ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಸೋಮವಾರ ಈಶಾನ್ಯ ಭಾರತದ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರಾ ಹಲವು ಸಭೆಗಳನ್ನು ಮಣಿಪುರದಲ್ಲಿ ನಡೆಸಿದ್ದಾರೆ.
ಮಣಿಪುರದಲ್ಲಿ ಮುಂದಿನ ಸಿಎಂ ಯಾರು ಎಂಬುದನ್ನು ಆಯ್ಕೆ ಮಾಡುವುದೇ ಈಗ ಬಿಜೆಪಿ ಮುಂದಿರುವ ಸವಾಲು. ಇದಕ್ಕಾಗಿ ಪಾತ್ರಾ ಬಿಜೆಪಿಯ ಹಿರಿಯ ಶಾಸಕರುಗಳ ಜೊತೆ ಸಭೆ ನಡೆಸಿದ್ದಾರೆ. ಬಿರೇನ್ ವಿರುದ್ದ ಬಂಡಾಯ ಎದ್ದಿದ್ದ ಶಾಸಕರು, ನಾಯಕರುಗಳ ಜೊತೆಯೂ ಪಾತ್ರಾ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಬಿರೇನ್ ಸಿಂಗ್ ರಾಜೀನಾಮೆಯಿಂದ ಬದಲಾಗುವುದೇ ಮಣಿಪುರ?
ಇವೆಲ್ಲವುದರ ನಡುವೆ ಮುಂದಿನ ಸಿಎಂ ಆಯ್ಕೆಯಾಗುವವರೆಗೂ ಬಿರೇನ್ ಸಿಂಗ್ ಸಿಎಂ ಆಗಿ ಮುಂದುವರೆಯಲಿದ್ದಾರೆ. ರಾಷ್ಟ್ರಪತಿ ಆಡಳಿತವನ್ನು ತಪ್ಪಿಸಲು ಬಿಜೆಪಿ ಸಕಲ ಪ್ರಯತ್ನವನ್ನು ಮಾಡುತ್ತಿದೆ ಎಂದು ವರದಿಯಾಗಿದೆ. ಈ ನಡುವೆ ಮೂವರು ಹಿರಿಯ ಬಿಜೆಪಿ ನಾಯಕರು ಸಿಎಂ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ.
ಯಮ್ನಮ್ ಖೇಮ್‌ಚಂದ್ ಸಿಂಗ್
ಯಮ್ನಮ್ ಖೇಮ್‌ಚಂದ್ ಸಿಂಗ್ ಮಣಿಪುರದ ಮುಂದಿನ ಸಿಎಂ ಆಗಬಹುದು ಎಂಬುದು ಹಲವು ಬಿಜೆಪಿ ನಾಯಕರುಗಳ ಅಭಿಪ್ರಾಯವಾಗಿದೆ. ಸದ್ಯ ಸಚಿವರಾಗಿರುವ ಯಮ್ನಮ್ ಅವರು, ಬಿಜೆಪಿಯ ಹಿರಿಯ ನಾಯಕರಾಗಿದ್ದಾರೆ. 2017-2022ರವರೆಗೆ ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಆರ್‌ಎಸ್‌ಎಸ್ ನಾಯಕರೂ ಆಗಿದ್ದ ಖೇಮ್‌ಚಂದ್ ಸಿಎಂ ಆಗುವ ಸಾಧ್ಯತೆ ಅಧಿಕವಾಗಿದೆ ಎಂದು ವರದಿಯಾಗಿದೆ.
