ಭಾರತ-ಪಾಕ್ ನಡುವೆ ಅಕಸ್ಮಾತ್ ಪರಮಾಣು ಯುದ್ಧವಾದರೆ, ಏನಾಗಲಿದೆ?

Date:

Advertisements
ಭಾರತ-ಪಾಕ್ ನಡುವೆ ಅಕಸ್ಮಾತ್ ಪರಮಾಣು ಯುದ್ಧ ಸಂಭವಿಸಿದರೆ, ಅದು 100 ಕಿಲೋ ಟನ್ ಶಕ್ತಿ ಹೊಂದಿದ್ದರೆ, ಸ್ಫೋಟ, ಬೆಂಕಿ ಮತ್ತು ವಿಕಿರಣದಿಂದ ದಕ್ಷಿಣ ಏಷ್ಯಾದಲ್ಲಿ ಸುಮಾರು 13 ಕೋಟಿ ಜನರು ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ...

ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಪರಮಾಣು ಅಸ್ತ್ರಗಳನ್ನು ಹೊಂದಿವೆ. ಅಕಸ್ಮಾತ್ ಈ ಎರಡು ದೇಶಗಳ ನಡುವೆ ಪೂರ್ಣಪ್ರಮಾಣದ ಯುದ್ಧ ಸಂಭವಿಸಿದರೆ, ಅಂತಿಮವಾಗಿ ಪರಮಾಣು ಅಸ್ತ್ರ ಬಳಕೆಯಾದರೆ, ವಿನಾಶ ಖಂಡಿತ. ಮನುಷ್ಯರು ಮತ್ತು ಪರಿಸರ ತತ್ತರಿಸಿಹೋಗಲಿದೆ. ದೇಶಗಳ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರಲಿದೆ.

ಅಂತಹ ಕೆಲವು ಪ್ರಮುಖ ಪರಿಣಾಮಗಳನ್ನು ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ತಕ್ಷಣದ ವಿನಾಶ: ಪರಮಾಣು ಸ್ಫೋಟಗಳು ಕೋಟ್ಯಂತರ ಜನರನ್ನು ತಕ್ಷಣವೇ- ಬೂದಿ ಕೂಡ ಕಾಣದಂತೆ- ಇಲ್ಲದಂತಾಗಬಹುದು. ಉದಾಹರಣೆಗೆ, ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ 1945ರಲ್ಲಿ ಸಂಭವಿಸಿದ ಸ್ಫೋಟಗಳು ಇದಕ್ಕೆ ಸಾಕ್ಷಿಯಾಗಿವೆ. ಅಲ್ಲಿ ಉಪಯೋಗಿಸಿದ್ದ ಶಕ್ತಿಶಾಲಿ ಅಣ್ವಸ್ತ್ರಕ್ಕಿಂತ ಪರಿಣಾಮಕಾರಿಯಾದ ಅಣ್ವಸ್ತ್ರಗಳನ್ನು, ಅದಕ್ಕಿಂತಲೂ ಹೆಚ್ಚಿಗೆ ನಾಶಪಡಿಸುವ ಅಣ್ವಸ್ತ್ರಗಳನ್ನು ಇಂದು ಹಲವಾರು ದೇಶಗಳು ಹೊಂದಿವೆ. ಅವು ಏನಾದರೂ ಸ್ಫೋಟಗೊಂಡಿದ್ದೇ ಆದರೆ, ಶಾಖ, ಸ್ಫೋಟದ ತರಂಗ ಮತ್ತು ವಿಕಿರಣವು ನಗರಗಳನ್ನು ನಾಶಪಡಿಸುತ್ತದೆ. ಕಟ್ಟಡಗಳು, ಮೂಲಸೌಕರ್ಯಗಳು ಮತ್ತು ಜೀವನವನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸುತ್ತದೆ.

