ಟ್ರಂಪ್ ‘ಅವರದ್ದು ಅವರು ನೋಡಿಕೊಳ್ಳುತ್ತಾರೆ’ ಅಂದರೂ, ಮೋದಿ ಸುಮ್ಮನಿರುವುದೇಕೆ?

Date:

Advertisements
ದೇಶವನ್ನಾಳುವ ಯೋಗ್ಯತೆ, ಅರ್ಹತೆ ಇರುವ ಸಮರ್ಥ ನಾಯಕ ಎಂದು ಮೋದಿಯವರನ್ನು ದೇಶದ ಜನತೆ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಈ 'ಸಮರ್ಥ ನಾಯಕ'ನನ್ನು ಪ್ರತಿದಿನ ಪುಡಿಗುಟ್ಟುತ್ತಲೇ ಸಾಗಿದ್ದಾರೆ.

‘ಆ್ಯಪಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್‌ ಕುಕ್‌ ಅವರಿಗೆ ಭಾರತದಲ್ಲಿ ನೀವು ಐಫೋನ್ ತಯಾರಿಕೆ ಮಾಡುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೇನೆ. ಭಾರತದಲ್ಲಿ ತಯಾರಾಗುವ ಐಫೋನ್‌ಗಳು ಅಮೆರಿಕದಲ್ಲಿ ಮಾರಾಟವಾಗುವುದು ನಿಲ್ಲಬೇಕು. ಅವರದ್ದು ಅವರು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ’ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಇಂತಹ ತಿಕ್ಕಲು ಹೇಳಿಕೆಗಳನ್ನು ಆಲಿಸಿದಾಕ್ಷಣ ನಮ್ಮಲ್ಲಿ ಸಹಜವಾಗಿ ಒಂದು ಉದ್ಗಾರವೇಳುತ್ತದೆ ‘ಅರೆ… ಇವನ್ಯಾರು ದೊಣ್ಣೆನಾಯಕ’ ಎಂದು. ಹೌದು, ಅಮೆರಿಕವನ್ನು ಜಾಗತಿಕವಾಗಿ ದೊಡ್ಡಣ್ಣ ಎನ್ನುತ್ತಾರೆ, ಅದರ ಅಧ್ಯಕ್ಷ ಟ್ರಂಪ್ ಈಗ ದೊಣ್ಣೆನಾಯಕರಾಗಿದ್ದಾರೆ. ಈ ದೊಣ್ಣೆನಾಯಕ, ನಡೆಗೂ ನುಡಿಗೂ ವ್ಯತ್ಯಾಸವಿಲ್ಲದಂತೆ ವರ್ತಿಸುತ್ತಿದ್ದಾರೆ. ಅಕ್ಷರಶಃ ಹುಚ್ಚರಂತೆ ಆಡುತ್ತಿದ್ದಾರೆ.   

‘ಅವರದ್ದು ಅವರು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ’ ಎನ್ನುವ ಟ್ರಂಪ್, ಭಾರತ-ಪಾಕಿಸ್ತಾನಗಳ ನಡುವಿನ ಯುದ್ಧವನ್ನು ನಿಲ್ಲಿಸಿ ಎಂದು ಹೇಳಿದ್ದೇಕೆ ಮತ್ತು ಆತನ ಮಾತನ್ನು ಎರಡೂ ದೇಶಗಳ ನಾಯಕರು ಪಾಲಿಸಿದ್ದೇಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ.

Advertisements

ಇದನ್ನು ಓದಿದ್ದೀರಾ?: ಭಾರತ-ಪಾಕ್ ನಡುವೆ ಅಕಸ್ಮಾತ್ ಪರಮಾಣು ಯುದ್ಧವಾದರೆ, ಏನಾಗಲಿದೆ?

