- ಸಮಯ, ಸಂದರ್ಭ ನೋಡಿ ಬಾಲ ಕಟ್ ಮಾಡುತ್ತೇವೆ: ಎಚ್ಚರಿಕೆ
- ದಲಿತ ಸಮುದಾಯದ ನಾಯಕ ರಾಜ್ಯಾಧ್ಯಕ್ಷ ಆದರೆ ಸಂತೋಷ
ಇಡೀ ದೇಶದಲ್ಲಿ ಬಿಜೆಪಿ ಹವಾ ಇದೆ. ರಾಜ್ಯದಲ್ಲಿ ನಮ್ಮ ಮೇಲೆ ಈಗ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ಕಾಂಗ್ರೆಸ್‌ನವರನ್ನು ನಾವು ನಮ್ಮ ಪಕ್ಷಕ್ಕೆ ಕರೆದುಕೊಂಡು ಈಗ ಅನುಭವಿಸುತ್ತಿದ್ದೇವೆ. ಪಕ್ಷದೊಳಗೆ ಅಶಿಸ್ತು ವಾತಾವರಣ ನಿರ್ಮಾಣವಾಗಿದೆ. ಸಮಯ, ಸಂದರ್ಭ ನೋಡಿಕೊಂಡು ಅವರ ಬಾಲ ಕಟ್ ಮಾಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಬಹಿರಂಗ ಆಪಾದನೆ ಸರಿಯಲ್ಲ. ಅಸಮಾಧಾನ ಹೊಂದಿರುವ ನಾಯಕರ ಜೊತೆ ಚರ್ಚಿಸಲಾಗುವುದು. ಕೂಡಲೇ ವಿರೋಧ ಪಕ್ಷದ ನಾಯಕರನ್ನು ನಮ್ಮ ವರಿಷ್ಠರು ಆಯ್ಕೆ ಮಾಡುತ್ತಾರೆ. ದಲಿತ ಸಮುದಾಯದ ನಾಯಕ ರಾಜ್ಯಾಧ್ಯಕ್ಷ ಆಗುತ್ತಾರೆ ಎಂದರೆ ನನ್ನ ವಿರೋಧ ಇಲ್ಲ. ಯಾರು ಬೇಕಾದರೂ ಆಗಬಹುದು” ಎಂದರು.
“ವಿಧಾನಸಭೆ ಚುನಾವಣೆ ಕೆಟ್ಟ ಕನಸು ಅಂತ ಮರೆತು ನಾವು ಹೋರಾಡುತ್ತೇವೆ. ರಾಜ್ಯ ಮತ್ತು ದೇಶದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆರಂಭದಲ್ಲಿ ಬಿಜೆಪಿ ಎರಡು ಸಂಸದ ಸ್ಥಾನ ಪಡೆದಿತ್ತು. ರಾಜ್ಯದಲ್ಲಿ ಯಡಿಯೂರಪ್ಪ ಅವರ ಕಾಲದಲ್ಲಿ ಬಿಜೆಪಿ ಎರಡು ಶಾಸಕರನ್ನು ಪಡೆದಿತ್ತು. ಕಾಲ ಬದಲಾಗಲಿಲ್ಲವೇ? ಮುಂದೆಯೂ ಬದಲಾಗಲಿದೆ” ಎಂದರು.
ಕಾಂಗ್ರೆಸ್‌ಗೆ ಮೈಮೇಲೆ ಜ್ಞಾನವಿರಲಿಲ್ಲವೇ?
