ಮಣಿಪುರ ಹೊತ್ತಿ ಉರಿದಿದ್ದಕ್ಕೆ ಪ್ರಧಾನಿ ಮೋದಿ ಏಕೆ ಕ್ಷಮೆ ಕೇಳಬೇಕು?

Date:

Advertisements
ಮಣಿಪುರದಲ್ಲಿಯೇ ಹುಟ್ಟಿ ಬೆಳೆದ ಕುಕಿ ಸಮುದಾಯವನ್ನು ಮುಖ್ಯಮಂತ್ರಿ ಬಿರೇನ್ ಸಿಂಗ್ ನಮ್ಮವರೆಂದು ಭಾವಿಸಿಲ್ಲ. ಗಲಭೆಪೀಡಿತ ಮಣಿಪುರ ಕೂಡ ನಮ್ಮ ದೇಶದ ಒಂದು ಭಾಗ ಎಂದು ಪ್ರಧಾನಿ ಮೋದಿಯವರು ಅಂದುಕೊಂಡಿಲ್ಲ. ಇದು ಡಬಲ್ ಎಂಜಿನ್ ಸರ್ಕಾರ. ಇಂತಹ ಹೃದಯಹೀನರು ಅಧಿಕಾರದ ಸ್ಥಾನವನ್ನು ಅಲಂಕರಿಸಿರುವಾಗ, ಕ್ಷಮೆ ಕೇಳಿ ಎಂದು ಆಗ್ರಹಿಸುವುದರಲ್ಲಿ ಅರ್ಥವಿದೆಯೇ?

2023ರ ಮೇ 3ರಂದು ಶುರುವಾದ ಮಣಿಪುರ ಜನಾಂಗೀಯ ಸಂಘರ್ಷ ಇವತ್ತಿಗೂ ನಿಂತಿಲ್ಲ. 2025ರ ಹೊಸ ವರ್ಷಕ್ಕೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜ್ಯದ ಜನತೆಯ ಕ್ಷಮೆ ಕೋರಿದ್ದಾರೆ. ಕ್ಷಮೆ ಕೇಳಿದ ನಂತರವೂ ಪಶ್ಚಿಮ ಇಂಫಾಲ್‌ನಲ್ಲಿ ಹಾಗೂ ಕಾಂಗ್‌ಪೊಕ್ಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ) ಕಚೇರಿಯ ಮೇಲೆ ಉಗ್ರರಿಂದ ದಾಳಿ ನಡೆದಿದೆ.

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ನೀಡಿದ ಅಂಕಿ ಅಂಶಗಳ ಪ್ರಕಾರ, ಮೇ 2023ರಿಂದ ಏಪ್ರಿಲ್ 2024ರವರೆಗೆ ಸುಮಾರು 753 ಗುಂಡಿನ ದಾಳಿ ನಡೆದ ಘಟನೆಗಳು ವರದಿಯಾಗಿವೆ. 200 ಕುಕಿ ಸಮುದಾಯದ ಹಳ್ಳಿಗಳನ್ನು, 360 ಚರ್ಚ್‌ಗಳನ್ನು ಸುಟ್ಟುಹಾಕಲಾಗಿದೆ. 250ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ. 7,000 ಕುಕಿ ಸಮುದಾಯದ ಮನೆಗಳನ್ನು ಧ್ವಂಸಗೊಳಿಸಿ, 41,425 ಜನರನ್ನು ನಿರ್ಗತಿಕರನ್ನಾಗಿ ಮಾಡಲಾಗಿದೆ.

ಇಷ್ಟೆಲ್ಲ ಅನಾಹುತ ಆಗಿದ್ದು ಬಿಜೆಪಿ ಆಡಳಿತವಿರುವ ಮಣಿಪುರದಲ್ಲಿ. ಮುಖ್ಯಮಂತ್ರಿ ಬಿರೇನ್ ಸಿಂಗ್ ಮೂಗಿನಡಿನಲ್ಲಿ. ಈಗ ಸಿಎಂ ಸಿಂಗ್ ಮಣಿಪುರ ಜನತೆಯ ಕ್ಷಮೆ ಕೇಳಿದ್ದಾರೆ. ಈ ಕ್ಷಮೆ ಮಣಿಪುರದ ಉರಿದ ಹೃದಯಗಳಿಗೆ ಮುಲಾಮು ಆಗುತ್ತದಾ? ಪರಿಸ್ಥಿತಿಯನ್ನು ತಿಳಿಗೊಳಿಸುತ್ತದಾ? ಖಂಡಿತ ಇಲ್ಲ. ಏಕೆಂದರೆ ಸರಿಸುಮಾರು ಎರಡು ವರ್ಷಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಮೈತೇಯಿ ಮತ್ತು ಕುಕಿ ಜನಾಂಗದ ಜನರ ಬದುಕು ಸುಟ್ಟು ಬೂದಿಯಾಗಿದೆ.

