ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಮತ್ತೆ ಮುಗಿಬಿದ್ದಿರುವ ಕಾಂಗ್ರೆಸ್, ಅವರ ಮೌನವನ್ನು ಪ್ರಶ್ನಿಸಿದೆ.
ಬುಧವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದೀರ್ಘ ಟ್ವೀಟ್ ಮಾಡಿದ್ದು, “ಆಶ್ಚರ್ಯಕರ ಎಂಬಂತೆ ಪ್ರಧಾನಿಯವರು ಬುಧವಾರ ನವದೆಹಲಿಯಲ್ಲೇ ನೆಲೆಸಿದ್ದಾರೆ. ಆದರೆ ಹೊಸ ಉದ್ಘಾಟನೆಗಳಿಗೆ, ಮರುಬ್ರಾಂಡಿಂಗ್‌ಗೆ ಅಥವಾ ಹಿಂದಿನ ಕೆಲಸಕ್ಕಾಗಿ ಕ್ರೆಡಿಟ್ ಪಡೆಯಲು ಮೋದಿಯವರು ದೇಶಾದ್ಯಂತ ಪ್ರವಾಸ ಮಾಡುತ್ತಿಲ್ಲ ಯಾಕೆ? ಎಂದು ಕೇಳಿದ್ದಾರೆ.
ಈಗ ರದ್ದಾಗಿರುವ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಸಂಸ್ಥೆಗಳು ಮತ್ತು ಅವುಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಒಂದು ದಿನದ ನಂತರ ಸರ್ಕಾರದ ವಿರುದ್ಧ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್‌ನಲ್ಲಿ ಸರಣಿ ಪ್ರಶ್ನೆ ಕೇಳಿರುವ ಜೈರಾಮ್ ರಮೇಶ್, ಯಾವ ರಾಜಕೀಯ ಪಕ್ಷಕ್ಕೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸುವುದನ್ನು ತಡೆಯಲು ಅಥವಾ ವಿಳಂಬ ಮಾಡಲು ಮೋದಿ ಸರ್ಕಾರವು ಎಸ್‌ಬಿಐ ಮೂಲಕ ಸತತವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದು, ಪ್ರಧಾನ ಮಂತ್ರಿಗಳು ಯಾಕಾಗಿ ಹೆದರುತ್ತಿದ್ದಾರೆ? ಚುನಾವಣಾ ಬಾಂಡ್‌ಗಳ ಅಂಕಿ-ಅಂಶಗಳು ಯಾವ ಹೊಸ ಹಗರಣವನ್ನು ಬಹಿರಂಗಪಡಿಸುತ್ತವೆ ಎಂದೋ? ಅವರು ಕೇಳಿದ್ದು, ತಮ್ಮ ಸರ್ಕಾರವು ಮೂಲಭೂತ ಜವಾಬ್ದಾರಿಗಳ ಬಗ್ಗೆಯೂ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
यह आश्चर्य की बात यह है कि प्रधानमंत्री आज नई दिल्ली में हैं। इसलिए आज कोई नया “उद्घाटन” नहीं होगा, कोई रीब्रांडिंग नहीं होगी, पिछले कामों का क्रेडिट लेने के लिए कोई दावा नहीं होगा। लेकिन ये उनकी सरकार की बुनियादी ज़िम्मेदारियों को लेकर कुछ महत्वपूर्ण सवाल हैं जिनके जवाब उन्हें…
— Jairam Ramesh (@Jairam_Ramesh) March 13, 2024
“ಇಡಿ, ಸಿಬಿಐ ಅಥವಾ ಐಟಿ ಇಲಾಖೆಯಿಂದ ದಾಳಿ ಅಥವಾ ತನಿಖೆ ನಡೆಸಿದ ಬಳಿಕ 30 ಕಂಪನಿಗಳಿಂದ 335 ಕೋಟಿ ದೇಣಿಗೆಗಳು ಬಂದಿದೆ. ಇವುಗಳು ಬಿಜೆಪಿಗೆ ಏಕೆ ದೇಣಿಗೆ ನೀಡಿವೆ? ಇಡಿ-ಸಿಬಿಐ-ಐಟಿ ತನಿಖೆಯ ಬೆದರಿಕೆಯ ಮೂಲಕ ಬಿಜೆಪಿ ಈ ಸಂಸ್ಥೆಗಳನ್ನು ಬೆದರಿಸಿ ಅವರಿಂದ ದೇಣಿಗೆ ವಸೂಲಿ ಮಾಡುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಸೆಬಿಯು ನಾಲ್ಕು ಕಂಪೆನಿಗಳನ್ನು ಶೆಲ್ ಕಂಪೆನಿ ಎಂದು ಘೋಷಿಸಿತ್ತು. ಈ ನಾಲ್ಕು ಶೆಲ್ ಕಂಪನಿಗಳಿಂದ 4.9 ಕೋಟಿ ರೂಪಾಯಿಗಳನ್ನು ಬಿಜೆಪಿ ಏಕೆ ಸ್ವೀಕರಿಸಿದೆ. ಈ ಕಂಪನಿಗಳ ಮೂಲಕ ಯಾರ ಕಪ್ಪುಹಣವನ್ನು ಬಿಜೆಪಿಗೆ ತಲುಪಿಸಲಾಗಿದೆ? ಎಂದು ಜೈರಾಮ್ ರಮೇಶ್ ತಮ್ಮ ಪೋಸ್ಟ್‌ನಲ್ಲಿ ಕೇಳಿದ್ದಾರೆ.
2019 ರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಸರ್ಕಾರವು ನಿಯಮಗಳನ್ನು ತಿಳಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್, ಸಂಸದೀಯ ವ್ಯವಹಾರಗಳ ಕೈಪಿಡಿ ಮತ್ತು ಸರ್ಕಾರದ ಎಲ್ಲ ಸ್ಥಾಪಿತ ಮಾನದಂಡಗಳ ಪ್ರಕಾರ ಯಾವುದೇ ಕಾಯ್ದೆಗೆ ನಿಯಮಗಳಿವೆ. ಅದರ ಅಂಗೀಕಾರದ ಆರು ತಿಂಗಳೊಳಗೆ ರೂಪಿಸಬೇಕಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಗೆ ನಿಯಮಗಳನ್ನು ರೂಪಿಸಲು ಮೋದಿ ಸರ್ಕಾರವು ನಾಲ್ಕು ವರ್ಷ ಮತ್ತು ಮೂರು ತಿಂಗಳು ಏಕೆ ತೆಗೆದುಕೊಂಡಿತು? ಲೋಕಸಭೆ ಚುನಾವಣೆಗೂ ಕೆಲವು ದಿನಗಳು ಇರುವಾಗ ನಿಯಮಗಳು ಏಕೆ ಅನುಕೂಲಕರವಾಗಿ ಹೊರಬಂದಿವೆ? ರಮೇಶ್ ಪ್ರಶ್ನಿಸಿದ್ದಾರೆ.
“ಪ್ರಜಾಪ್ರಭುತ್ವ ಸಂಸ್ಥೆಗಳ ಸುಗಮ ಕಾರ್ಯನಿರ್ವಹಣೆಯು ಸರ್ಕಾರದ ಮೊದಲ ಮತ್ತು ಪ್ರಮುಖ ಆದ್ಯತೆ. ಆದರೆ, ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಕೇವಲ ಒಬ್ಬನೇ ಚುನಾವಣಾ ಆಯುಕ್ತರನ್ನು ಹೊಂದುವ ಹಂತಕ್ಕೆ ಚುನಾವಣಾ ಆಯೋಗ ತಲುಪಿದ್ದು ಹೇಗೆ? ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಏಕಾಏಕಿ ರಾಜೀನಾಮೆ ನೀಡಿದ್ದು ಏಕೆ? ಎಂದು ಸುದೀರ್ಘ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.