ಏಕೆಂದರೆ, ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ದೇಶದ ಸೇನೆ ಇಷ್ಟರವರೆಗೆ ನಡೆಸಿದ ಕಾರ್ಯಾಚರಣೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದವು. ಉಗ್ರ ನೆಲೆಗಳನ್ನು ಧ್ವಂಸಗೊಳಿಸಿ ಮೆಚ್ಚುಗೆಗೆ ಪಾತ್ರವಾಗಿದ್ದವು. ಭಾರತೀಯ ಪಡೆಗಳು ಮೇಲುಗೈ ಸಾಧಿಸುತ್ತಿದ್ದ ಸಂದರ್ಭದಲ್ಲಿ ಆತುರದ ಕದನ ವಿರಾಮ ಘೋಷಣೆಯಾಗುವುದನ್ನು ಯಾವ ಸೇನೆಯೂ ಇಷ್ಟಪಡುವುದಿಲ್ಲ.

ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತ ಮತ್ತು ಪಾಕಿಸ್ತಾನವು ಸಂಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇದು ಪರಮಾಣು-ಶಸ್ತ್ರಸಜ್ಜಿತ ನೆರೆಹೊರೆಯವರ ಮಿಲಿಟರಿ ಸಂಘರ್ಷವನ್ನು ತಪ್ಪಿಸಿದೆ ಎಂದಿದ್ದಾರೆ.

ಅಷ್ಟೇ ಅಲ್ಲ, ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಕಾರಣಕರ್ತ ‘ನಾನೇ’ ಎಂದು ಹಲವು ದೇಶಗಳ ನಾಯಕರೊಂದಿಗಿನ ಭೇಟಿಗಳಲ್ಲಿ, ವೇದಿಕೆಗಳಲ್ಲಿ ಹಲವು ಸಲ ಹೇಳಿದ್ದಾರೆ. ಜೊತೆಗೆ, ‘ಗೆಳೆಯರೆ ಬನ್ನಿ, ಒಪ್ಪಂದ ಮಾಡಿಕೊಳ್ಳೋಣ, ಸ್ವಲ್ಪ ವ್ಯಾಪಾರ ಮಾಡೋಣ’ ಎಂದು ಯುದ್ಧದಂತಹ ಗಂಭೀರ ವಿಷಯವನ್ನು ಲಘುವಾಗಿ ಹೇಳಿ ನೆರೆದಿದ್ದವರನ್ನು ನಗಿಸಿದ್ದಾರೆ. ‘ಭಾರತ ಮತ್ತು ಪಾಕಿಸ್ತಾನದ ನಾಯಕರು ಈಗ ಒಟ್ಟಿಗೆ ಕೂತು ಊಟ ಮಾಡಬಹುದು’ ಎಂದು ನಗಾಡಿದ್ದಾರೆ.

ಇಷ್ಟಾದರೂ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಇದು ದೇಶಕ್ಕೆ ಅವಮಾನಿಸುವ ಪ್ರಸಂಗ ಎನಿಸಿಲ್ಲ. ಪ್ರಧಾನಿ ಹುದ್ದೆಯನ್ನು ನಗಣ್ಯ ಮಾಡುವ ಕಿಡಿಗೇಡಿ ಕೃತ್ಯ ಎನಿಸಿಲ್ಲ. ಟ್ರಂಪ್ ಹೇಳಿಕೆಗೆ ಉತ್ತರಿಸುವ, ಸಮಜಾಯಿಷಿ ಕೊಡುವ ಗೋಜಿಗೂ ಹೋಗಿಲ್ಲ. ಅಂದರೆ ಟ್ರಂಪ್, ಏನು ಮಾಡಿದರೂ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂಬಂತಹ ವರ್ತನೆ ಕಾಣುತ್ತಿದೆ. ಮಾತನಾಡದೆ ಮೌನಕ್ಕೆ ಜಾರಿರುವುದು ದೇಶದ ಜನತೆಗೆ ಮುಜುಗರವನ್ನುಂಟುಮಾಡುತ್ತಿದೆ.  

