ಬೆಂಗಳೂರಿನಲ್ಲಿ ಇಂದಿನಿಂದ(ಜುಲೈ 17) ಆರಂಭಗೊಂಡಿರುವ ಎರಡು ದಿನಗಳ ವಿಪಕ್ಷಗಳ ಮಹಾ ಒಗ್ಗಟ್ಟಿನ ಸಭೆಯಲ್ಲಿ ಸಂಯುಕ್ತ ಪ್ರಜಸತ್ತಾತ್ಮಕ ಒಕ್ಕೂಟ (ಯುಪಿಎ) ಹೆಸರು ಬದಲಾವಣೆಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಈ ಬಗ್ಗೆ ಪಕ್ಷವು ಕೇವಲ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಸಭೆಯಲ್ಲಿ ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾವು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದನ್ನು ಕಾಂಗ್ರೆಸ್ ಮಾತ್ರ ನಿರ್ಧರಿಸುತ್ತಿಲ್ಲ ಆದ ಕಾರಣ ಚರ್ಚಿಸಲಿರುವ ವಿಷಯಗಳೇನು ಎಂಬುದನ್ನು ಈಗ ಹೇಳುವುದಿಲ್ಲ. ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಕುಳಿತು ಒಗ್ಗಟ್ಟಿನಿಂದ ತೀರ್ಮಾನಿಸುತ್ತೇವೆ” ಎಂದು ತಿಳಿಸಿದರು.
ಕಾಂಗ್ರೆಸ್, ಟಿಎಂಸಿ, ಆರ್‌ಜೆಡಿ, ಜೆಡಿಯು, ಎಎಪಿ ಸೇರಿದಂತೆ 20 ಕ್ಕೂ ಹೆಚ್ಚು ಪಕ್ಷಗಳ ನಾಯಕರು ಪಾಲ್ಗೊಳ್ಳುವ ಸಾಧ್ಯತೆಯಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 2004 ರಿಂದ 2014 ರವರೆಗೆ ಎರಡು ಅವಧಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಸೋನಿಯಾ ಗಾಂಧಿ ಮೈತ್ರಿಕೂಟದ ಅಧ್ಯಕ್ಷರಾಗಿದ್ದರು.
ಸಭೆಯಲ್ಲಿ ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮೈತ್ರಿಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸೇರಿದಂತೆ ರ್‍ಯಾಲಿಗಳು, ಸಮಾವೇಶಗಳು ಮತ್ತು ಆಂದೋಲನಗಳನ್ನು ಒಳಗೊಂಡಿರುವ ವಿರೋಧ ಪಕ್ಷಗಳ ಜಂಟಿ ಪ್ರಚಾರ ಕಾರ್ಯಕ್ರಮವನ್ನು ರೂಪಿಸಲು ಉಪ ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ.
ಈ ಸುದ್ದಿ ಓದಿದ್ದೀರಾ? ಜೈಶಂಕರ್, ಡೆರಿಕ್ ಓಬ್ರಿಯಾನ್ ಸೇರಿ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಲಿರುವ 11 ಮಂದಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದೊಂದಿಗೆ ಸಭೆ ಪ್ರಾರಂಭವಾಗಲಿದ್ದು, ಸಭೆಯ ನಂತರ ಸಂಜೆ 4 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಲಾಗಿದೆ.
2024 ರ ಲೋಕಸಭೆ ಚುನಾವಣೆಗೆ ಮುನ್ನ ಒಗ್ಗಟ್ಟನ್ನು ರೂಪಿಸಲು ವಿರೋಧ ಪಕ್ಷಗಳ ಮೊದಲ ಸಭೆಯು ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ನಡೆಯಿತು. ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ ಎರಡನೇ ಸಭೆ ಇದಾಗಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಜಿಸಿರುವ ಔತಣಕೂಟ ಸೋಮವಾರ ನಡೆಯಲಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಾಳೆ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಒಗ್ಗಟ್ಟಿನ ಸಭೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಕಳೆದ ತಿಂಗಳು ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ ನಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ದಿಗ್ಭ್ರಮೆಗೊಂಡಿದೆ. ಪಾಟ್ನಾದ ಸಭೆಯ ನಂತರ ಪ್ರಧಾನಿ ಇದ್ದಕ್ಕಿದ್ದಂತೆ ಎನ್‌ಡಿಎ ಬಗ್ಗೆ ಯೋಚಿಸುತ್ತಿದ್ದಾರೆ. ಎನ್‌ಡಿಎಗೆ ಹೊಸ ಜೀವ ತುಂಬುವ ಪ್ರಯತ್ನಗಳು ನಡೆಯುತ್ತಿವೆ. ಇದ್ದಕ್ಕಿದ್ದಂತೆ, ನಾಳೆ(ಜುಲೈ 18) ಎನ್‌ಡಿಎ ಸಭೆ ಕರೆಯಲಾಗಿದೆ ಎಂದು ವರದಿಯಾಗಿದೆ. ಇದು ಪಾಟ್ನಾದಲ್ಲಿ ನಡೆದ ಸಭೆಯ ಫಲಿತಾಂಶವಾಗಿದೆ” ಎಂದು ಹೇಳಿದರು.