2024ರ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದ ದಿನಗಳ ನಂತರ ಕೇಂದ್ರದಲ್ಲಿರುವ ನರೇಂದ್ರ ಸರ್ಕಾರವು ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತಕರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವು ಕಳುಹಿಸುತ್ತಿರುವ ‘ವಿಕಸಿತ ಭಾರತ’ ಯಾತ್ರೆಯು ನೀತಿ ಸಂಹಿತೆ ಉಲ್ಲಂಘನೆ ಮಾತ್ರವಲ್ಲದೆ, ಖಾಸಗಿತನಕ್ಕೆ ಧಕ್ಕೆ ಎಂದು ಆರೋಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಪತ್ರದ ಜೊತೆಗೆ ವಿಕಸಿತ ಭಾರತ ಸಂಪರ್ಕ ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್, ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಕೇಂದ್ರ ಸರ್ಕಾರವು ಆಡಳಿತ ದುರ್ಬಳಕೆ ಮಾಡುತ್ತಿದೆ. ಬಿಜೆಪಿಯ ರಾಜಕೀಯ ಹಿತಾಸಕ್ತಿಗಾಗಿ ಜನರ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿದೆ” ಎಂದು ಹೇಳಿರುವ ಶಶಿ ತರೂರ್ ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.
ಇದನ್ನು ಓದಿದ್ದೀರಾ? ಮೋದಿಯಿಂದ ಯುಎಇಯಲ್ಲಿರುವ ಭಾರತೀಯ, ಪಾಕ್, ಬ್ರಿಟನ್ ವಲಸಿಗರಿಗೆ ಅಚ್ಚರಿಯ ವಾಟ್ಸಾಪ್ ಸಂದೇಶ!
ಈ ಆನ್‌ಲೈನ್ ಸಂದೇಶದಲ್ಲಿ “ನನ್ನ ಪ್ರಿಯ ಕುಟುಂಬ ಸದಸ್ಯರೇ” ಎಂದು ಮೋದಿ ಸಂಭೋದಿಸುತ್ತಾರೆ. ಹಾಗೆಯೇ ಭಾರತ ಸರ್ಕಾರದ ಯೋಜನೆಗಳು ಮತ್ತು ಉಪಕ್ರಮಗಳ ಕುರಿತು ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಲಾಗಿದೆ. ಇನ್ನು ಯುಎಇ ಮೂಲದ ಆಂಟೋನಿ ಜೆ ಪರ್ಮಲ್ ಲಿಂಕ್ಡಿನ್ ಪೋಸ್ಟ್ ಅನ್ನು ಕೂಡಾ ತರೂರ್ ಹಂಚಿಕೊಂಡಿದ್ದಾರೆ.
“ನಿನ್ನೆ ಯುಎಇಯಲ್ಲಿರುವ ಬೇರೆ ಬೇರೆ ದೇಶದ ಜನರ ವೈಯಕ್ತಿಕ ವಾಟ್ಸಾಪ್ ಖಾತೆಗೆ ಭಾರತದ ಪ್ರಧಾನಿ ಮೋದಿಯಿಂದ ಸಂದೇಶ ಬಂದಿದೆ. ಇದು ಖಾಸಗಿತನದ ಉಲ್ಲಂಘನೆಯಾಗಿದೆ. ಸಾವಿರಾರು ಭಾರತೀಯರೇತರ ಖಾಸಗಿ ಮೊಬೈಲ್ ಸಂಖ್ಯೆಗಳಿಗೆ ಈ ಸಂದೇಶವನ್ನು ಕಳುಹಿಸಲಾಗಿದೆ. ನಮ್ಮ ಸಂಖ್ಯೆ ಬಿಜೆಪಿ ಮತ್ತು ಭಾರತೀಯ ಸರ್ಕಾರಕ್ಕೆ ಸಿಗುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.
ವಿದೇಶದಲ್ಲಿರುವ ಭಾರತೀಯ ವಲಸಿಗರಿಗೆ ಈ ಸಂದೇಶ ಬಂದಿರುವ ಜೊತೆಗೆಯೇ ಯುಎಇಯಲ್ಲಿರುವ ಪಾಕಿಸ್ತಾನ ಮತ್ತು ಬ್ರಿಟನ್ ವಲಸಿಗರಿಗೂ ಭಾರತ ಸರ್ಕಾರದ ಈ ಸಂದೇಶ ತಲುಪಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಯುಎಇ ನಿವಾಸಿಗಳಿಗೂ ಈ ವಾಟ್ಸಾಪ್ ಸಂದೇಶ ತಲುಪಿದೆ.