“ನೀವು ರೈತರ, ಕಾರ್ಮಿಕರ, ಮಹಿಳೆಯರ, ಅಲ್ಪಸಂಖ್ಯಾತರ, ದಲಿತರ ವಿರುದ್ಧದ ನೀತಿಯನ್ನು ನೀವು ಬದಲಾಯಿಸದೇ ಇದ್ದರೆ, ನಿಮ್ಮನ್ನೇ ಮುಂದಿನ ದಿನಗಳಲ್ಲಿ ಬದಲಾಯಿಸುತ್ತೇವೆ”…ಹೀಗಂತ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಬೆಂಗಳೂರಿನ ವಿವಿಧ ಸಂಘಟನೆಗಳು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಹಾಧರಣಿಯಲ್ಲಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಹಕ್ಕೊತ್ತಾಯದಲ್ಲಿ ತಿಳಿಸಿದೆ.
ಸಾಮಾಜಿಕ ಕಾರ್ಯಕರ್ತ ಮಹಾಂತೇಶ್ ಹಕ್ಕೊತ್ತಾಯ ಪತ್ರವನ್ನು ಮಹಾಧರಣಿಯ ವೇದಿಕೆಯಲ್ಲಿ ಓದಿದರು. ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ಮುಂದೆ ದುಡಿಯುವ ಜನರ ಮಹಾಧರಣಿ ಸಲ್ಲಿಸಿದ ಪ್ರಮುಖ ಹಕ್ಕೊತ್ತಾಯಗಳು ಹೀಗಿವೆ.
- ರೈತರ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ಶಿಫಾರಸ್ಸಿನ ಸೂತ್ರ ಸಿ2+50% ಪ್ರಕಾರ ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು. ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳವಾಗಬೇಕು. ರೈತರು ಬಳಸುವ ಟ್ರಾಕ್ಟರ್, ಟಿಲ್ಲರ್, ಹಾರ್ವೆಸ್ಟರ್ ಮುಂತಾದ ಯಂತ್ರೋಪಕರಣಗಳ ಮೇಲೆ ನ್ಯಾಯಸಮ್ಮತ ಎಂ ಆರ್ ಪಿ ನಿಗದಿಯಾಗಬೇಕು ಮತ್ತು ಬಹಿರಂಗವಾಗಿ ಘೋಷಣೆಯಾಗಬೇಕು. ರೈತರ ಆತ್ಮಹತ್ಯೆ ತಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು.
- ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಜಾರಿ ಮಾಡಬೇಕು. ಸಿಂಘು ಗಡಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಜಾಗ, ಅವರ ಕುಟುಂಬಕ್ಕೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು. ಹೋರಾಟ ಸಂದರ್ಭದಲ್ಲಿ ರೈತರ ಮೇಲೆ ಹಾಕಿರುವ ಎಲ್ಲ ಪೋಲಿಸ್ ಕೇಸ್‌ಗಳನ್ನು ವಾಪಸ್ ಪಡೆಯಬೇಕು.
- ಕಾರ್ಪೊರೇಟ್ ಪರವಾದ ಪಿಎಂ ಫಸಲ್ ಬಿಮಾ ಯೋಜನೆಯನ್ನು ರದ್ದುಪಡಿಸಿ, ಎಲ್ಲ ಬೆಳೆಗಳಿಗೂ ವಿಮೆ ಒದಗಿಸುವ ಸಮಗ್ರ ಸಾರ್ವಜನಿಕ ವಿಮಾ ಯೋಜನೆ ಜಾರಿ ಹಾಗೂ ಸಮಗ್ರ ಸಾಲ ಮನ್ನಾ ಯೋಜನೆ ಜಾರಿಗೆ ತರಬೇಕು.
- ರಾಷ್ಟ್ರೀಯ ಕನಿಷ್ಠ ವೇತನ ಮಾಸಿಕ 26,000 ರೂ ನಿಗದಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಖಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಖಾಯಂಗೆ ಶಾಸನ ರೂಪಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ಎಫ್‌ಟಿಇ ಪದ್ಧತಿಯನ್ನು ರದ್ದುಪಡಿಸಬೇಕು.
- ಎಲ್ಲ ರೀತಿಯ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸಿ, ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಸುರಕ್ಷತೆಯನ್ನು ಒದಗಿಸಬೇಕು. ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿರುವ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಯೋಜನೆ, ತಾಯ್ತನದ ಆರೈಕೆ ಸೌಲಭ್ಯ, ಜೀವ ಹಾಗೂ ಅಂಗವೈಕಲ್ಯ ವಿಮೆ, ಮತ್ತಿತರ ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕು.
- ಹೊಸ ಪಿಂಚಣಿ ಯೋಜನೆ(NPS)ಯನ್ನು ರದ್ದು ಮಾಡಿ, ಹಳೇ ಪಿಂಚಣಿ ಯೋಜನೆ(OPS)ಜಾರಿ ಮಾಡಬೇಕು.
- ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು. ಖಾಲಿಯಿರುವ ಎಲ್ಲ ಉದ್ಯೋಗಗಳನ್ನು ಭರ್ತಿ ಮಾಡಬೇಕು. ನಿರುದ್ಯೋಗಿ ಯುವಜನತೆಗೆ ಕೆಲಸ ಒದಗಿಸಲು, ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕೆಲಸ ದಿನಗಳನ್ನು 200 ದಿನಕ್ಕೆ ವಿಸ್ತರಿಸಿ, ರೂ.600 ಕೂಲಿ ನಿಗದಿ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಭಾಗಕ್ಕೂ ವಿಸ್ತರಿಸಬೇಕು.
- ವಿದ್ಯುತ್ ರಂಗವನ್ನು ಖಾಸಗೀಕರಣಗೊಳಿಸುವ ವಿದ್ಯುತ್ ತಿದ್ದುಪಡಿ ಮಸೂದೆ 2022 Aನ್ನು ಸಂಸತ್ತಿನಿಂದ ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಪ್ರೀ ಪೇಯ್ಡ್ ಮೀಟರ್ ಅಳವಡಿಸಬಾರದು.
- ಎಲ್ಲ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ ರದ್ದಾಗಬೇಕು.
- ಬೆಲೆ ಏರಿಕೆ ನಿಯಂತ್ರಿಸಬೇಕು. ಅಗತ್ಯ ವಸ್ತುಗಳಾದ ಆಹಾರ, ಔಷಧಿ, ನೇಕಾರಿಕೆ, ಕೃಷಿ ಯಂತ್ರೋಪಕರಣಗಳ ಮೇಲಿನ ಜಿಎಸ್ ಟಿ ರದ್ದುಪಡಿಸಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು.
- ಕೋವಿಡ್ ನೆಪದಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು, ಕ್ರೀಡಾಪಟುಗಳಿಗೆ ರದ್ದುಪಡಿಸಿದ್ದ ರೈಲ್ವೆ ಪ್ರಯಾಣ ರಿಯಾಯಿತಿಯನ್ನು ಪುನರ್ ಸ್ಥಾಪಿಸಬೇಕು. ರೈಲ್ವೆ ಖಾಸಗೀಕರಣ ನಿಲ್ಲಿಸಬೇಕು.
- ಆಹಾರ ಭದ್ರತೆ, ಪೋಷಕಾಂಶ ಸುರಕ್ಷತೆಯನ್ನು ಖಾತರಿಪಡಿಸಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು. ಜೀವನಾವಶ್ಯಕ ಅಗತ್ಯ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ವಿತರಿಸಬೇಕು. ನೇರ ನಗದು ವರ್ಗಾವಣೆ ರದ್ದುಪಡಿಸಬೇಕು.
- ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಉಚಿತ ನೀರು ಮತ್ತು ನೈರ್ಮಲ್ಯವನ್ನು ಮೂಲಭೂತ ಹಕ್ಕಾಗಿ ಒದಗಿಸಬೇಕು. ಜನ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ(NEP)-2020 ರದ್ದಾಗಬೇಕು.
- ಅರಣ್ಯ ಹಕ್ಕು ಕಾಯ್ದೆ-2006ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಕಾರ್ಪೊರೇಟ್ ಪರವಾದ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ-2023 ಹಾಗೂ ಜೀವ ವೈವಿಧ್ಯ ಕಾಯ್ದೆಯನ್ನು ರದ್ದುಪಡಿಸಬೇಕು.
- ಖನಿಜ ಹಾಗೂ ಲೋಹ ಗಣಿಗಾರಿಕೆ ಕಾಯ್ದೆಗೆ ತಿದ್ದುಪಡಿ ಮಾಡಿ ಕಲ್ಲಿದ್ದಲು ಸೇರಿದಂತೆ ಗಣಿ ಕಂಪನಿಗಳ ಲಾಭದ ಶೇ.50ರಷ್ಟನ್ನು ಆದಿವಾಸಿಗಳು, ರೈತರು ಮುಂತಾದ ಸ್ಥಳೀಯ ನಿವಾಸಿಗಳ ಅಭಿವೃದ್ಧಿಗೆ ಬಳಸಬೇಕು.
- ಗೃಹ ಆಧಾರಿತ ಕಾರ್ಮಿಕರಿಗೆ ILO ಸಮ್ಮೇಳನ ಶಿಫಾರಸ್ಸುಗಳ ಖಾತ್ರಿಗೆ ಸೂಕ್ತ ಕಾನೂನು ರಚಿಸಬೇಕು. ಅಂತರ್ ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ) ಕಾಯ್ದೆ 1979 ಅನ್ನು ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಬಲಪಡಿಸಬೇಕು.
- ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಿಯಮಿತವಾಗಿ ಆಯೋಜಿಸಬೇಕು. ಅದರ ನಿರ್ಣಯಗಳನ್ನು ಸರ್ಕಾರಗಳು ಜಾರಿ ಮಾಡಬೇಕು.
- ರೈತ ಮಹಿಳೆಯರನ್ನು ರೈತರು ಎಂದು ಪರಿಗಣಿಸಿ ರೈತರಿಗೆ ಸಿಗುವ ಎಲ್ಲ ಸೌಲಭ್ಯ ಸಿಗುವಂತಾಗಬೇಕು ಮತ್ತು ಸ್ವಸಹಾಯ ಗುಂಪು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಕೃಷಿಗಾಗಿ ಸಾಲ ಪಡೆದ ಮಹಿಳೆಯರ ಸಾಲ ಮನ್ನಾ ಮಾಡುವಂತಾಗಬೇಕು.
- ಮಹಿಳೆ, ದಲಿತ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಜಾತಿ, ಧರ್ಮ, ಅಂತಸ್ತುಗಳ ಹೆಸರಿನಲ್ಲಿ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆ, ಹಿಂಸೆ ತಡೆಗಟ್ಟಲು ಕಾನೂನು ಮತ್ತು ತ್ವರಿತ ವಿಶೇಷ ಮಹಿಳಾ ನ್ಯಾಯಲಗಳನ್ನು ಸ್ಥಾಪಿಸಬೇಕು.
- ಸಂವಿಧಾನದ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಭಾಷೆ, ವೈವಿಧ್ಯತೆ, ಸಾಂಸ್ಕೃತಿಕತೆ, ಸಮಾನತೆ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ ಮುಂತಾದವುಗಳ ಮೇಲಿನ ಆಕ್ರಮಣವನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು.