ತೀವ್ರ ಕುತೂಹಲ ಮೂಡಿಸಿದ್ದ ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳ ಆಯ್ಕೆಯಲ್ಲಿ ಎರಡೂ ಸ್ಥಾನಗಳು ಕೂಡ ಕಾಂಗ್ರೆಸ್ ವಶವಾಗಿದ್ದು, ತವರು ನೆಲದಲ್ಲೇ ಬಿಜೆಪಿ ಶಾಸಕ ಯತ್ನಾಳ್‌ಗೆ ಹಿನ್ನಡೆಯಾಗಿದೆ.
ಮಂಗಳವಾರ ನಡೆದ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ನೂತನ ಮಹಾಪೌರರಾಗಿ ವಾರ್ಡ್ ನಂ 34ರ ಸದಸ್ಯೆ ಮಹೇಜಬೀನ ಹೋರ್ತಿ ಹಾಗೂ ಉಪ ಮಹಾಪೌರರಾಗಿ ವಾರ್ಡ್ ನಂ 18ರ ಸದಸ್ಯ ದಿನೇಶ್ ಹಳ್ಳಿ ಆಯ್ಕೆಯಾದರು. ಆ ಮೂಲಕ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ. 17 ಸ್ಥಾನಗಳಿದ್ದರೂ ಕೂಡ ಬಿಜೆಪಿಯವರಿಗೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ.
ಮಹಾಪೌರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಮಹಾಪೌರ ಸ್ಥಾನಕ್ಕೆ ಮಹೇಜಬೀನ ಹೋರ್ತಿ ಕಣಕ್ಕಿಳಿದರೆ, ಬಿಜೆಪಿಯಿಂದ ವಾರ್ಡ್ ನಂ 12ರ ಸದಸ್ಯೆ ರಶ್ಮಿ ಕೋರಿ ನಾಮಪತ್ರ ಸಲ್ಲಿಸಿದ್ದರು. ಎಸ್‌ಟಿ ವರ್ಗಕ್ಕೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ದಿನೇಶ್ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು.
35 ಸದಸ್ಯರಿರುವ ಮಹಾನಗರ ಪಾಲಿಕೆಗೆ 2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಯಾವೊಂದು ಪಕ್ಷಕ್ಕೂ ನಿಶ್ಚಳ ಬಹುಮತ ಇಲ್ಲದೇ ಪಾಲಿಕೆ ಅತಂತ್ರವಾಗಿತ್ತು. ಬಳಿಕ ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕೆಲ ಸದಸ್ಯರು ಹೈಕೋರ್ಟ್ ಮೇಟ್ಟಿಲೇರಿದ್ದ ಕಾರಣ 14 ತಿಂಗಳಿಂದ ಚುನಾವಣೆ ನಡೆದಿರಲಿಲ್ಲ.
10 ಕಾಂಗ್ರೆಸ್ ಸದಸ್ಯರು ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಥೋಡ್ ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಬೆಳಗಾವಿಯ ಪ್ರಾದೇಶಿಕ ಆಯುಕ್ತರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯತ್ನಾಳ್ ಹಾಗೂ ಬಿಜೆಪಿ ಸದಸ್ಯರು ಕಪ್ಪುಪಟ್ಟಿ ಪ್ರದರ್ಶಿಸಿದರು. ಬಿಜೆಪಿಯ 17 ಸದಸ್ಯರು ಹಾಗೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿದ್ದರು.
ಬೆಳಗಾವಿಯ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣನವರ್ ಸರ್ಕಾರದ ಕೈಗೊಂಬೆಯಾಗಿ ವರ್ತನೆ ಮಾಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ನಾಯಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಕೂಡ ನಿರ್ಮಾಣವಾಗಿತ್ತು.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, “ಪಾಲಿಕೆಯ ಬಿಜೆಪಿ ಸದಸ್ಯ ವಿಜಯಕುಮಾರ್ ಬಿರಾದಾರ್ ನಿಧನರಾಗಿರುವ ಕಾರಣ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದೆವು. ಈ ಕುರಿತು ಕಲಬುರಗಿಯ ಹೈಕೋರ್ಟಿಗೂ ಅರ್ಜಿ ಸಲ್ಲಿಕೆ ಮಾಡಿದ್ದೆವು. ಅರ್ಜಿ ವಿಚಾರಣೆ ಹಾಗೂ ನಮ್ಮ ಮನವಿಯನ್ನು ಆಲಿಸದೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಮುಂದಾದರು. ಈ ಕಾರಣದಿಂದ ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಿದ್ದೇವೆ. ಬೆಳಗಾವಿಯ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣನವರ್ ಸರ್ಕಾರದ ಕೈಗೊಂಬೆಯಾಗಿ ವರ್ತನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.