ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಆರೋಪಿಗಳಿಗೆ ಲೋಕಸಭೆಯ ಒಳಗಡೆ ಪ್ರವೇಶಿಸಲು ಪಾಸ್ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸಂಸತ್ ಭದ್ರತಾ ಲೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉದ್ಧಟತನದಿಂದ ವರ್ತಿಸಿ ಪತ್ರಿಕಾಗೋಷ್ಠಿಯಿಂದ ಎದ್ದುಹೋದ ಪ್ರಸಂಗ ನಡೆದಿದೆ.
ಮೈಸೂರಿನಲ್ಲಿ ಇಂದು (ಡಿ.29) ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ, ಕೇಂದ್ರ ಸರ್ಕಾರದಿಂದ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಬಂದ ಯೋಜನೆ ಹಾಗೂ ಅನುದಾನಗಳ ಬಗ್ಗೆ ತಿಳಿಸುತ್ತಿದ್ದರು.
“ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಮಾಡಿಸಿದ್ದು ನಾನೇ. ಅದಕ್ಕೆ ಪ್ರಧಾನಿ ಮೋದಿಯವರು ಸಹಕಾರ ನೀಡಿದ್ದಾರೆ. ಮೋದಿಯವರಿಂದ ಮಾರ್ಚ್ 12,2023ರಲ್ಲಿ ಈ ಯೋಜನೆ ಉದ್ಘಾಟನೆಯಾಗಿದೆ. ಈ ನಡುವೆ ಸಚಿವ ಮಹದೇವಪ್ಪ, ಸಿದ್ದರಾಮಯ್ಯನವರು ಎಲ್ಲಿದ್ದರು?” ಎಂದು ಹೇಳುತ್ತಾ, ಸುದ್ದಿಗೋಷ್ಠಿಯಿಂದ ಹೊರಡಲು ಅನುವಾಗಿದ್ದರು.
ಈ ನಡುವೆ ಪತ್ರಕರ್ತರೋರ್ವರು, “ಪ್ರತಿಯೊಂದು ವಿಚಾರದಲ್ಲೂ ಮಾತನಾಡುತ್ತಿದ್ದ ಪ್ರತಾಪ್ ಸಿಂಹ ಅವರು ಸಂಸತ್‌ನ ಭದ್ರತಾ ಲೋಪದ ವಿಚಾರದಲ್ಲಿ ಯಾಕೆ 2024ರಲ್ಲಿ ಮತದಾರರು ನೋಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದೀರಿ?” ಎಂದು ಪ್ರಶ್ನಿಸಿದರು.
ಸಂಸತ್ ಭದ್ರತಾ ಲೋಪದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ‘ಕ್ಯಾಮರಾ ಆಫ್ ಮಾಡಿ’ ಎಂದ @BJP4Karnataka ಸಂಸದ ಪ್ರತಾಪ್ ಸಿಂಹ
‘ಮಾಡೋಕ್ ಕೆಲಸವಿಲ್ಲದೇ ಬರ್ತಾರೆ, ನಾನೇನ್ ಮಾಡ್ಲಿ’ ಎಂದ ಸಂಸದ
ಪ್ರಶ್ನೆಗೆ ಉತ್ತರಿಸದೆ ತೆರಳಿದ ಬಿಜೆಪಿ ಸಂಸದ: ಪ್ರಶ್ನೆ ಕೇಳಿದ್ದ @DeccanHerald ಪತ್ರಿಕೆಯ ಪತ್ರಕರ್ತ ರವಿಚಂದ್ರ@zoo_bear@prajavani pic.twitter.com/5mN2e7QBKG
— Irshad Venur (@muhammadirshad6) December 29, 2023
ಪತ್ರಕರ್ತನ ಬಳಿ, ನಿನ್ನ ಹೆಸರೇನು ಎಂದು ಕೇಳಿದ ಪ್ರತಾಪ್ ಸಿಂಹ, ‘ನನ್ನ ಈ ಹೇಳಿಕೆಯನ್ನು ತಗೋಬೇಡಿ, ಕ್ಯಾಮರಾ ಆಫ್ ಮಾಡಿ’ ಎಂದು ಸೂಚಿಸಿದ್ದಾರೆ.
“ಅರಿವು ಬರುವುದಕ್ಕೋಸ್ಕರ ಹೇಳುತ್ತೇನೆ” ಎಂದು ಹೇಳುವಾಗ ಕ್ಯಾಮರಾ ರೆಕಾರ್ಡಿಂಗ್ ಅಲ್ಲಿರುವುದನ್ನು ಗಮನಿಸಿ, ‘ಆಫ್ ಮಾಡಿ’ ಎಂದು ಮತ್ತೊಮ್ಮೆ ಪತ್ರಕರ್ತರಿಗೆ ಸೂಚಿಸಿದ್ದಾರೆ. ಆಮೇಲೂ ಉತ್ತರಿಸದೇ, ‘ನನಗೆ ಮೀಟಿಂಗ್ ಇದೆ’ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಅಲ್ಲದೇ, ಹೀಗೆ ಪತ್ರಿಕಾಗೋಷ್ಠಿಯಿಂದ ತೆರಳುವಾಗ, ‘ಮಾಡೋಕ್ ಕೆಲಸವಿಲ್ಲದೇ ಬರ್ತಾರೆ, ನಾನೇನ್ ಮಾಡ್ಲಿ. ಸಂಸತ್ ಪ್ರವೇಶಕ್ಕೆ ಗೊತ್ತಿರುವ ವ್ಯಕ್ತಿಯಾದ್ದರಿಂದ ಪಾಸ್ ಕೊಡಿಸಿದ್ದೆ.ಆತ ಹೊಗೆ ಬಾಂಬ್ ಸಿಡಿಸುತ್ತಾನೆ ಎಂದು ನನಗೆ ಗೊತ್ತಿತ್ತಾ ಎಂದು ಹೇಳಿಕೊಂಡು ಹೊರನಡೆದರು.