Advertisements

ಆ ಕಾರಣಕ್ಕಾಗಿಯೇ ಮೊದಲ ಅಣ್ವಸ್ತ್ರದ ಅನ್ವೇಷಣೆಯಲ್ಲಿ ಭಾಗಿಯಾಗಿದ್ದ ವಿಶ್ವಪ್ರಸಿದ್ಧ ವಿಜ್ಞಾನಿ ಐನ್‌ಸ್ಟೈನ್ ‘ಪ್ರಪಂಚದ ಮೂರನೇ ಮಹಾಯುದ್ಧ ಯಾವ ಶಸ್ತ್ರಾಸ್ತ್ರಗಳಿಂದ ಹೋರಾಡುತ್ತಾರೋ ತಿಳಿಯದು; ಆದರೆ ನಾಲ್ಕನೆಯ ಮಹಾಯುದ್ಧವಂತೂ ಕೋಲು, ಕಡ್ಡಿ ಮತ್ತು ಕಲ್ಲುಗಳಿಂದ ಆಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಕಿರಣದ ಪರಿಣಾಮ: ಸ್ಫೋಟದಿಂದ ಬಿಡುಗಡೆಯಾದ ವಿಕಿರಣವು ಗಂಭೀರ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ ಕ್ಯಾನ್ಸರ್, ರಕ್ತಹೀನತೆ ಮತ್ತು ಜನ್ಮ ದೋಷಗಳು. ವಿಕಿರಣದಿಂದ ಬದುಕುಳಿದವರಿಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಕಾಡಬಹುದು.

ಈಗಾಗಲೇ ಅಮೆರಿಕ, ಇರಾಕ್ ಮತ್ತು ಇನ್ನಿತರ ದೇಶಗಳ ಯುದ್ಧದಲ್ಲಿ ಡಿಪ್ಲೀಟೆಡ್ ಯುರೇನಿಯಂ ಬಳಸಿ, ಈ ರೀತಿಯ ಜನ್ಮದೋಷದಿಂದ ನರಳುವ ನರಕವನ್ನು ಸೃಷ್ಟಿಸಿದೆ.

ಪರಿಸರ ವಿನಾಶ: ಪರಮಾಣು ಸ್ಫೋಟಗಳು ‘ಪರಮಾಣು ಹವಾಮಾನ'(Nuclear Winter) ಎಂಬ ಸ್ಥಿತಿಯನ್ನು ಸೃಷ್ಟಿಸಬಹುದು. ಇದರಲ್ಲಿ ಧೂಳು ಮತ್ತು ಹೊಗೆಯಿಂದ ಸೂರ್ಯನ ಬೆಳಕು ತಡೆಯಲ್ಪಟ್ಟು ಭೂಮಿಯ ತಾಪಮಾನ ಕಡಿಮೆಯಾಗುತ್ತದೆ. ಕೃಷಿ ಉತ್ಪಾದನೆ ಕುಸಿಯುತ್ತದೆ. ಇದರಿಂದ ಜಾಗತಿಕ ಆಹಾರ ಕೊರತೆ ಉಂಟಾಗುತ್ತದೆ. ಕ್ಷಾಮ ತಲೆದೋರುತ್ತದೆ. ಆಹಾರವಿಲ್ಲದೆ ನರಳುವ, ಸಾಯುವ ಸಂಖ್ಯೆ ಹೆಚ್ಚಾಗುತ್ತದೆ.

ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ: ಕೃಷಿ ಉತ್ಪಾದನೆ ಕುಸಿದ ಕಾರಣ, ಜನರ ಕೈಗೆ ಹಣ ಸಿಗುವುದು, ತಟ್ಟೆಗೆ ಅನ್ನ ಬೀಳುವುದು ನಿಲ್ಲುತ್ತದೆ. ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತದೆ. ಏಕೆಂದರೆ ವ್ಯಾಪಾರ, ಉದ್ಯಮ ಮತ್ತು ಮೂಲಸೌಕರ್ಯಗಳು ಧ್ವಂಸವಾಗುತ್ತವೆ. ಸೋತು ಸೊರಗಿದವರ ಸಂಖ್ಯೆ ಗಗನಕ್ಕೇರುತ್ತದೆ. ಇದು ಸಾಮಾಜಿಕ ಅಸ್ಥಿರತೆಗೆ ಕಾರಣವಾಗುತ್ತದೆ.

ರಾಜಕೀಯ ಪರಿಣಾಮ: ರಾಷ್ಟ್ರಗಳ ನಡುವಿನ ಸಂಬಂಧಗಳು ಶಾಶ್ವತವಾಗಿ ಹಾಳಾಗಬಹುದು. ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಒಪ್ಪಂದಗಳು ದುರ್ಬಲಗೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡುವುದು ಕಷ್ಟವಾಗಬಹುದು.

