- ಗ್ಯಾರಂಟಿ ಜಾರಿ ವಿಚಾರದಲ್ಲಿ ರಾಜ್ಯ ಸರಕಾರದ್ದು ಸ್ವಯಂಕೃತ ಅಪರಾಧ
- ಎರಡು ರಾಷ್ಟ್ರೀಯ ಪಕ್ಷಗಳ ಇಂದಿನ ನಡವಳಿಕೆ ತೀವ್ರ ಬೇಸರ ತರಿಸುತ್ತಿದೆ
ಅಕ್ಕಿ ಗ್ಯಾರಂಟಿ ವಿತರಣೆ ವಿಚಾರದಲ್ಲಿ ಬೀದಿ ಜಗಳಕ್ಕೆ ನಿಂತಿರುವ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತಾನು ಸೃಷ್ಟಿಸಿಕೊಂಡ ಸ್ವಯಂಕೃತ ತಪ್ಪಿಗೆ ಕಾಂಗ್ರೆಸ್ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಏಮಾರಿಸುತ್ತಿದೆ. ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಘೋಷಣೆ ಮಾಡಿದಾಗ, ಯೋಜನೆ ಜಾರಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕೆನ್ನುವ ಪರಿಜ್ಞಾನ ಇವರಿಗಿರಲಿಲ್ಲವೇ” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
“ಅಕ್ಕಿ ಗ್ಯಾರಂಟಿ ನೀಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಇವರೇನು ಅರ್ಜಿ ಹಾಕಿಕೊಂಡಿದ್ದರಾ? ಪೊಳ್ಳು ಭರವಸೆ ಕೊಟ್ಟು ಗ್ಯಾರಂಟಿ ಎಂದು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ. ಸಚಿವರ ಹೆಂಡ್ತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದು ಹೇಳಿ ಎಲ್ಲರೂ ಅರ್ಜಿ ಹಾಕಿಕೊಳ್ಳಬಹುದು ಎಂದಿದ್ದ ಕಾಂಗ್ರೆಸ್ ನಾಯಕರು ಈಗ ನೋಡಿದರೆ ಬೇರೆ ವರಸೆ ಶುರು ಮಾಡಿಕೊಂಡಿದ್ದೀರಿ” ಎಂದು ಎಚ್ಡಿಕೆ ಕಿಡಿಕಾರಿದರು.
“ಗೃಹಜ್ಯೋತಿ ಕತ್ತಲಾಗಿ ಪರಿಣಮಿಸಿದೆ. ವಿದ್ಯುತ್ ಉಚಿತ ಕೊಡ್ತೀವಿ ಅಂತ ಹೇಳಿದವರು ಈಗಿನ ಪರಿಸ್ಥಿತಿ ಅವಲೋಕನ ಮಾಡಬೇಕು. ಜನರಿಗೆ ಇನ್ನೆಷ್ಟು ಶಾಕ್ಗಳನ್ನು ಕೊಡುತ್ತೀರಿ” ಎಂದು ಮಾಜಿ ಮುಖ್ಯಮಂತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ಮುಖ್ಯಮಂತ್ರಿಗಳು ಭಾರತದ ಆಹಾರ ನಿಗಮಕ್ಕೆ ಪತ್ರ ಬರೆದಿದ್ದೆ ಎಂದು ಹೇಳುತ್ತಿದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಇಂತಹ ಉಡಾಫೆ ಉತ್ತರ ಕೊಟ್ಟರೆ ಹೇಗೆ? ಕೇಂದ್ರದಿಂದ ಅಕ್ಕಿ ಬೇಕು ಅಂದರೆ ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರ ಜತೆ ಮಾತನಾಡಬೇಕಿತ್ತು. ಮನವಿ ಕೊಡಬೇಕಿತ್ತು. ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರೇ ಹೋಗಿ ಚರ್ಚೆ ನಡೆಸಬೇಕಿತ್ತು. ಅದನ್ನು ಬಿಟ್ಟು ಈಗ ಈ ರೀತಿಯ ಹೇಳಿಕೆ ನೀಡುತ್ತಿರುವುದು ಸರಿಯಲ್ಲ” ಎಂದು ಎಚ್ಡಿಕೆ ಆಕ್ರೋಶ ಪಡಿಸಿದರು.
