ಉತ್ತರ ಪ್ರದೇಶದ ಬರೇಲಿಯಲ್ಲಿ 14 ವರ್ಷದ ಇಬ್ಬರು ವಿದ್ಯಾರ್ಥಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಪೋಸ್ಟ್ ಮತ್ತು ಕಮೆಂಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಶುಕ್ರವಾರ ಮಧ್ಯರಾತ್ರಿ ಬಂಧಿಸಲಾಗಿದೆ. ಬಂಧಿತ ಬಾಲಕರು ವಿಭಿನ್ನ ಧರ್ಮಗಳಿಗೆ ಸೇರಿದವರು ಎಂದು ತಿಳಿದುಬಂದಿದೆ.
ಗುರುವಾರ, ಉತ್ತರ ಪ್ರದೇಶದ ಬರೇಲಿ ನಿವಾಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದ. ಅದಕ್ಕೆ ಆತನ ಸಹಪಾಠಿ ಶುಕ್ರವಾರ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಕಮೆಂಟ್ ಮಾಡಿದ್ದ. ತಮ್ಮ ಸಮುದಾಯವನ್ನು ಅವಹೇಳನ ಮಾಡಿದ್ದ ಬಾಲಕನನ್ನು ಬಂಧಿಸುವಂತೆ ಅಲ್ಪಸಂಖ್ಯಾತ ಸಮುದಾಯದ ನೂರಾರು ಮಂದಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಬಾಲಕ ಮನೆಯ ಬಳಿಯೂ ಪ್ರತಿಭಟನೆ ನಡೆಸಿದ್ದರು. ಕಲ್ಲುತೂರಾಟ ಕೂಡ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಬಾಲಕನ ಮನೆಯ ಬಳಿಗೆ ಧಾವಿಸಿದ ಪೊಲೀಸರು ಅಲ್ಲಿ ನೆರೆದಿದ್ದ ಗುಂಪನ್ನು ಚದುರಿಸಿದ್ದಾರೆ. ಪ್ರತಿಭಟನಾಕಾರರು ಬರೇಲಿಯಲ್ಲಿರುವ ರಾಮಲೀಲಾ ಮೈದಾನದಲ್ಲಿ ಧರಣಿ ಕುಳಿತು, ಬಾಲಕನನ್ನು ಬಂಧಿಸುವವರೆಗೂ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಬಳಿಕ, ಶುಕ್ರವಾರ ಮಧ್ಯರಾತ್ರಿ ಬಾಲಕನನ್ನು ಬಂಧಿಸಿದ್ದು, ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಪೊಲೀಸರು ಅಲ್ಪಸಂಖ್ಯಾತ ಸಮುದಾಯದ ಬಾಲಕನನ್ನೂ ಬಂಧಿಸಿದ್ದಾರೆ.
“ಕೋಮು ಭಾವನೆಗೆ ಧಕ್ಕೆ ತರುವ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದೇವೆ. ಶಾಂತಿಯನ್ನು ಖಾತ್ರಿಪಡಿಸಲು ಬರೇಲಿಯಲ್ಲಿ ಸಾಕಷ್ಟು ಪೊಲೀಸರು ಮತ್ತು ಪ್ರಾಂತೀಯ ಸಶಸ್ತ್ರ ಪಡೆಯನ್ನು (ಪಿಎಸಿ) ನಿಯೋಜಿಸಲಾಗಿದೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ರಾಕೇಶ್ ಸಿಂಗ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದಾಭೋಲ್ಕರ್, ಪನ್ಸಾರೆ, ಗೌರಿ ಮತ್ತು ಕಲ್ಬುರ್ಗಿ ಹತ್ಯೆಯಲ್ಲಿ ‘ಸಾಮ್ಯತೆ’ಗಳಿವೆಯೇ; ಸಿಬಿಐಗೆ ಸುಪ್ರೀಂ ಪ್ರಶ್ನೆ
“ಶಾಂತಿಯ ವಾತಾವರಣ ಹಾಳು ಮಾಡಲು ಯತ್ನಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಇಡೀ ಘಟನೆಯನ್ನು ಪೊಲೀಸರು ವೀಡಿಯೋಗ್ರಾಫ್ ಮಾಡಿರುವುದರಿಂದ ಪ್ರಚೋದನೆಗೆ ಯತ್ನಿಸಿದವರನ್ನು ಗುರುತಿಸಲಾಗುತ್ತಿದೆ. ಅಲ್ಲದೆ, ಘಟನಾ ಸ್ಥಳಗಳ ಪ್ರದೇಶದಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಬರೇಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಘುಲೆ ಸುಶೀಲ್ ಚಂದ್ರಭಾನ್ ಹೇಳಿದ್ದಾರೆ.
“ನಾವು ಶುಕ್ರವಾರದ ಘಟನೆಯನ್ನು ತನಿಖೆ ಮಾಡುತ್ತೇವೆ. ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಹಿಂಸೆ ನಡೆದಿದ್ದರೆ, ಪೊಲೀಸರು ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಐಜಿ ರಾಕೇಶ್ ಸಿಂಗ್ ಹೇಳಿದ್ದಾರೆ.
ಬರೇಲಿ ಉತ್ತರ ಪ್ರದೇಶದ ಅತ್ಯಂತ ಕೋಮು ಸೂಕ್ಷ್ಮ ಪಟ್ಟಣಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಜುಲೈ 30 ರಂದು, ಬರೇಲಿಯ ಜೋಗಿನಿವಾಡ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಈ ವೇಳೆ ಪೊಲೀಸರು ಲಾಠಿ ಜಾರ್ಜ್ ನಡೆಸಿದ್ದರು. ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ 16 ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಎಸ್‌ಎಸ್‌ಪಿ, ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿತ್ತು.