ರಾಜ್ಯದಲ್ಲಿ ಸಿಡಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸದಾ ಕೋಮುದ್ವೇಷದ ಭಾಷಣ ಮಾಡುವ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ಕೂಡ ಸಿಡಿ ಇದೆ ಎನ್ನುವ ಸ್ಫೋಟಕ ಮಾಹಿತಿ ವಿಜಯಪುರದಿಂದ ಹೊರಬಿದ್ದಿದೆ.
ವಿಜಯಪುರ ಜಿಲ್ಲೆಯ ವಕ್ಪ್ ಬೋರ್ಡ್ ಆಸ್ತಿ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ಎತ್ತಿ ಮಂಗಳವಾರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಮೂಲಕ ಜನರ ನಡುವೆ ಕೋಮುದ್ವೇಷ ಹರಡುವುದೇ ಯತ್ನಾಳ್ ಉದ್ದೇಶ ಎಂದು ಆರೋಪಿಸಿರುವ ಮುಸ್ಲಿಂ ಮುಖಂಡರು, “ರಾಜಕಾರಣ ಏನು ಇದೆಯೋ ಅದನ್ನು ಮಾಡಿಕೊಂಡು ಹೋಗುವುದು ಬಿಟ್ಟು ನಮ್ಮ ವಿಚಾರಕ್ಕೆ ತಲೆಹಾಕಿದರೆ ಸರಿಯಾಗಿ ಪಾಠ ಕಲಿಸುತ್ತೇವೆ. ಅವರ ಸಿಡಿ ಬಿಡುಗಡೆ ಮಾಡಿ, ಯತ್ನಾಳ್ ಮುಖವಾಡವನ್ನು ಬಯಲು ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಸುಮಾರು 10 ಸಾವಿರ ಎಕರೆ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ವಕ್ಫ್ ಬೋರ್ಡ್ ಹೇಳಿಕೊಳ್ಳುತ್ತಿದೆ. ಇದರಲ್ಲಿ ಕಂದಾಯ ಇಲಾಖೆಯ 2,148 ಎಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ 1,012 ಎಕರೆ, ನಗರಾಭಿವೃದ್ಧಿ ಇಲಾಖೆ 322 ಎಕರೆ ಜಮೀನು ಒಳಗೊಂಡಿದೆ. ವಕ್ಫ್ ಆಸ್ತಿಯನ್ನು 45 ದಿನದೊಳಗೆ ಸರ್ವೇ ಮಾಡಲು ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಸಚಿವ ಜಮೀರ್ ಅಹ್ಮದ್ ಆದೇಶ ಹಿಂದೂ ಸಂಘಟನೆಗಳ ಕಣ್ಣನ್ನು ಕೆಂಪಾಗಿಸಿದೆ. ಸರ್ವೇ ಕಾರ್ಯವನ್ನು ತಡೆ ಹಿಡಿಯಲು ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಭಟನೆಯ ಅಸ್ತ್ರವನ್ನು ಬಳಸಿಕೊಂಡಿದ್ದಾರೆ.
ಯತ್ನಾಳ್ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಮುಸ್ಲಿಂ ಮುಖಂಡ ಎಸ್ ಎಸ್ ಖಾದ್ರಿ ಅವರನ್ನು ಈ ದಿನ.ಕಾಮ್ ಮಾತನಾಡಿಸಿದಾಗ, “ಯತ್ನಾಳ್ ಅವರು ತಮ್ಮ ರಾಜಕಾರಣ ಏನು ಇದೆಯೋ ಅದನ್ನು ಮಾಡುವುದು ಬಿಟ್ಟು ಉಳಿದಿದ್ದೆಲ್ಲ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ವಕ್ಫ್ ಆಸ್ತಿ ವಿಚಾರವಾಗಿ ರೈತರ ನಡುವೆ ಜಗಳ ಹಚ್ಚಲು ನೋಡುತ್ತಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ನಮ್ಮ ಸಮುದಾಯ ಮುಂದೆ ಬರುವುದು ಯಾವಾಗ? ನಮಗೂ ಸಾಕಾಗಿದೆ. ಅವರ ಸಿಡಿ ನಮ್ಮ ಕೈಗೆ ಸಿಕ್ಕಿದೆ. ಆತನ ಇನ್ನೊಂದು ಮುಖ ಏನು ಎಂಬುದನ್ನು ನಾವು ಸಮಾಜಕ್ಕೆ ತೋರಿಸುತ್ತೇವೆ” ಎಂದು ಎಚ್ಚರಿಸಿದರು.
