2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರ ಹಾಗೂ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಎರಡರಲ್ಲೂ ಕೂಡ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಯಾವ ಕ್ಷೇತ್ರ ಉಳಿಸಿಕೊಳ್ಳಲಿದ್ದಾರೆ ಎಂಬುದನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
ಈ ಹಿನ್ನೆಲೆಯಲ್ಲಿ ಇಂದು(ಜೂನ್ 12) ಕೇರಳದ ಮಲಪ್ಪುರಂನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ರಾಹುಲ್ ಗಾಂಧಿ, “ಲೋಕಸಭೆಯಲ್ಲಿ ಪ್ರತಿನಿಧಿಸಲು ವಯನಾಡ್ ಕ್ಷೇತ್ರದ ಸಂಸದನಾಗಬೇಕೋ, ಉತ್ತರ ಪ್ರದೇಶದ ರಾಯ್‌ಬರೇಲಿಯ ಸಂಸದನಾಗಬೇಕೋ ಎಂಬ ಧರ್ಮಸಂಕಟದಲ್ಲಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.
“ವಯನಾಡ್ ಮತ್ತು ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬ ಸಂದಿಗ್ಧತೆಗೆ ಸಿಲುಕಿದ್ದೇನೆ. ಆದರೆ, ತಾವು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಎರಡೂ ಲೋಕಸಭಾ ಕ್ಷೇತ್ರಗಳ ಜನರು ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.
I have a dilemma in front of me — Will I be a Member of Parliament of Wayanad or Raebareli?
Unfortunately, like the Prime Minister, I am not guided by God. I am a human being.
You saw how the Prime Minister said ‘400-paar’ which disappeared and then came ‘300-paar’. After… pic.twitter.com/OCD3BXRmm0
— Congress (@INCIndia) June 12, 2024
ಲೋಕಸಭೆಗೆ ಎರಡನೇ ಅವಧಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ವಯನಾಡ್ ಜನತೆಗೆ ಧನ್ಯವಾದ ಅರ್ಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “‘ನಾನು ವಯನಾಡ್ ಸಂಸದನಾಗಬೇಕೇ ಅಥವಾ ರಾಯ್‌ಬರೇಲಿಯ ಸಂಸದನಾಗಬೇಕೇ ಎಂಬ ಸಂದಿಗ್ಧತೆ ನನ್ನ ಮುಂದಿದೆ. ನನಗೆ ಪ್ರಧಾನಿ ಮೋದಿಯವರ ಥರ ದೇವರಿಂದ ಸಂದೇಶ ಬರುವುದಿಲ್ಲ. ಮೋದಿಯವರಿಗಾದರೆ ಪ್ರಧಾನಿಯಾಗಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದರ ಕುರಿತು ದೇವರಿಂದ ಯಾವುದೇ ನಿರ್ದೇಶನಗಳನ್ನು ಸ್ವೀಕರಿಸುತ್ತಾರೆ. ನನಗೆ ಅಂತಹ ದೇವರಿಲ್ಲ. ಆದರೆ ನನ್ನ ದೇವರು ದೇಶದ ಬಡ ಜನರು” ಎಂದು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ‘ಪರಮಾತ್ಮ ಕಳುಹಿಸಿದ್ದು’ ಎಂಬ ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿದರು.
ತಮ್ಮ ಮಾತಿನಲ್ಲಿ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕ, “ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿಗೆ ಹಸ್ತಾಂತರಿಸುವಂತೆ ದೇವರು ಪ್ರಧಾನಿಗೆ ನಿರ್ದೇಶಿಸುತ್ತಾನೆ. ಆದರೆ, ನಾನು ಮನುಷ್ಯ. ನನ್ನ ದೇವರು ದೇಶದ ಬಡ ಜನರು. ಆದ್ದರಿಂದ, ನನಗೆ ಇದು ಸುಲಭವಾಗಿದೆ. ನಾನು ಜನರೊಂದಿಗೆ ಮಾತನಾಡುತ್ತೇನೆ ಮತ್ತು ಅವರು ಏನು ಮಾಡಬೇಕೆಂದು ನನಗೆ ಹೇಳುತ್ತಾರೆ” ಎಂದು ಹೇಳಿದರು.
“2024ರ ಲೋಕಸಭಾ ಚುನಾವಣೆಯ ಹೋರಾಟವು ಭಾರತದ ಸಂವಿಧಾನದ ರಕ್ಷಣೆಗಾಗಿ ನಡೆಯಿತು. ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ, ವಿನಯದಿಂದ, ಅಹಂಕಾರವನ್ನು ಮಾನವೀಯತೆಯಿಂದ ಸೋಲಿಸಲಾಗಿದೆ. ಭಾರತದ ಜನರು ಅವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿರುವುದರಿಂದ ಪ್ರಧಾನಿ ಮೋದಿ ಈಗ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಕೇಂದ್ರದಲ್ಲಿ ರಚನೆಯಾದ ಸರ್ಕಾರವು ವಿಕಲಾಂಗ ಸರ್ಕಾರವಾಗಿದೆ” ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಇಲ್ಲಿ ಅವರು 647,445 ಮತಗಳನ್ನು ಅಥವಾ ಒಟ್ಟು 60% ಮತಗಳನ್ನು ಪಡೆದಿದ್ದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ನ ಅನ್ನಿ ರಾಜಾ 283,023 (26% ಮತಗಳನ್ನು) ಪಡೆದು ಇಲ್ಲಿ ಎರಡನೇ ಸ್ಥಾನ ಗಳಿಸಿದ್ದರು.
ಮತ್ತೊಂದೆಡೆ, ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಕೂಡ ಸ್ಪರ್ಧಿಸಿದ್ದ ರಾಹುಲ್ 687,649 (66%) ಮತಗಳನ್ನು ಗಳಿಸಿದರೆ, ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ 297,619 (29%) ಮತಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದ್ದರು. ರಾಹುಲ್ ಗಾಂಧಿಯವರ ತಾಯಿ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷೆ, 5 ಬಾರಿ ರಾಯ್ ಬರೇಲಿಯ ಸಂಸದೆ ಸೋನಿಯಾ ಗಾಂಧಿಯವರು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ನಂತರ ರಾಹುಲ್ ಗಾಂಧಿ ಇಲ್ಲಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