“ಕೇಂದ್ರ ಸರ್ಕಾರಕ್ಕೆ ಅದರದ್ದೇ ಆದ ಬದ್ಧತೆ ಇರುತ್ತದೆ. ನಮಗೆ ಅಕ್ಕಿ ಬೇಕು ಅಂದರೆ ಅವರು ಹೇಗೆ ಕೊಡುತ್ತಾರೆ? ನಾನು ರಾಷ್ಟ್ರಿಕೃತ ಬ್ಯಾಂಕ್ಗಳಲ್ಲಿದ್ದ ಸಾಲಮನ್ನಾ ಮಾಡಿದಾಗ ಪ್ರಧಾನಿಗಳ ಹತ್ತಿರ ಹೋಗಿ ಕೇಳಿದ್ದೆನಾ? ಸಮಸ್ಯೆ ಇರುವುದು ಕಾಂಗ್ರೆಸ್ಗೆ ಅವರೇ ಹೋಗಿ ಕೇಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ಎರಡು ಲಕ್ಷ ಟನ್ ಅಕ್ಕಿಗೆ ಪ್ರಧಾನಿ ಬಳಿ ಯಾರೂ ಬೇಡಿಕೆ ಇಟ್ಟಿಲ್ಲ: ನಳಿನ್ ಕುಮಾರ್ ಕಟೀಲ್
ಎಕ್ಸ್ಪ್ರೆಸ್ ಹೆದ್ದಾರಿಯಲ್ಲ ಅದು ಸಾವಿನ ರಹದಾರಿ
“ಮೈಸೂರು ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ನಿರಂತರ ಅಪಘಾತಗಳ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಕುಮಾರಸ್ವಾಮಿ, ಈ ಹೆದ್ದಾರಿಯನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಅದನ್ನು ಸರಿಪಡಿಸುವ ಬಗ್ಗೆ ಕೇಂದ್ರ ಸರ್ಕಾರವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಗಮನ ಕೊಡುತ್ತಿಲ್ಲ. ಯಾರೋ ಬಂದರು, ದುಡ್ಡು ಮಾಡಿಕೊಂಡು ಹೋದರು. ಜನ ಮಾತ್ರ ದಿನನಿತ್ಯವೂ ಸಾಯುತ್ತಿದ್ದಾರೆ ಇದು ಎಕ್ಸ್ಪ್ರೆಸ್ ಹೆದ್ದಾರಿಯೋ ಅಥವಾ ಸಾವಿನ ರಹದಾರಿಯೋ” ಎಂದು ಪ್ರಶ್ನಿಸಿದರು.
ಪವರ್ ಶೇರಿಂಗ್ ಅವರಿಗೇ ಬಿಟ್ಟಿದ್ದು
“ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ನೊಳಗೆ ಎದ್ದಿರುವ ಕೋಲಾಹಲದ ಕುರಿತಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಧಿಕಾರ ಹಂಚಿಕೆ ಅವರಿಗೆ ಸೇರಿದ ವಿಚಾರ. 5 ವರ್ಷ ಅವರೇ ಇರುತ್ತಾರೆಯೋ, ಇನ್ನು ಯಾರಾದರೂ ಬರುತ್ತಾರೋ ನನಗೆ ಗೊತ್ತಿಲ್ಲ. ವೀರಪ್ಪ ಮೊಯ್ಲಿ ಅವರ ಕಾಲದಲ್ಲಿ ವಿಧಾನಸೌಧದಲ್ಲಿ ಚೇರು, ಮೇಜು ಹಿಡಿದುಕೊಂಡು ಕುಸ್ತಿ ಮಾಡಿದ್ದರು. ಈಗಲೂ ಆ ರೀತಿ ಆಗುತ್ತದೋ ಏನೋ ನನಗೆ ಗೊತ್ತಿಲ್ಲ” ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.