- ‘ಬಿಜೆಪಿಗೆ ಕರ್ನಾಟಕವು ದಕ್ಷಿಣ ಭಾರತದ ಭದ್ರಕೋಟೆ’
- ’28ಕ್ಕೆ 28 ಕ್ಷೇತ್ರ ಗೆದ್ದು ಮೋದಿ ಕೈ ಬಲಪಡಿಸುತ್ತೇವೆ’
ಬಿಜೆಪಿಗೆ ಕರ್ನಾಟಕವು ದಕ್ಷಿಣ ಭಾರತದ ಭದ್ರಕೋಟೆ. ಕಳೆದ ಬಾರಿಯ ಚುನಾವಣೆ ನಮಗೆ ಹಿನ್ನಡೆಯಾಗಿದೆ. ಯಾವಾಗ ಚುನಾವಣೆ ಬಂದರೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಗುರಿ ಹೊಂದಬೇಕು. ಲೋಕಸಭೆ ಮತ್ತು ವಿಧಾಸಭೆ ಚುನಾವಣೆಯಷ್ಟೇ ಮಹತ್ವ ಸ್ಥಳೀಯ ಸಂಸ್ಥೆಗಳಿಗೂ ನೀಡಲಾಗುವುದು. ಅದು ನಮ್ಮ ಕಾರ್ಯಕರ್ತರ ಚುನಾವಣೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
ಮೈಸೂರು ಮತ್ತು ಮಂಡ್ಯ ಜಿಲ್ಲೆ ಪ್ರವಾಸ ಕೈಗೊಂಡಿರುವ ಅವರು, ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಮೈಸೂರು ಜಿಲ್ಲೆಗೂ ನನಗೂ ಅವಿನಾಭಾವ ಸಂಬಂಧವಿದೆ. ಶಾಸಕ ಆಗಲು ಭದ್ರ ಬುನಾದಿ ಹಾಕಿರುವುದು ವರುಣ ಕ್ಷೇತ್ರ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗುವುದು” ಎಂದರು.
“ಅಧಿಕಾರದ ದರ್ಪದಿಂದ ಕಾಂಗ್ರೆಸ್‌ನವರು ಆಡಳಿತ ಅಭಿವೃದ್ಧಿ ಮರೆತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಹಾಗೂ ಮುಂದಿನ ಎಲ್ಲ ಚುನಾವಣೆಗಳನ್ನು ಒಗ್ಗಟ್ಟಾಗಿ ಎದುರಿಸುತ್ತೇವೆ. ರಾಜ್ಯ ಸರ್ಕಾರದ ವಿರುದ್ಧ ಇರುವ ಬೇಸರಕ್ಕೆ ಬಿಜೆಪಿ ಪರ್ಯಾಯವಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು 28ಕ್ಕೆ 28 ಕ್ಷೇತ್ರವನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?
“ಚುನಾವಣೆ ವೇಳೆ ಕಾಂಗ್ರೆಸ್ ಸಾಕಷ್ಟು ಭರವಸೆ ನೀಡಿತ್ತು.ಆದರೆ ಇವರ ಆಡಳಿತದಿಂದ ಜನರು ನಿರಾಶರಾಗಿದ್ದು, ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜೋಡೆತ್ತುಗಳಂತೆ ಇದ್ದರು. ಈಗ ಹಾದಿ ಬೀದಿಯಲ್ಲಿ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆದಿದೆ” ಎಂದರು.
ಜಮೀರ್, ಪ್ರಿಯಾಂಕ್ ರಾಜೀನಾಮೆಗೆ ಆಗ್ರಹ
ಸಚಿವ ಜಮೀರ್ ಅಹಮದ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, “ಇದು ಹುಡುಗಾಟದ ಮಾತಲ್ಲ. ಜಮೀರ್ ಅಹಮದ್ ಅವರ ಮನದಾಳದ ಮಾತು. ನ್ಯಾಯಾದೇವತೆ ಅಂತಾ ಗೌರವ ಕೊಡುತ್ತೇವೆ. ಅದಕ್ಕೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಬೇರೆ ಸಿಎಂ ಆಗಿದ್ದರೆ ಜಮೀರ್ ರಾಜೀನಾಮೆ ತೆಗೆದುಕೊಳ್ಳುತ್ತಿದ್ದರು” ಎಂದು ಹೇಳಿದರು.
“ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರ ಶಾಶ್ವತ ಅನ್ನೋ ಭ್ರಮೆಯಲ್ಲಿದ್ದಾರೆ. ಗೂಂಡಾಗಿರಿ ಕಲುಬುರುಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರಿಯಾಂಕ್ ತವರು ಜಿಲ್ಲೆಯಲ್ಲಿ ಗುಂಡಾಗಿರಿ ಹೆಚ್ಚಾಗಿದೆ. ಮಣಿಕಂಠ ರಾಥೋಡ್ ಮೇಲೆ ರಾಜಕೀಯ ಪುಡಾರಿಗಳಿಂದ ಹಲ್ಲೆ ನಡೆಸಲಾಗಿದೆ. ಅಧಿಕಾರದ ದರ್ಪದಿಂದ ಏನೇ ಮಾಡಿದರೂ ನಡೆಯುತ್ತದೆ ಅಂದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಬೇಕು” ಎಂದು ವಿಜಯೇಂದ್ರ ಆಗ್ರಹಿಸಿದರು.