“ಯತ್ನಾಳ್ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಇನ್ನೊಬ್ಬರ ತಟ್ಟೆಯಲ್ಲಿ ನೊಣ ಇದೆ ಎಂದು ಮಾತನಾಡುತ್ತಾರೆ. ವಕ್ಫ್ ಆಸ್ತಿ ನಮ್ಮ ಸಮುದಾಯದ ಏಳಿಗೆಗಾಗಿರುವ ಆಸ್ತಿ. ಇದರಲ್ಲಿ ಯತ್ನಾಳ್ ಮೂಗು ತೂರಿಸಲು ಬಂದರೆ ನಾವು ಸುಮ್ಮನೆ ಬಿಡಲ್ಲ. ಅವರು ಶಾಸಕರಾಗಿದ್ದವರು, ವಕ್ಫ್ ಸಭೆ ನಡೆದಾಗ ಅವರೇ ಅಧ್ಯಕ್ಷರಾಗಬೇಕಿತ್ತು. ಸಚಿವರು ಬಂದಾಗ ಅಧಿಕಾರಿಗಳ ಸಭೆ ನಡೆಯಿತು. ಅಲ್ಲಿ ಯತ್ನಾಳ್ ಭಾಗಿಯಾಗಿ ತಮ್ಮ ತಕರಾರನ್ನು ತಿಳಿಸಬಹುದಿತ್ತು. ಉದ್ದೇಶಪೂರ್ವಕವಾಗಿ ವಕ್ಫ್ ಸಭೆಗಳಿಗೆ ಗೈರಾಗಿ, ಈಗ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರ ನಡುವೆ ಜಗಳ ಹಚ್ಚಲು ಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ದಶಕದಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇವರಿಗೆ ವಕ್ಫ್ ಕಾಯ್ದೆ ಬಗ್ಗೆ ತಕರಾರು ಇದ್ದರೆ, ಇಡೀ ಕಾಯ್ದೆಯನ್ನೇ ರದ್ದುಗೊಳಿಸಲಿ. ಅದನ್ನು ಬಿಟ್ಟು ತಿದ್ದುಪಡಿ ಮಾಡಲು ಹೊರಟಿರುವ ಉದ್ದೇಶವೇನು? ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುವ ಸಂಗತಿಗಳನ್ನು ಕಾಯ್ದೆಯಲ್ಲಿ ಹುಡುಕಿ, ತಿದ್ದುಪಡಿ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಆಗಿದೆ. ಹಿಂದೆ ಇದ್ದ ‘ಬಾಂಬೆ ಪಬ್ಲಿಕ್ ಟ್ರಸ್ಟ್’ (ಬಿಪಿಟಿ) ಕಾಯ್ದೆಯನ್ನು ಇವರು ಜಾರಿಗೆ ತರಲಿ. ಹಿಂದೂಗಳಿಗೆ ಸಂಬಂಧಿಸಿದ ಆಸ್ತಿ ಬೋರ್ಡ್‌ಗಳಲ್ಲಿ ಮುಸ್ಲಿಮರು ಸದಸ್ಯರಾಗಲಿ. ಮುಸ್ಲಿಂ ಬೋರ್ಡ್‌ಗಳಲ್ಲಿ ಹಿಂದೂಗಳು ಸದಸ್ಯರಾಗಲಿ. ಸೌಹಾರ್ದಯುತವಾಗಿ ಎಲ್ಲರೂ ನಡೆಯೋಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಮುಖ್ಯ ನಿರ್ಧಾರಗಳಿಂದ ಹಿಂದೆ ಸರಿದ ಮೋದಿ, ಇದು ಪ್ರಜಾಸತ್ತೆಯ ಗೆಲುವು
ಮಾಜಿ ಕಾರ್ಪೊರೇಟರ್ ಅಬ್ದುಲ್ ರಜಾಕ್ ಹೊರ್ತಿ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, “ವಕ್ಫ್ ಆಸ್ತಿ ಬಗ್ಗೆ ಯತ್ನಾಳ್‌ಗೆ ಏನು ತಿಳುವಳಿಕೆ ಇದೆ? ಅದು ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಇರುವ ಆಸ್ತಿ. ಇಲ್ಲಿ ರೈತರನ್ನು ಎತ್ತಿ ಕಟ್ಟಿ ವಿಜಯಪುರದಲ್ಲಿ ಗಲಭೆ ಎಬ್ಬಿಸುವುದೇ ಯತ್ನಾಳ್ ಅವರ ಉದ್ದೇಶವಾಗಿದೆ” ಎಂದು ದೂರಿದರು.
