ರಾಮ ಮಂದಿರ ನಿರ್ಮಾಣ ಮಾಡಿರುವುದು ಒಳ್ಳೆಯದು. ಆದರೆ, ಎಲ್ಲರನ್ನೂ ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಕಾಣುವ ರಾಮರಾಜ್ಯ ನಿರ್ಮಾಣ ಯಾವಾಗ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿರುದ್ಯೋಗ ರಹಿತ, ಬೆಲೆ ಏರಿಕೆ ನಿಯಂತ್ರಿಸುವ, ಆರ್ಥಿಕ ಸಬಲತೆಯ ಆಡಳಿತದ ಜನರ ನಿರೀಕ್ಷೆ ಹುಸಿಯಾಗಿದೆ” ಎಂದರು.
“ಜನರಿಗೆ ಬಿಜೆಪಿ ಉಚಿತ ಯೋಜನೆ ಘೋಷಿಸಿದರೆ ಜನ ಕಲ್ಯಾಣಕ್ಕಾಗಿ, ಕಾಂಗ್ರೆಸ್ ಕೊಟ್ಟರೆ ಆರ್ಥಿಕ ದಿವಾಳಿಯಾಗುತ್ತದೆ ಎಂಬ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಅಯುಷ್ಮಾನ್, ನರೇಗಾ ಯೋಜನೆಗಳಲ್ಲಿ ರಾಜ್ಯದ ಪಾಲು ಶೇ 50ರಷ್ಟಿದ್ದರೂ, ಕೇಂದ್ರದ್ದೇ ಎನ್ನುವಂತೆ ಪ್ರಚಾರ ಪಡೆಯುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪೇಗೌಡ ವಿಮಾನನಿಲ್ದಾಣ ಸೀಮೆ- ರೈತರ ಕೊರಳ ಬಿಗಿದಿರುವ ಭೂಮಾಫಿಯಾ, ಕುಣಿಕೆ ಕಳಚಲಿ ಕಾಂಗ್ರೆಸ್ ಸರ್ಕಾರ
“ರಾಜ್ಯದ ಹಿತಾಸಕ್ತಿ, ಜನರಿಗೆ ಸತ್ಯ ತಿಳಿಸುವುದಕ್ಕಾಗಿ ಕೋವಿಡ್ ಸಂದರ್ಭದಲ್ಲಿ ನಡೆದ ₹40 ಸಾವಿರ ಕೋಟಿ ಮೊತ್ತ ಹಗರಣದ ದಾಖಲೆಗಳನ್ನು ಯತ್ನಾಳ್ ಅವರು ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
“ಕಾಂಗ್ರೆಸ್ ಆರೋಪ ಮಾಡಿದಾಗ ಸುಳ್ಳು ಎಂದು ಹೇಳುತಿದ್ದ ಬಿಜೆಪಿ ನಾಯಕರು ಎಲ್ಲಿದ್ದಾರೆ? ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಜನರಿಗೆ ಉತ್ತರಿಸಬೇಕು” ಎಂದರು.