ಮಾನವ ದುರಂತ: ಕೋಟ್ಯಂತರ ಜನರ ಸಾವು, ನೋವು, ಸಮಸ್ಯೆಗಳು ಮಾನವ ದುರಂತಕ್ಕೆ ಕಾರಣವಾಗಬಹುದು. ಆಹಾರ, ನೀರು, ಔಷಧ ಮತ್ತು ಆಶ್ರಯದ ಕೊರತೆಯಿಂದ ಬದುಕುಳಿದವರ ಜೀವನ ನರಕವಾಗಬಹುದು.

ಸಂಕ್ಷಿಪ್ತವಾಗಿ ಹೇಳಬಹುದಾದರೆ, ಪರಮಾಣು ಯುದ್ಧವು ಮಾನವ ಕುಲವನ್ನೇ ನಿರ್ನಾಮ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ತಪ್ಪಿಸಲು ಜಾಗತಿಕ ಶಾಂತಿ, ರಾಜತಾಂತ್ರಿಕ ಸಂಬಂಧಗಳು ಮತ್ತು ಪರಮಾಣು ಅಸ್ತ್ರ ನಿಯಂತ್ರಣ ಒಪ್ಪಂದಗಳು ಅತ್ಯಗತ್ಯವಾಗಿವೆ.

ರಟ್ಗರ್ಸ್ ವಿಶ್ವವಿದ್ಯಾಲಯದ ಒಂದು ಅಧ್ಯಯನದ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಒಂದರ ಮೇಲೊಂದು 250 ಪರಮಾಣು ಶಸ್ತ್ರಗಳಿಂದ ದಾಳಿ ಮಾಡಿದರೆ, ಪ್ರತಿ ಶಸ್ತ್ರ 100 ಕಿಲೋ ಟನ್ ಶಕ್ತಿ ಹೊಂದಿದ್ದರೆ- ಸ್ಫೋಟ, ಬೆಂಕಿ ಮತ್ತು ವಿಕಿರಣದಿಂದ ದಕ್ಷಿಣ ಏಷ್ಯಾದಲ್ಲಿ ಸುಮಾರು 127 ಮಿಲಿಯನ್(12 ಕೋಟಿ 70 ಲಕ್ಷ) ಜನರು ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ.

ದೀರ್ಘಕಾಲದ ಪರಿಣಾಮಗಳು ಇನ್ನೂ ಭಯಾನಕವಾಗಿರುತ್ತವೆ. 37 ಮಿಲಿಯನ್(3.70 ಕೋಟಿ) ಟನ್‌ಗಳಷ್ಟು ಕಾರ್ಬನ್ ಮಸಿ ವಾತಾವರಣಕ್ಕೆ ಸೇರುತ್ತದೆ. ಇದರಿಂದ ಜಗತ್ತಿನ ತಾಪಮಾನ 5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಕಡಿಮೆಯಾಗುತ್ತದೆ. ಇದು ಬರಗಾಲಕ್ಕೆ ಕಾರಣವಾಗಿ, ಸುಮಾರು 2 ಬಿಲಿಯನ್(200 ಕೋಟಿ) ಜನರು ಸಾಯುವ ಸಾಧ್ಯತೆ ಇದೆ.

ಬ್ರಿಟನ್ ಭಾರತವನ್ನು ವಿಭಜಿಸುವಾಗ ಸೃಷ್ಟಿಸಿದ ವಸಾಹತು ಸಮಸ್ಯೆಯೇ ದೊಡ್ಡದು. ಅದರಿಂದ ಹೊರಬಂದು, ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಅಕಸ್ಮಾತ್ ಭಾರತ-ಪಾಕಿಸ್ತಾನಗಳ ನಡುವೆ ಪೂರ್ಣ ಪ್ರಮಾಣದ ಯುದ್ಧವೇನಾದರೂ ನಡೆದರೆ, ಜಗತ್ತು ಮತ್ತೊಮ್ಮೆ ಅಪಾಯಕ್ಕೆ ಸಿಲುಕಲಿದೆ. ಶತಕೋಟಿ ಜನರ ಜೀವನದ ಮೇಲೆ ಪರಮಾಣು ಪರಿಣಾಮ ಬೀರಲಿದೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರ ನಾಶವಾದರೆ, ಬಹುಪಕ್ಷೀಯ ಜಗತ್ತಿನ ನಡೆಗೆ ದೊಡ್ಡ ಹಿನ್ನಡೆಯಾಗುತ್ತದೆ. ಇದರಿಂದ ಅನೇಕ ವರ್ಷಗಳ ಅಭಿವೃದ್ಧಿ ಹಾಳಾಗಿ, ಜಗತ್ತು ಒಂದು ದೊಡ್ಡ ಕೊಳ್ಳಕ್ಕೆ ಜಾರಬಹುದಾಗಿದೆ.

