ವಾಲ್ಮೀಕಿ ಪಾಲಿಟಿಕ್ಸ್ | ಗಣಿ ನಾಡಲ್ಲಿ ಮಂಕಾದ ಶ್ರೀರಾಮುಲು, ಪುಟಿದೆದ್ದ ತುಕಾರಾಮ್‌

Date:

Advertisements
ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಸೋತು ಮನೆ ಸೇರಿರುವ ಬಿ ಶ್ರೀರಾಮುಲು ಅವರಿಗೆ ಈಗ ಬಿಜೆಪಿಯೊಳಗೂ ಕೂಡ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಅವರ ರಾಜಕೀಯದ ಮೊದಲಿದ್ದ ಹೊಳಪು ಕಳೆಗುಂದಿದೆ. ಬಳ್ಳಾರಿ ನಾಡಿನ ವಾಲ್ಮೀಕಿ ಪಾಲಿಟಿಕ್ಸ್‌ನಲ್ಲಿ ಮಂಕಾದ ಶ್ರೀರಾಮುಲು ಎದುರು ಕಾಂಗ್ರೆಸ್‌ನ ತುಕಾರಾಮ್‌ ಪುಟಿದೆದ್ದಿದ್ದಾರೆ.

ಬಿಜೆಪಿಯೊಳಗೆ ವಾಲ್ಮೀಕಿ ಸಮುದಾಯದ (ಎಸ್‌ಟಿ) ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡು, ರಾಜ್ಯಾದ್ಯಂತ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಗಳಿಸಿದ್ದ ಬಿ ಶ್ರೀರಾಮುಲು ಅವರ ರಾಜಕೀಯ ಭವಿಷ್ಯ ಈಗ ಮಂಕಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ ನಾಗೇಂದ್ರ ವಿರುದ್ಧ ಸೋಲು ಕಂಡು ರಾಜಕೀಯವಾಗಿ ಹಿನ್ನಡೆ ಅನುಭವಿಸಿದರು. ನಂತರ ಬಳ್ಳಾರಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಈ.ತುಕಾರಾಮ್‌ ಎದುರು ಮತ್ತೊಮ್ಮೆ ಸೋಲುಂಡು ಅತಂತ್ರರಾದರು. ಸಂಡೂರು ಉಪ ಚುನಾವಣೆಗೆ ಬಿಜೆಪಿಯಿಂದ ಬಿ ಶ್ರೀರಾಮುಲು ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡಿದ್ದವು. ಕೊನೆಗೆ ಬಂಗಾರು ಹನುಮಂತ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

2004ರಿಂದ ಸತತವಾಗಿ ಶಾಸಕ, ಮಂತ್ರಿ, ಸಂಸದ ಹೀಗೆ ಅಧಿಕಾರ ಅನುಭವಿಸಿದ್ದ ಶ್ರೀರಾಮುಲು ಈಗ ಅಧಿಕಾರವಿಲ್ಲದೇ ಒಳಗೊಳಗೆ ಒದ್ದಾಡುತ್ತಿದ್ದಾರೆ. ಬಿಜೆಪಿಯೊಳಗೂ ಕೂಡ ಸೂಕ್ತ ಸ್ಥಾನಮಾನ ಸಿಗದೇ ಅವರ ರಾಜಕೀಯದ ಮೊದಲಿದ್ದ ಹೊಳಪು ಈಗ ಕಳೆಗುಂದಿದೆ. ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮೆರೆದೆ ಶ್ರೀರಾಮುಲುಗೆ ಸಮವಾಗಿ ತನ್ನ ಸಾಮ್ರಾಜ್ಯದೊಳಗೆಯೇ ವಾಲ್ಮೀಕಿ ಸಮುದಾಯದ ಕಾಂಗ್ರೆಸ್‌ನ ಈ.ತುಕಾರಾಮ್‌, ಬಿ ನಾಗೇಂದ್ರ ಬೆಳೆದು ನಿಂತಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.

Advertisements

ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡ ಶ್ರೀರಾಮುಲು 1999ರ ವೇಳೆಗೆ ರಾಜಕೀಯ ವಲಯದಲ್ಲಿ ಕಾಣಿಸಿಕೊಂಡರು. ಗಣಿ ಕುಳ ಜನಾರ್ದನ ರೆಡ್ಡಿ ಅವರ ಬೆಂಬಲದೊಂದಿಗೆ 1999ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ಸಿನ ದಿವಾಕರ ಬಾಬು ಎದುರು ಸೋಲು ಅನುಭವಿಸಿದರು. ಆದರೂ ದೃತಿಗೆಡದ ಶ್ರೀರಾಮುಲು 2004ರಲ್ಲಿ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಅಲ್ಲಿಂದ ಅವರ ರಾಜಕೀಯದ ಗ್ರಾಫ್‌ ಏರುತ್ತಲೇ ಹೋಯಿತು. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಗೆಳೆತನ ಗಟ್ಟಿಯಾಗಿ, ಜನಾರ್ದನ ರೆಡ್ಡಿ ವ್ಯವಹಾರದಲ್ಲಿ ಶ್ರೀರಾಮುಲು ಪತ್ನಿ ಪಾಲುದಾರರಾದರು.