ಹೌದು, ಹಲವು ಸೂಕ್ಷ್ಮ ಕಾರಣಗಳಿಗಾಗಿ ಪೂರ್ಣ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಬಹಳ ಕಡಿಮೆಯಿತ್ತು. ಯುದ್ಧಕ್ಕೆ ಜೀವಪರ ವ್ಯಕ್ತಿಗಳ ವಿರೋಧವಿತ್ತು. ಅದು ಬೇರೆ ವಿಚಾರ. ಆದರೆ, ಈ ಕದನ ವಿರಾಮ ಘೋಷಿಸಬೇಕಾದವರು, ಯುದ್ಧ ಮಾಡುತ್ತಿರುವ ದೇಶದ ನಾಯಕರಲ್ಲವೇ? ಇಬ್ಬರೂ ಏಕೆ ಮೌನವಾಗಿದ್ದಾರೆ? ಇದರಿಂದ ಯಾರಿಗೆ ಲಾಭವಾಗಿದೆ? ಪಾಕ್‌ಗೆ ಎಂಬುದು ಯಾರಿಗಾದರೂ ಮೇಲು ನೋಟಕ್ಕೇ ತಿಳಿಯುತ್ತದೆ.

ಇಂತಹ ಮುಖ ಮುಚ್ಚಿಕೊಳ್ಳುವ ಮುಜುಗರವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮಾಡುತ್ತಿದ್ದರೂ ಕೇಳದ ಮೋದಿಯವರಿಗೆ ಈಗ ‘ಅವರದ್ದು ಅವರು ನೋಡಿಕೊಳ್ಳುತ್ತಾರೆ’ ಎಂದಿರುವುದು ಆಸರೆಗಿದ್ದ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.

ಆದರೆ, ತಿಕ್ಕಲು ಸ್ವಭಾವದ ಟ್ರಂಪ್, ಭಾರತದತ್ತ ದಿನಕ್ಕೊಂದು ಬಾಂಬ್ ಎಸೆಯುತ್ತಲೇ ಇದ್ದಾರೆ. ಹೊಸದಾಗಿ, ಭಾರತದಲ್ಲಿ ತಯಾರಾಗುವ ಐಫೋನ್‌ಗಳು ಅಮೆರಿಕದಲ್ಲಿ ಮಾರಾಟವಾಗುವುದು ನಿಲ್ಲಬೇಕು ಎಂಬ ಬಾಂಬ್ ಸಿಡಿಸಿದ್ದಾರೆ.

ಈಗಾಗಲೇ ಫಾಕ್ಸ್‌ಕಾನ್‌ ಮತ್ತು ಟಾಟಾ ಸಂಸ್ಥೆಯು ಭಾರತದಲ್ಲಿ ಐಫೋನ್‌ ತಯಾರಿಕೆಯಲ್ಲಿ ತೊಡಗಿವೆ. ಐಫೋನ್‌ಗಳ ತಯಾರಿಕೆಯನ್ನು ಹೆಚ್ಚಿಸುವ ಸಲುವಾಗಿ ಈ ಕಂಪನಿಗಳು ಹೊಸ ಹೊಸ ಘಟಕಗಳನ್ನು ನಿರ್ಮಾಣ ಮಾಡುತ್ತಿವೆ. ಫಾಕ್ಸ್‌ಕಾನ್‌ ಕಂಪನಿಯು ತೆಲಂಗಾಣದಲ್ಲಿ ಆ್ಯಪಲ್‌ ಏರ್‌ಪೋಡ್‌ಗಳನ್ನು ತಯಾರಿಸಲು ಆರಂಭಿಸಿದೆ.

ಭಾರತದಲ್ಲಿ ತಯಾರಿಸಲಾದ ಐಫೋನ್‌ಗಳನ್ನು ದಾಖಲೆ ಮಟ್ಟದಲ್ಲಿ ಇದೇ ಮಾರ್ಚ್‌ ತಿಂಗಳಿನಲ್ಲಿ ಅಮೆರಿಕಕ್ಕೆ ರಫ್ತು ಮಾಡಲಾಗಿದೆ. ‘ಅಮೆರಿಕದಲ್ಲಿ ಮಾರಾಟ ಮಾಡುವ ಐಫೋನ್‌ಗಳನ್ನು ಭಾರತದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಕೆ ಮಾಡಲಾಗುವುದು’ ಎಂದು ಆ್ಯಪಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್‌ ಕುಕ್‌ ಅವರು ಇದೇ ತಿಂಗಳಲ್ಲಿ ಘೋಷಿಸಿದ್ದೂ ಇದೆ.