Advertisements

ಈಗ ಕ್ಷಮೆ ಕೇಳಿದರೆ ಮಣಿಪುರ ಬೂದಿಯಿಂದ ಎದ್ದು ಬರಲು ಅದೇನು ಫೀನಿಕ್ಸ್ ಹಕ್ಕಿಯೇ?

ಮಣಿಪುರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಸ್ಥಳೀಯವಾಗಿ ಬಹುಸಂಖ್ಯಾತರಾದ, ಬಲಾಢ್ಯರಾದ ಮೈತೇಯಿ ಸಮುದಾಯವನ್ನು ಓಲೈಸಲು, ಬುಡಕಟ್ಟು ಸ್ಥಾನಮಾನ ಹಾಗೂ ಮೀಸಲಾತಿ ನೀಡಲು ಮುಂದಾಯಿತು. ಇದು ಸಹಜವಾಗಿ ಸಂಖ್ಯೆಯಲ್ಲಿ ಕಡಿಮೆ ಇರುವ ಸ್ಥಳೀಯ ಕುಕಿ ಸಮುದಾಯದಲ್ಲಿ ಆತಂಕ ಮೂಡಿಸಿತು. ಮೊದಲೇ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಕಿಗಳು ಅಭದ್ರತೆಯಲ್ಲಿದ್ದರು. ಈ ಘಟನೆಯ ನಂತರ ಸಹಜವಾಗಿ ಒಗ್ಗೂಡತೊಡಗಿದರು. ಸರ್ಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು. ಆದರೆ ಅದು ಮೈತೇಯಿ ಸಮುದಾಯದ ಅಭಿವೃದ್ಧಿಗೆ ಅಡ್ಡಗಾಲು ಎಂಬಂತೆ ಕಂಡು ಕುಕಿ ಸಮುದಾಯದ ವಿರುದ್ಧ ಘರ್ಷಣೆಗಿಳಿಯಿತು. ಕೆಲ ಉಗ್ರ ಸಂಘಟನೆಗಳಿಂದ ಪ್ರೇರೇಪಣೆ ಪಡೆದ ಗುಂಪುಗಳು ಮುನ್ನೆಲೆಗೆ ಬಂದವು. ಹಿಂಸಾಚಾರಕ್ಕಿಳಿದವು. ಅರಾಜಕತೆ ಸೃಷ್ಟಿಯಾಯಿತು.

ಇದನ್ನು ಓದಿದ್ದೀರಾ?: ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದ ಮೇಲೇಕೆ ಆರೆಸ್ಸೆಸ್‌ನಿಂದ ವ್ಯವಸ್ಥಿತ ದಾಳಿ?

ಮಣಿಪುರ ರಾಜ್ಯದ ಎಲ್ಲ ಜಾತಿ ಜನಾಂಗದ ಮತದಾರರಿಂದ ಆಯ್ಕೆಯಾದ ಬಿಜೆಪಿ ಸರ್ಕಾರ ಸಮಸ್ತರನ್ನು ಸಮಾನವಾಗಿ ಕಾಣಬೇಕಾಗಿತ್ತು. ಅದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿತ್ತು. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷವನ್ನು ಅಧಿಕಾರ ಬಳಸಿ ತಹಬಂದಿಗೆ ತರಬೇಕಾಗಿತ್ತು. ಒಡೆದ ಮನಸುಗಳ ನಡುವೆ ಸಾಮರಸ್ಯ ಮೂಡಿಸಬೇಕಾಗಿತ್ತು.