2006-07ರಲ್ಲಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ದೋಸ್ತಿ ಸರ್ಕಾರದಲ್ಲಿ ಬಿರುಕು ಉಂಟಾಗಿ ಮೈತ್ರಿ ಸರ್ಕಾರ ಬಿದ್ದುಹೋಗುತ್ತದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲ್ಪಟ್ಟು ನಂತರ 2008ರಲ್ಲಿ ಚುನಾವಣೆ ನಡೆದು ಬಿಜೆಪಿ ಬಹುತಕ್ಕೆ ಹತ್ತಿರವಾಗಿ ಗೆಲುವು ಸಾಧಿಸುತ್ತೆ. ಆಪರೇಷನ್‌ ಕಮಲ ಬೆಂಬಲದೊಂದಿಗೆ ಯಡಿಯೂರಪ್ಪ ಅವರು ಸರ್ಕಾರ ರಚಿಸುತ್ತಾರೆ. ಆಗ ಸರ್ಕಾರ ರಚನೆಗೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಹಣ ಹರಿಸಿ, ಮೊದಲ ಆಪರೇಷನ್‌ ಕಮಲದ ರೂವಾರಿಗಳಾಗುತ್ತಾರೆ.

2008ರಿಂದ 2011 ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಬಿಜೆಪಿಯೊಳಗೆ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ ಅವಧಿ ಅದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಮತ್ತು ಗದಗ ಜಿಲ್ಲಾ ಉಸ್ತುವಾರಿಯಾಗಿ ಶ್ರೀರಾಮುಲು ಅಧಿಕಾರ ಸ್ವೀಕರಿಸುತ್ತಾರೆ. ಗಾಲಿ ಜನಾರ್ದನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗುತ್ತಾರೆ. 2011ರಲ್ಲಿ ರಾಜ್ಯದಲ್ಲಿ ಇಡೀ ರಾಜಕೀಯ ಸನ್ನಿವೇಶವೇ ಬದಲಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ, ಗಣಿ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರುತ್ತಾರೆ. ಸೆಪ್ಟೆಂಬರ್ 2011ರಲ್ಲಿ ಶ್ರೀರಾಮುಲು ಕ್ಯಾಬಿನೆಟ್ ಸಚಿವ ಸ್ಥಾನ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ತೊರೆಯುತ್ತಾರೆ.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ. ನಂತರ ಅವರು ಬಡವರ ಶ್ರಮಿಕ ರೈತ ಕಾಂಗ್ರೆಸ್ (ಬಿಎಸ್ಆರ್ ಕಾಂಗ್ರೆಸ್) ಪ್ರಾದೇಶಿಕ ಪಕ್ಷ ಸ್ಥಾಪಿಸಿ, 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ ಎಂದು ಘೋಷಿಸುತ್ತಾರೆ. ಅವರ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಮುಖ್ಯವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ (ಈಗಿನ ಕಲ್ಯಾಣ ಕರ್ನಾಟಕ) ಮತ ಹಂಚಿಕೆಯನ್ನು ವಿಭಜಿಸಿ, ಬಿಜೆಪಿಗೆ ದೊಡ್ಡ ಹಿನ್ನಡೆ ಕೊಡುತ್ತಾರೆ.

ಸಿಎಂ ಮತ್ತು ರಾಮುಲು

ಮತ್ತೆ ಶ್ರೀರಾಮುಲು ಬಿಜೆಪಿ ಸೇರ್ಪಡೆ

ಮೋದಿ ಕಾರಣಕ್ಕಾಗಿ 2014ರಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ, ಮಾರ್ಚ್ 2014ರಲ್ಲಿ ಬಿಜೆಪಿಗೆ ಮರಳಿ, ಬಳ್ಳಾರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರ ವರ್ಚಸ್ಸು ಕಂಡು ಪಕ್ಷ ಅವರನ್ನು ಎರಡು ಕ್ಷೇತ್ರದಿಂದ ಕಣಕ್ಕಿಳಿಸುತ್ತದೆ.

