ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತೆ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಸೋಮವಾರ (ಮೇ 13) ಷರತ್ತುಬದ್ಧ ಜಾಮೀನು ಮಂಜೂರು ಆಗಿದ್ದು, ಇಂದು (ಮೇ 14) ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಎಚ್ ಡಿ ರೇವಣ್ಣ ಅವರು ಮಂಗಳವಾರ ಸಂಜೆಯೊಳಗೆ ಬಿಡುಗಡೆಯಾಗುತ್ತಾರೆ ಎಂಬ ಸುದ್ದಿ ತಿಳಿದಿದ್ದ ಅವರ ಬೆಂಬಲಿಗರು ಮತ್ತು ನೂರಾರು ಜೆಡಿಎಸ್ ಕಾರ್ಯಕರ್ತರು, ಪರಪ್ಪನ ಅಗ್ರಹಾರ ಕಾರಾಗೃಹದ ಮುಂದೆ ಜಮಾಯಿಸಿದ್ದರು.
ರೇವಣ್ಣ ಅವರು ಬಿಡುಗಡೆಯಾಗುತ್ತಿದ್ದಂತೆ, ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಯಿತು. ಮಾಧ್ಯಮದವರನ್ನು ನೋಡಿದ ಎಚ್ ಡಿ ರೇವಣ್ಣ, ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಕೈಮುಗಿದು ತೆರಳಿದರು.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿರುವ ಎಚ್.ಡಿ ರೇವಣ್ಣ ಅವರು ಅಲ್ಲಿಂದ ನೇರವಾಗಿ ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಕಳೆದ ಮೇ 4ರಂದು ಎಚ್.ಡಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲೇ ಬಂಧಿಸಿದ್ದರು. ಇದೀಗ ದೇವೇಗೌಡರ ನಿವಾಸಕ್ಕೆ ತೆರಳಿರುವ ರೇವಣ್ಣ ತಂದೆ, ತಾಯಿ ಆಶೀರ್ವಾದ ಪಡೆದು ತೆರಳಲಿದ್ದಾರೆ.
ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಅವರಿಗೆ ನ್ಯಾಯಾಲಯ ಸೋಮವಾರವೇ ಷರತ್ತುಬದ್ಧ ಜಾಮೀನು ನೀಡಿತ್ತು. ಜಾಮೀನು ನೀಡುವಷ್ಟರಲ್ಲಿ ನ್ಯಾಯಾಲಯದ ಸಮಯ ಆಗಿದ್ದರಿಂದ ಕೋರ್ಟ್ ಪ್ರಕ್ರಿಯೆಗಳು ಇಂದಿಗೆ (ಮೇ 14) ಮುಂದೂಡಲಾಗಿತ್ತು. ಹೀಗಾಗಿ ಎಚ್ ಡಿ ರೇವಣ್ಣ ಸೋಮವಾರದ ರಾತ್ರಿಯನ್ನು ಜೈಲಿನಲ್ಲೇ ಕಳೆದರು. ಮಂಗಳವಾರ ಕೋರ್ಟ್ ಪ್ರಕ್ರಿಯೆಗಳು ಮುಗಿದಿದ್ದು, ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಷರತ್ತುಬದ್ಧ ಜಾಮೀನು ನೀಡಿದ್ದ ನ್ಯಾಯಾಲಯ
ಎಚ್ ಡಿ ರೇವಣ್ಣ ತಮ್ಮ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು ಮತ್ತು ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೇ ರಾಜ್ಯದ ಗಡಿ ದಾಟುವಂತಿಲ್ಲ ಎಂಬುದು ಸೇರಿ ಆರು ಷರತ್ತು ವಿಧಿಸಿ ಜನಪ್ರತಿನಿಧಿಗಳ ವಿಶೇಷ (ಸತ್ರ) ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿತ್ತು.
ಎಚ್ ಡಿ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಸ್ತೃತ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಕಟಿಸಿದ್ದರು.