“ಕಾಂಗ್ರೆಸ್‌ನವರು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವಾಗ ಮೈಮೇಲೆ ಜ್ಞಾನ ಇಟ್ಟುಕೊಂಡಿರಲಿಲ್ಲವೇ? ಉಚಿತ ಅಕ್ಕಿ ಘೋಷಿಸುವ ಮೊದಲು ರಾಜ್ಯ ನಾಯಕರನ್ನು ಮತ್ತು ಕೇಂದ್ರ ನಾಯಕರನ್ನು ಕಾಂಗ್ರೆಸ್ ಕೇಳಿತ್ತಾ? ಈಗ ಆರೋಪ ಮಾಡುತ್ತಾರೆ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು. ಸರ್ವರ್ ಹ್ಯಾಕ್ ಆಗಿದೆ ಎಂದು ಹೇಳುತ್ತಾರಲ್ಲ, ಇವರಿಗೆ ನಾಚಿಕೆ ಆಗುದಿಲ್ಲವಾ?” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಚುನಾವಣೆಯಲ್ಲಿ ನನ್ನ ಸೋಲಿಗೆ ಡಾ. ಕೆ ಸುಧಾಕರ್ ಕಾರಣ; ಎಂಟಿಬಿ ನಾಗರಾಜ್ ಆರೋಪ
80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ: ಜೋಶಿ
ಈಗಾಗಲೇ ರಾಜ್ಯದ ಜನತೆಗೆ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ದೇಶದಲ್ಲಿ ಒಟ್ಟು 80 ಕೋಟಿ ಜನರಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ. ಇದು ಮುಂದುವರಿಯಲಿದೆ. ಅಂತ್ಯೋದಯ ಕಾರ್ಡ್‌ದಾರರಿಗೆ 35 ಕೆಜಿ ಅಕ್ಕಿ ಕೇಂದ್ರ ಕೊಡುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ನಾಲ್ಕು ಜನರಿದ್ದರೆ 5 ಕೆಜಿ ಹೆಚ್ಚಿಗೆ ಕೊಡುತ್ತೇವೆ ಎಂದಿದೆ. ಇದೇನಾ ಅನ್ನ ಭಾಗ್ಯ ಯೋಜನೆ?” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
“ದೇಶದ ಜನತೆಗೆ ಅಚ್ಛೆ ದಿನ್ ಬಂದಿದೆ. ಕಾಂಗ್ರೆಸ್‌ನವರಿಗೆ ಅಚ್ಛೆ ದಿನ್ ಬರುತ್ತದೆ ಎಂದು ನಾವು ಎಲ್ಲೂ ಹೇಳಿಲ್ಲ. ಸುಮ್ಮನೇ ಸುಳ್ಳು ಹೇಳಿಕೊಂಡು ಮತದಾರರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಪ್ರತಿ ಗ್ಯಾರಂಟಿಗೂ ನಿಂಬಂಧನೆ ಹಾಕುತ್ತಿದ್ದಾರೆ. ಇಷ್ಟೇ ಕಾಂಗ್ರೆಸ್ ಹಣೆಬರಹ” ಎಂದು ಹರಿಹಾಯ್ದರು.
“ಆಹಾರ ವಿಚಾರದಲ್ಲಿ ರಾಜಕಾರಣ ಮಾಡುತ್ತಿರವುದು ಕಾಂಗ್ರೆಸ್. ಉಚಿತ ಅಕ್ಕಿ ಘೋಷಿಸುವ ಮುನ್ನ ಕೇಂದ್ರದಿಂದ ಪಡೆಯುವ ಆಸೆ ಇದ್ದರೆ ಅದನ್ನು ಮೊದಲೇ ಹೇಳಬಹುದಿತ್ತು. ಈಗ ಕೇಂದ್ರದ ಮೇಲೆ ಆರೋಪ ಮಾಡುವುದಲ್ಲ. ಮುಕ್ತ ಮಾರುಕಟ್ಟೆಗೆ ಅಕ್ಕಿ ಕೊಡಲು ಕೇಂದ್ರ ತೀರ್ಮಾನಿಸಿದೆ. ಇದರಲ್ಲಿ ರಾಜಕಾರಣ ಮಾಡಬೇಡಿ. ಬಫರ್ ಸ್ಟಾಕ್ ಮಾಡ್ಕೋಬೇಕು. ಅದಕ್ಕಾಗಿ ನಾವು ಅಕ್ಕಿ ಕೊಡುತ್ತಿಲ್ಲ” ಎಂದರು.