“ಯತ್ನಾಳ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶ ನಮ್ಮದಲ್ಲ. ಜನಸಾಮಾನ್ಯರ ನಡುವೆ ಭಯ ಹುಟ್ಟಿಸುವ ಕೆಲಸವನ್ನು ಯತ್ನಾಳ್ ಮೊದಲು ಬಿಡಬೇಕು. ಎಷ್ಟು ದಿನ ಅಂತ ನಾವು ಇವರ ಹುನ್ನಾರಕ್ಕೆ ಬಲಿಯಾಗಬೇಕು. ನಾವು ಬೇಡವಾಗಿದ್ದರೆ ನಮಗೆ ಇಲ್ಲಿ ಪ್ರತ್ಯೇಕ ಊರು ಮಾಡಿಕೊಡಲಿ. ನಮ್ಮ ಪಾಡಿಗೆ ನಾವು ಬದುಕುತ್ತೇವೆ. ವಿಜಯಪುರದಲ್ಲಿ ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲ. ಬರೀ ಕೋಮುದ್ವೇಷದ ಸಂಗತಿಗಳೇ ಯತ್ನಾಳ್ ಬಾಯಲ್ಲಿ ಬರುತ್ತವೆ. ಮೊನ್ನೆ ಗಣೇಶ ಚತುರ್ಥಿಯಲ್ಲೂ ಹೀಗೆ ಜಗಳ ಹಚ್ಚಲು ನೋಡಿದರು” ಎಂದು ಬೇಸರ ಹೊರಹಾಕಿದರು.
“ಸಿಡಿಯಲ್ಲಿ ಏನಿದೆ ಅಂತ ನಾವು ಈಗಲೇ ಹೇಳಲ್ಲ. ಅವರ ಮುಖವಾಡ ರಾಜ್ಯಕ್ಕೆ ಗೊತ್ತಾಗಬೇಕು. ಕೋರ್ಟ್‌ನಲ್ಲಿ ಸ್ಟೇ ತಂದಿದ್ದಾರೆ. ಅದು ತೆರವಾದ ಕೂಡಲೇ ಆ ಸಿಡಿ ಬಿಡುಗಡೆ ಮಾಡಲಿದ್ದೇವೆ. ಭಾವೈಕ್ಯತೆಯಿಂದ ಬದುಕಿದರೆ ನಾವು ಸಹಕರಿಸುತ್ತೇವೆ. ನಮಗೆ ಯತ್ನಾಳ್ ಬಗ್ಗೆ ವೈಯಕ್ತಿಕವಾಗಿ ಯಾವ ದ್ವೇಷವೂ ಇಲ್ಲ. ಸಮುದಾಯಗಳನ್ನು ಎಳೆದು ತರದೇ ರಾಜಕಾರಣ ಮಾಡಲಿ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ವಿಪರೀತ ಮಳೆ: ಅ.16ರಂದು ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಇನ್ನು ತಮ್ಮ ಸಿಡಿ ಬಿಡುಗಡೆ ಮಾಡುತ್ತೇವೆ ಅಂತ ಬಹಿರಂಗ ಎಚ್ಚರಿಕೆ ನೀಡಿರುವ ಮುಸ್ಲಿಂ ಮುಖಂಡರೊಬ್ಬರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. “ಅಪ್ಪನಿಗೆ ಹುಟ್ಟಿರುವವರು ಬಿಡುಗಡೆ ಮಾಡಲಿ” ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ʼʼಖಾದ್ರಿ ಎಂಬ ಒಬ್ಬ ವಕ್ಫ್ ಆಸ್ತಿ ಲೂಟಿಕೋರ, ಹಿಂದೆ ಜಿಲ್ಲೆಯಿಂದ ಗಡಿಪಾರಾಗಿದ್ದ. ನಾವು ವಕ್ಫ್ ಆಸ್ತಿಯ ಲೂಟಿಯ ಬಗ್ಗೆ ಪ್ರತಿಭಟನೆಗೆ ಮುಂದಾಗಿರುವಾಗ ನನ್ನ ಸಿಡಿ ಬಿಡುಗಡೆ ಮಾಡುತ್ತೀನಿ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಹಿಂದೆಯೂ ನಾನು ಹೇಳಿದ್ದೆ ʼಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಬಿಡುಗಡೆ ಮಾಡಲಿʼ ಎಂದು, ಈಗ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಇಂತಹ ಅಯೋಗ್ಯರ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ವೈಭವೀಕರಿಸುತ್ತಿರುವುದನ್ನೂ ಗಮನಿಸಿದ್ದೇನೆ. ಈಗಾಗಲೇ ಮಾನಹಾನಿ ಪ್ರಕರಣದ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದೇನೆ” ಎಂದು ಹೇಳಿದ್ದಾರೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.