ಆ್ಯಪಲ್‌ ಕಂಪನಿಯು ಭಾರತದಲ್ಲಿ ಪ್ರತಿ ವರ್ಷ 4 ಕೋಟಿ ಐಫೋನ್‌ಗಳನ್ನು ತಯಾರಿಸುತ್ತಿದೆ. 2 ಲಕ್ಷ ಉದ್ಯೋಗಿಗಳಿಗೆ ಕೆಲಸ ಕೊಟ್ಟು ಆರ್ಥಿಕ ಭದ್ರತೆ ಒದಗಿಸಿದೆ. 2025ರ ಮಾರ್ಚ್‌ ತಿಂಗಳೊಂದರಲ್ಲಿಯೇ ಭಾರತವು ಅತಿಹೆಚ್ಚು ಐಫೋನ್‌ಗಳನ್ನು ರಫ್ತು ಮಾಡಿದೆ. 2024–25ನೇ ಆರ್ಥಿಕ ವರ್ಷದಲ್ಲಿ ಭಾರತ ರಫ್ತು ಮಾಡಿದ ಐಫೋನ್‌ಗಳ ಮೌಲ್ಯವೇ 1.5 ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ಸದ್ಯಕ್ಕೆ ಭಾರತದ ಅತಿದೊಡ್ಡ ರಫ್ತು ವಹಿವಾಟಿನಲ್ಲಿ ಐಫೋನ್ ಮೊದಲ ಸ್ಥಾನದಲ್ಲಿದೆ.

ಅಕಸ್ಮಾತ್ ಆ್ಯಪಲ್‌ ಕಂಪನಿಯು ಐಫೋನ್ ಉತ್ಪಾದನೆಯನ್ನು ನಿಲ್ಲಿಸಿದರೆ, ಉದ್ಯೋಗ ನಷ್ಟವಾಗಲಿದೆ, ಆಮದು-ರಫ್ತು ವಹಿವಾಟು ಕುಸಿಯಲಿದೆ, ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಲಿದೆ.

ಇದನ್ನು ಓದಿದ್ದೀರಾ?: ಭಾರತ-ಪಾಕ್ ಸಂಘರ್ಷ | ಜಾಗತಿಕವಾಗಿ ಭಾರತಕ್ಕೆಷ್ಟು ಬೆಂಬಲ ಸಿಕ್ಕಿತು?

ಈ ಬಗ್ಗೆಯೂ ಪ್ರಧಾನಿ ಮೋದಿಯವರು ಮಾತನಾಡುತ್ತಿಲ್ಲ. ಮೋದಿ ಮೌನವಾಗಿರುವುದನ್ನು ಸಮ್ಮತಿಯ ಲಕ್ಷಣವೆಂದು ಭಾವಿಸಿರುವ ಟ್ರಂಪ್, ‘ಅಮೆರಿಕದಿಂದ ಪೂರೈಕೆಯಾಗುವ ಬಹುತೇಕ ಸರಕುಗಳಿಗೆ ಸುಂಕ ವಿನಾಯಿತಿ ನೀಡುವುದಾಗಿ ಭಾರತವು ಹೇಳಿದೆ’ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ದೇಶವನ್ನಾಳುವ ಯೋಗ್ಯತೆ, ಅರ್ಹತೆ ಇರುವ ಸಮರ್ಥ ನಾಯಕ ಎಂದು ಮೋದಿಯವರನ್ನು ದೇಶದ ಜನತೆ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಈ ‘ಸಮರ್ಥ ನಾಯಕ’ನನ್ನು ಪ್ರತಿದಿನ ಪುಡಿಗುಟ್ಟುತ್ತಲೇ ಸಾಗಿದ್ದಾರೆ.

56 ಇಂಚಿನ ಎದೆಯುಳ್ಳ ನಾಯಕ ಮೋದಿ ಎಲ್ಲಿ ಹೋದರು?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X