ಈ ಹಿಂದೆಯೂ ಹಲವು ಬಾರಿ ವಿವಾದಾದತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್) ಹಿರಿಯ ನಾಯಕ ಭಯ್ಯಾಜಿ ಜೋಶಿ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಕೆಲವೊಮ್ಮೆ ಅಹಿಂಸೆ ತತ್ವವನ್ನು ಕಾಪಾಡಬೇಕಾದರೆ ಹಿಂಸೆ ಅನಿವಾರ್ಯವಾಗುತ್ತದೆ ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ. ಜೊತೆಗೆಯೇ ಭಾರತವೂ ಎಲ್ಲರನ್ನು ಶಾಂತಿಯ ಪಥದಲ್ಲಿ ಕೊಂಡೊಯ್ಯಬೇಕೆಂದು ಕೂಡಾ ಹೇಳಿದ್ದಾರೆ.
ಗುಜರಾತ್ ವಿಶ್ವವಿದ್ಯಾನಿಲಯದ ಆವರಣದ ಮೈದಾನದಲ್ಲಿ ನಡೆದ ಹಿಂದೂ ಸ್ಪಿರಿಚ್ಯುವಲ್ & ಸರ್ವಿಸ್ ಫೇರ್ ಅಥವಾ ಹಿಂದೂ ಆಧ್ಯಾತ್ಮಿಕ ಸೇವಾ ಮೇಳವನ್ನು ಉದ್ದೇಶಿಸಿ ಮಾತನಾಡುತ್ತಾ ಆರ್‌ಎಸ್‌ಎಸ್ ನಾಯಕ ಭಯ್ಯಾಜಿ ಜೋಶಿ ಈ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಇದನ್ನು ಓದಿದ್ದೀರಾ? ದುರಹಂಕಾರಿಗಳಿಗೆ ಭಗವಾನ್ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ನಾಯಕ ವಾಗ್ದಾಳಿ
“ಹಿಂದೂಗಳು ಎಂದಿಗೂ ತಮ್ಮ ಧರ್ಮವನ್ನು ರಕ್ಷಿಸಲು ಬದ್ಧರಾಗಿರಬೇಕು. ನಾವು ನಮ್ಮ ಧರ್ಮವನ್ನು ಕಾಪಾಡಬೇಕಾದರೆ ಕೆಲವೊಮ್ಮೆ ಇತರರು ಯಾವುದನ್ನು ‘ಅಧರ್ಮ’ ಎಂದು ಕರೆಯುತ್ತಾರೋ ಅದನ್ನೇ ಮಾಡಬೇಕಾಗುತ್ತದೆ. ನಮ್ಮ ಪೂರ್ವಜರು ಕೂಡಾ ಹಾಗೆಯೇ ಮಾಡಿರುವುದು” ಎಂದು ಹೇಳಿಕೊಂಡಿದ್ದಾರೆ.
ಮಹಾಭಾರತವನ್ನು ಉಲ್ಲೇಖಿಸಿದ ಆರ್‌ಎಸ್‌ಎಸ್ ನಾಯಕ, “ಪಾಂಡವರು ಅಧರ್ಮವನ್ನು ನಾಶ ಮಾಡಲು ಯುದ್ಧದ ನೀತಿಯನ್ನು ಬದಿಗೊತ್ತಿದರು. ಹಿಂದೂ ಧರ್ಮ ಅಹಿಂಸೆ ಸಾರುತ್ತದೆ ಎಂಬುದನ್ನು ನಾವು ಅಲ್ಲಗಳೆಯಲಾಗದು. ಆದರೆ ಕೆಲವೊಮ್ಮೆ ಅಹಿಂಸೆಯ ರಕ್ಷಣೆಗಾಗಿ ಹಿಂಸೆಯ ಹಾದಿ ತುಳಿಯಬೇಕಾಗುತ್ತದೆ. ಇಲ್ಲವಾದರೆ ಅಹಿಂಸೆ ತತ್ವವು ಸುರಕ್ಷಿತವಾಗಿರದು. ನಮ್ಮ ಪೂರ್ವಜರು ಈ ಸಂದೇಶವನ್ನು ನಮಗೆ ನೀಡಿದ್ದಾರೆ” ಎಂದಿದ್ದಾರೆ.
“ಭಾರತವನ್ನು ಹೊರತುಪಡಿಸಿ ಇತರೆ ದೇಶಗಳ ಜೊತೆಯಲ್ಲೇ ಸಾಗುವಂತಹ ಯಾವುದೇ ದೇಶವಿಲ್ಲ. ವಸುದೈವ ಕುಟುಂಬಂ ಎಂಬುದು ನಮ್ಮ ಆಧ್ಯಾತ್ಮದ ತತ್ವವಾಗಿದೆ. ನಾವು ಇಡೀ ವಿಶ್ವವನ್ನೇ ಒಂದು ಕುಟುಂಬವಾಗಿ ಪರಿಗಣಿಸಿದರೆ ಯಾವುದೇ ಸಂಘರ್ಷ ಇರುವುದಿಲ್ಲ” ಎಂದು ಭಯ್ಯಾಜಿ ಜೋಶಿ ಹೇಳಿದರು.
ಇದನ್ನು ಓದಿದ್ದೀರಾ? ಜೈ ಬಾಪು-ಜೈ ಭೀಮ್-ಜೈ ಸಂವಿಧಾನ ಅಭಿಯಾನ | ಆರ್‌ಎಸ್‌ಎಸ್ ಸಿದ್ಧಾಂತ ಹಿಮ್ಮೆಟ್ಟಿಸೋಣ: ಸಿಎಂ ಸಿದ್ದರಾಮಯ್ಯ ಕರೆ
“ನಾವು ಭಾರತ ಬಲಿಷ್ಠವಾಗಬೇಕು ಎನ್ನುತ್ತೇವೆ. ಅಂದರೆ ಬಲಿಷ್ಠ ಭಾರತ ಮತ್ತು ಬಲಿಷ್ಠ ಹಿಂದೂ ಸಮುದಾಯ ಮಾತ್ರ ಎಲ್ಲರಿಗೂ ಉಪಯೋಗಕರ ಎಂಬ ಭರವಸೆಯನ್ನು ಜಗತ್ತಿಗೆ ನೀಡುವುದಾಗಿದೆ. ನಾವು ಬಲಿಷ್ಠರಾದರೆ ದುರ್ಬಲರು ಮತ್ತು ಧಮನಿತರನ್ನು ರಕ್ಷಿಸುತ್ತೇವೆ” ಎಂದರು.
ಇನ್ನು ಭಯ್ಯಾಜಿ ಜೋಶಿ ಈ ಹಿಂದೆಯೂ ಹಲವು ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸರಾಗಿದ್ದಾರೆ. ಈ ಹಿಂದೆ ಹಿಂದೂ ಮತ್ತು ಹಿಂದುತ್ವ ಎರಡೂ ಕೂಡಾ ಒಂದೇ ಎಂದು ಹೇಳುವ ಮೂಲಕ ವಿವಾದಕ್ಕೆ ಎಡೆಮಾಡಿಕೊಂಡಿದ್ದರು. ಹಾಗೆಯೇ ಹಲವು ಆರ್‌ಎಸ್‌ಎಸ್ ನಾಯಕರು ದ್ವೇಷ ಹುಟ್ಟಿಸುವ ಉದ್ರೇಕಕಾರಿ ಭಾಷಣಗಳನ್ನು ಮಾಡಿದ್ದಾರೆ.