ಮೊಳಕಾಲ್ಮೂರು ಮತ್ತು ಬಾದಾಮಿ ಕ್ಷೇತ್ರದಿಂದ ಶೀರಾಮುಲು ಸ್ಪರ್ಧಿಸುತ್ತಾರೆ. ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಶ್ರೀರಾಮುಲು ಸೂಕ್ತ ವ್ಯಕ್ತಿ ಎಂದು ಬಿಜೆಪಿ ನಾಯಕರು ತೀರ್ಮಾನಿಸಿ ಬಾದಾಮಿಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುತ್ತಾರೆ. ಶ್ರೀರಾಮುಲು ಸ್ಪರ್ಧೆಯಿಂದ ಬಾದಾಮಿ ರಾಜ್ಯದ ಗಮನ ಸೆಳೆದು, ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆದು ಸಿದ್ದರಾಮಯ್ಯ ಕೇವಲ 1,696 ಮತಗಳ ಅಂತರದಲ್ಲಿ ಪ್ರಯಾಸದ ಗೆಲುವು ಸಾಧಿಸುತ್ತಾರೆ. ರಾಜಕೀಯವಾಗಿ ಸಿದ್ದರಾಮಯ್ಯ ಅವರಿಗೆ ಬಾದಾಮಿ ಪುನರ್‌ ಜನ್ಮ ನೀಡುತ್ತದೆ.

ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರು ಸೋತರು ಶ್ರೀರಾಮುಲು ವರ್ಚಸ್ಸಿಗೆ ಧಕ್ಕೆ ಬರಲಿಲ್ಲ. ಅದೇ ಸಮಯದಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ 40 ಸಾವಿರ ಮತಗಳ ಅಂತರದಿಂದ ಶ್ರೀರಾಮುಲು ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಚನೆಯಾಗಿ ಕುಮಾರಸ್ವಾಮಿ ಆಡಳಿತ ನಡೆಸುತ್ತಿರುವಾಗ ರಮೇಶ್‌ ಜಾರಕಿಹೊಳಿ ಟೀಮ್‌ ಮೈತ್ರಿ ಸರ್ಕಾರವನ್ನು ಕೆಡವಿ ಆಪರೇಷನ್‌ ಕಮಲದೊಂದಿಗೆ ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾಗುತ್ತಾರೆ. ಅದೇ ವೇಳೆ 27 ಜುಲೈ 2018 ರಂದು ಶ್ರೀರಾಮುಲು ಅವರು ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕಾಗಿ ಪ್ರತ್ಯೇಕ ರಾಜ್ಯಕ್ಕೆ ಕರೆಕೊಡುತ್ತಾರೆ. ಅಲ್ಲಿವರೆಗೂ ಅದೇ ಸಮಯದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷ ಸಂಘಟಿಸಿರುತ್ತಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೀಸಲಾತಿಗೇ ಕುತ್ತು ಬಂದಿರುವಾಗ, ಒಳಮೀಸಲಿನ ನಿಜವನ್ನು ಇನ್ನೆಷ್ಟು ಕಾಲ ಮುಂದೂಡುತ್ತೀರಿ?

ಯಡಿಯೂರಪ್ಪ ಸರ್ಕಾರ ರಚನೆಯಾದಾಗ ಶ್ರೀರಾಮುಲು ಅವರಿಗೆ ಸಾರಿಗೆ ಇಲಾಖೆ ಸಚಿವ ಸ್ಥಾನ ಒಲಿದು ಬರುತ್ತದೆ. ಏರುಪೇರಾದ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗುತ್ತದೆ. ಯಡಿಯೂರಪ್ಪ ಆಪ್ತ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಲಿದೆ ಎನ್ನುವ ಮಾತುಗಳು ಹೆಚ್ಚು ಮುನ್ನೆಲೆಗೆ ಬಂದವು. ಕೊನೆಗೆ ಉಪಮುಖ್ಯಮಂತ್ರಿ ಸ್ಥಾನವೂ ಶ್ರೀರಾಮುಲುಗೆ ಕೈತಪ್ಪುತ್ತದೆ.

