- ಪ್ರಧಾನಿ ಮತ್ತು ಕೇಂದ್ರ ವಿದೇಶಾಂಗ ಸಚಿವರಿಗೆ ಧನ್ಯವಾದ ತಿಳಿಸಿದ ಸಂಸದ
- ಹಿಂದಿನ ಕೇಂದ್ರ ಸರ್ಕಾರಗಳು ಸರಿಯಾದ ಪ್ರಯತ್ನವನ್ನೇ ಮಾಡಿರಲಿಲ್ಲ
ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಬೆಂಗಳೂರಿಗರ ಬೇಡಿಕೆಯಾಗಿದ್ದ ಅಮೆರಿಕ ದೂತವಾಸ ಕಚೇರಿ ರಚನೆ, ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯಿಂದ ಸಾಧ್ಯವಾಗಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಬೆಂಗಳೂರು ಮತ್ತು ಅಹ್ಮದಾಬಾದ್‌ನಲ್ಲಿ ಹೊಸದಾಗಿ ದೂತವಾಸ ಕಚೇರಿ ಆರಂಭಿಸುವುದಾಗಿ ಅಮೆರಿಕ ಘೋಷಿಸಿದೆ. ಹೀಗಾಗಿ, ಬಿಜೆಪಿಯ ರಾಜ್ಯ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲೇ ಅಲ್ಲಿನ ಸರ್ಕಾರ ಈ ಘೋಷಣೆ ಮಾಡಿರುವುದು ಖುಷಿ ತಂದಿದೆ. ಇದರೊಂದಿಗೆ, ಕನ್ನಡಿಗರ ಬಹುದಿನಗಳ ಕನಸೊಂದು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದರು.
ಬೆಂಗಳೂರು ನಮ್ಮ ದೇಶದ ಐಟಿ ಕ್ಷೇತ್ರದ ರಾಜಧಾನಿ ಕೂಡ. ಶೇ.45ರಷ್ಟು ಭಾಗ ಬೆಂಗಳೂರು ನಗರವೇ ಮಾಡುತ್ತದೆ. ಇಡೀ ದಕ್ಷಿಣ ಭಾರತದ ರಾಜ್ಯಗಳ ನಗರಗಳ ಪೈಕಿ ಬೆಂಗಳೂರಿನಿಂದಲೇ ಅತಿ ಹೆಚ್ಚು ಅಮೆರಿಕಕ್ಕೆ ಪ್ರಯಾಣ ಮಾಡುತ್ತಿರುವುದು ಕೂಡ ಬೆಂಗಳೂರಿನಿಂದ. ಹೀಗಿರುವಾಗ, ಸಹಜವಾಗಿ ಇಲ್ಲೇ ಅಮೆರಿಕ ರಾಯಭಾರ ಕಚೇರಿ ಇರಬೇಕಿತ್ತು. ಆದರೆ ಹಿಂದಿನ ಕೇಂದ್ರ ಸರ್ಕಾರಗಳು ಸರಿಯಾದ ಪ್ರಯತ್ನವನ್ನೇ ಮಾಡಿರಲಿಲ್ಲ. ಆ ಕಾರಣಕ್ಕಾಗಿ ಇದು ಸಾಧ್ಯವಾಗಿರಲಿಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.
2004ರಿಂದ 2014ರವರೆಗೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹೈದ್ರಾಬಾದ್, ಕಲ್ಕತ್ತಾ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಅಮೆರಿಕ ದೂತವಾಸ ಕಚೇರಿ ಪ್ರಾರಂಭವಾಗಿದ್ದರೂ ಕೂಡ, ಬೆಂಗಳೂರಿನಲ್ಲಿ ಪ್ರಾರಂಭ ಆಗಿರಲಿಲ್ಲ. ಬೆಂಗಳೂರಿನ ಮಂದಿ ಅಮೆರಿಕದ ವೀಸಾಕ್ಕಾಗಿ ಚೆನ್ನೈ, ಹೈದ್ರಾಬಾದ್, ಕಲ್ಕತ್ತಾ, ದೆಹಲಿಗೋ ಹೋಗುವ ಅನಿವಾರ್ಯವಿತ್ತು. ಇದರಿಂದ ಅವರಿಗೆ 25ರಿಂದ 35 ಸಾವಿರ ಖರ್ಚಾಗುತ್ತಿತ್ತು ಎಂದು ಸಂಸದರು ಮಾಹಿತಿ ನೀಡಿದರು.
ಮೋದಿಯವರ ಅಮೆರಿಕ ಭೇಟಿಯ ವೇಳೆ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿಯನ್ನು ಸ್ಥಾಪಿಸುವ ಬಗ್ಗೆ ಅಮೆರಿಕ ಒಪ್ಪಿದೆ. ಸಾವಿರಾರು ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಮತ್ತು ಐಟಿ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿಗೆ ಇದು ಇನ್ನಷ್ಟು ನೆರವಾಗಲಿದೆ. ಇದರಿಂದ ಲಕ್ಷಾಂತರ ಕನ್ನಡಿಗರಿಗೆ ಮತ್ತು ನಮ್ಮ ನಗರಕ್ಕೆ ಸಹಾಯವಾಗಲಿದೆ. ಇದಕ್ಕಾಗಿ ಶ್ರಮಿಸಿದ ಪ್ರಧಾನಿ ಮೋದಿ ಮತ್ತು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಸಂಸದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದರು.