- ಮಾರ್ಕೆಟ್ ವ್ಯಾಲ್ಯೂಗೆ ತಕ್ಕಂತೆ ಗೈಡ್‌ಲೈನ್ಸ್ ವ್ಯಾಲ್ಯೂ ಬದಲಾವಣೆ
- ‘ಬದಲಾವಣೆಯಿಂದ ಜಮೀನು ಅಕ್ರಮಗಳನ್ನು ತಡೆಯಬಹುದು’
ನೋಂದಣಿ ಇಲಾಖೆಯ ಗೈಡ್‌ಲೈನ್ಸ್ ವ್ಯಾಲ್ಯೂ 2018 ರಿಂದ ಇದುವರೆಗೆ ರಿವೈಸ್ ಆಗಿಲ್ಲ. ಇದರಿಂದ ರೈತರಿಗೂ ಮಾರಾಟಗಾರರಿಗೂ ಅನ್ಯಾಯ ಆಗುತ್ತಿದೆ. ಗೈಡ್‌ಲೈನ್ಸ್ ವ್ಯಾಲ್ಯೂ ರಿವಿಷನ್ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಬೆಂಗಳೂರಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮಾರ್ಕೆಟ್ ವ್ಯಾಲ್ಯೂಗೆ ತಕ್ಕಂತೆ ಗೈಡೆನ್ಸ್ ವ್ಯಾಲ್ಯೂ ಬದಲಾವಣೆ ಮಾಡುತ್ತೇವೆ. ಒಂದೇ ಸಲ ಹೆಚ್ಚಳ ಮಾಡಲು ಸಾಧ್ಯವಿಲ್ಲ. ನಾವಿನ್ನೂ ಕೂಡ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ” ಎಂದರು.
“ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ. ಏಪ್ರಿಲ್‌ನಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಕಾವೇರಿ-2 ಅಳವಡಿಸಲಾಗಿದ್ದು, 251 ನೋಂದಣಿ ಕಚೇರಿಗಳಲ್ಲಿ ಇಂದು (ಜೂ.19) ಸಂಜೆಯೊಳಗೆ ಕಾವೇರಿ-2 ಜಾರಿಯಾಗಲಿದೆ” ಎಂದರು. ‘ಕಾವೇರಿ’ ಎಂಬುದು ತಂತ್ರಾಂಶದ ಹೆಸರಾಗಿದ್ದು, ಇಲಾಖೆಯ ಸೇವೆಗಳನ್ನು ಗಣಕೀಕರಣಗೊಳಿಸಲು ಈ ತಂತ್ರಾಂಶ ಬಳಸಾಗುತ್ತದೆ.
“ಎಲ್ಲ ದಾಖಲೆಗಳನ್ನು ಕಾವೇರಿ-2ನಲ್ಲಿ ಸಲ್ಲಿಸಬಹುದು. ಸಬ್ ರಿಜಿಸ್ಟ್ರಾರ್ ಕೂಡ ಆನ್ಲೈನ್ನಲ್ಲಿ ದಾಖಲೆ ಪರಿಶೀಲಿಸುತ್ತಾರೆ. ನೋಂದಣಿ ಶುಲ್ಕವನ್ನೂ ಆನ್ಲೈನ್ನಲ್ಲೇ ಸಲ್ಲಿಕೆ ಮಾಡಬಹುದು. ಇದರಿಂದ ರಾಜ್ಯ ಸರ್ಕಾರಕ್ಕೂ ಕೂಡ ರಿಜಿಸ್ಟ್ರೇಷನ್ ಬಗ್ಗೆ ಮಾಹಿತಿ ಸಿಗಲಿದೆ. ಇದರಿಂದ ಜಮೀನು ಅಕ್ರಮಗಳನ್ನು ತಡೆಯಬಹುದು” ಎಂದರು.
ಈ ಸುದ್ದಿ ಓದಿದ್ದೀರಾ? ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ
ಈಗಾಗಲೇ ಕಾವೇರಿ 1 ಚಾಲ್ತಿಯಲ್ಲಿದ್ದು, ಇದರ ನಡುವೆ ಕಾವೇರಿ 2ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕಾವೇರಿ-1 ದಿನಕ್ಕೆ 60ರಷ್ಟು ನೋಂದಣಿ ಆಗಿದೆ. ಆದರೆ, ಕಾವೇರಿ 2ರಲ್ಲಿ 65ರಷ್ಟು ಆಗಿದೆ. ಒಂದು ದಿನದಲ್ಲಿ 132 ಡಾಕ್ಯುಮೆಂಟ್ ಕೂಡ ರಿಜಿಸ್ಟ್ರೇಷನ್ ಆಗಿವೆ. ಸಿಸ್ಟಮ್ ಸರಿ ಇದೆ ಎನ್ನುವುದಕ್ಕೆ ಇದು ಉದಾಹರಣೆ. ಹೀಗಾಗಿ ಕಾವೇರಿ-2 ಎಂಬ ಪದ್ಧತಿ ತರಲಾಗಿದೆ. ಹೀಗೆ, ಬಳ್ಳಾರಿ, ಗುಲ್ಬರ್ಗಾ,
ಚಾಮರಾಜನಗರ ಸೇರಿದಂತೆ ಹಲವೆಡೆ ಕಾವೇರಿ 2ಗೆ ಸ್ಪಂದನೆ ವ್ಯಕ್ತವಾಗುತ್ತಿದೆ” ಎಂದರು.
ಆದಾಯ ಲೆಕ್ಕಾಚಾರ
“ನೋಂದಣಿ ಪ್ರಕ್ರಿಯೆಯಿಂದ 2022ರಲ್ಲಿ 1,024 ಕೋಟಿ ರೂ. ಆದಾಯ ಬಂದಿತ್ತು. 2023ರ ಮೇ ನಲ್ಲಿ 1,357 ಕೋಟಿ ರೂ. ಆದಾಯ ಬಂದಿದೆ. ಆಡಳಿತ ಸುಧಾರಣೆ ಆಗಬೇಕು, ಜನರಿಗೆ ಸರ್ಕಾರದ ಜೊತೆಗೆ ಸಂಪರ್ಕ ಇದ್ದಾಗ ವಿಳಂಬ ಇಲ್ಲದೆ ಕೆಲಸ ಆಗಬೇಕು ಎಂಬುದು ಸರ್ಕಾರದ ಆದ್ಯತೆ. ನೋಂದಣಿ ಇಲಾಖೆಯಲ್ಲಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು” ಎಂದರು.