ಹಾಗಾಗಿಯೇ ಅಮೆರಿಕ ಮಧ್ಯ ಪ್ರವೇಶಿಸಿ ಕದನ ವಿರಾಮ ಘೋಷಿಸಿದೆ. ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರಗಳೆಂದು ಭಾವಿಸುವ ಅಮೆರಿಕ, ಚೀನಾ ಮತ್ತು ರಷ್ಯಾಗಳ ಸದ್ಯದ ಗಮನ ವ್ಯಾಪಾರ. ಅದನ್ನು ಯಾವ ಮುಜುಗರವೂ ಇಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವ್ಯಾಪಾರ ಒಪ್ಪಂದ ಮಾಡಿಕೊಳ್ಳಿ ಎನ್ನುವ ಆಮಿಷ ಮತ್ತು ನಿರ್ಬಂಧ ಎದುರಿಸಿ ಎನ್ನುವ ಬೆದರಿಕೆ ಒಡ್ಡಿ ಬಲವಂತವಾಗಿ ಮತ್ತು ಬ್ಲ್ಯಾಕ್ ಮೇಲ್ ಮಾಡಿ ಕದನ ವಿರಾಮಕ್ಕೆ ಒಪ್ಪಿಸಿದ್ದೇನೆ’ ಎಂದಿದ್ದಾರೆ.

ಚೀನಾಕ್ಕೆ ತನ್ನ 3000 ಕಿ.ಮೀ ಉದ್ದದ ಸಿಪಿಇಸಿ ಯೋಜನೆ- ಕಾರಕೋರಮ್ ಪರ್ವತಶ್ರೇಣಿ ಹೆದ್ದಾರಿಯಿಂದ ಹಿಡಿದು ದಕ್ಷಿಣದ ಅರಬ್ಬಿ ಸಮುದ್ರಕ್ಕೆ ಅಂಟಿಕೊಂಡಿರುವ ಕ್ವಾದಾರ್ ಬಂದರುವರೆಗೂ ತನ್ನ ಹಿತಾಸಕ್ತಿಗಳ ಬಗ್ಗೆ ಚಿಂತೆ ಇದೆ. ಈ ಯೋಜನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಅವಲಂಬಿಸಿದೆ. ಮತ್ತು ಇದು ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್‌ನ ಒಂದು ಭಾಗವಾಗಿದೆ. ಇಂತಹ ಸ್ಥಿತಿಯಲ್ಲಿ ಯುದ್ಧವಾದರೆ, ಭಾರತದ ದಾಳಿಗಳು ಚೀನಾದ ಹೂಡಿಕೆಗಳನ್ನು ಅಪಾಯಕ್ಕೆ ಸಿಲುಕಿಸಬಹುದು. ಇದರ ಜೊತೆಗೆ, ಭಾರತದೊಂದಿಗಿನ ಸಂಬಂಧ ಸುಧಾರಣೆಯ ಮೇಲೂ ಇದು ಪರಿಣಾಮ ಬೀರಬಹುದು. ಈ ಕಾರಣದಿಂದ ಚೀನಾ ಕೂಡ ಸದ್ಯಕ್ಕೆ ತಟಸ್ಥವಾಗಿದೆ. ಆದರೆ ಪರೋಕ್ಷವಾಗಿ ಮುಸುಕಿನ ಯುದ್ಧವನ್ನು ಮುಂದುವರೆಸಿದೆ.