ಆದರೆ, ಬುಡಕಟ್ಟು ಸಮುದಾಯವಾದ ಮೈತೇಯಿ ಜನಾಂಗ ಹಿಂದೂಗಳು ಎನ್ನುವ ಕಾರಣಕ್ಕೆ ಸಂಘಪರಿವಾರ ಅವರನ್ನು ಬೆಂಬಲಿಸಿತು. ಆ ಮೂಲಕ ಅವರನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸಿತು. ಬಹುಸಂಖ್ಯಾತರಾದ ಮೈತೇಯಿ ಸಮುದಾಯವನ್ನು ಬಿಟ್ಟುಕೊಡದ ಬಿಜೆಪಿ ಸರ್ಕಾರ, ಅವರ ಪರ ವಕಾಲತ್ತು ವಹಿಸಿತು. ಎರಡು ಸಮುದಾಯಗಳ ನಡುವೆ ಸಂಘರ್ಷವೇರ್ಪಡಲು ಸರ್ಕಾರವೇ ಪರೋಕ್ಷವಾಗಿ ಕುಮ್ಮಕ್ಕು ಕೊಟ್ಟಂತಾಯಿತು. ಅದು ಅಧಿಕಾರಕ್ಕಾಗಿ ಮಾಡಿದ ಮಹಾಪರಾಧವಾಗಿತ್ತು.    

ಸರ್ಕಾರದ ಕುಮ್ಮಕ್ಕಿನಿಂದಾದ ಅನಾಹುತ ಏನು ಎನ್ನುವುದನ್ನು ಇಡೀ ದೇಶವೇ ನೋಡಿದೆ. ಈಗ ಬಿರೇನ್ ಸಿಂಗ್ ಕ್ಷಮೆ ಕೇಳುವ ಬದಲು, ಹಿಂದುತ್ವವಾದಿ ಸಂಘಟನೆಗಳ ಹಸ್ತಕ್ಷೇಪ ತಡೆದಿದ್ದರೆ, ಮೈತೇಯಿ ಮತ್ತು ಕುಕಿ ಜನಾಂಗಗಳನ್ನು ಸಮಾನವಾಗಿ ಕಂಡಿದ್ದರೆ, ಅವರೊಬ್ಬ ನಿಜವಾದ ಜನನಾಯಕರಾಗುತ್ತಿದ್ದರು.

ಮುಖ್ಯಮಂತ್ರಿ ಬಿರೇನ್ ಸಿಂಗ್‌ರಿಗೆ ಮಣಿಪುರದಲ್ಲಿ ಶಾಂತಿ ನೆಲೆಸಬೇಕು ಎಂಬ ಮನಸ್ಸಿದ್ದರೆ, ಮೈತೇಯಿ ಮತ್ತು ಕುಕಿ ಸಮುದಾಯವನ್ನು ನಿಯಂತ್ರಿಸುತ್ತಿರುವ, ದಾರಿ ತಪ್ಪಿಸುತ್ತಿರುವ ಉಗ್ರಗಾಮಿ ಗುಂಪುಗಳಿಗೆ ಮೊದಲು ಕಡಿವಾಣ ಹಾಕಬೇಕು. ಉಗ್ರವಾದಿ ಸಂಘಟನೆಗಳ ಮುಖಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ, ದುಷ್ಕರ್ಮಿಗಳನ್ನು ನಿಯಂತ್ರಿಸುವ, ಬಂಧಿಸುವ ನೆಪದಲ್ಲಿ ದುಷ್ಕರ್ಮಿಗಳ ಜೊತೆ ಸೇರಿ ನಾಗರಿಕರನ್ನು ಹಿಂಸಿಸುವ, ಅವರಿಗೆ ಮಾನಸಿಕ-ದೈಹಿಕ ದೌರ್ಜನ್ಯ ನೀಡುವ ಪೊಲೀಸರು ಮತ್ತು ಸೇನಾ ಯೋಧರ ಕೃತ್ಯಗಳು ಮೊದಲು ನಿಲ್ಲಬೇಕು.

