ಸೋಮವಾರ ಅಯೋಧ್ಯೆ ರಾಮಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠ ಕಾರ್ಯಕ್ರಮ ನಡೆದಿದೆ. ರಾಮಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಈ ಬಗ್ಗೆ ವರದಿ ಮಾಡಿರುವ ಮಲಯಾಳಂ ‘ದೇಶಾಭಿಮಾನಿ’ ಪತ್ರಿಕೆಯು, ತನ್ನ ಮುಖಪುಟದ ಹೆಡ್‌ಲೈನ್‌ನಲ್ಲಿ, ‘ಓಟು ಪ್ರತಿಷ್ಠ – ಓಟು ಪ್ರತಿಷ್ಠಾಪನೆ’ ಎಂದು ಬರೆದಿದ್ದು, ಮೋದಿ ಸರ್ಕಾರವನ್ನು ಛೇಡಿಸಿದೆ.
ಓಟ್ ಪ್ರತಿಷ್ಠಾಪನೆ ತಲೆ ಬರಹದ ಮೇಲ್ಭಾಗದಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ್ದ ಫೋಟೋವನ್ನು ಪ್ರಕಟಿಸಿದೆ. ಸುದ್ದಿಯ ಒಳಭಾಗದಲ್ಲಿ ಪ್ರಧಾನಿ ಮೋದಿ ಅವರು ರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದ ಚಿತ್ರವನ್ನು ಪ್ರಕಟಿಸಿದೆ.
ಮುಖ್ಯ ವರದಿಯ ಪಕ್ಕದಲ್ಲಿಯೇ, ಬಾಬರಿ ಮಸೀದಿ ಧ್ವಂಸಕ್ಕೆ ಶೋಭಾಯಾತ್ರೆ ನಡೆಸಿದ್ದ ಅಡ್ವಾಣಿ ಹಾಗೂ ಅಶೋಕ್ ಸಿಂಘಾಲ್ ಅವರ ಚಿತ್ರವನ್ನು ಪತ್ರಿಕೆ ಪ್ರಕಟಿಸಿದೆ.
ಮುಖಪುಟದ ಮತ್ತೊಂದು ಭಾಗದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ, “ಧರ್ಮ ಮತ್ತು ಸರ್ಕಾರಿ ಆಡಳಿತ ನಡುವೆ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರಕ್ಕೆ ಯಾವುದೇ ಒಂದು ಧರ್ಮ ಹೆಚ್ಚಲ್ಲ. ಒಂದು ಧರ್ಮ ಕಡಿಮೆಯಲ್ಲ. ಎಲ್ಲರನ್ನೂ ಸಮಾನವಾಗಿ ನಡೆಸಿಕೊಂಡು ದೇಶದ ಜಾತ್ಯಾತೀತ ಮೌಲ್ಯವನ್ನು ಎತ್ತಿಹಿಡಿಯಬೇಕು” ಎಂಬ ಸಂದೇಶವನ್ನು ಪ್ರಕಟಿಸಿದೆ.