ಇದನ್ನು ಓದಿದ್ದೀರಾ?: ಇದು ಅಮೆರಿಕ-ಚೀನಾಗಳ ಷಡ್ಯಂತ್ರ; ಭಾರತ-ಪಾಕ್ ಬಲಿಯಾಗದಿರಲಿ

ಅಮೆರಿಕ, ಭಾರತದೊಂದಿಗಿನ ಸೇನಾ ಸಂಬಂಧಗಳ ಮೇಲೆ ಗಮನ ಇರಿಸಿದೆ. ಅವರು ಭಾರತವನ್ನು ಚೀನಾಕ್ಕೆ ವಿರುದ್ಧವಾಗಿ ಶತ್ರು ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಮೆರಿಕದ ಮುಂದಿನ ಗುರಿ ಚೀನಾ ಆಗಿದೆ. ಅಮೆರಿಕಾ ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ಮುಖಂಡರೊಂದಿಗೂ ಸಂಬಂಧ ಹೊಂದಿದೆ. ಪಾಕಿಸ್ತಾನವು ಅಮೆರಿಕದ ಹಲವು ಕೊಳಕು ಯುದ್ಧಗಳಲ್ಲಿ ಭಾಗಿಯಾಗಿದೆ. ನೆರವು ನೀಡುವ ಮೂಲಕ ಭಾಗಿಯಾಗುವಂತೆ ಅಮೆರಿಕ ನೋಡಿಕೊಂಡಿದೆ.

ಇಂತದ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧವಾಗಿ ಪರಸ್ಪರ ನಾಶವಾದರೆ, ಅಧಿಕಾರದ ಸಮತೋಲನ ಮತ್ತೆ ಹಳೆಯ ವಸಾಹತು ಶಕ್ತಿಗಳ ಕಡೆಗೆ ಸಾಗಬಹುದು. ಅಮೆರಿಕಾ, ಬ್ರಿಟನ್ ಮತ್ತು ಯೂರೋಪಿಯನ್ ಯೂನಿಯನ್ ಈ ವಸಾಹತು ಶಕ್ತಿಗಳನ್ನು ಮುನ್ನಡೆಸಬಹುದು. ಆದರೆ ಭಾರತ-ಪಾಕಿಸ್ತಾನದ ಜನ ಈ ವಸಾಹತು ಶಕ್ತಿಗಳನ್ನು ದ್ವೇಷಿಸುತ್ತಾರೆ. ಅಷ್ಟಕ್ಕೂ ಭಾರತ ಮತ್ತು ಪಾಕಿಸ್ತಾನದ ನಾಶವು ಯಾರಿಗೂ ಒಳ್ಳೆಯದಲ್ಲ. ಇದು ಬಹುಪಕ್ಷೀಯ ಜಗತ್ತಿಗೂ ಹಿತವಲ್ಲ. ಏಕೆಂದರೆ ಶತಕೋಟಿ ಜನರಿಗೆ ನಿಜವಾದ ಆರ್ಥಿಕ ಅಭಿವೃದ್ಧಿ, ಸಮೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯ ಜಗತ್ತು ಬೇಕು. ಆ ಬಹುಪಕ್ಷೀಯ ಜಗತ್ತು ಸೃಷ್ಟಿಯಾಗಬೇಕಾದರೆ, ಆರನೇ ಎರಡರಷ್ಟು ಭಾಗವಾಗಿರುವ ಭಾರತ-ಚೀನಾದ ಜನಸಂಖ್ಯೆಯ ಬಹುದೊಡ್ಡ ಕೊಡುಗೆ ಬೇಕು.

ಈ ಎಲ್ಲ ಕಾರಣಗಳಿಂದ ಭಾರತ ಮತ್ತು ಪಾಕಿಸ್ತಾನ ಸಂಪೂರ್ಣ ನಾಶದ ಯುದ್ಧದಿಂದ ಹಿಂದೆ ಸರಿಯುತ್ತವೆ ಎಂದು ಆಶಿಸೋಣ. ಯಾವುದೇ ಸಮಸ್ಯೆಯನ್ನು ಯುದ್ಧದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸಾರೋಣ. ‘ಮನುಷ್ಯನನ್ನು ಕೊಂದು ಧರ್ಮರಕ್ಷಣೆ ಮಾಡುವುದಕ್ಕಿಂತ, ಧರ್ಮವನ್ನೇ ಕೊಂದು ಮನುಷ್ಯನ ರಕ್ಷಣೆ ಮಾಡಿ. ಏಕೆಂದರೆ ಮನುಷ್ಯತ್ವವೇ ಧರ್ಮ’ ಎಂಬ ಬುದ್ಧನ ನುಡಿಗಳನ್ನು ಮತ್ತೆ ಮತ್ತೆ ನೆನೆಯೋಣ.

(ಕೃಪೆ: ಗೋಯಿಂಗ್ ಅಂಡರ್‍‌ಗ್ರೌಂಡ್ ಮತ್ತು ಇತರ ಮೂಲಗಳು)

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X