ಈಗಾಗಲೇ ಗಲಭೆಗಳಿಂದ ಸಾವಿರಾರು ಜನರು ತಮ್ಮದೇ ಮನೆ-ಮಠ ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಅವರಿಗೆ ಉಣ್ಣಲು-ಉಡಲು ಇಲ್ಲದಂತಾಗಿದೆ. ಮಕ್ಕಳ ಶಿಕ್ಷಣ ಮೊಟಕುಗೊಂಡಿದೆ. ಹತ್ತು ಹದಿನೈದು ವರ್ಷ ದಾಟಿದ ಹುಡುಗರು ಉಗ್ರರ ಪಾಲಾಗುತ್ತಿದ್ದಾರೆ. ಇದೆಲ್ಲವನ್ನು ಕಣ್ಣಾರೆ ಕಂಡಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್ ನೊಂದು ಬೆಂದ ಸಂತ್ರಸ್ತರು ಸಮಾಧಾನದಿಂದ ಬದುಕುವಂತಹ ವಾತಾವರಣ ನಿರ್ಮಿಸಿದ್ದರೆ, ಪರಿಹಾರ ಕಾರ್ಯ ಕೈಗೊಂಡಿದ್ದರೆ, ಅಭದ್ರತೆಯನ್ನು ನೀಗಿಸಿದ್ದರೆ- ಅವರ ಕ್ಷಮೆಗೊಂದು ಘನತೆಯಿತ್ತು. ಇಲ್ಲ, ನಡೆದ ಹಿಂಸಾಚಾರಗಳ ಹೊಣೆ ಹೊತ್ತುಕೊಂಡಿದ್ದರೆ, ಮನುಷ್ಯರು ಎನ್ನಬಹುದಿತ್ತು.

ಮಣಿಪುರ 7 1

ವಸ್ತುಸ್ಥಿತಿ ಹೀಗಿರುವಾಗ, ವಿರೋಧ ಪಕ್ಷವಾದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಕೂಡ ಮಣಿಪುರ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್‌ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ‘ಪ್ರಧಾನಿ ಮೋದಿಗೆ ಜಗತ್ತಿನ ಹಲವು ದೇಶಗಳಿಗೆ ಮತ್ತು ದೇಶದ ಹಲವು ರಾಜ್ಯಗಳಿಗೆ ಭೇಟಿ ನೀಡಲು ಸಮಯವಿದೆ. ಆದರೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ. ಮೋದಿ ಏಕೆ ಮಣಿಪುರಕ್ಕೆ ಹೋಗಿ ಕ್ಷಮೆ ಕೇಳಬಾರದು’ ಎಂದು ಪ್ರಶ್ನೆ ಮಾಡಿದ್ದಾರೆ.

ಮಣಿಪುರದಲ್ಲಿ ಬಿಜೆಪಿ ಆಡಳಿತದ ಸರ್ಕಾರವಿದೆ. ಮಣಿಪುರದಲ್ಲಿಯೇ ಹುಟ್ಟಿ ಬೆಳೆದ ಕುಕಿ ಸಮುದಾಯವನ್ನು ಮುಖ್ಯಮಂತ್ರಿ ಬಿರೇನ್ ಸಿಂಗ್ ನಮ್ಮವರೆಂದು ಭಾವಿಸಿಲ್ಲ. ಹಾಗೆಯೇ ದೇಶದೊಳಗಿರುವ ಗಲಭೆಪೀಡಿತ ಮಣಿಪುರ ರಾಜ್ಯದತ್ತ ಪ್ರಧಾನಿ ಮೋದಿಯವರು ತಿರುಗಿಯೂ ನೋಡಿಲ್ಲ. ಮಣಿಪುರ ಕೂಡ ನಮ್ಮ ದೇಶದ ಒಂದು ಭಾಗವೆಂದು ಅವರು ಭಾವಿಸಿಲ್ಲ.

ಇಂತಹ ಹೃದಯಹೀನರು ಅಧಿಕಾರದ ಸ್ಥಾನವನ್ನು ಅಲಂಕರಿಸಿರುವಾಗ, ಕ್ಷಮೆ ಕೇಳಿ ಎಂದು ಆಗ್ರಹಿಸುವುದರಲ್ಲಿ ಅರ್ಥವಿದೆಯೇ? ಇವರು ಮನುಷ್ಯರಾಗಿದ್ದರೆ ಕ್ಷಮೆ ಕೇಳುತ್ತಿದ್ದರು, ಪಶ್ಚಾತ್ತಾಪ ಪಡುತ್ತಿದ್ದರು, ಅಲ್ಲವೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X