬಲಪಂಥೀಯ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದೆ.

ಲಂಡನ್‌ನಲ್ಲಿ ವಕೀಲರಾಗಿದ್ದ ಕೀರ್ ಸ್ಟಾರ್ಮರ್‌, ಈಗ ಬ್ರಿಟನ್‌ನ ನೂತನ ಪ್ರಧಾನಿ. ಸ್ಟಾರ್ಮರ್‌ ಕೂಡ ಬಲಪಂಥೀಯವಾದಿ. ಅವರು ಹಮಾಸ್ ಮೇಲಿನ ಇಸ್ರೇಲಿನ ನರಹಂತಕ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದವರು. ಆರ್ಥಿಕ ನೀತಿಗಳಲ್ಲಿ ಕಾರ್ಪೊರೇಟ್ ಪರ ನೀತಿ-ನಿರೂಪಣೆಗಳ ಪ್ರತಿಪಾದಕರು. ಮಾತ್ರವಲ್ಲದೆ, ಅಸಹಾಯಕ ವಲಸಿಗರನ್ನು ದೇಶದಿಂದ ಹೊರಹಾಕಲೇಬೇಕು ಎನ್ನುವ ಪ್ರಬಲ ಬಿಳಿಯ ‘ರಾಷ್ಟ್ರವಾದಿ’.

ಇತ್ತೀಚೆಗೆ, ಮೇ 28ರಂದು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದ ಸ್ಟಾರ್ಮರ್‌, ‘ನಾನು ಲೇಬರ್ ಪಕ್ಷವನ್ನು ಬದಲಾಯಿಸಿದ್ದೇನೆ. ಮುಂದೆ, ಬ್ರಿಟನ್ಅನ್ನು ಬದಲಾಯಿತ್ತೇನೆ’ ಎಂದು ಬರೆದುಕೊಂಡಿದ್ದರು. ಅಂದರೆ, ಕಾರ್ಮಿಕ, ಜನಪರವಾಗಿದ್ದ ಪಕ್ಷವನ್ನು ಬಂಡವಾಳ, ಬಲಪಂಥೀಯ ಸಿದ್ಧಾಂತಗಳೊಂದಿಗೆ ಬದಲಿಸಿರುವ ಸ್ಟಾರ್ಮರ್‌, ಜನಪರವಾಗಿದ್ದವರನ್ನು ಪಕ್ಷದಿಂದ ಹೊರಗಟ್ಟಿದ್ದಾರೆ.

ಈ ವರದಿ ಓದಿದ್ದೀರಾ?: ಅಮೆರಿಕದ ಕಾಲೇಜುಗಳ ವಿದೇಶಿ ವಿದ್ಯಾರ್ಥಿಗಳಿಗೆ ಗ್ರೀನ್ ಕಾರ್ಡ್: ಡೊನಾಲ್ಡ್ ಟ್ರಂಪ್ ಭರವಸೆ

ಚುನಾವಣೆ ಸಮಯದಲ್ಲಿ ಅಭಿವೃದ್ಧಿ, ಆರೋಗ್ಯ, ಹಸಿರು ಇಂಧನ, ಶಿಕ್ಷಣ ಕ್ಷೇತ್ರ ಸುಧಾರಣೆ ಹಾಗೂ ಅಪರಾಧ ಚಟುವಟಿಕೆಗಳ ನಿಯಂತ್ರಣ – ಎಂಬ ಐದು ಸೂತ್ರಗಳನ್ನು ಮುಂದಿಟ್ಟುಕೊಂಡು ಸ್ಟಾರ್ಮರ್‌ ಪ್ರಚಾರ ನಡೆಸಿದ್ದರು. ಆದರೆ, ರೇಲ್ವೆ, ಮೇಲ್, ಇಂಧನ, ಜಲ ಸಂಪನ್ಮೂಲ ಎಲ್ಲವನ್ನೂ ರಾಷ್ಟ್ರೀಕರಣಗೊಳಿಸುವುದಾಗಿ ಹೇಳುತ್ತಿದ್ದ ಲೇಬರ್ ಪಕ್ಷದ ಪ್ರಣಾಳಿಕೆಯಲ್ಲಿ ಕೇವಲ ರೇಲ್ವೆ ಮಾತ್ರ ರಾಷ್ಟ್ರೀಕರಣಗೊಳಿಸಲಾಗುವುದೆಂದು ಹೇಳುವ ಮೂಲಕ, ಉಳಿದೆಲ್ಲ ಕ್ಷೇತ್ರಗಳನ್ನು ಕೈಬಿಟ್ಟಿದ್ದರು. ಅಲ್ಲದೆ, ಅತಿ ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸುವುದಾಗಿ ಹೇಳುತ್ತಿದ್ದ ಪಕ್ಷದ ನಿಲುವು ಸ್ಟಾರ್ಮರ್‌ ನೇತೃತ್ವದಲ್ಲಿ ಬದಲಾಗಿದೆ. ಲೇಬರ್ ಪಕ್ಷದಲ್ಲಿದ್ದ ಎಡಪಂಥೀಯ ಅಭ್ಯರ್ಥಿಗಳನ್ನು ಸ್ಟಾರ್ಮರ್‌ ಹೊರದಬ್ಬಿದ್ದಾರೆ.

ಎಡಪಂಥೀಯ ಸಿದ್ಧಾಂತವನ್ನು ಹೊಂದಿದ್ದ ಲೇಬರ್ ಪಕ್ಷದ ನಿಲುವನ್ನೇ ಬದಲಿಸಿರುವ, ಸೈದ್ಧಾಂತಿಕ ಬದ್ದತೆಯಿಲ್ಲದ ಸ್ಟಾರ್ಮರ್‌ ಆಡಳಿತದಲ್ಲಿ ಬ್ರಿಟನ್‌ನ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಬರುವುದಿಲ್ಲ. NATOದೊಂದಿಗೆ ಬ್ರಿಟನ್ ಮುಂದುವರೆಯುತ್ತದೆ. ಯುರೋಪಿಯನ್ ಒಕ್ಕೂಟಕ್ಕೆ ಬ್ರಿಟನ್‌ ಮರುಸೇರ್ಪಡೆಯಾಗುವುದಿಲ್ಲ. ಹೆಸರಿಗಷ್ಟೇ ಎಡಪಂಥೀಯ ಪಕ್ಷವಾಗಿರುವ ಲೇಬರ್ ಪಕ್ಷದ ಆಡಳಿತದಲ್ಲೂ ಬ್ರಿಟನ್ ಜನರ ಬದುಕು ಬದಲಾಗುವುದಿಲ್ಲ ಎಂಬುದು ಬ್ರಿಟನ್ ಜನರಿಂದಲೇ ಹೊರಬರುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X