ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್‌ನ ಪಾವತಿ ಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಆರ್‌ಬಿಐ ರದ್ದುಗೊಳಿಸುವ ಆದೇಶ ಹೊರಡಿಸಿದ ತಿಂಗಳ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಘಟಕದ ಚೇರ್‌ಮೆನ್ ಮತ್ತು ಮಂಡಳಿಯ ಸದಸ್ಯ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ ನೀಡಿ, ಹುದ್ದೆಯಿಂದ ಕೆಳಗಿಳಿದಿರುವುದಾಗಿ ವರದಿಯಾಗಿದೆ.
ಪೇಮೆಂಟ್ಸ್ ಬ್ಯಾಂಕ್‌ನ ಪಾವತಿ ಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಆರ್‌ಬಿಐ ರದ್ದುಗೊಳಿಸುವ ಆದೇಶ ಹೊರಡಿಸಿದ ಎರಡು ವಾರಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಲು ಪ್ರಕರಣ ಕೈಗೆತ್ತಿಕೊಂಡಿರುವುದಾಗಿ ವರದಿಯಾಗಿತ್ತು. ಈ ವರದಿಯ 15 ದಿನಗಳ ನಂತರ ವಿಜಯ್ ಶೇಖರ್ ಶರ್ಮಾ ಚೇರ್‌ಮೆನ್ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಸುದ್ದಿ ಸಂಸ್ಥೆ ‘ಪಿಟಿಐ’ ಟ್ವೀಟ್ ಮೂಲಕ ತಿಳಿಸಿದೆ.
Vijay Shekhar Sharma steps down as chairman of Paytm Payments Bank; bank reconstitutes board: Regulatory filing
— Press Trust of India (@PTI_News) February 26, 2024
ತೆರವಾದ ಸ್ಥಾನಕ್ಕೆ ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗಾರ್ಗ್ ಮತ್ತು ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳು ಮಂಡಳಿಗೆ ಸೇರಲಿದ್ದಾರೆ ಎಂದು ವರದಿಯಾಗಿದೆ.
ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಮೂಲಕ ಆಗಿರುವ ಅವ್ಯವಹಾರ ಆಗಿರುವ ಶಂಕೆಯ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿದ್ದರು.
ಫೆ.29ರ ನಂತರ ಆನ್‌ಲೈನ್ ಪಾವತಿ ಸೇವಾ ಸಂಸ್ಥೆ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಎಲ್ಲ ಸೇವೆಗಳು ರದ್ದುಗೊಳ್ಳಲಿವೆ ಎಂದು ಆರ್‌ಬಿಐ ತಿಳಿಸಿದ ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಫೆ.29ರ ನಂತರ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಎಲ್ಲ ಸೇವೆಗಳು ರದ್ದು
ಫೆ.29ರ ನಂತರ ಆನ್‌ಲೈನ್ ಪಾವತಿ ಸೇವಾ ಸಂಸ್ಥೆ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಎಲ್ಲ ಸೇವೆಗಳು ರದ್ದುಗೊಳ್ಳಲಿವೆ ಎಂದು ಆರ್‌ಬಿಐ ಆದೇಶ ಹೊರಡಿಸಿತ್ತು. ವಾಲೆಟ್ ಹಾಗೂ ಫಾಸ್ಟ್‌ಟ್ಯಾಗ್ ಒಳಗೊಂಡು ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂಗೆ ಆರ್‌ಬಿಐ ಆದೇಶದಲ್ಲಿ ತಿಳಿಸಿತ್ತು.
ಪೇಟಿಎಂನ ಪೇಮೆಂಟ್ ಬ್ಯಾಂಕ್‌ನ ಪಾವತಿ ಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಆರ್‌ಬಿಐ, “ಬ್ಯಾಂಕ್‌ನಲ್ಲಿ ನಿರಂತರ ಉಲ್ಲಂಘನೆಗಳು ಮುಂದುವರಿದ ಕಾರಣದಿಂದ ಮಹತ್ವದ ಮೇಲ್ವಿಚಾರಣಾ ಕಾಳಜಿಗಳಿಗಾಗಿ ಹಾಗೂ ಬಾಹ್ಯ ಸಂಸ್ಥೆಗಳಿಂದ ಸಮಗ್ರ ಲೆಕ್ಕಪರಿಶೋಧನೆ ಕೈಗೊಂಡ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಆರ್‌ಬಿಐ ಸ್ಪಷ್ಟಪಡಿಸಿತ್ತು.
2022 ಮಾರ್ಚ್ 11ರಲ್ಲೇ ನೂತನ ಗ್ರಾಹಕರನ್ನು ಹೊಂದುವುದನ್ನು ನಿಲ್ಲಿಸಬೇಕು ಎಂದು ಪೇಟಿಎಂ ಪೇಮೆಂಟ್ ಬ್ಯಾಂಕ್ ಸಂಸ್ಥೆಗೆ ತಿಳಿಸಿರುವುದನ್ನು ಆರ್‌ಬಿಐ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಈ ಆದೇಶದ ಬೆನ್ನಲ್ಲೇ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ನಿರ್ದೇಶಕ ಮಂಜು ಅಗರ್ವಾಲ್ ರಾಜೀನಾಮೆ ನೀಡಿದ್ದರು.
‘ಪೇಟಿಎಂ ಮುಖ್ಯಸ್ಥ ಮೋದಿ ಭಕ್ತ’ ಎಂದಿದ್ದ ಕಾಂಗ್ರೆಸ್
ಪೇಟಿಎಂ ಪೇಮೆಂಟ್ ಬ್ಯಾಂಕ್ ಸೇವೆಗಳನ್ನು ಆರ್‌ಬಿಐ ರದ್ದುಗೊಳಿಸಿದ್ದ ನಂತರ ಜಾರಿ ನಿರ್ದೇಶನಾಲಯದ ಮೌನದ ಬಗ್ಗೆ ವಿಪಕ್ಷ ಕಾಂಗ್ರೆಸ್ ಪ್ರಶ್ನಿಸಿತ್ತು.
ಈ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ, “ಈ ಹಗರಣದ ಬಗ್ಗೆ ಕೇಂದ್ರದ ನಿಲುವು ಏನು? ಕಳೆದ ಏಳು ವರ್ಷಗಳಿಂದ ತಪ್ಪು ನಡೆಯುತ್ತಿದ್ದರೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಏಕೆ ಕ್ರಮ ಜರುಗಿಸಿಲ್ಲ? ಪೇಟಿಎಂ ಪೇಮೆಂಟ್ ಬ್ಯಾಂಕಿನ ಮುಖ್ಯಸ್ಥ ಪ್ರಧಾನಿ ಮೋದಿ ಭಕ್ತ. ಅವರೊಂದಿಗೆ ಸೆಲ್ಫಿ ಪಡೆದಿದ್ದಾರೆ. ಪ್ರಧಾನಿಯಿಂದ ಅನುಕೂಲ ಪಡೆಯಲು ಜಾಹೀರಾತುಗಳನ್ನು ಪ್ರಕಟಿಸಿದ್ದಾರೆ” ಎಂದು ಆರೋಪಿಸಿದ್ದರು.
