ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಖಲಿಸ್ತಾನಿ ಬೆಂಬಲಿಗರು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದಿರುವ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಖಲಿಸ್ತಾನಿಗಳ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಇತ್ತೀಚೆಗೆ ಮಾಡಿದ ಆರೋಪದ ನಡುವೆಯೇ ಈ ಘಟನೆ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಖಲಿಸ್ತಾನ್ ಪರ ಕಾರ್ಯಕರ್ತರೊಬ್ಬರು ದೊರೈಸ್ವಾಮಿ ಅವರನ್ನು ಆಲ್ಬರ್ಟ್ ಡ್ರೈವ್‌ನಲ್ಲಿರುವ ಗ್ಲಾಸ್ಗೋ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆಯುತ್ತಿರುವುದು ಕಂಡುಬಂದಿದೆ.
ಗುರುದ್ವಾರದ ವ್ಯವಸ್ಥಾಪನಾ ಸಮಿತಿಯು ಭಾರತೀಯ ಹೈಕಮಿಷನರ್ ಅವರನ್ನು ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಲು ತೆರಳಿದ್ದ ವೇಳೆ ಈ ಬೆಳವಣಿಗೆ ನಡೆದಿದೆ.
ಅಲ್ಲದೇ, ವಿಡಿಯೋದಲ್ಲಿ ಗುರುದ್ವಾರ ವ್ಯವಸ್ಥಾಪಕ ಸಮಿತಿಯ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿರುವುದು ಕೂಡ ದಾಖಲಾಗಿದೆ.
ಈ ಬಗ್ಗೆ ಭಾರತವು ತಕ್ಷಣ ಪ್ರತಿಕ್ರಿಯೆ ನೀಡಿಲ್ಲದಿದ್ದರೂ, ಹೈಕಮಿಷನರ್ ಅವರ ಭದ್ರತೆಗೆ ಸಂಬಂಧಿಸಿದ್ದಾಗಿರುವುದರಿಂದ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ “ಭಾರತದ ಸರ್ಕಾರಿ ಏಜೆಂಟರು” ಶಾಮೀಲಾಗಿದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ ನಂತರ ಭಾರತ-ಕೆನಡಾ ನಡುವಿನ ಸಂಬಂಧ ಹಳಸಿದೆ. ಟ್ರುಡೊ ಅವರ ಆರೋಪಗಳನ್ನು “ಅಸಂಬದ್ಧ” ಎಂದು ತಿರಸ್ಕರಿಸಿದ್ದ ಭಾರತವು, ಕೆನಡಾ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿತ್ತು.