ದೇಶದಲ್ಲಿರುವ ಪ್ರತಿಯೊಂದು ಪ್ರಾದೇಶಿಕ ಪಕ್ಷವನ್ನು ಒಡೆದು ಮುಗಿಸುವುದು ಬಿಜೆಪಿಯ ಗುರಿ. ಈಗ ಮಹಾರಾಷ್ಟ್ರದಲ್ಲಿ ನಮಗೆ, ದೆಹಲಿಯಲ್ಲಿ ಕೇಜ್ರಿವಾಲ್‌ಗೆ ಏನಾಗಿಯೋ, ಅದು ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೂ ಆಗಬಹುದು ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ಮತದಾರರು ಮತ್ತು ಇವಿಎಂ ವಂಚನೆಯನ್ನು ಉಲ್ಲೇಖಿಸಿ ದೇಶದ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. “ಇಂದು ನಮ್ಮ ದೇಶದ ಭವಿಷ್ಯ ಅಪಾಯದಲ್ಲಿದೆ. ದೇಶದಲ್ಲಿ ಮತದಾರರ ವಂಚನೆ ಮತ್ತು ಇವಿಎಂ ವಂಚನೆಯ ಮಧ್ಯೆ ನಮ್ಮ ಮತ ಎಲ್ಲಿಗೆ ಹೋಗುತ್ತಿದೆ ಎಂದು ನಮಗೇ ಗೊತ್ತಾಗುತ್ತಿಲ್ಲ. ದೇಶದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಯುತ್ತಿವೆಯೇ? ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದೇವೆ ಭಾವಿಸಿದ್ದೇವೆ. ಆದರೆ, ಅದು ಇದು ಪ್ರಜಾಪ್ರಭುತ್ವವಲ್ಲ. ನಮಗೆ, ಕೇಜ್ರಿವಾಲ್ ಅವರಿಗೆ ಮತ್ತು ಕಾಂಗ್ರೆಸ್‌ಗೆ ಏನಾಯಿತೋ, ಭವಿಷ್ಯದಲ್ಲಿ ನಿತೀಶ್, ಆರ್‌ಜೆಡಿ ಮತ್ತು ಚಂದ್ರಬಾಬು ನಾಯ್ಡು ಅವರಿಗೂ ಆಗಬಹುದು” ಎಂದು ಹೇಳಿದ್ದಾರೆ.
“ದೇಶದ ಪ್ರತಿಯೊಂದು ಪ್ರಾದೇಶಿಕ ಪಕ್ಷವನ್ನು ಒಡೆದು ಮುಗಿಸುವುದು ಬಿಜೆಪಿಯ ಕನಸು. ಇದೇ ಅವರು ಪ್ರಜಾಪ್ರಭುತ್ವಕ್ಕೆ ಕೊಡುತ್ತಿರುವ ಕೊಡುಗೆ” ಎಂದಿದ್ದಾರೆ.
ಇಂಡಿಯಾ ಒಕ್ಕೂಟದ ನಾಯಕರ ಭೇಟಿಯ ಕುರಿತು ಮಾತನಾಡಿದ ಆದಿತ್ಯ ಠಾಕ್ರೆ, ದೇಶದ ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
“ಇಂಡಿಯಾ ಒಕ್ಕೂಟದಲ್ಲಿ ಮಾರ್ಗಸೂಚಿ ಸಿದ್ಧಪಡಿಸುವ ಅನೇಕ ಹಿರಿಯ ನಾಯಕರಿದ್ದಾರೆ. ಇಂಡಿಯಾ ಒಕ್ಕೂಟದ ಜಂಟಿ ನಾಯಕತ್ವವನ್ನು ಹೊಂದಿದೆ. ಒಬ್ಬನೇ ಒಬ್ಬ ನಾಯಕನಲ್ಲ. ಇದು ಅಹಂಕಾರದ ಹೋರಾಟ ಅಥವಾ ಒಬ್ಬರ ಲಾಭಕ್ಕಾಗಿ ಅಲ್ಲ, ಬದಲಾಗಿ ದೇಶದ ಭವಿಷ್ಯಕ್ಕಾಗಿ ಹೋರಾಟ” ಎಂದಿದ್ದಾರೆ.
ಹರಿಯಾಣ, ಮಹಾರಾಷ್ಟ್ರ ಮತ್ತು ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನದೊಂದಿಗೆ, ಇಂಡಿಯಾ ಒಕ್ಕೂಟದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ವಿರುದ್ಧದ ಹೋರಾಟದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.
ಕೆಲ ದಿನಗಳ ಹಿಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಶೇಷವಾಗಿ 2024ರ ಲೋಕಸಭೆ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳ ನಡುವೆ ಹೊಸ ಮತದಾರರ ಸಂಖ್ಯೆಯಲ್ಲಿ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಯ ನಂತರ ಕೇವಲ ಐದು ತಿಂಗಳಲ್ಲಿ 39 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಅವರು ಹೇಳಿದ್ದರು.
ಮತದಾರರ ನೋಂದಣಿ ಅಂಕಿ ಅಂಶಗಳಲ್ಲಿನ ವ್ಯತ್ಯಾಸಗಳನ್ನು ಅವರು ಪ್ರಶ್ನಿಸಿದ್ದರು. ನೋಂದಾಯಿತ ಮತದಾರರ ಸಂಖ್ಯೆ ಮಹಾರಾಷ್ಟ್ರದ ಒಟ್ಟು ವಯಸ್ಕ ಜನಸಂಖ್ಯೆಯನ್ನು ಮೀರಿದೆ ಎಂದು ಆರೋಪಿಸಿದ್ದರು.