2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಡಿಸಿಎಂ ಸ್ಥಾನ ವಿಚಾರವಾಗಿ ತೆರೆ ಎಳೆದ ಶ್ರೀರಾಮುಲು ಒಂದು ಹೆಜ್ಜೆ ಮುಂದೆ ಹೋಗಿ “ಉಪ ಮುಖ್ಯಮಂತ್ರಿ ಪಾಳಯ ಮುಗಿದು ಹೋಗಿದೆ. ಈಗ ಏನಿದ್ದರೂ ಪ್ರಮೋಷನ್, ಈಗ ಮುಖ್ಯಮಂತ್ರಿ ಪಾಳಯ, ಪಾರ್ಟಿ ಅವಕಾಶ ಮಾಡಿಕೊಟ್ಟರೇ ಸಿಎಂ ಆಗುತ್ತೇನೆ” ಎನ್ನುವ ಮೂಲಕ ಸಿಎಂ ಇಂಗಿತ ವ್ಯಕ್ತಪಡಿಸಿದರು. ನಂತರ ಅವರದ್ದೇ ಲೆಕ್ಕಾಚಾರ ಉಲ್ಟಾ ಆಗಿ, ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದಾರೆ. ಶ್ರೀರಾಮುಲು ರಾಜಕೀಯ ಗ್ರಾಫ್‌ ಈಗ ಪೂರ್ತಿ ತಲೆಕೆಳಗಾಗಿದೆ. ಪಕ್ಷದೊಳಗೂ ಶ್ರೀರಾಮುಲು ಅವರಿಗೆ ಯಾವುದೇ ಮಹತ್ತರ ಜವಾಬ್ದಾರಿಗಳು ಸಿಕ್ಕಿಲ್ಲ. ಇದರಿಂದ ಬಿಜೆಪಿಗೂ ಕೂಡ ಶ್ರೀರಾಮುಲು ಈಗ ಬೇಡವಾಗಿದ್ದಾರಾ ಎನ್ನುವ ಅನುಮಾನ ವಾಲ್ಮೀಕಿ ಸಮುದಾಯದಲ್ಲಿ ಮೂಡಿದೆ.

2004ರಲ್ಲಿ ಬಳ್ಳಾರಿ ನಗರ, 2008, 2011ರ ಉಪಚುನಾವಣೆ ಹಾಗೂ 2013 ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರದಲ್ಲಿ ಗೆದ್ದು, 2014ರಲ್ಲಿ‌ ಕ್ಷೇತ್ರ ಬಿಟ್ಟು ಸಂಸದರಾಗಿದ್ದ ಶ್ರೀರಾಮುಲು 2018ರಲ್ಲಿ ಮೊಳಕಾಲ್ಮೂರಿನಿಂದ ಗೆದ್ದು 2023ರಲ್ಲಿ ಸ್ವಕ್ಷೇತ್ರ ಬಳ್ಳಾರಿ ಗ್ರಾಮಾಂತರದಲ್ಲಿ ಮತ್ತು 2024ರ ಲೋಕಸಭೆಯಲ್ಲಿ ಬಳ್ಳಾರಿಯಲ್ಲಿ ಸ್ಪರ್ಧಿಸಿ ಶ್ರೀರಾಮುಲು ಸೋತಿರುವುದು ಅವರಿಗೆ ಭಾರಿ ಮುಖಭಂಗ ಉಂಟುಮಾಡಿದೆ. ಸೋಲಿನ ದುಃಖ ಅವರಲ್ಲಿ ಹೆಪ್ಪುಗಟ್ಟಿದೆ.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ವೇಳೆ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬರುತ್ತದೆ. ಅದೇ ವೇಳೆ ಸಂಡೂರು ಎಸ್ಟಿ ಕ್ಷೇತ್ರವಾಗಿ ಮಾರ್ಪಡುತ್ತದೆ. ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಸಂತೋಷ್‌ ಲಾಡ್‌ ಕಾಂಗ್ರೆಸ್‌ ಸೇರಿ ಕಲಘಟಗಿ ಕಡೆ ಮುಖಮಾಡುತ್ತಾರೆ. ಆದರೆ ತಮ್ಮ ಆಪ್ತ ಈ.ತುಕಾರಾಮ್‌ ಅವರನ್ನು ಕ್ಷೇತ್ರದಲ್ಲಿ ಬೆಳೆಸುತ್ತಾರೆ. 2008ರಿಂದ ಸತತವಾಗಿ ಈ.ತುಕಾರಾಮ್‌ ಗೆಲ್ಲಲು ಸಂತೋಷ್‌ ಲಾಡ್‌ ಅವರ ರಾಜಕೀಯ ಪ್ರಭಾವವೇ ಕಾರಣ ಎಂಬುದು ಕ್ಷೇತ್ರದಲ್ಲಿ ಗುಟ್ಟಾಗಿಲ್ಲ.