ತೊಕ್ಚೋಮ್ ಸತ್ಯಬ್ರತ ಸಿಂಗ್
ಮಣಿಪುರದ ಮುಂದಿನ ಮುಖ್ಯಮಂತ್ರಿ ಎಂದಾಗ ಕೇಳಿಬರುವ ಮತ್ತೊಂದು ಹೆಸರು ತೊಕ್ಚೋಮ್ ಸತ್ಯಬ್ರತ ಸಿಂಗ್. ಬಿರೇನ್ ಸಿಂಗ್ ಅವರ ಟೀಕಾಕಾರರಲ್ಲಿ ಒಬ್ಬರಾದ ಸತ್ಯಬ್ರತ ಪ್ರಸ್ತುತ ಸ್ಪೀಕರ್ ಆಗಿದ್ದಾರೆ. ಬಿಜೆಪಿ ನೇತೃತ್ವದ ಮೊದಲ ಆಡಳಿತದ ವೇಳೆ ಸಚಿವರಾಗಿದ್ದ ಸತ್ಯಬ್ರತ ಹಲವು ಶಾಸಕರುಗಳ ಬೆಂಬಲವನ್ನು ಹೊಂದಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ: ಈವರೆಗೆ ನಡೆದ ಬೆಳವಣಿಗೆಗಳೇನು? ಒಂದು ಟೈಮ್‌ಲೈನ್
ತೊಂಗಮ್ ಬಿಸ್ವಜಿತ್ ಸಿಂಗ್
ಬಿರೇನ್ ಸಿಂಗ್ ಅವರ ಎರಡೂ ಆಡಳಿತಾವಧಿಯಲ್ಲಿ ಸಚಿವ ಸಂಪುಟದಲ್ಲಿದ್ದವರು ತೊಂಗಮ್ ಬಿಸ್ವಜಿತ್ ಸಿಂಗ್. ಆದ್ದರಿಂದ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಸ್ವಜಿತ್ ಆಯ್ಕೆಯೂ ಸಾಧ್ಯತೆಯಿದೆ. 2017 ಮತ್ತು 2022ರಲ್ಲಿ ಚುನಾವಣೆಯಲ್ಲಿ ವಿಪಕ್ಷಗಳಿಗೆ ಉತ್ತಮ ಸ್ಪರ್ಧೆಯನ್ನು ನೀಡಿ ಗೆದ್ದಿರುವ ಬಿಸ್ವಜಿತ್, ಬಿರೇನ್ ಸಿಂಗ್ ನಿಷ್ಠಾವಂತರಲ್ಲಿ ಒಬ್ಬರಾಗಿದ್ದಾರೆ. ಬಿರೇನ್ ರಾಜೀನಾಮೆ ನೀಡುವರೆಗೂ ಅವರ ಪರವಾಗಿಯೇ ನಿಂತವರು ಬಿಸ್ವಜಿತ್. ಮಣಿಪುರದಲ್ಲಿ ದೀರ್ಘಕಾಲದಿಂದ ಶಾಸಕರಾಗಿರುವ ಬಿಸ್ವಜಿತ್ ಮುಖ್ಯಮಂತ್ರಿ ವಿಚಾರಕ್ಕೆ ಬಂದಾಗ ಬಿಜೆಪಿಯ ಆಯ್ಕೆ ಪಟ್ಟಿಯಲ್ಲಿ ಒಬ್ಬರಾಗಿರುವ ಸಾಧ್ಯತೆಯಿದೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ 37 ಶಾಸಕರುಗಳ ಬಹುಮತವನ್ನು ಹೊಂದಿದೆ. ಆದರೆ ಈ ಪೈಕಿ 7 ಶಾಸಕರು ಕುಕಿ ಸಮುದಾಯಕ್ಕೆ ಸೇರಿದವರಾಗಿದ್ದು, 2023ರ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ನಿರಂತರವಾಗಿ ಅಧಿವೇಶನಕ್ಕೆ ಗೈರಾಗುತ್ತಿದ್ದಾರೆ. ಬಿರೇನ್ ಸಿಂಗ್ ನೇತೃತ್ವದ ಯಾವುದೇ ರಾಜ್ಯ ಸರ್ಕಾರದ ಕಾರ್ಯಕ್ಕೂ ತಾವು ಬೆಂಬಲ ನೀಡಲ್ಲ ಎಂದು ಬಹಿರಂಗವಾಗಿ ಈ ಏಳು ಶಾಸಕರು ಹೇಳಿಕೆ ನೀಡಿದ್ದರು. ಹಾಗಾಗಿ ಬಿರೇನ್ ಬೆಂಬಲಿಗರನ್ನು ಸಿಎಂ ಮಾಡಿದರೆ ಬಿಜೆಪಿ 7 ಶಾಸಕರುಗಳನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವಿಶ್ಲೇಷಕರು.