ವಾಲ್ಮೀಕಿ ಸಮುದಾಯದ ಈ.ತುಕಾರಾಮ್‌ ಹಂತ ಹಂತವಾಗಿ ಬೆಳೆದು ಶ್ರೀರಾಮುಲು ಕೋಟಿಯನ್ನು ಕೆಡವಿ ಅಧಿಕಾರ ಕೇಂದ್ರಕ್ಕೆ ಬಂದಿದ್ದಾರೆ. ಈಗ ಅವರ ಪತ್ನಿ ಅನ್ನಪೂರ್ಣ ಅವರಿಗೆ ತಮ್ಮಿಂದ ತೆರವಾದ ಸ್ಥಾನಕ್ಕೆ ಸಂಡೂರು ಉಪ ಚುನಾವಣೆ ಟಿಕೆಟ್‌ ಕೂಡ ಕಾಂಗ್ರೆಸ್‌ನಿಂದ ಸಿಕ್ಕಿದೆ. ಗೆಲ್ಲುವ ಸಾಧ್ಯತೆ ಕೂಡ ಹೆಚ್ಚಿದೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಧ್ವನಿಸುತ್ತಿವೆ.

ಶ್ರೀರಾಮುಲು 1

ಮತ್ತೆ ಒಂದಾದ ಹಳೆ ದೋಸ್ತಿಗಳು

ಅಕ್ರಮ ಗಣಿಗಾರಿಕೆ ಆರೋಪದಲ್ಲಿ 2011ರ ಸೆ.5 ರಂದು ಸಿಬಿಐನಿಂದ ಬಂಧನಕ್ಕೊಳಗಾಗಿ, 2015ರಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಿಸಲು ನಿರ್ಬಂಧಿಸಲಾಗಿತ್ತು. ಈ ಮಧ್ಯೆ ಮಗಳ ಮದುವೆ, ಹೆರಿಗೆ, ಮೊಮ್ಮಗಳ ನಾಮಕರಣ ಸೇರಿದಂತೆ ಇತರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಲೈದು ಬಾರಿ ಕೋರ್ಟ್ ಅನುಮತಿಯೊಂದಿಗೆ ಅವರು ಬಳ್ಳಾರಿಗೆ ಬಂದಿದ್ದರು. 14 ವರ್ಷಗಳ ನಂತರ ಈಗ ಬಳ್ಳಾರಿ ಜಿಲ್ಲೆಗೆ ಬರಲು ಜನಾರ್ದನ ರೆಡ್ಡಿಗೆ ಮುಕ್ತವಾಗಿರುವುದರಿಂದ ಬಳ್ಳಾರಿಯಲ್ಲಿ ರಾಜಕೀಯ ಅಸ್ತಿತ್ವ ಸ್ಥಾಪಿಸಲು ಈಗಿನಿಂದಲೇ ಯತ್ನಿಸುತ್ತಿದ್ದಾರೆ.

ಅವರ ಮುಂದೆ ಸಂಡೂರು ಉಪ ಚುನಾವಣೆ ಇದೆ. ಸಕ್ರಿಯವಾಗಿ ಪಾಲ್ಗೊಳ್ಳಲೂ ಅನುಕೂಲವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಸೇರಿದ್ದರಾದರೂ ಪ್ರಚಾರ, ತಂತ್ರಗಾರಿಕೆ ವಿಷಯದಲ್ಲಿ ಬಳ್ಳಾರಿಯಿಂದ ದೂರವೇ ಉಳಿದಿದ್ದರು. ಆದರೆ, ಈಗ ಚುನಾವಣಾ ಕಾರ್ಯದಲ್ಲಿ ಅವರು ಖುದ್ದು ಭಾಗಿಯಾಗುವುದರಿಂದ ಸಹಜವಾಗಿಯೇ ಸಂಡೂರು ಉಪ ಚುನಾವಣೆ ರಂಗೇರಿದೆ. ಬಳ್ಳಾರಿ ನಾಡಿನ ವಾಲ್ಮೀಕಿ ಪಾಲಿಟಿಕ್ಸ್‌ನಲ್ಲಿ ಮಂಕಾದ ಶ್ರೀರಾಮುಲು ಎದುರು ತುಕಾರಾಮ್‌ ಪುಟಿದೆದ್ದಿರುವ ಹೊತ್ತಿನಲ್ಲಿ ಹಳೆಯದನ್ನೆಲ್ಲ ಮರೆತು ಜೋಡಿತ್ತಿನಂತೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಒಂದಾಗಿ ಹೆಜ್ಜೆ ಹಾಕುತ್ತಿದ್ದಾರೆ. ಇದು ಇನ್ಯಾವ ದಿಕ್ಕಿಗೆ ರಾಜಕೀಯವನ್ನು ಕೊಂಡೊಯ್ಯುತ್ತೆ ಎಂಬುದು ಕುತೂಹಲ ಮೂಡಿಸಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X